ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಸ್ಯಾಕ್ಸೋಫೋನ್‌ ಮಾಂತ್ರಿಕ ಕಲೈಮಾಮಣಿ ಕದ್ರಿ ಗೋಪಾಲ್ ನಾಥ್ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಕಲೆ ಸುಲಭದಲ್ಲಿ ಯಾರಿಗೂ ಒಲಿಯುವುದಿಲ್ಲ. ವರ್ಷಗಳ ತಪಸ್ಸು, ನಿರಂತರ ಅಭ್ಯಾಸ, ಶ್ರದ್ಧೆಯ ದುಡಿಮೆ ಒಬ್ಬ ಕಲಾವಿದನನ್ನು ಪರಿಪೂರ್ಣವಾಗಿಸುತ್ತದೆ. ತನ್ನ ಆಸಕ್ತಿಯ ಕ್ಷೇತ್ರದಲ್ಲಿನ ತಲ್ಲೀನತೆ ಆತನನ್ನು ಆ ಕ್ಷೇತ್ರದಲ್ಲಿ ಮಾಸ್ಟರ್ ಆಗಿಸುತ್ತದೆ. ಸುಮಾರು 2 ದಶಕಗಳ ಕಾಲ ನಿರಂತರ ತಪಸ್ಸಿನಂತೆ ಅಭ್ಯಸಿಸಿ "ಸ್ಯಾಕ್ಸೋಫೋನ್ ಚಕ್ರವರ್ತಿ" ಎಂದು ಕರೆಸಿಕೊಂಡವರು ಖ್ಯಾತ ಸ್ಯಾಕ್ಸೋಫೋನ್ ಕಲಾವಿದ ಕದ್ರಿ ಗೋಪಾಲ್ ನಾಥ್. ಕರ್ನಾಟಕ ಸಂಗೀತ ಮಾದರಿಯ ಸ್ಯಾಕ್ಸೋಫೋನ್ ವಾದಕರಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಇವರ ಸಾಧನೆ ಅದ್ವಿತೀಯ.

ಪ್ರಸಿದ್ಧ ನಾದಸ್ವರ ವಾದಕ ತನಿಯಪ್ಪರ ಪುತ್ರ ಗೋಪಾಲನಾಥ್ ಬಾಲ್ಯದಿಂದಲೇ  ನಾದಸ್ವರ ಕೇಳುತ್ತಾ ಬೆಳೆದವರು. ಮುಂಜಾನೆ ಏಳುತ್ತಲೇ ಸಂಗೀತ ಕಿವಿಗಪ್ಪಳಿಸುತ್ತಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪದಲ್ಲಿ 1949 ರಲ್ಲಿ ಜನಿಸಿದ ಬಾಲಕ ಗೋಪಾಲನಾಥ್ ಸಂಗೀತದೆಡೆಗೆ ಆಕರ್ಷಿತನಾದದ್ದು ಸಹಜ. ಪಾಣೆಮಂಗಳೂರಿನ ಶಾರದಾ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಶಿಕ್ಷಣ ಪಡೆದ ನಾದಸ್ವರ ಪರಿಣತ ಗೋಪಾಲ್ ನಾಥ್ ಮುಂದೆ ಸ್ಯಾಕ್ಸೋಫೋನ್ ವಾದಕರಾಗಿ ಬದಲಾದರು. ಒಮ್ಮೆ ಮೈಸೂರು ಅರಮನೆಗೆ ಹೋದ ಸಂದರ್ಭ ಅರಮನೆಯ ಬ್ಯಾಂಡ್ ಸೆಟ್ ನಲ್ಲಿ ಕಲಾವಿದನೊಬ್ಬ ಸ್ಯಾಕ್ಸೋಫೋನ್ ನುಡಿಸುವುದನ್ನು ವೀಕ್ಷಿಸುತ್ತಾರೆ. ಆ ವಾದನಕ್ಕೆ ಮನಸೋತ ಅವರು ಅಂದೇ ತಾನೊಬ್ಬ ಸ್ಯಾಕ್ಸೋಫೋನ್ ವಾದಕನಾಗಬೇಕೆಂದು ನಿಶ್ಚಯಿಸುತ್ತಾರೆ. ನಂತರದ್ದು ನಿರಂತರ ಸುಮಾರು 20 ವರ್ಷಗಳ ಕಾಲದ ತಪಸ್ಸು. ಕದ್ರಿ ಗೋಪಾಲ್ ನಾಥ್ ಎಂಬ ಹೆಸರು ಸ್ಯಾಕ್ಸೋಫೋನ್ ಗೆ ಪರ್ಯಾವಾಗಿ ಬೆಳೆಯಿತು.

1978ರಲ್ಲಿ ಆಕಾಶವಾಣಿಯಲ್ಲಿ ಮೊದಲ ಕಚೇರಿ ನೀಡಿದ ಅವರು ನಂತರ ಮದ್ರಾಸಿನ ಚೆಂಬೈ ಮೆಮೋರಿಯಲ್ ಹಾಲ್ ನಲ್ಲಿ ಮೊದಲ ಸಾರ್ವಜನಿಕ ಕಾರ್ಯಕ್ರಮ ನೀಡುತ್ತಾರೆ. ಅಲ್ಲಿಂದೀಚೆಗೆ ಸಂಗೀತದ ಪರ್ವತವೇ ಆಗಿ ಬೆಳೆದದ್ದು ಇವರ ಹೆಗ್ಗಳಿಕೆ. ಮಂಗಳೂರು ಕಲಾನಿಕೇತನದ ಗೋಪಾಲಕೃಷ್ಣ ಅಯ್ಯರ್ ಬಳಿ ಸಂಗೀತ ಕಲಿತು ನಂತರ ಮದ್ರಾಸಿನ ಟಿ.ಎನ್. ಗೋಪಾಲಕೃಷ್ಣರ ಶಿಷ್ಯರಾಗುತ್ತಾರೆ. ಕರ್ನಾಟಕ ಸಂಗೀತ ಹಾಗೂ ಸ್ಯಾಕ್ಸೋಫೋನ್ ಎರಡರಲ್ಲೂ ಪ್ರಭುತ್ವ ಸಾಧಿಸಿದ ಗೋಪಾಲ್ ನಾಥ್ ಕರ್ನಾಟಕ ಸಂಗೀತವನ್ನು ಸ್ಯಾಕ್ಸೋಫೋನ್ ನಲ್ಲಿ ಅಳವಡಿಸಿ ಜಗದ್ವಿಖ್ಯಾತರಾದರು.

ಕಚೇರಿ ನೀಡಲು ವೇದಿಕೆ ಏರಿದೊಡನೆ ಶಿಸ್ತಿನ ಮನುಷ್ಯನಾಗಿ ಬದಲಾಗುತ್ತಿದ್ದ ಗೋಪಾಲನಾಥ್ ಕಲೆಯಲ್ಲಿನ ತನ್ನ ಶ್ರದ್ಧೆಯಿಂದಾಗಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿದರು. ಮನ ಸೆಳೆಯುವ ಸುಂದರ ದಿರಿಸು, ಹೊಳೆಯುವ ಮಣಿಮಾಲೆ, ನೀಲ ಕೇಶರಾಶಿಯನ್ನು ಹಿಂದೆ ಸರಿಸಿ  ಗೋಪಾಲನಾಥ್ ಸ್ಯಾಕ್ಸೋಫೋನ್ ಕೈಗೆತ್ತಿಕೊಂಡರೆ ಅಲ್ಲಿ ಸಂಗೀತ ಅಲೆ-ಅಲೆಯಾಗಿ ಹರಿಯುತ್ತಿತ್ತು. ವಿದೇಶಗಳಿಗೆ ಹೋದಾಗ ಬಣ್ಣ-ಬಣ್ಣದ ಮಣಿಗಳನ್ನು ಖರೀದಿಸಿ ತಾನೇ ಬಿಡುವಿದ್ದಾಗ ಹೋಟೆಲ್ ರೂಂನಲ್ಲಿ ಅವನ್ನು ಪೋಣಿಸಿ ಧರಿಸುತ್ತಿದ್ದ ಗೋಪಾಲನಾಥ್ ಅಪಾರ ಸೌಂದರ್ಯ ಪ್ರಜ್ಞೆಯಿದ್ದ ಕಲಾವಿದ. ಸ್ಯಾಕ್ಸೋಫೋನ್ ಗಾಗಿ ಎಷ್ಟು ಖರ್ಚು ಮಾಡಲೂ ಸಿದ್ಧರಿದ್ದ ಅವರು ರೂ 6.5 ಲಕ್ಷ ಮೌಲ್ಯದ ಸ್ಯಾಕ್ಸೋಫೋನ್ ಖರೀದಿಸಿ ಅದರಲ್ಲಿಯೇ ಪ್ರಯೋಗಗಳನ್ನು ಮಾಡಿದವರು.           ಕಲೈಮಾಮಣಿ ಎಂದೇ ಖ್ಯಾತ ಈ ಮೇರು ಕಲಾವಿದ ಕರ್ನಾಟಕ ಶಾಸ್ತ್ರೀಯ ಸಂಗೀತದ ಎಲ್ಲ 72 ರಾಗಗಳನ್ನು ಸ್ಯಾಕ್ಸೋಫೋನ್ ನಲ್ಲಿ ನುಡಿಸಿದವರು. ಅಮೃತವರ್ಷಿಣಿ, ಮೇಘ, ಮಲ್ಹಾರ್ ಮುಂತಾದ ಮಳೆ ರಾಗಗಳನ್ನು ಗೋಪಾಲ್ ನಾಥ್ ನುಡಿಸಲು ಆರಂಭಿಸಿದರೆ ಸಾಕ್ಷಾತ್ ವರುಣನೇ ಬರುವನು ಎಂಬಂತೆ ಸಂಗೀತದ ಗಂಧರ್ವ ಲೋಕ ಅಲ್ಲಿ ಸೃಷ್ಟಿಯಾಗುತ್ತಿತ್ತು. ಕರ್ನಾಟಕ ಸಂಗೀತದ ಜೊತೆಗೆ ಕೆಲವೊಮ್ಮೆ ಹಿಂದೂಸ್ತಾನಿ ಶೈಲಿಯಲ್ಲಿ ಕೂಡ ನುಡಿಸುತ್ತಿದ್ದ ಗೋಪಾಲ್ ನಾಥ್ ಇದಕ್ಕಾಗಿ ಪರ್ವೀನ್ ಸುಲ್ತಾನ್, ಕೌಶಿಕಿ ಚಕ್ರವರ್ತಿ ಮುಂತಾದ ಮೇರು ಕಲಾವಿದರ ಸಂಗೀತ ಆಲಿಸುತ್ತಿದ್ದರು. ಅಪಾರ ದೈವಭಕ್ತ ಗೋಪಾಲನಾಥ್ ಪ್ರತಿ ವರ್ಷ ಜನವರಿ 1 ರಂದು ಚೆನ್ನೈನ ದೇವಿ ದೇವಾಲಯದಲ್ಲಿಕಚೇರಿ ನೀಡುತ್ತಿದ್ದರು.

ಆಕಾಶವಾಣಿಯ A ಗ್ರೇಡ್ ಕಲಾವಿದ ಗೋಪಾಲ್ ನಾಥ್ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸೇರಿದಂತೆ ದೇಶದ ಎಲ್ಲೆಡೆಯೂ ತಮ್ಮ ಕಚೇರಿ ನೀಡಿದ್ದು, BBCಯ ರಾಯಲ್ ಆಲ್ಬರ್ಟ್ ಹಾಲ್, ಫ್ರಾಗ್ ಜಾಸ್ ಫೆಸ್ಟಿವಲ್, ಬರ್ಲಿನ್ ಸಂಗೀತೋತ್ಸವ, ಮೆಕ್ಸಿಕೋ ಸೆರ್ವಾಂಟಿನೋ ಉತ್ಸವ, ಲಂಡನ್ ನ ಪ್ರೋಮೆನಾಡೋ, ಪ್ಯಾರಿಸ್ ನ ಹೈಲ್ ಫೆಸ್ಟಿವಲ್ ನಂಥ ಪ್ರಸಿದ್ಧ ಸಂಗೀತ ಉತ್ಸವಗಳಲ್ಲದೆ ಯುರೋಪ್ ದೇಶಗಳು, ಸ್ವಿಟ್ಜರ್ಲೆಂಡ್, ಇಂಗ್ಲೆಂಡ್, ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ, ಸಿಂಗಾಪೂರ್, ಬಹರೈನ್, ಕತಾರ್, ಮಸ್ಕತ್, ಮಲೇಶ್ಯಾ, ಶ್ರೀಲಂಕಾ ಹೀಗೆ ಗೋಪಾಲ್ ನಾಥ್ ಸಂಗೀತ ಸುಧೆ ಆಲಿಸದವರಿಲ್ಲ.

ಜನ ಬಯಸಿದ್ದನ್ನು ನುಡಿಸುತ್ತಿದ್ದ ಗೋಪಾಲ್ ನಾಥ್ ಕಾರ್ಯಕ್ರಮ ಆರಂಭವಾಗುತ್ತಲೇ ಜನ ಏನು ಬಯಸುತ್ತಾರೆ ಎಂದು ತಿಳಿಯುತ್ತಿದ್ದರು. ಶಿಸ್ತು,ಸಮಯ ಪರಿಪಾಲನೆಯಲ್ಲಿ ತಪ್ಪದ ಅವರ ಕಚೇರಿ ಆರಂಭದಿಂದ ಕೊನೆಯವರೆಗೆ ಸಂಗೀತ ಪ್ರಿಯರನ್ನು ಕದಲದಂತೆ ಮಾಡುತ್ತಿತ್ತು. ತ್ಯಾಗರಾಜರ ನಗುಮೋಮು ಗಲನೇನಿ ಕೃತಿ ರಘುವಂಶ ಸುಧಾಂಬುಧೆ, ಆಡಿಸಿದಳೆ ಯಶೋಧೆ, ಭಾಗ್ಯದ ಲಕ್ಶ್ಮಿ ಬಾರಮ್ಮಗಳು ಸಾಮಾನ್ಯವಾಗಿದ್ದ ಅವರ ಕಚೇರಿ ಜನರಂಜಿಸುತ್ತಿತ್ತು.

ತನ್ನ ವಾದನದ ಅನೇಕ ಆಲ್ಬಂಗಳನ್ನು ಹೊರತಂದಿರುವ ಇವರು ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಜೊತೆ ನಡೆಸಿದ ಜುಗಲ್ಬಂದಿಯಂತೂ ಸಂಗೀತ ಪ್ರಿಯರನ್ನು ಮೈಮರೆಸಿದೆ. ತನ್ನ ವೈವಿಧ್ಯಪೂರ್ಣ ಜಾಸ್, ಪ್ಯೂಷನ್ ಕಚೇರಿಗಳ ಮೂಲಕ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಸ್ಯಾಕ್ಸೋಫೋನ್ ಚಕ್ರವರ್ತಿ ಒಮ್ಮೆ ಚೆನ್ನೈನ ನಾರದ ಗಾನ ಸಭಾದಲ್ಲಿ 400 ಮಂದಿ ಸಹ ಕಲಾವಿದರೊಂದಿಗೆ ಕಾರ್ಯಕ್ರಮ ನಡೆಸಿಕೊಟ್ಟು ಸಂಗ್ರಹಿಸಿದ ಲಕ್ಷಾಂತರ ಹಣವನ್ನು ಕಾರ್ಗಿಲ್ ಯುದ್ಧ ಸಂತ್ರಸ್ತರಿಗೆ ನೀಡಿ ಮಾನವೀಯತೆ ಮೆರೆದವರು.

ಸ್ಯಾಕ್ಸೋಫೋನ್ ವಾದನದ ಮೂಲಕ ಸಂಗೀತ ಲೋಕದಲ್ಲಿ ಹೊಸ ಅಲೆ ಸೃಷ್ಟಿಸಿದ ಕದ್ರಿ ಗೋಪಾಲ್ ನಾಥ್ ಸಾಧನೆಯನ್ನು ಗೌರವಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.ತಮಿಳುನಾಡು ಸರ್ಕಾರ ಕಲೈಮಾಮಣಿ ಬಿರುದು ನೀಡಿದೆ. "ಸ್ಯಾಕ್ಸೋಫೋನ್ ಚಕ್ರವರ್ತಿ", "ಸ್ಯಾಕ್ಸೋಫೋನ್ ಸಾಮ್ರಾಟ" ಬಿರುದುಗಳು, ಕೇಂದ್ರ ಸಂಗೀತ ನಾಟಕ ಅಕಾಡೆಮಿ, ರಾಜ್ಯ ಸಂಗೀತ, ನೃತ್ಯ ಅಕಾಡೆಮಿ ಪ್ರಶಸ್ತಿಗಳು, ರಾಜ್ಯೋತ್ಸವ ಪ್ರಶಸ್ತಿ, ದೇಶದಾದ್ಯಂತ ಹಲವು ಮಠಗಳಿಂದ "ಆಸ್ಥಾನ ವಿದ್ವಾನ್" ಬಿರುದು, ವಿವಿಧ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಗಳು, ಈ ಸಂಗೀತ ಸಾಮ್ರಾಟನನ್ನು ಅಲಂಕರಿಸದ ಪ್ರಶಸ್ತಿ-ಗೌರವಗಳಿಲ್ಲ.

2019ರಲ್ಲಿ ನಾದದಲೆ ನಿಲ್ಲಿಸಿದ ಕಲೈಮಾಮಣಿ ಕದ್ರಿ ಗೋಪಾಲ್ ನಾಥ್ ಪರಂಪಾರಾಗತ ನಾದಸ್ವರವನ್ನು ಬಿಟ್ಟು ತನ್ನ ಮನ ಸೆಳೆದ ಸ್ಯಾಕ್ಸೋಫೋನ್ ವಾದಕರಾಗಿ ಮೆರೆದರು. ಗೋಪಾಲ್ ನಾಥ್ ವಾದನ ನಿಲ್ಲಿಸಿದರೂ ನುಡಿಸಿದ ರಾಗಗಳು ಇಂದಿಗೂ ಮಧುರಾತಿಮಧುರವಾಗಿ ಕಿವಿಯಲ್ಲಿ ಅನುರಣಿಸುತ್ತಲೇ ಇವೆ.

- ತೇಜಸ್ವಿ. ಕೆ, ಪೈಲಾರು, ಸುಳ್ಯ

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು