ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಚಿತ್ರ ವಿಮರ್ಶೆ: ಎಲೆಯು ಎಲ್ಲೆ ಮೀರಿದ ಸಾಧನೆಯೊಳು... ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ಪ್ರತಿಯೊಬ್ಬರ ಜೀವನದಲ್ಲಿ ಅವರದ್ದೇ ಆದಂತಹ ಕೆಲವು ಖುಷಿಯ ವಿಚಾರಗಳಿರುತ್ತದೆ. ತನ್ನದೇ "ಇಷ್ಟ'ಗಳನ್ನು ಇಟ್ಟುಕೊಂಡಿರುತ್ತಾರೆ. ಉದಾಹರಣೆಗೆ ಇಷ್ಟದ ನಟ ನಟಿಯರು, ಇಷ್ಟದ ಅಡುಗೆ, ಇಷ್ಟದ ಹಾಡು ಅಥವಾ ಇಷ್ಟದ ಸಿನಿಮಾ. ಇದರಲ್ಲಿ ಸಿನಿಮಾದ ಬಗ್ಗೆ ಮಾತಾಡುವುದಾದರೆ ಅನೇಕರಿಗೆ ತಾವು ಇಷ್ಟ ಪಡುವ ನಟ ನಟಿಯರ ಎಲ್ಲಾ ಚಿತ್ರಗಳು ಇಷ್ಟವಾಗುತ್ತದೆ. ಇನ್ನೂ ಕೆಲವರಿಗೆ ಸಿನಿಮಾದ ಕಥೆ ಇಷ್ಟವಾಗುತ್ತದೆ. ಹೀಗೆ ವಿಭಿನ್ನ ದೃಷ್ಠಿಕೋನದಲ್ಲಿ ಸಿನಿಮಾವನ್ನು ಇಷ್ಟಪಡುತ್ತಾರೆ.

ಅದರಂತೆ ಈಗ ನಾನು ಹೇಳ ಹೊರಟಿರುವುದು ಒಂದು ಸಿನಿಮಾದ ಬಗ್ಗೆ. ಪತ್ರಿಕೆ, ದೂರದರ್ಶನ, ಇಂಟರ್ನೆಟ್ ಯಾವುದೂ ಇಲ್ಲದ ಕಾಲವದು. ಬಡತನದ ಬಗ್ಗೆ ಕೇಳಬೇಕೇ. ಹೆಂಡತಿ ಗಂಡ ಇಬ್ಬರೂ ದುಡಿದರೂ ಮನೆಯ ಆರ್ಥಿಕ ಸ್ಥಿತಿ ಸುಧಾರಿಸಲಾಗದ ಬವಣೆಯ ಬದುಕದು. ಹೇಳುತ್ತಾ ಹೋದಂತೆ ಮನೆಯ ಚಿತ್ರಣ ನಿಮ್ಮ ಕಣ್ಣೆದುರಲ್ಲಿ ಭಾಸವಾಯಿತ್ತೆಂದು ಭಾವಿಸುತ್ತೇನೆ. ಗಂಡ ಹೆಂಡತಿ ಮೂವರು ಮಕ್ಕಳಿರುವ ಒಂದು ಸಣ್ಣ ಕುಟುಂಬವದು. ಈ ಮೂವರು ಮಕ್ಕಳಲ್ಲಿ "ಎಲೆ" ದೊಡ್ಡವಳು. ಇವಳು ಈ ಸಿನಿಮಾದ ಕಥಾ ನಾಯಕಿ. ಬಿನೀಶ್ ರಾಜ್ ರವರ ನಿರ್ದೇಶನದಲ್ಲಿ ಹೆಣೆದ ಈ ಕಥೆ ಆ ಕಾಲದ ನೈಜ ಬದುಕಿನ ಬೇಗುದಿಯನ್ನು ಮಾತ್ರ ಸ್ಪಷ್ಟವಾಗಿ ಬಿಂಬಿಸುತ್ತದೆ.

ಎಲೆಗೆ ತಾನು ಕಲಿತು ದೊಡ್ಡ ವ್ಯಕ್ತಿಯಾಗಬೇಕೆಂಬ ಹಂಬಲ. ತಂದೆ ಸಂಪೂರ್ಣ ಬೆಂಗಾವಲು. ಆದರೆ ತಾಯಿ ಮಾತ್ರ' ವಿದ್ಯೆ ಕಲಿತು ಏನಾಗಬೇಕಿದೆ. ತನ್ನ ತಮ್ಮನ ಜೊತೆ ಮದುವೆಯಾಗಿ ಸುಖವಾಗಿರು' ಎಂಬ ಸಿದ್ಧಾಂತ ಹೊಂದಿದವಳು. ಆ ಕಾಲದಲ್ಲಿ ಇದ್ದಂತಹ ಬಾಲ್ಯ ವಿವಾಹದ ಬಗ್ಗೆ ಮತ್ತೆ ಪ್ರತ್ಯೇಕ ಮಾತು ಬೇಡವೆನಿಸುತ್ತದೆ. ತನ್ನ ಅಮ್ಮನಿಗೆ ಅದು ಸಣ್ಣ ಮಗು. ಅದಕ್ಕಿಂತ ಸ್ವಲ್ಪ ದೊಡ್ಡವ, ಕೆಲಸಕ್ಕೆ ಬಾರದವ ಮತ್ತೊಬ್ಬ ತರಲೆ ತಮ್ಮ. ಪ್ರತೀ ಸಲ ಇವಳಿಗಾಗಿ ಆಸೆ ಪಡುತ್ತಾ ಹೇಗಾದರೂ ಮದುವೆಯಾಗಲೇಬೇಕೆಂಬ ಹಠದಲ್ಲಿರುವ ಮಾವ. ಅವಳು ಹತ್ತನೇ ತರಗತಿ ಪರೀಕ್ಷೆಯನ್ನು ಹೇಗಾದರೂ ಪಾಸ್ ಮಾಡಿ ಉತ್ತಮ ಅಂಕಗಳನ್ನು ಪಡೆದುಕೊಳ್ಳಬೇಕೆಂದು ಹಠವಿರುವ ಕುವರಿ. ತರಗತಿಯಲ್ಲಿ ಜಮೀನ್ದಾರರ ಮಗಳು ಇವಳ ಕಲಿಕೆಗೆ ಯಾವಾಗಲೂ ತಣ್ಣೀರೆರಚುವ ಕಾರ್ಯದಲ್ಲೇ ಮಗ್ನಳಾಗಿದ್ದವಳು. ಪ್ರಾಮಾಣಿಕತೆಯ ಬದುಕು ಆವತ್ತು ಕೂಡ ಯಾರಿಗೂ ಇಷ್ಟವಾಗುತ್ತಿರಲಿಲ್ಲ ನೋಡಿ.‌ ಹೀಗೆ ಬರುವ ಕಷ್ಟಗಳನ್ನು ಎದುರಿಸಿ ಕಲಿಕೆಯಲ್ಲಿ ನಿರತಳಾಗುತ್ತಿದ್ದ ಮಗಳ ಕಂಡರೆ ಅಪ್ಪನಿಗೆ ಅದೇನೋ ಒಂದು ತೆರನಾದ ಖುಷಿ.

ಹೀಗೆ ದಿನ ಕಳೆಯಲು ಬಂತು ನೋಡಿ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆ. ಎಲೆ ಪರೀಕ್ಷೆ ಬರೆಯುವುದನ್ನು ತಪ್ಪಿಸಲು ಆ ದೊಡ್ಡ ಮನುಷ್ಯರು ಮಾಡಿದ ಕುತಂತ್ರ ಕಡಿಮೆಯೇನಿಲ್ಲ. ಅವರ ಕುತಂತ್ರಕ್ಕೆ ತನ್ನ ತಂದೆಯೇ ಸ್ವರ್ಗಸ್ಥರಾದಾಗ ಮಾತ್ರ ಈ ಮುಗ್ಧ ಹುಡುಗಿಗೆ ಸಾಲು ಸವಾಲುಗಳು ಎದುರಾಗಿತ್ತು. ಬಹುಶಃ ಆ ಕಷ್ಟದ ಸನ್ನಿವೇಶವನ್ನು ನಿಮ್ಮೆದುರಿಗಿಡುವುದು ಸುಲಭವೇನಿಲ್ಲ. ಒಂದು ಕಡೆ ಅಗಲಿದ ತಂದೆ, ಮನೆಯೊಳು ಪುಟ್ಟ ಕೂಸು, ಅಪ್ಪನ ಆಸೆ ಈಡೇರಿಸಲು ಪರೀಕ್ಷೆ ಬರೆಯಲೇಬೇಕೆಂದು ತುಡಿಯುವ ಮನಸ್ಸು, ಮನೆಯ ಕೆಲಸ... ಹೀಗೆ ಇವೆಲ್ಲವನ್ನು ಎದುರಿಸಿ ಮೆಟ್ಟಿ ನಿಂತು ಪರೀಕ್ಷೆ ಬರೆದಾಗಲೇ ವೀಕ್ಷಕರಿಗೆ " ಅಬ್ಬ" ಎಂದೆನಿಸುವುದು. 

ಕೊನೆಗೂ ಪರೀಕ್ಷೆ ಬರೆದು ಅದರಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಶಾಲೆಯ ಮುಖ್ಯೋಪಾಧ್ಯಾಯರು ಮನೆಗೆ ಬಂದು ಸನ್ಮಾನಿಸಿದಾಗ ಅವಳಿಗಾಗುವ ಸಂತೋಷದ ಕ್ಷಣವನ್ನು ನಾವೂ ಕಣ್ತುಂಬಿಸಿಕೊಳ್ಳುತ್ತೇವೆ. ಮತ್ತೆ ನಾವು ಹತ್ತನೇ ತರಗತಿ ವಿದ್ಯಾರ್ಥಿಯಾಗುತ್ತೇವೆ. ಇಲ್ಲಿಗೆ ಸಿನಿಮಾ ಮುಕ್ತಾಯವಾಗುತ್ತದೆ.

ಆದರೆ ಎಲೆಯ ಬದುಕು ಅದೊಂದು ಅಮೋಘ ಸಾಧನೆ. ಪ್ರಸ್ತುತ ಕಾಲಘಟ್ಟದಲ್ಲಿ ನೆಟ್ವರ್ಕ್ ನ ಹಿಂದೆ ಓಡುತ್ತಾ ಇಂಟರ್ನೆಟ್ ಜೊತೆಜೊತೆಗೆ ಓದುತ್ತಾ ಇರುವ ಪ್ರಯಿಯೊಬ್ಬ ವಿದ್ಯಾರ್ಥಿಯು ನೋಡಲೇಬೇಕಾದ ಸುಂದರ, ಮೌಲ್ಯವನ್ನು ಸಾದರ ಪಡಿಸುವ ಉತ್ತಮ ಚಲನಚಿತ್ರ. ಎಲೆಯ ಬದುಕು ಎಲ್ಲೆ ಮೀರಿದ ಸಾಧನೆಯೊಳು ಪುನೀತವಾದಾಗ, ಅದು ನಮ್ಮ ಒಳ ಮನಸ್ಸ ಕಲಕಿದಾಗ ಸಾರ್ಥಕತೆಯ ಭಾವ ಹೃದಯ ಮೀಟುತ್ತದೆ.

-ಅರ್ಪಿತಾ ಕುಂದರ್



Post a Comment

ನವೀನ ಹಳೆಯದು