ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಬೆಂಕಿಯಲ್ಲಿ ಅರಳಿ ಬರುತ್ತೇನೆ ಎಂದು ಹೇಳಿ ಹೋದ ಹೂವು ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Adಆ ಹೂವು ಇನ್ನೇನು ಅರಳಬೇಕು, ಎಂದೆಂದೂ ಬಾಡದ ಹೂವಾಗಬೇಕು ಅಂದುಕೊಂಡು ಕಾಶೀಪಟ್ಟಣದ ಹೂವಿನ ಉದ್ಯಾನವನದಲ್ಲಿ ಕಲ್ಪನೆಯ ದುಂಬಿಗಾಗಿ ಕನಸು ಕಾಣುತ್ತಿತ್ತು.

ಸೌಭ ದೇಶದಿಂದ ಹಾರಿ ಬಂದ ದುಂಬಿಯೊಂದು ಆ ಹೂದೋಟಕ್ಕೆ ಬಂತು.  ಹೂವಿನಾಕರ್ಷಣೆಗೆ ದುಂಬಿ ಮರುಳಾಯಿತು. ಹೂವು ಒಪ್ಪಿತು.

ಕಾಶೀರಾಜನ ಅರಮನೆಯಲ್ಲಿ ಮರುದಿನ ನೂರಾರು ದುಂಬಿಗಳು ಮೂರು ಹೂವಿಗಾಗಿ!!

ಮಧುಕರ ವೃತ್ತಿಯನ್ನೇ ತ್ಯೆಜಿಸಿದ ಭೀಷ್ಮನೆಂಬ ಕರಿಪುರದ ದುಂಬಿಯೂ ಕಾಶಿಯರಮನೆಯ ಅಂಗಳಕ್ಕೆ ಬಂದಾಗ ಉಳಿದ ದುಂಬಿಗಳ ಝೇಂಕಾರಕ್ಕೆ ಮೌನ.

ಸೌಭ ದೇಶದ ದುಂಬಿಯೋದು ಹಿಂದಿನ ದಿನದ ಪ್ರೇಮೋತ್ಸಾಹದಲ್ಲಿ ಮುಂದೆ ಬಂದರೆ, ಕರಿಪುರದ ಕತ್ತಿಯಲಗಿಗೆ ಗೆಲ್ಲಲಾರದೆ ಹೋಯಿತು.

ಕರಿಪುರದ ಬಿರುಗಾಳಿಗೆ ಭೀಷ್ಮ ರಥದ ಬುಟ್ಟಿಯಲ್ಲಿ ಮುದುಡಿದ ಮೂರು ಹೂವುಗಳು.  

ಹಸ್ಥಿನೆಯ ಮಂದಿರದ ಹೊಸಿಲೋಳಗೆ ಬಂದ ಎರಡು ಹೂವುಗಳು ಸಂಬಂಧದ ಹೊಸಿಲು ದಾಟಿ ಒಳಬಂದು ಆಲಯದ ಗರ್ಭಗುಡಿಯಲ್ಲಿ ಅರಳಿ ನಿಂತವು. 

ಆದರೆ...

ಆ ಒಂದು ಹೋವು ದೇವಾಲಯದ ಒಳಗೂ ಬರಲಿಲ್ಲ, ಬಂದು ಅರಳಲೂ ಇಲ್ಲ!!

ಅರಳದ ಹೂವನ್ನು ಬುಟ್ಟಿಯಲ್ಲಿಟ್ಟು ಪೂಜೆ ಮಾಡುವ ಅರ್ಚಕರ ಜೊತೆಯಲ್ಲಿ ಹೂವಿನ ಮನದಾಲಯದಲ್ಲಿದ್ದ ದೇವರ ಪೂಜೆಗೇ ಸಲ್ಲಲಿ ಎಂದು ಕಳಿಸಿದ್ದು ಹಸ್ತಿನಾವತಿಯ ಆಚಾರ್ಯ ಭೀಷ್ಮ. 

ಸೌಭ ದೇಶಾಧಿಪತಿಯ ಪಾದ ಪೂಜೆ ಬಯಸಿ ಹೋದ ಹೂವಿಗೆ "ನೀನು ಪೂಜೆಗೆ ಅಯೋಗ್ಯ, ನೈರ್ಮಾಲ್ಯದ ಹೂವು,  ಇನ್ನೊಬ್ಬರ ತಲೆಗೇರಿ ಇಳಿದ ಬಾಡಿದ ಹೂವು ನನಗೆ ಪ್ರಸಾದವೂ ಅಲ್ಲ. ಪ್ರೇಮ ರಂಗೋಲಿಯನ್ನು ಗುಡಿಸಿ ತೊಳದಾಗಿದೆ. ನೀನೀಗ ವ್ಯಭಿಚಾರದ ಎಂಜಲು ಹೂವು" ಎನ್ನುವ ತಿರಸ್ಕಾರ.

ಆ ಹೂ ಬಂದು ಭೀಷ್ಮರ ಪಾದಕ್ಕೇ ಬಿತ್ತು. ಭೀಷ್ಮರದ್ದು ಒಂದೇ ಮಂತ್ರ "ಹೊಸಿಲು ದಾಟಿದ ಹೂವಿಗೆ ಮತ್ತೆ ಹೊಸಿಲೊಳಗೆ ಪ್ರವೇಶವಿಲ್ಲ".

ಹೂವಿಗೆ ಭೀಷ್ಮರೇ ಮುಳ್ಳಾಗಿ ಕಂಡರು. ಹೂವು ಭೀಷ್ಮರಿಗೆ ಮುಳ್ಳಾಯಿತು!!

ಹೂವಿನ ಮನದಲ್ಲಿ ಬೆಂಕಿ. ಪ್ರೀತಿಯ ಮದುವೆಗಾಗಿ ಕ್ರೋದಾಗ್ನಿಯ ಪ್ರತಿಕಾರ ಯುದ್ದ ವ್ರತ.  ಪರಶುರಾಮರ ಪೌರೋಹಿತ್ಯ. ನೆಡೆಯದ ವಿವಾಹದಲ್ಲಿ ಸೋತಿದ್ದು ಹೂವು. ಹೂವು ಮುಳ್ಳು ಗಿಡದಲ್ಲಿ ಜೋಡಿಯಾಗಲಿಲ್ಲ.  

"ಬೆಂಕಿಯಲ್ಲಿ ಅರಳಿ ಬರುತ್ತೇನೆ, ಬಂದು ಮುಳ್ಳಾಗುತ್ತೇನೆ. ಮುಳ್ಳಿನ ಮೇಲೆ ಮಲಗಿಸಿ ದಿನ ಎಣಿಸುವಂತೆ ಮಾಡುತ್ತೇನೆ ಭೀಷ್ಮ" ಎಂದು ಹೇಳಿ ಬೆಂಕಿಗೆ ಬಿದ್ದ ಹೂವಿನ ಹೆಸರು ಅಂಬೆ ಎಂದು.

**

ಮೇಲಿನ ಹೂವಿನ ಕತೆ ಟೀಸರ್ ಅಷ್ಟೆ.

ಪೂರ್ಣ ವಿಸ್ತಾರದ ಸುಂದರ ಹೂವಿನ ದುರಂತ ಕತೆಗೆ ತಾಳಮದ್ದಳೆ ಒಳಗೆ ಹೋಗಿ ಬರಬೇಕು.  

ಹೂವಿನ ಅಂತರಂಗದ ಪ್ರೀತಿಗೆ, ಬೇಡಿಕೆಗೆ, ಸಂಭ್ರಮಕ್ಕೆ, ಬೆಂಕಿಗೆ, ಸೇಡಿಗೆ, ರೋಷದ ಮಾತಿನ ಪರಿಮಳಕ್ಕೆ ಹೂವಿನ ಮನದಂತರಂಗದ ಒಳಗೇ ಇಳಿದು ನೋಡಬೇಕು.  ಭೀಷ್ಮ, ಸಾಲ್ವ, ಬ್ರಾಹ್ಮಣ ಅರ್ಚಕ, ಪರಶುರಾಮ, ಏಕಲವ್ಯರ ಮಾತಿನ ಮಂಟಪದಲ್ಲಿ ಕುಳಿತು ಈ  ಹೂವನ್ನು ಕಿವಿಗಳ ಮೇಲಿಟ್ಟು ನೋಡಬೇಕು.  

ಕೇಳುತ್ತ ಕೇಳುತ್ತ ಕಣ್ಣು ಪಸೆಯಾಗುತ್ತದೆ. 

ಯೂಟೂಬ್ ಲಿಂಕ್**

ಸುಮಾರು ಆರು ವರ್ಷಗಳ ಹಿಂದೆ ನಮ್ಮ ಮನೆಯಂಗಳದಲ್ಲಿ ನಡೆದ, ಮನ ಕಲಕುವ ಭೀಷ್ಮ ವಿಜಯ ತಾಳಮದ್ದಳೆ ಪ್ರಸಂಗವನ್ನು ಟ್ರಿಮ್ ಮಾಡಿ ಯೂಟೂಬಿಗೆ ಹಾಕಲು ಸಿದ್ದ ಮಾಡುತ್ತಿರುವಾಗ, ಪ್ರಸಂಗದಲ್ಲಿ ಪರಶುರಾಮ ಪಾತ್ರ ಮಾಡಿದ ಶ್ರೀಯುತ ನಿಸ್ರಾಣಿ ರಾಮಚಂದ್ರ ಹೆಗಡೆಯವರು "ಇನ್ನಿಲ್ಲ" ಎಂಬ ಸುದ್ದಿ ವಾಟ್ಸಪ್‌ನಲ್ಲಿ ಬಂತು.

ಯಾಕೋ ಮನಸ್ಸು ಮುದುಡಿಕೊಳ್ಳುತ್ತದೆ. 

ಖ್ಯಾತ ವಾಗ್ಮಿ, ಅಷ್ಟಾವಧಾನಿ, ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ನಿಸರಾಣಿ ರಾಮಚಂದ್ರ ಹೆಗಡೆ (68) ಮೊನ್ನೆ ‌ಮೇ 20ನೇ ತಾರೀಕು ನಮ್ಮನ್ನಗಲಿದ್ದಾರೆ.  

ಶ್ರೀರಾಮಚಂದ್ರಾಪುರಮಠದ ಹಿರಿಯ ಕಾರ್ಯಕರ್ತರಾಗಿ; ರಾಮಾಯಣ ಮಹಾಸತ್ರ, ವಿಶ್ವ ಗೋಸಮ್ಮೇಳನ ಮುಂತಾದ ಐತಿಹಾಸಿಕ ಕಾರ್ಯಕ್ರಮಗಳಲ್ಲಿ ಪ್ರಮುಖ ಪಾತ್ರವಹಿಸಿ; ಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಪ್ರಿಯಶಿಷ್ಯರಾಗಿದ್ದ ನಿಸರಾಣಿ ರಾಮಚಂದ್ರ ಅವರು ತಮ್ಮ ವಿಶಿಷ್ಟ ಜ್ಞಾಪಕಶಕ್ತಿಯ ಕಾರಣಕ್ಕಾಗಿ ಮಾನವ ಕಂಪ್ಯೂಟರ್‌ ಎಂದು ಕರೆಯಲ್ಪಡುತ್ತಿದ್ದರು. 

ದೇವತಾನುಗ್ರಹದಿಂದ ನಿಸರಾಣಿಯವರ ಆತ್ಮಕ್ಕೆ ಶಾಂತಿ ಸಿಗಲಿ; ಶ್ರೀರಾಮಸಾಯುಜ್ಯ ಪ್ರಾಪ್ತವಾಗಲಿ.

*

ಮನೆಯಂಗಳದಲ್ಲಿ ತಾಳಮದ್ದಲೆ

ಸ್ಥಳ : ಕುಮರಿಗದ್ದೆ - ಸಿಗದಾಳ್

ದಿನಾಂಕ : 07.03.2015

ಪ್ರಸಂಗ:  ಭೀಷ್ಮ ವಿಜಯ

ಭಾಗವತರು : ಗೋಪಾಲಕೃಷ್ಣ ಭಾಗವತ, ಜೋಗಿನಮನೆ ಮತ್ತು 

ಶಿವಶಂಕರ್ ಹೆಚ್.ಜಿ. ಮತ್ವಾನೆ.

ಮದ್ದಲೆ: ಶಂಕರಭಾಗವತ, ಯಲ್ಲಾಪುರ ಮತ್ತು ಹೆಚ್.ಎಸ್.ಗಣೇಶ್‌ಮೂರ್ತಿ, ಹುಲುಗಾರು


ಭೀಷ್ಮ : ರಾಧಾಕೃಷ್ಣ ಕಲ್ಚಾರ್, ಪುತ್ತೂರು

ಅಂಬೆ : ಗಣಪತಿ ಭಟ್, ಸಂಕದಗುಂಡಿ,

ಪರಶುರಾಮ : ನಿಸ್ರಾಣಿ ರಾಮಚಂದ್ರ ಹೆಗಡೆ, ನಿಸ್ರಾಣಿ

ಅಕೃತವರ್ಣ : ಎಂ.ಎಸ್.ಜನಾರ್ದನ, ಮಂಡಗಾರು

ಸಾಲ್ವ : ಎಂ.ಎಲ್.ರಾಮಚಂದ್ರ ರಾವ್, ಕುಮರಿಗದ್ದೆ

ಏಕಲವ್ಯ : ಸೀತಾರಾಮಚಂದು ಹೆಗಡೆ, ಶಿರಸಿ

ಬ್ರಾಹ್ಮಣ : ರಮೇಶ್ ಆಚಾರ್, ಮಂಗಳಗಾರು,

ದೂತ : ಜಿ.ಆರ್.ಅಶೋಕ, ಕುಮರಿಗದ್ದೆ


- ಅರವಿಂದ ಸಿಗದಾಳ್, ಮೇಲುಕೊಪ್ಪ

Post a Comment

ನವೀನ ಹಳೆಯದು