ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಕಥೆಯನ್ನು ಸಾರುವ ಮನುಕುಲದ ಮಹಾಕಾವ್ಯ ರಾಮಾಯಣದ ಕರ್ತೃ ಆದಿಕವಿ ವಾಲ್ಮೀಕಿಯ ಕುರಿತ ಕಥನ ಕವನ. ರಚನೆ: ವಿ.ಬಿ.ಕುಳಮರ್ವ. ರಾಗ, ಸಂಗೀತ ಸಂಯೋಜನೆ ಮತ್ತು ಗಾಯನ: ಕಲಾಶ್ರೀ ವಿದ್ಯಾಶಂಕರ್. ಮಂಡ್ಯ
ಪ್ರಾಚೇತಸನೊಬ್ಬ ವಾಲ್ಮೀಕಿಯಾಗಿಹ
ಕಥೆಯನು ಹೇಳುವೆ ಕೇಳಣ್ಣ||
ಒಂದಾನೊಂದಡವಿಯ ಮಧ್ಯದಿ
ಇದ್ದನು ಬೇಡನು ಪ್ರಾಚೇತಸನು|
ಕ್ರೂರಿಯು ಆತನು ದುಷ್ಟನು ಆತನು
ಕಡುಪಾತಕಿಯೆನ್ನಲು ಭಯವಿಲ್ಲ ||
ಕಾಡಿನ ಮಧ್ಯದಿ ಹಾದಿಯ ನಡೆಯುತ
ಸಾಗುವ ಮನುಜರ ದೋಚುವನು ||
ಕೊಡದಿರೆ ಹಣವನು ಬಿಡದಿಹನವರನು
ತಲೆಯನು ಕಡಿಯುತ ಕೊಲ್ಲುವನು ||
ಇಂತಿರಲೊಮ್ಮೆ ಕಂತುಹರನಂತಿಹ
ಋಷಿಗಳು ಬಂದರು ಎದುರಾಗಿ||
ಖೂಳ ಪುಳಿಂದನು ತಡೆದನು ಮುನಿಗಳ
ಕರವಾಳವ ಕೀಳುತಲೊರೆಯಿಂದ ||
ಖಡ್ಗವ ಝಳಪಿಸಿ ಅಬ್ಬರದಿಂದಲಿ
ಮುಂದಡಿಯಿಟ್ಟನು ತಲೆಗಳ ಕಡಿಯಲಿಕೆ||
ಸಾಧು-ಸಜ್ಜನರು ನಡುಗುತ ಭಯದಲಿ
ಕರಗಳ ಮುಗಿಯುತ ಶುಭನುಡಿಯಾಡಿದರು||
ದುಷ್ಟಕಾರ್ಯವ ಬಿಡಬೇಕೆನ್ನುತ
ದೇವರ ತೆರದಲಿ ಹರಸಿದರು ||
ಋಷಿಗಳ ಮಾತು ಫಲಿಸಲೆ ಇಲ್ಲ
ಎಲ್ಲವು ನೀರಿನ ಮೇಲಣ ಹೋಮ ||
ಆದರು ಋಷಿಗಳು ಎಳ್ಳಷ್ಟಳುಕದೆ
ದೋಚುವ ಕಾರಣ ಕೇಳಿದರು||
ಮಡದಿಯ ಮಕ್ಕಳ ಉದರವ ಹೊರೆಯಲು
ಪಥಿಕರನೆಲ್ಲರ ದೋಚುವೆನು ||
ಕೇಳೆಲೊ ಬೇಡನೆ ,ಪಾಪದ ಫಲದಲಿ
ಮಡದಿಯು ಮಕ್ಕಳು ಭಾಗಿಗಳೆ||
ಒಂದರೆ ಗಳಿಗೆ ಇಲ್ಲಿಯೆ ನಿಂತಿರಿ
ಬರುವೆನು ಕ್ಷಣದಲಿ ಕೇಳುತಲಿ ||
ಲಗುಬಗೆಯಿಂದಲಿ ಮನೆಯನು ಸೇರುತ
ಕೇಳಿದ ನಿಜಪರಿವಾರದ ಜನರ||
ಕೇಳೆಲೊ ಮಡದಿಯೆ ಮುದ್ದಿನ ಮಕ್ಕಳೆ
ನಿಮ್ಮನು ಸಲಹಲು ದುಡಿಯುವೆನು ||
ಗುರುತರ ಹಿಂಸೆಯನೆಸಗಿಹೆ ನಾನು
ಪಾಪದಿ ನಿಮಗೂ ಪಾಲಿಹುದು ||
ನಿನ್ನಯ ಪಾಪ ನಿನಗೇ ಇರಲಿ
ಪುಣ್ಯವು ಮಾತ್ರ ನಮಗಿರಲಿ||
ಮಡದಿಯ ಮಕ್ಕಳ ಮಾತನು ಆಲಿಸಿ
ಹೃದಯದಿ ನೊಂದನು ಪ್ರಾಚೇತಸನು||
ದುಗುಡದಿ ಬಂದನು ಋಷಿಗಳ ಬಳಿಗೆ
ಕ್ಷಮೆಯನು ಯಾಚಿಸಿ ನಮಿಸಿದನು ||
ಮುಂದಕೆ ಎಂದಿಗು ಎಸಗೆನು ಪಾಪವ
ಕ್ಷಮಿಸಿರಿ ನಾನೆಸಗಿಹ ತಪ್ಪುಗಳ ||
ಏಳೆಲೊ ಮೇಲಕೆ ಪ್ರಾಚೇತಸನೆ
ಮಾಡಲು ಬೇಕು ಪ್ರಾಯಶ್ಚಿತ್ತವನು||
ಇಲ್ಲಿದೆ ನೋಡು ಮರಗಳು ಎರಡು
ನಡುವಿಲಿ ನಿನಗೆ ಸ್ಥಳವಿಹುದು ||
ಆಮರಯೀಮರ ಮರಮರವೆನ್ನುತ
ಜಪವನು ಮಾಡಲು ತೊಡಗೆಂದು||
ಋಷಿಗಳ ಮಾತಿಗೆ ನಮಿಸುತಲವನು
ಕುಳಿತನು ಮರಗಳ ಮಧ್ಯದಲಿ||
ಮರಮರವೆನ್ನುತ ಜಪಿಸಲು ತೊಡಗಲು
ಫಲಿಸಿತು ರಾಮನ ಮಂತ್ರದ ಸಿದ್ಧಿ ||
ಮೈಯನು ಮರೆತನು ಲೋಕವನರಿಯನು
ಕಡುತಪದಲಿ ಬಲು ಏಕಾಗ್ರತೆಯು||
ಕಾಲವು ಸರಿಯಲು ಮೆಲ್ಲನೆ ಹುತ್ತವು
ಮುಸುಕಿತು ಜಪಿಸುವ ದೇಹವನು ||
ದಿನಗಳು ಉರುಳಲು ವರುಷವು ಕಳೆಯಲು
ಬಂದರು ಋಷಿಗಳು ಹುತ್ತದ ಬಳಿಗೆ ||
ರಾಮ ಮಂತ್ರವನಾಲಿಸೆ ಹುಡುಕಲು
ಕಂಡರು ಬೆಳೆದಿಹ ಹುತ್ತವನು ||
ಪೂರ್ವವ ನೆನೆಯುತ ಹುತ್ತವ ತದುಕಲು
ಗೋಚರವಾಯಿತು ಭಾನುಪ್ರಕಾಶ ||
ವಲ್ಮೀಕದ ಗರ್ಭದಿ ಜನಿಸಿದನಿವನು
'ವಾಲ್ಮೀಕಿ'ನಾಮದಿ ವಿಶ್ವವ ಬೆಳಗುವನು ||
ಬರೆಯುತ ರಾಮಾಯಣವನು ಮುನಿಯು
'ಆದಿಕವಿ ವಾಲ್ಮೀಕಿ' ಎನಿಸುವನು `|
ಇಂದಿದೊ ಬಂದಿದೆ ಸಂಭ್ರಮ ಸಡಗರ
ವಾಲ್ಮೀಕಿ ಮಹರ್ಷಿಗೆ ನಮಿಸೋಣ ||
ರಚನೆ:-
ವಿ.ಬಿ.ಕುಳಮರ್ವ, ಕುಂಬ್ಳೆ ✍
(ಆದಿಕವಿ ವಾಲ್ಮೀಕಿ ಮಹರ್ಷಿಗಳ ಜನ್ಮದಿನದ ಅಂಗವಾಗಿ ಇದೊಂದು ಕಿರಿಯರ ಕಥನಕವನ)
ಕಾಮೆಂಟ್ ಪೋಸ್ಟ್ ಮಾಡಿ