ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಗೆಲ್ಲುವ ಛಲ, ಸೋಲೊಪ್ಪಿಕೊಳ್ಳದ ಹಠ, ದಣಿವರಿಯದ ಹೋರಾಟ- ಬದುಕಿಗೆ ಪ್ರೇರಣೆಯಾಗಲಿ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


 

KILLING INSTINCT......

ಗೆಲ್ಲುವ ಛಲ, ಪಡೆದೇ ತೀರುವೆನೆಂಬ ಹಠ, ಯಶಸ್ಸಿಗಾಗಿ ತಹತಹಿಸುವ ಕಿಚ್ಚು, ಸೋಲನ್ನು ಒಪ್ಪಿಕೊಳ್ಳದ ಮನಸ್ಥಿತಿ, ಏನಾದರೂ - ಹೇಗಾದರೂ ಮಾಡಿ ಅಂದು ಕೊಂಡಿದ್ದನ್ನು ಸಾಧಿಸಲೇ ಬೇಕೆಂಬ ಮನೋಭಾವ, ದಣಿವರಿಯದ ಹೋರಾಟ ಮುಂತಾದ ಎಲ್ಲಾ ಅರ್ಥಗಳನ್ನು ಆ ಇಂಗ್ಲೀಷ್ ಪದ ಒಳಗೊಂಡಿದೆ.


ಹೆಚ್ಚಾಗಿ ಕ್ರೀಡೆಯಲ್ಲಿ ಈ ಪದ ಬಳಸಲ್ಪಟ್ಟರೂ ಬದುಕಿನ ಎಲ್ಲಾ ಕ್ಷೇತ್ರಗಳಿಗೂ ಇದು ಅನ್ವಯಿಸುತ್ತದೆ. ಸಮಕಾಲೀನ ರಾಜಕೀಯ ಪರಿಸ್ಥಿತಿಗಳಿಗೆ ಇದನ್ನು ಸಮೀಕರಿಸಿ ಸಾಮಾನ್ಯರಾದ ನಾವು ಒಂದಷ್ಟು ಸ್ಪೂರ್ತಿದಾಯಕ ಅಂಶಗಳನ್ನು ಗುರುತಿಸಬಹುದು.


ದೇವೇಗೌಡ, ನರೇಂದ್ರ ಮೋದಿ, ಸಿದ್ದರಾಮಯ್ಯ, ಯಡಿಯೂರಪ್ಪ, ಮಮತಾ ಬ್ಯಾನರ್ಜಿ, ಮಾಯಾವತಿ, ದಿವಂಗತ ಇಂದಿರಾ ಗಾಂಧಿ - ಜಯಲಲಿತಾ, ಕರುಣಾನಿಧಿ, ಜಗನ್ ಮೋಹನ್ ರೆಡ್ಡಿ ಸೇರಿದಂತೆ ಕೆಲವರ ಪಟ್ಟಿ ಇದೆ.


 ಇವರ  ಸಾಮಾನ್ಯ ಅಂಶವೆಂದರೆ ಸೋಲನ್ನು ಒಪ್ಪಿಕೊಳ್ಳದ, ಗೆಲುವಿಗಾಗಿ ಹಲವು ವರ್ಷಗಳ ಕಾಯುವಿಕೆ ಮತ್ತು ನಿರಂತರ ಶ್ರಮದಾಯಕ ಹೋರಾಟವನ್ನು ಅವರಲ್ಲಿ ನೇರವಾಗಿ ಕಾಣಬಹುದು. ಎಂತಹ ಸೋಲು ಕೂಡ ಅವರನ್ನು ಕುಗ್ಗಿಸುವುದಿಲ್ಲ. ಸೋತ ಕ್ಷಣದಿಂದ ಗೆಲುವಿಗಾಗಿ ಹಪಹಪಿಸತೊಡಗುತ್ತಾರೆ. ಮಾನ ಅವಮಾನ ಅವರಿಗೆ ಲೆಕ್ಕವೇ ಇಲ್ಲ. ಭರವಸೆಗಳ ಮೇಲೆ ಭರವಸೆಗಳನ್ನು ಕೊಡುತ್ತಾ ಅವರ ಹಿಂಬಾಲಕರನ್ನು ಪ್ರೋತ್ಸಾಹಿಸುತ್ತಿರುತ್ತಾರೆ.


ಎಂತಹ ಹೀನಾಯ ಸೋಲೇ ಆಗಲಿ, ಕೊಲೆ ಅತ್ಯಾಚಾರ ಭ್ರಷ್ಟಾಚಾರದ ನಿಕೃಷ್ಟ ಆರೋಪ ಶಿಕ್ಷೆಗಳೇ ಆಗಲಿ, ಜೈಲುವಾಸವೇ ಆಗಿರಲಿ, ಅವರ ಮೇಲಿನ ಹಲ್ಲೆಗಳನ್ನು ಸಹ ಅವರು ನಿರ್ಲಕ್ಷಿಸಿ ಮತ್ತೆ ಮತ್ತೆ ಜನರ ಮಧ್ಯೆ ಬರುತ್ತಾರೆ. ಅದೇ ಉತ್ಸಾಹದಿಂದ ಭಾಷಣ ಮಾಡುತ್ತಾರೆ.


ಅವರುಗಳು ಮಾಡುವುದು ಸರಿ ಎಂದು ನಾನು ಖಂಡಿತ ಹೇಳುತ್ತಿಲ್ಲ. ಅವರ  ವ್ಯಕ್ತಿತ್ವವನ್ನು ಮೆಚ್ಚುತ್ತಿಲ್ಲ. ಆದರೆ ಅವರಲ್ಲಿರುವ ಜೀವನೋತ್ಸಾಹ ಮಾತ್ರ ‌ಖಂಡಿತ ಪ್ರೇರಣಾದಾಯಕ.

ಸಾಮಾನ್ಯ ಜನರನ್ನು ಗಮನಿಸಿ. ಕೇವಲ ಪ್ರೀತಿಗಾಗಿ, ಕೌಟುಂಬಿಕ ಕಲಹಗಳಿಗಾಗಿ, ಸಾಲಕ್ಕಾಗಿ, ಸಣ್ಣ ಪುಟ್ಟ ಅವಮಾನಗಳಿಗಾಗಿ ಜನ ಜೀವನವೇ ಮುಗಿದು ಹೋದಂತೆ ಕುಸಿದು  ಬೀಳುತ್ತಾರೆ ಮತ್ತು ಕೆಲವರು ಆತ್ಮಹತ್ಯೆಗೆ ಶರಣಾಗುತ್ತಾರೆ.


ಈ ವ್ಯತ್ಯಾಸ ಏಕೆ. ಎಲ್ಲರೂ ಮನುಷ್ಯರೇ ಅಲ್ಲವೇ. ಈ‌ ಪ್ರಕೃತಿ ಈ ಸಮಾಜ ಈ ಸರ್ಕಾರ ನ್ಯಾಯ ಅನ್ಯಾಯ ನೀತಿ ಅನೀತಿ ಮಾನ ಅವಮಾನ ಕಾನೂನು ಎಲ್ಲವೂ ಎಲ್ಲರಿಗೂ ಒಂದೇ ಅಲ್ಲವೇ. ಸೋಲು ಸಂಕಷ್ಟಗಳನ್ನು ಎದುರಿಸುವುದು ಅವರಿಗೆ ಸಾಧ್ಯವಾಗುವುದಾದರೆ ನಮಗೆ ಏಕೆ ಆಗುವುದಿಲ್ಲ. ಇಲ್ಲಿಯೇ ಭಾರತದ ಸಾಮಾಜಿಕ ಮತ್ತು ಮಾನಸಿಕ ಅಸಮತೋಲನದ ತಾರತಮ್ಯ ಅಡಗಿರುವುದು.


ಭಂಡ ವ್ಯಕ್ತಿಗಳು, ಭಾವನೆಗಳನ್ನು ನಿಯಂತ್ರಿಸುವವರು, ಅಧಿಕಾರ ಹಣದ ಮೋಹಕ್ಕೆ ಒಳಗಾದವರು, ಜನರ ನಾಡಿ ಮಿಡಿತ ಅರ್ಥಮಾಡಿಕೊಂಡವರು, ಯಶಸ್ಸು ಮಾತ್ರವೇ ನಿಜವಾದ ಮಾನ ಮರ್ಯಾದೆ ಎಂದು ಭಾವಿಸಿರುವವರು ಜೀವನವನ್ನು ಹೆಚ್ಚು ಧೈರ್ಯದಿಂದ ಎದುರಿಸುತ್ತಾರೆ.


ಅದಕ್ಕೆ ವಿರುದ್ಧವಾಗಿ ಸೂಕ್ಷ್ಮ ಮನಸ್ಸಿನವರು, ಭಾವನಾ ಜೀವಿಗಳು, ಸಮಾಜದ ಮೌಲ್ಯಗಳನ್ನು ಗೌರವಿಸುವವರು ಮತ್ತು ಅದಕ್ಕೆ ಭಯಪಡುವವರು ಬದುಕು ಎದುರಿಸಲು ತುಂಬಾ ಶ್ರಮ ಪಡುತ್ತಾರೆ ಹಾಗೂ ಸದಾ ಕಾಲ ಅತೃಪ್ತರಾಗಿಯೇ ಇರುತ್ತಾರೆ. ವಿಫಲತೆಯ ಭಯದಿಂದ  ನರಳುತ್ತಾರೆ.


ಜೊತೆಗೆ ಈ ರಾಜಕಾರಣಿಗಳಲ್ಲಿ ಬಹುತೇಕರು 65-75 ವಯಸ್ಸಿನ ನಡುವಿನವರು ಹಾಗೂ ಅದಕ್ಕಿಂತ ಹಿರಿಯರು. ಆದರೂ ಅವರ ಉತ್ಸಾಹ 25 ರ ಯುವಕರನ್ನು ನಾಚುವಂತಿರುತ್ತದೆ. ಚುನಾವಣಾ ಸಮಯದಲ್ಲಿ ಅವರ ಓಡಾಟ ಹಾರಾಟ ಯುದ್ಧದ ಸೈನಿಕರ ‌ದೈಹಿಕ ಶಕ್ತಿಯನ್ನು ನೆನಪಿಸಿತ್ತದೆ. ಆದರೆ ‌ಸಾಮಾನ್ಯ ಜನ 45-55 ಸಮೀಪಿಸುತ್ತಿದ್ದಂತೆ ಜೀವನವೇ ಮುಗಿದು ಹೋದಂತೆ ಭಾವಿಸುತ್ತಾರೆ. ತಮ್ಮ ಚಟುವಟಿಕೆ ನಿಯಂತ್ರಿಸಿಕೊಳ್ಳುತ್ತಾರೆ.


ಇರುವುದು ಒಂದೇ ಜೀವನ. ನಾವು ಯಾವುದೇ ಕ್ಷೇತ್ರದಲ್ಲಿ ಇರಲಿ ಅಥವಾ ‌ಸಾಮಾನ್ಯ ಸರಳ ಜೀವನವೇ ಸಾಗಿಸುತ್ತಿರಲಿ ಒಟ್ಟಿನಲ್ಲಿ ಬದುಕಿನ ಕೊನೆಯವರೆಗೂ ಜೀವನೋತ್ಸಾಹ ಉಳಿಸಿಕೊಳ್ಳೋಣ. ಎಂತಹ ಸೋಲು ಅಥವಾ ಕೆಟ್ಟ ಪರಿಸ್ಥಿತಿಯೇ ಬರಲಿ ಮತ್ತೆ ಮತ್ತೆ ಗೆಲುವಿನ ಭರವಸೆಯೊಂದಿಗೆ ಮುನ್ನಡೆಯೋಣ. ಪ್ರಕೃತಿಯಲ್ಲಿ ಒಂದು ದಿನ ಲೀನವಾಗುವವರೆಗೂ....

KILLING INSTINCT..

Post a Comment

ನವೀನ ಹಳೆಯದು