ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಇಂದಿನ ಐಕಾನ್- ಅನನ್ಯ ಚೈತನ್ಯದ ದೀಪಧಾರಿ ದೀಪಾ ಮಲ್ಲಿಕ್ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 


21 ವರ್ಷಗಳಿಂದ ವೀಲ್ ಚೇರ್ ಮೇಲಿನ ಪರಾವಲಂಬನೆಯ ಬದುಕು! ಎದೆಯ ಕೆಳಗಿನ ದೇಹದ ಭಾಗ ಪೂರ್ತಿ ಜೀವ ರಹಿತ! ಮಲ ಮೂತ್ರದ  ವಿಸರ್ಜನೆಯ ಮೇಲೆ  ನಿಯಂತ್ರಣ ಇಲ್ಲ! ಮನೆಯಲ್ಲಿ ಇರುವ ಮಗಳು ಅಪಘಾತಕ್ಕೆ ಒಳಗಾಗಿ ದೇಹದ ಎಡ ಭಾಗ ಪೂರ್ತಿ ವಿಕಲತೆ!.....

ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಒಬ್ಬಳು ಹೆಣ್ಣು ಮಗಳು ವಿಶ್ವಮಟ್ಟದ ಪಾರಾ ಒಲಿಂಪಿಕ್ಸ್ ಕೂಟದಲ್ಲಿ ಪದಕವನ್ನು ಗೆಲ್ಲುವ ಕನಸು  ಕಾಣುವುದು ಕೂಡ ಸಾಧ್ಯವೇ? ಯೋಚನೆ ಕೂಡ ಮಾಡಲು ಸಾಧ್ಯವೇ? ಆದರೆ ಪಾರಾ ಅಥ್ಲೀಟ್ ದೀಪಾ ಮಲ್ಲಿಕ್ ಅದನ್ನು ಹೋರಾಟದ ಮೂಲಕ ಮಾಡಿ ತೋರಿಸಿದ್ದಾರೆ. ಆಕೆಯ ಬದುಕು, ಛಲ ಮತ್ತು ಅನನ್ಯ ಹೋರಾಟ ನಿಜವಾಗಿಯೂ ಗ್ರೇಟ್!

ದೀಪಾ ಹುಟ್ಟಿದ್ದು ಹರ್ಯಾಣದಲ್ಲಿ ಸೆಪ್ಟೆಂಬರ್ 30, 1970ರಂದು. ತಂದೆ, ಅಣ್ಣ ಎಲ್ಲರೂ ಸೈನಿಕರು. ಕೈ ಹಿಡಿದ ಪತಿ ಬಿಕ್ರಂ ಮಲಿಕ್ ಕಾರ್ಗಿಲ್ ಯೋಧ. ಬಾಲ್ಯದಿಂದ ಕ್ರೀಡೆ ಮತ್ತು ಬೈಕ್ ಸವಾರಿ ಅವರ ಕ್ರೇಜ್. ಯಾವ ಸಾಹಸ ಮಾಡಲು ಹಿಂಜರಿಯುವ ಹುಡುಗಿಯೇ ಅಲ್ಲ. ಮದುವೆಯ ನಂತರ ಗಂಡನ ಪೂರ್ಣ ಪ್ರಮಾಣದ ಬೆಂಬಲ ಅವರ ಸಾಹಸಗಳಿಗೆ ದೊರೆತಿತ್ತು. ಆದರೆ ಅವರ ಬದುಕಿನಲ್ಲಿ ಮೊದಲ ಆಘಾತ ನಡೆದದ್ದು ಅವರ ಪುಟ್ಟ ಮಗಳು ದೇವಿಕಾ ಬೈಕ್ ಅಪಘಾತಕ್ಕೆ ಒಳಗಾದಾಗ. ಮಗಳ ತಲೆಗೆ ಪೆಟ್ಟಾಗಿತ್ತು. ದೇಹದ ಎಡ ಭಾಗ ಪೂರ್ತಿ ಪಾರಾಲೈಸ್ ಆಗಿತ್ತು. ಅದಕ್ಕೆ ಮೆಡಿಕಲ್ ಭಾಷೆಯಲ್ಲಿ ಹೇಮಿಪ್ಲೆಜಿಯಾ ಎಂದು ಹೆಸರು. ದೀಪಾ ತನ್ನ ಸಾಹಸದ ಪ್ಯಾಶನಗಳನ್ನು ಮರೆತು ಮಗಳ ಶುಶ್ರೂಷೆಯಲ್ಲಿ ಮುಳುಗಿ ಬಿಟ್ಟರು.  

ಮುಂದೆ 1999ರ ಕಾರ್ಗಿಲ್ ಯುದ್ದವು ಆರಂಭವಾದಾಗ ಪತಿ ಬಿಕ್ರಂ ಮಲಿಕ್ ಯೋಧನಾಗಿ ರಣ ಭೂಮಿಯಲ್ಲಿ ಇದ್ದರು. ಪತ್ನಿಗೆ ಅವರ ಸಂಪರ್ಕ ಸಾಧ್ಯವೇ ಇರಲಿಲ್ಲ. ಅದೇ ಹೊತ್ತಿಗೆ ದೀಪಾ ಬದುಕಿನಲ್ಲಿ ಎರಡನೇ ಬಿರುಗಾಳಿ ಬೀಸಿತು. ಸುಮಾರು ದಿನಗಳಿಂದ ಅವರ ಬೆನ್ನು ಮೂಳೆಯ ನೋವು ಕಾಡುತ್ತಿತ್ತು. ಪರೀಕ್ಷೆ ಮಾಡಲು ಹೋದಾಗ ವೈದ್ಯರು ಹೇಳಿದ್ದು- ನಿಮ್ಮ ಬೆನ್ನು ಮೂಳೆಯಲ್ಲಿ ಒಂದು ಅಪಾಯಕಾರಿ ಗಡ್ಡೆ ಬೆಳೆದಿದೆ. ಆಪರೇಷನ್ ಮಾಡದೆ ಹಾಗೆ ಬಿಟ್ಟರೆ ಸಾವು ಖಂಡಿತ. ಆಪರೇಷನ್ ಮಾಡಿದರೆ ನಿಮ್ಮ ದೇಹದ ಒಂದು ಭಾಗ ಪಾರಾಲೈಜ್ ಆಗುವುದು ಖಂಡಿತ! 

ಗಂಡ ಯುದ್ಧ ಭೂಮಿಯಲ್ಲಿ ಇದ್ದ ಕಾರಣ ಅವರ ಅಭಿಪ್ರಾಯ ಪಡೆಯುವುದು ಸಾಧ್ಯವೇ ಇರಲಿಲ್ಲ. ದೀಪಾ ಧೈರ್ಯವಾಗಿ ಆಪರೇಶನ್ ನಿರ್ಧಾರ ತೆಗೆದುಕೊಂಡರು. ಒಂದು ವಾರ ಬಿಟ್ಟು ಆಸ್ಪತ್ರೆಗೆ ಬರುವುದಾಗಿ ತಿಳಿಸಿದರು. ಅದಕ್ಕೆ ಅವರು ಕೊಟ್ಟ ಕಾರಣ ಅದ್ಭುತವಾಗಿ ಇತ್ತು - ಒಂದು ವಾರ ನಾನು ನನ್ನ ಕಾಲ ಮೇಲೆ ಫೀಲ್ ಜೊತೆಗೆ ನಡೆಯಬೇಕು! 

ನಂತರ ಒಬ್ಬರೇ ಆಸ್ಪತ್ರೆಗೆ ಬಂದು ಶಸ್ತ್ರ ಚಿಕಿತ್ಸೆಗೆ ಒಳಗಾದರು. ಅತ್ಯಂತ ಯಾತನಾಮಯ ಆದ ಶಸ್ತ್ರ ಚಿಕಿತ್ಸೆ ಅದು. 183 ಹೊಲಿಗೆ ಹಾಕಿಸಿ ಕೊಂಡು ಆಕೆ ಕಣ್ಣು ತೆರೆದಾಗ ಅವರ ದೇಹದ ಎದೆಯ ಕೆಳಗಿನ ಭಾಗ ಪೂರ್ತಿ ಪಾರಾಲೈಜ್ ಆಗಿತ್ತು. ವೀಲ್ ಚೇರ್ ಬದುಕು ಅನಿವಾರ್ಯ ಆಗಿತ್ತು! 

ಈ ಸ್ಥಿತಿಗೆ ಪಾರಾಪ್ಲೆಜಿಕ್ ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯುತ್ತಾರೆ. ಅಂದರೆ ದೇಹದ ಅರ್ಧ ಭಾಗ ನಿಯಂತ್ರಣ ಕಳೆದುಕೊಳ್ಳುವುದು ಮಾತ್ರವಲ್ಲ ಮಲ ಮೂತ್ರಗಳ ಮೇಲೆ ಕೂಡ ನಿಯಂತ್ರಣಗಳು ತಪ್ಪಿ ಹೋಗುವುದು. ಒಂದು ಗ್ಲಾಸ್ ನೀರು ಕುಡಿಯಲು ಕೂಡ ಹಿಂದೆ ಮುಂದೆ ನೋಡಬೇಕಾದ ಅನಿವಾರ್ಯತೆ! ಯಾವ ಆಹಾರ ಸೇವಿಸಲು ಕೂಡ ವೈದ್ಯರ ಅನುಮತಿಯನ್ನು ಪಡೆಯಬೇಕು! ಆದ್ದರಿಂದ ಪಾರಾಪ್ಲೆಜಿಕ್ ಸಮಸ್ಯೆ ಇದ್ದವರು ಮನೆಯಿಂದ ಹೊರಗೆ ಬರುವುದೇ ಇಲ್ಲ. ಆದರೆ ದೀಪಾ  ಬೇರೆಯವರ ಹಾಗೆ ಯೋಚನೆ ಮಾಡಲೇ ಇಲ್ಲ! 

1999ರ ಕಾರ್ಗಿಲ್ ಯುದ್ದ ಗೆದ್ದು ಗಂಡ ಮನೆಗೆ ಬಂದಾಗ ಮನೆಯಲ್ಲಿ ಎರಡೆರಡು ಪಾರಾಲೈಸ್ ಆಗಿ ನೊಂದ  ಜೀವಗಳು ಅವರನ್ನು ಸ್ವಾಗತ ಮಾಡಿದವು. ಕಣ್ಣೀರು ಸುರಿಸುತ್ತ ಮಲಗಿದ ಹೆಂಡತಿ. ಆದರೆ ಬಿಕ್ರಂ ಸಿಂಗ್ ಒಬ್ಬ ದಿಟ್ಟ ಸೈನಿಕನಾಗಿ ಹೆಂಡತಿಗೆ ಧೈರ್ಯ ತುಂಬಿದರು.  ಬದುಕಿನ ನೋವುಗಳನ್ನು ಮರೆಯಲು ಬಾಲ್ಯದ ಕ್ರೀಡೆ ಮತ್ತು ಪ್ಯಾಶನ್ ಮುಂದುವರೆಸುವ ಸಲಹೆ ಕೊಟ್ಟರು. ತಾನು ಪೂರ್ತಿ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿದರು. ಪತಿಯ ಪೂರ್ಣ ಪ್ರಮಾಣದ ಬೆಂಬಲ ಪಡೆದ ದೀಪ ಮತ್ತೆ ಕ್ರೀಡಾ ಜಗತ್ತು ಪ್ರವೇಶ ಮಾಡಲು ನಿರ್ಧಾರ ಮಾಡಿದ್ದರು. ಧೈರ್ಯವಾಗಿ ಮನೆಯಿಂದ ಹೊರಗೆ ಕಾಲಿಟ್ಟರು.  

ಬೈಕ್ ಮತ್ತು ಕಾರ್ ಓಡಿಸಲು ದೆಲ್ಲಿಯ ಸ್ಪೈನಲ್ ಇಂಜುರಿ ಕೇಂದ್ರದಲ್ಲಿ ಒಂದೂವರೆ ವರ್ಷ ಕಠಿಣ ತರಬೇತು ಪಡೆದರು. ಈಜು ಕಲಿತರು. ಬೈಕ್ ಮತ್ತು ಕಾರಲ್ಲಿ ಹಲವು ಮಾರ್ಪಾಟು ಮಾಡಿಸಿದರು. ಡ್ರೈವಿಂಗ್ ಲೈಸೆನ್ಸ್ ಪಡೆಯಲು ಪಡಬಾರದ ಕಷ್ಟ ಪಟ್ಟರು. ಅದೆಲ್ಲವೂ ಹೋರಾಟದ ದಿನಗಳು. ಅರ್ಧ ದೇಹ ಮತ್ತು ಪೂರ್ಣ ಸ್ಥೈರ್ಯ ಅವರ ನೆರವಿಗೆ ನಿಂತಿದ್ದವು! 

2006ರಲ್ಲಿ ಕೌಲಾಲಂಪುರದಲ್ಲಿ ನಡೆದ ಈಜು ಸ್ಪರ್ಧೆಯಲ್ಲಿ ಅವರಿಗೆ ಮೊದಲ ಅಂತಾರಾಷ್ಟ್ರೀಯ ಪದಕ ದೊರೆಯಿತು. 2008ರಲ್ಲಿ ಯಮುನಾ ನದಿಯ ಹರಿವಿಗೆ ವಿರುದ್ದವಾಗಿ ಒಂದು ಕಿಲೋಮೀಟರ್ ಈಜಿ ಲಿಮ್ಕಾ ದಾಖಲೆ ಬರೆದರು. ಅಂತಾರಾಷ್ಟ್ರೀಯ ಪದಕ ಗೆದ್ದ ಕೇವಲ ಭಾರತದ್ದೆ ಅಲ್ಲ ಇಡೀ ಜಗತ್ತಿನ ಮೊತ್ತ ಮೊದಲ ಪಾರಾಪ್ಲೆಜೀಕ್ ಕ್ರೀಡಾಪಟು ದೀಪಾ ಮಲ್ಲಿಕ್ ಆಗಿದ್ದರು! ನಂತರ ಅವರು ಹಿಂದೆ ಮುಂದೆ ನೋಡುವ ಪ್ರಸಂಗವೇ ಬರಲಿಲ್ಲ. ಅವರ ಗೆಲುವಿನ ಕೆಲವು ಹೆಜ್ಜೆಗಳು ಹೀಗಿವೆ. 

೧) 2009ರಲ್ಲಿ ವಿಶೇಷವಾಗಿ ಮಾರ್ಪಾಡು ಮಾಡಿದ ಬೈಕನ್ನು  58ಕಿಲೋಮೀಟರ್ ದೂರ ಓಡಿಸಿ ದಾಖಲೆ ಬರೆದರು.

೨) ಅದೇ ವರ್ಷ ಜಗತ್ತಿನ ಅತೀ ಎತ್ತರದ ರೈಡ್ ಟು ಹಿಮಾಲಯ ಹೆಸರಿನ ಮೋಟಾರ್ ರಾಲಿಯಲ್ಲಿ ನೇವಿಗೆಟರ್ ಆಗಿ ಭಾಗವಹಿಸಿದರು. ಅದು ಮೈ ಕೊರೆಯುವ ಚಳಿಯಲ್ಲಿ ಎಂಟು ದಿನಗಳ ಕಾಲ ಸಾಗಿದ, 1700 ಕಿಲೋಮೀಟರ್ ಪ್ರಯಾಣದ, 18,000 ಅಡಿ ಎತ್ತರದ ದುರ್ಗಮ ರಸ್ತೆಯ ರಾಲಿ ಆಗಿತ್ತು. ಇದನ್ನು ಗೆದ್ದ ದೀಪಾ ಎರಡನೇ ಬಾರಿಗೆ ಲಿಮ್ಕಾ ಬುಕ್ ದಾಖಲೆಗೆ ಸೇರಿದರು. 

೩) ಮುಂದಿನ ವರ್ಷ ದೀಪಾ ಇನ್ನೊಂದು ದೊಡ್ಡ ಸಾಹಸಕ್ಕೆ ಮುಂದಾದರು. ಅದು 3,000 ಕಿಲೋಮೀಟರ್ ಪ್ರಯಾಣದ ಡಸರ್ಟ್ ಸ್ಟಾರ್ಮ್ ರಾಲಿ. ಅದು ಕೂಡ ಮರುಭೂಮಿ ಸೀಳಿಕೊಂಡು ಹೋಗುವ ರಾಲಿ! ಅಲ್ಲೂ ಅವರ ಆತ್ಮವಿಶ್ವಾಸ ಗೆದ್ದಿತು. 

೪) ಮುಂದೆ ದೀಪಾ ಅವರು ಶಾಟ್ ಪುಟ್ ಮತ್ತು  ಜಾವೇಲಿನ್ ಥ್ರೋ ಮೇಲೆ ಗಮನ ಇಟ್ಟರು. 2010ರ ಏಷಿಯನ್ ಪಾರಾ ಗೇಮ್ಸ್ ಚೀನಾದಲ್ಲಿ ನಡೆದಾಗ ಕಂಚಿನ ಪದಕ ಗೆದ್ದರು. ಮುಂದೆ 2011ರಲ್ಲಿ ನ್ಯೂಜಿಲ್ಯಾಂಡಲ್ಲಿ ಐಪಿಸಿ ವರ್ಲ್ಡ್ ಚಾಂಪಿಯನ್ ಶಿಪ್ ಕೂಟದಲ್ಲಿ ಬೆಳ್ಳಿ ಪದಕ ಗೆದ್ದರು. 

೫) 2014ರಲ್ಲಿ ದಕ್ಷಿಣ ಕೊರಿಯಾದಲ್ಲಿ ಪಾರಾ ಏಷಿಯನ್ ಗೇಮ್ಸಲ್ಲಿ ಜಾವೇಲಿನ್ ಥ್ರೋದಲ್ಲಿ ಬೆಳ್ಳಿ ಪದಕ ಗೆದ್ದರು. 

೬) 2016ರ ರಿಯೋ ಪಾರಾ ಒಲಿಂಪಿಕ್ಸ್ ಕೂಟದಲ್ಲಿ ಶಾಟ್ ಪುಟ್ ಭಾಗವಹಿಸಲು ಭಾರೀ ತಯಾರಿ ನಡೆಸಿದರು. ಆಗ ತೀವ್ರವಾದ ದೈಹಿಕ ತೊಂದರೆಗಳು ಎದುರಾದವು. ಪ್ರತೀ ಬಾರಿ ಶಾಟ್ ಪುಟ್ ಎಸೆದಾಗ ಮಲ ಅಥವ ಮೂತ್ರ ವಿಸರ್ಜನೆ ಆಗಿ ಡಯಪರ್ ಬದಲಾವಣೆ ಮಾಡುವುದು ಅನಿವಾರ್ಯ ಆಗಿತ್ತು. ಆದರೆ ದೀಪಾ ಆತ್ಮವಿಶ್ವಾಸವನ್ನು ಕಳೆದು ಕೊಳ್ಳಲಿಲ್ಲ. ಅದೇ ಹೊತ್ತಿಗೆ ಅದರ ನಡುವೆ ಬೆನ್ನ ಹಿಂದೆ ವಿಶ್ವಾಸ ದ್ರೋಹದ ಘಟನೆಗಳು ಮತ್ತು ಕೋರ್ಟು ಅಲೆದಾಟ ಅವರನ್ನು  ಹಿಂಡಿ ಹಿಪ್ಪೆ ಮಾಡಿತು. ತಯಾರಿ ಮಾಡಬೇಕಾದ ಪೂರ್ತಿ ಹೊತ್ತು ಕೋರ್ಟು ಓಡಾಟದಲ್ಲಿ ಕಳೆದು ಹೋಗಿತ್ತು. ದೀಪಾ ಕೋರ್ಟಲ್ಲಿ ಕೂಡ ತಮ್ಮ ಪರವಾದ ತೀರ್ಪು ಪಡೆದರು ಮತ್ತು ರಿಯೋ ಪಾರಾ ಒಲಿಂಪಿಕ್ಸ್ ಸ್ಪರ್ಧೆಗೆ ಅರ್ಹತೆ ಪಡೆದಿದ್ದರು. 

2016ರ ಸೆಪ್ಟೆಂಬರ್ 14 ರಂದು ವೀಲ್ ಚೇರ್ ಮೇಲೆ ಕುಳಿತು ತನ್ನ ಇಡೀ ದೇಹದ ಶಕ್ತಿಯನ್ನು ಭುಜಗಳಿಗೆ ಬಸಿದು ದಾಖಲೆಯ  4.61 ಮೀಟರ್ ದೂರಕ್ಕೆ ಶಾಟ್ ಪುಟ್ ಎಸೆದಿದ್ದರು! ಅಂದು ಅವರಿಗೆ ದೊರೆತದ್ದು ಬೆಳ್ಳಿಯ ಪದಕ! ಭಾರತದ ಧ್ವಜ ರಿಯೋದಲ್ಲಿ ಹಾರಿದಾಗ ದೀಪಾ ಕಣ್ಣೀರು ಸುರಿಸಿದರು. ಅದು ಭಾರತವು ಪಾರಾ ಒಲಿಂಪಿಕ್ಸ್ ಕೂಟದಲ್ಲಿ ಗೆದ್ದ ಮೊದಲ ಪದಕ ಆಗಿತ್ತು ಮತ್ತು ಆ ಸಾಧನೆ ಮಾಡಿದ ಜಗತ್ತಿನ ಮೊದಲ ಪಾರಾಪ್ಲೆಜಿಕ್ ಕ್ರೀಡಾಪಟು ಅವರು ಆಗಿದ್ದರು! ಆಗ ಅವರಿಗೆ 46 ವರ್ಷ! 

೭) ಮುಂದೆ ಜಕಾರ್ತದಲ್ಲಿ ನಡೆದ ಏಷಿಯನ್ ಪಾರಾ ಗೇಮ್ಸ್ ಕೂಟದಲ್ಲಿ ಎರಡು ಕಂಚಿನ ಪದಕ ಅವರು ಗೆದ್ದರು.  

೮) ಸತತ ಮೂರು ಏಷಿಯನ್ ಪಾರಾ ಕೂಟಗಳಲ್ಲಿ ಪದಕ ಗೆದ್ದ  ( 2010,2014, 2018) ಮೊದಲ ಭಾರತೀಯ ಕ್ರೀಡಾಪಟು ದೀಪಾ ಮಲಿಕ್! 

೯) ಆಕೆ ಗೆದ್ದಿರುವ ಒಟ್ಟು ಪದಕಗಳ ಸಂಖ್ಯೆ 81. ಅದರಲ್ಲಿ 58 ರಾಷ್ಟ್ರೀಯ ಮಟ್ಟದ್ದು. 23 ಅಂತಾರಾಷ್ಟ್ರೀಯ ಮಟ್ಟದ್ದು! 

೧೦) ದೀಪಾ ಮಲಿಕ್ ಅವರಿಗೆ ರಾಷ್ಟ್ರಮಟ್ಟದ  ಅತ್ಯುತ್ತಮ ಕ್ರೀಡಾಪಟುವಿಗೆ ನೀಡುವ ಅರ್ಜುನ ಪ್ರಶಸ್ತಿ ಮತ್ತು ರಾಜೀವ್ ಗಾಂಧಿ ಖೆಲ್ ರತ್ನ ಪ್ರಶಸ್ತಿ ಎರಡೂ ಸಂದಿವೆ. 

೧೧) ಭಾರತ ಸರಕಾರವು ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದ್ದು ಅಂದಿನ  ಇಡೀ ಕಾರ್ಯಕ್ರಮವು ಭಾವಪೂರ್ಣ ಆಗಿತ್ತು. 

೧೨) ದೀಪಾ ಅರ್ಧ ದೇಹದ ಪಾರಾಲೈಜ್ ಆದ ತನ್ನ ಮಗಳು ದೇವಿಕಾ ಅವರನ್ನು ಕೂಡ ಓರ್ವ ಪಾರಾ ಅಥ್ಲೀಟ್ ಆಗಿ ರೂಪಿಸುತ್ತಿದ್ದಾರೆ! 

ಸುಧಾ ಪತ್ರಿಕೆಯಲ್ಲಿ ಕಳೆದ ವಾರ ಪ್ರಕಟವಾದ ನೇಮಿಚಂದ್ರ ಅವರ ಅದ್ಭುತ ಲೇಖನದ ಸ್ಫೂರ್ತಿಯಿಂದ ಈ ಲೇಖನ  ಬರೆದಿರುವೆ. ಕೋವಿಡ್ ಕಾರಣಕ್ಕೆ ಬದುಕಿನಲ್ಲಿ ಭರವಸೆ ಕಳೆದುಕೊಂಡಿರುವ ಹಲವರಿಗೆ ದೀಪಾ ಮಲಿಕ್ ಅವರ ಬದುಕು ಸ್ಫೂರ್ತಿ ಆಗಿ ನಿಂತರೆ ಸಾಕು. ಅದಕ್ಕಿಂತ ಹೆಚ್ಚಾಗಿ ಅವರ ಎಲ್ಲಾ ಹೋರಾಟಗಳ ಹಿಂದೆ ನಿಂತ ಅವರ ಪತಿ ಬಿಕ್ರಂ ಮಲಿಕ್ ಮತ್ತು ಮಕ್ಕಳ ಬೆಂಬಲ ಕೂಡ ಸ್ಮರಣೀಯ ಆಗಿದೆ. 

-ರಾಜೇಂದ್ರ ಭಟ್ ಕೆ,

ಜೇಸಿಐ ರಾಷ್ಟ್ರ ಮಟ್ಟದ ತರಬೇತುದಾರರು.

Visit: Upayuktha Advertisements- A Dedicated place for Your Ads

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು