ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ವೈದ್ಯರ ಇತಿ-ಮಿತಿಗಳು, ಸಂಕಷ್ಟಗಳು ಜನರಿಗೆ ಅರ್ಥವಾದೀತೆ...? ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ವೈದ್ಯೋ ನಾರಾಯಣೋ ಹರಿಃ ಎಂದು ಹಲವು ಕಡೆ ಉಲ್ಲೇಖವಿದೆ. ಆದರೆ ಇದು ಇವತ್ತು ಕೇವಲ ಪುರಾಣಗಳಿಗೆ ಸೀಮಿತವಾಗಿ ಉಳಿದಿರುವುದು ವಿಪರ್ಯಾಸ. ದುರದೃಷ್ಟವಶಾತ್ ಈ ಮಾತನ್ನು ವೈದ್ಯರನ್ನು ಹೊಗಳಲು ಬಳಸುವುದಕ್ಕಿಂತ ಅವರ ಬಗ್ಗೆ ಋಣಾತ್ಮಕವಾಗಿ ವಿಮರ್ಶಿಸುವಾಗ ಬಳಸುವುದು ಹೆಚ್ಚಾಗಿರುವುದನ್ನು ಗಮನಿಸಬೇಕಾಗಿದೆ. 

ಹೀಗನಿಸಲು ಹಲವು ಸಂದರ್ಭಗಳು ಎಡೆ ಮಾಡಿವೆ.

ವೈದ್ಯರ ಮೇಲೆ ಹಲ್ಲೆ/ ಹಲ್ಲೆಗೊಳಗಾದ ವೈದ್ಯರು ಎಂದು ದಿನನಿತ್ಯವೆಂಬಂತೆ ಪತ್ರಿಕೆ/ಟಿವಿಯಲ್ಲಿ ನೋಡುತ್ತಲೇ ಬರುತ್ತೇವೆ. ಆದರೆ ಇದರ ಬಗ್ಗೆ ಯಾರಾದರೂ ಒಂದು ದಿನವಾದರೂ ದನಿಯೆತ್ತಿದವರಿದ್ದೀರ? ಒಮ್ಮೆಯಾದರೂ ಹೀಗೇಕೆ ನಮ್ಮ ವೈದ್ಯರಿಗೆ ಸಂಕಷ್ಟ ಎದುರಾಗಿದೆ ಎಂದು ಯೋಚಿಸಿದ್ದೀರ!?

ಎಲ್ಲೋ ದೂರದೂರಿನಲ್ಲಿ, ಯಾವುದೋ Zomato boy, ಯಾವುದೋ ಒಂದು ನಾಯಿಮರಿ, ಯಾವುದೋ ಒಂದು ಆನೆ, ಹೀಗೆ ದೂರದಲ್ಲಿರುವ ಹಲವು ವಿಷಯಗಳಿಗೆ ದನಿಯಾಗುವ ನೀವುಗಳು, ನಿಮ್ಮ ಹಾಗೂ ನಿಮ್ಮ ಮನೆಯವರ ಆರೋಗ್ಯವನ್ನು ಕಾಪಾಡುವ, ನಿಮಗೆ ಯಾವುದೇ ತೊಂದರೆಯಾದಾಗ ತಮ್ಮ ಕೆಲಸಗಳನ್ನ ಬದಿಗಿಟ್ಟು ನಿಮ್ಮ phone consultation ಮೂಲಕ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ, ತಮ್ಮ ಜೀವವನ್ನೇ ಪಣಕ್ಕಿಟ್ಟು, ತಮ್ಮ ಮನೆಮಂದಿಗಳಿಂದ ಅದೆಷ್ಟೋ ದಿನ ವನವಾಸದಂತೆ ದೂರವಿದ್ದು, ಅದೆಷ್ಟೋ ಬಾರಿ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ, ಅದೆಷ್ಟೋ ಬಾರಿ ಊಟ-ತಿಂಡಿಗಳನ್ನು ಮಾಡದೆ, ನಿಸ್ವಾರ್ಥವಾಗಿ, ತಮ್ಮ ಮುಂದೆ ಬಂದ ರೋಗಿಗೆ ವರ್ಣ/ಜಾತಿ/ಲಿಂಗ ಭೇದವಿಲ್ಲದೆ ತಮ್ಮಿಂದಾಗುವ ಪರಿಚಾರಿಕೆಯನ್ನು ಮಾಡಿ, ರೋಗಿಯ ಕಷ್ಟವನ್ನು ಅವರಿಂದ ಎಷ್ಟು ಸಾಧ್ಯವೋ, ಅಷ್ಟು ಮಾಡುವ ನಮ್ಮ-ನಿಮ್ಮ ಸುತ್ತಲೇ ಇರುವ ವೈದ್ಯರ ಬಗ್ಗೆ ಒಂದಷ್ಟು ಕಾಳಜಿ /ಒಂದು ಸಾಂತ್ವನ / ಒಂದು ಬೆಂಬಲ ನೀಡದಿರುವುದು ಅದೆಷ್ಟು ಸರಿಯೆಂದು ಒಮ್ಮೆ ಯೋಚಿಸಿ ನೋಡಿ. 

ವೈದ್ಯರು ನೆನಪಾಗುವುದು ಕೇವಲ ಅನಾರೋಗ್ಯ ಕಾಡಿದಾಗ. ತಮ್ಮವರಿಗೆ ಏನೇ ತೊಂದರೆಗಳು ಬಂದ ಕೂಡಲೇ ವೈದ್ಯರನ್ನು ದೇವರಂತೆಯೇ ನೆನೆಸುವ ಜನರುಗಳೇ, ನಿಮ್ಮಿಂದ ಇದೇನನ್ನು ಯಾವ ವೈದ್ಯರು ಬಯಸುವುದಿಲ್ಲ. ಯಾಕೆಂದರೆ, ಚಿಕಿತ್ಸೆ ನೀಡುವುದು ನಮ್ಮ ಕರ್ತವ್ಯವಾಗಿದೆ ಹಾಗೂ ಅದನ್ನು ನಾವು ಮಾಡುತ್ತೇವೆ. ಆದರೆ ಕೊನೆಯುಸಿರೆಳೆಯುತ್ತಿರುವ ವ್ಯಕ್ತಿಯ ಜೀವವನ್ನು ಪ್ರತಿಯೊಂದು ಬಾರಿಯೂ ವೈದ್ಯರು ಉಳಿಸಲು ಸಾಧ್ಯವಲ್ಲ ಎಂಬ ವಾಸ್ತವವನ್ನು ತಿಳಿದಿರಬೇಕು.

ಹಾಗೆಯೇ, ಯಾವುದೇ ಎರಡನೇ ಯೋಚನೆಯಿಲ್ಲದೆ, ವೈದ್ಯರೇ ಈ ಸಾವಿಗೆ ಕಾರಣವೆಂದು ಸಾರಿ ಹೇಳಿ, ಅವರ ಮೇಲೆ ಕೈಮಾಡುವ/ಹಲ್ಲೆಗೊಳಿಸುವ ವ್ಯಕ್ತಿಗಳೇ, ಒಂದು ತಿಳಿದಿರಿ, ನಿಮ್ಮ ಮಾತುಗಳಿಂದ ಅತ್ಯಂತ ಕುಂದಿತರಾಗುವುದು ಅದೇ ವೈದ್ಯ-ಬಂಧುಗಳು, ಮುಂದೊಂದು ದಿನ ಅದೇ ಪರಿಸ್ಥಿತಿ ಎದುರಾದಾಗ, ಇದು ನನ್ನಿಂದಾಗದು ಎಂಬ ಒಂದು ಹಿಂಜರಿಕೆಯು ವೈದ್ಯರಲ್ಲಿ ಕುಡಿಯೊಡೆಯುವುದು. ಇದರಿಂದಾಗುವ ಪರಿಣಾಮ ಒಂದು ವೈದ್ಯರು ಹಾಗೂ ಒಂದು ರೋಗಿಗೆ ಆಗುವ ನಷ್ಟ ಯಾರ ಊಹೆಗೂ ನಿಲುಕದ್ದು.  

ಖಿನ್ನತೆಯಂತಹ ಸಂಕೀರ್ಣ ಮಾನಸಿಕ ಸಮಸ್ಯೆ ವೈದ್ಯರಲ್ಲೇ ಹೆಚ್ಚು. ವೈದ್ಯರಲ್ಲಿನ ಆತ್ಮಹತ್ಯೆ ಸರಾಸರಿ ಸಮಾಜದ ಸಾಮಾನ್ಯ ಸರಾಸರಿಗಿಂತ ಹಲವು ಪಟ್ಟು ಮೇಲಿರುತ್ತದೆ. ಇದು ವೈದ್ಯರ ಮೇಲಿನ ಮಾನಸಿಕ ಒತ್ತಡದ ದ್ಯೋತಕ.

ಅದೇ, ಇಂತಹ ಸಂದರ್ಭದಲ್ಲಿ ವೈದ್ಯರನ್ನು ಬೆಂಬಲಿಸಿ, ಅವರ ಆತ್ಮವಿಶ್ವಾಸ/ಪ್ರೀತಿವನ್ನು ತುಂಬಿಸುವ ಎರಡು ಮಾತುಗಳನ್ನಾಡಿದರೆ, ಅದುವೇ ಈ ಜಗತ್ತಿನ ಸರ್ವ ಜಡ- ಚೇತನಗಳಲ್ಲೂ ಸೂಕ್ಷ್ಮರೂಪದಲ್ಲಿ ಅಡಕವಾಗಿರುವ, ಹಾಗೆಯೇ ವೈದ್ಯರಲ್ಲಿರುವ ಆ ನಾರಾಯಣನ್ನು ಜಾಗ್ರತಗೊಳಿಸಲು ಶಕ್ತವಾಗುವುದು. ನಾವು ನಂಬಿದ ಜಾಗದಲ್ಲಿ ನಂಬಿದ ರೂಪದಲ್ಲಿ ನಂಬಿದ ಸಮಯದಲ್ಲೆಲ್ಲಾ ಆತ ನಮ್ಮ ಸಹಾಯಕ್ಕೆ ಬರುತ್ತಾನೆ ಎಂದು ನಾವು ನಂಬಿರುವುದಾದರೆ, ಆ ನಂಬಿಕೆಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿಯೂ ತಮ್ಮ ಮೇಲಿದೆ ಎಂಬ ಸತ್ಯವನ್ನು ಜನರು ಕಾಣಬೇಕಾಗಿದೆ.

ವೈದ್ಯರುಗಳಿಗೆ ತಮ್ಮ ಪ್ರೀತಿ, ವಿಶ್ವಾಸ, ಧೈರ್ಯ ತುಂಬುವ ಮಾತುಗಳಿಂದ ಹುರಿದುಂಬಿಸಿ, ಅವರ ಹುಮ್ಮಸ್ಸನ್ನು ವರ್ಧಿಸುವುದು ನಮ್ಮ ಜವಬ್ದಾರಿ ಎಂದರಿಯಬೇಕಿದೆ. ವೈದ್ಯೋ ನಾರಾಯಣೋ ಹರಿಃ ಎಂದು ಓದಿರುವ ಶ್ಲೋಕದ ಪೂರ್ಣಭಾಗ

"ಶರೀರೇ ಜರ್ಜರೀ ಭೂತೇ ವ್ಯಾಧಿಗ್ರಸ್ತೇ ಕಳೇವರೇ’

ಔಷಧೀ ಜಾಹ್ನವೀ ತೋಯಂ, ವೈದ್ಯೋ ನಾರಾಯಣೋ ಹರಿಃ". 

ಇದರ ಪೂರ್ಣವಾಗಿ ಅರ್ಥೈಸಿಕೊಂಡು, ವೈದ್ಯನೂ ಮಾನವನೇ; ಅವನ ಪ್ರಯತ್ನಕ್ಕೂ ಒಂದು ಮಿತಿ ಇದೆ. ಕಾಯಿಲೆ ಒಂದು ಹಂತಕ್ಕಿಂತ ಮೀರಿ ಉಲ್ಬಣಿಸಿದರೆ ದೇವರೇ ಕಾಪಾಡಬೇಕು’ ಎಂಬ ವಾಸ್ತವ ಪ್ರಜ್ಞೆ ನಮ್ಮಲ್ಲಿ ಮೂಡಿಬರುವುದು ಎಂಬ ವಿಶ್ವಾಸ ಇವತ್ತು ವೈದ್ಯಲೋಕವನ್ನು ಮುಂದುವರೆಸುತ್ತ ಸಾಗುತ್ತಿದೆ.

-ಡಾ||ಅನಿರುದ್ಧ ಕಾಟಿಪಳ್ಳ 

ಸ್ನಾತಕೋತ್ತರ ವಿದ್ಯಾರ್ಥಿ

ಶ್ವಾಸಕೋಶ ವೈದ್ಯಶಾಸ್ತ್ರ ವಿಭಾಗ

ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ, ಬೆಂಗಳೂರು


Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

2 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು