ಒಲವ ಹಣತೆಗೆ ಜ್ಯೋತಿ ಹಚ್ಚಿರಿ
ನಲವ ಹಂಚುತ ಬಾಳಿರಿ.
ಬಲವು ಇರುವುದು ಒಲವಿನಲ್ಲಿಯೆ
ಛಲವನೆಲ್ಲರು ದೂಡಿರಿ.
ಎಣ್ಣೆ ಮಜ್ಜನ ಲಕ್ಷ್ಮಿ ಪೂಜೆಯು
ಬಣ್ಣ ಬಣ್ಣದ ಸಿಹಿಗಳು
ಬಾಲರೆಲ್ಲರು ಸುಡುವ ಮದ್ದನು
ದೂರದಿಂದಲೆ ಗಮನಿಸಿ
ವಿಷ್ಣು ಚಕ್ರವು ಸುಡುವ ಬತ್ತಿಯು
ಹೂವ ಕುಂಡದ ಸೋಜಿಗ
ಬೆಳಕಿನುಯ್ಯಲೆಯಲ್ಲಿ ಜೀಕಿದೆ
ಮನೆಯ ದೀಪದ ಓಲಗ.
ಬಲಿಯು ಬಂದನು ಸಿರಿಯ ತಂದನು
ಕೋಟೆ ಅವನಿಗೆ ಕಟ್ಟಿರಿ.
ಮನದ ಒಳಗಿನ ದುಗುಡವೆಲ್ಲವ
ಆತ್ಮ ಬಲದಲಿ ಮೆಟ್ಟಿರಿ.
ಜಗದಿ ಎಲ್ಲೆಡೆ ಜನರ ಸಂತಸ
ಹಾಲ ಹಳ್ಳವೇ ಆಗಲಿ
ದುಡಿದು ಉಣ್ಣುವ ಬೆವರ ಜೊತೆಯಲಿ
ಎನುವ ಆಶಯ ಬೆಳಗಲಿ.
ವರ್ಷ ಸುರಿಯಲಿ ಹರ್ಷ ಬೆಳೆಯಲಿ
ಘರ್ಷಣೆಯು ದೂರಾಗಲಿ.
ಬಂಧು ಬಳಗವು ಸಿಹಿಯ ಸವಿಯುತ
ಮತ್ಸರವ ತಾವ್ ದೂಡಲಿ.
ಬೆಳಕ ಹಬ್ಬವು ತರಲಿ ಭೂಮಿಗೆ
ಶಾಂತಿ ಸಹನೆಯ ಸಡಗರ
ನಾಡಿನೆಲ್ಲೆಡೆ ಹಬ್ಬಿ ಹರಡಲಿ
ದೀಪದೊಲವಿನ ಅಂಕುರ.
- ತನಾಶಿ.
ರಚನೆ: ತ.ನಾ.ಶಿವಕುಮಾರ.ಮಂಡ್ಯ
ರಾಗ.ಸಂಗೀತ. ಗಾಯನ ಕಲಾಶ್ರೀ ವಿದ್ಯಾಶಂಕರ್. ಮಂಡ್ಯ.
ಕಾಮೆಂಟ್ ಪೋಸ್ಟ್ ಮಾಡಿ