ತಂದೆ, ತಾಯಿ, ಗುರುವಿಗೆ ಬಹಳ ಹತ್ತಿರವಾಗುವವರೆಂದರೆ ಅವರ ಮಗ, ಮಗಳು... ಗುರುವಿಗೆ ಶಿಷ್ಯ-ಶಿಷ್ಯೆಯರು.
ಶ್ರೀಮತಿ ಹರ್ಷಿತಾ ಅವರು ತನ್ನ ವಿದ್ಯಾಭ್ಯಾಸ ಸಂದರ್ಭದಲ್ಲಿ ಪುತ್ತೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಭಿಮಾನದ ಶಿಷ್ಯೆ. ಚಿತ್ರಕಲೆ ರಂಗೋಲಿ ಲೇಖನ ಕವನ ಬರೆದು ಕೊಡುತ್ತಿದ್ದರು. ಕಾಲೇಜಿನ ವಾಲ್ ಮ್ಯಾಗಝಿನ್ ನಲ್ಲಿ ಬಣ್ಣ ಹಚ್ಚಿ ಹಾಕಿದ ನೆನಪುಗಳು ಹಸಿರಾಗಿವೆ.
ಶ್ರೀ ವೆಂಕಪ್ಪ ಕುಲಾಲ್ ಮತ್ತು ಶ್ರೀಮತಿ ಮೀನಾಕ್ಷಿಯವರ ಹಿರಿಯ ಮಗಳಾದ ಹರ್ಷಿತಾರಿಗೆ ಕು.ಪ್ರಜ್ಞಾ ಕುಲಾಲ್, ಕು.ಯಶಸ್ವಿನಿ , ಕು.ತ್ರಿವೇಣಿ , ಮೂವರು ಸಹೋದರಿಯರು. ಹೆಣ್ಣು ಮಕ್ಕಳು ಸಾಧಿಸಿದರೆ ಕುಟುಂಬ, ಶಿಕ್ಷಣ,ಕಲೆ-ಸಾಹಿತ್ಯ, ನಾಡು-ನುಡಿ-ಸಮಾಜ ಬೆಳಗುವ ನಕ್ಷತ್ರಗಳಾಗುವರು ಎಂಬುದಕ್ಕೆ ಶ್ರೀ ವೆಂಕಪ್ಪ ಕುಲಾಲ್, ಶ್ರೀಮತಿ ಮೀನಾಕ್ಷಿ ಕುಟುಂಬವೇ ಆದರ್ಶ.
ತನ್ನ ಪ್ರಾಥಮಿಕ- ಒಂದರಿಂದ ಎಂಟನೇ ತರಗತಿವರೆಗಿನ ಶಿಕ್ಷಣವನ್ನು ಹುಟ್ಟೂರು ಕಾವು ದ.ಕ.ಜಿ.ಪ.ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿ, ಪ್ರೌಢ, ಪದವಿ ಪೂರ್ವ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟು, ಪುತ್ತೂರು ಇಲ್ಲಿ ಪೂರ್ಣಗೊಳಿಸಿದ ಹರ್ಷಿತಾ ಅವರು ,ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪಡೆದರು.
ಪ್ರಕೃತ ಹರೀಶ್ ಅವರ ಕೈ ಹಿಡಿದು ಮಗು ಚಿ.ಪೂರ್ವಜ್ ಅವರ ಅಮ್ಮನಾಗಿ ಸಂತೃಪ್ತ ಬದುಕು ಕಟ್ಟಿಕೊಂಡಿರುವ ಯುವ ಬರಹಗಾರ್ತಿ ಹರ್ಷಿತಾ ಹರೀಶ್ ಕುಲಾಲ್ ತನ್ನ ಹುಟ್ಟುಹಬ್ಬದ ಹರುಷದ ಸಂಭ್ರಮದಲ್ಲಿದ್ದಾರೆ.
ವಿದ್ಯಾರ್ಥಿ ಜೀವನದಲ್ಲೇ ಕಲೆ ಸಾಹಿತ್ಯ ಪತ್ರಿಕಾರಂಗದಲ್ಲಿ ಆಸಕ್ತಿ ಹೊಂದಿದ್ದ ಹರ್ಷಿತಾ ಮುಂದೆ ಪತ್ರಕರ್ತೆಯಾಗಿ ಉದಯವಾಣಿ, ಹೊಸದಿಗಂತ, ಸುದ್ದಿ ಬಿಡುಗಡೆ, ವಿಜಯಕರ್ನಾಟಕ, ಪ್ರಜಾವಾಣಿ, ವಿಜಯವಾಣಿ, ಬಿಂಬ ಧ್ವನಿ ...ಮೊದಲಾದ ಪತ್ರಿಕೆಗಳಲ್ಲಿ ಅನೇಕ ಲೇಖನ, ಪ್ರತಿಭೆಗಳ ಪರಿಚಯ ಮಾಡುವುದರ ಮೂಲಕ ಓದುಗರ ಗಮನ ಸೆಳೆದವರು.
ಮಧುಪ್ರಪಂಚ,ತರಂಗ, ಸುಧಾ, ಮಂಗಳ ಇನ್ನಿತರ ಸಂಚಿಕೆಗಳಲ್ಲೂ ವೈಚಾರಿಕ ಲೇಖನ ಕವನಗಳು ಪ್ರಕಟವಾಗುತ್ತಿವೆ. ಈ ಮೊದಲು ನೂಪುರ, ವಿಕೆ ನ್ಯೂಸ್, BIMN ನಲ್ಲಿದ್ದು, ಪ್ರಕೃತ ಉಪಯುಕ್ತ ವೆಬ್ ನ್ಯೂಸ್, ನ್ಯೂಸ್ ಆ್ಯರೋ ಇವುಗಳ ವರದಿಗಾರ್ತಿಯೂ ಹೌದು.
ಬಾಲ್ಯದಲ್ಲಿಯೇ ಹಾಡುಗಾರಿಕೆ, ನೃತ್ಯ, ಚಿತ್ರಕಲೆ, ರಂಗೋಲಿ, ಅಂದವಾದ ಬರವಣಿಗೆ, ಕೇಶವಿನ್ಯಾಸ (ಹೇರ್ ಸ್ಟೈಲ್), ಫೊಟೋಗ್ರಫಿ ಹವ್ಯಾಸ ಹೊಂದಿರುವ ಹರ್ಷಿತಾರಿಗೆ ಅವರ ಕುಟುಂಬದವರ ಪ್ರೋತ್ಸಾಹ ಸದಾ ಇದೆ. ಬಾಲ್ಯದಲ್ಲಿ ಕಾಲಿಗೆ ಗೆಜ್ಜೆಕಟ್ಟಿ ಕುಣಿದ ಯಕ್ಷಗಾನ ಕಲಾವಿದೆಯೂ ಹೌದು. ಇವರು ಬಿಡಿಸಿದ ಅನೇಕ ಚಿತ್ರ ಪೈಂಟಿಂಗ್ಸ್ ಗಳಿಗೆ ಹಲವು ಬಹುಮಾನಗಳೂ ಬಂದಿವೆ.
ಹುಟ್ಟುಹಬ್ಬದ ಈ ಶುಭಸಂದರ್ಭದಲ್ಲಿ ಶ್ರೀಮತಿ ಹರ್ಷಿತಾ ಹರೀಶ್ ಕುಲಾಲ್ ಇವರಿಗೆ , ಕುಟುಂಬಕ್ಕೆ ಆಯುರಾರೋಗ್ಯ ಭಾಗ್ಯ ಸಕಲ ಸುಖ ಸಂಪತ್ತು ಸಿಗಲೆಂದು ಹಾರೈಸೋಣ. ಸಾಹಿತ್ಯ ಕ್ಷೇತ್ರದಲ್ಲಿ ಮಿಂಚಲೆಂದು ಹರಸೋಣ. ಶುಭಾಶಯಗಳು.
-ನಾರಾಯಣ ರೈ ಕುಕ್ಕುವಳ್ಳಿ.
ಪ್ರಧಾನ ಸಂಪಾದಕರು
ಮಧುಪ್ರಪಂಚ ಪುತ್ತೂರು.
ಕಾಮೆಂಟ್ ಪೋಸ್ಟ್ ಮಾಡಿ