ಭಾರತದ ಮಾಧ್ಯಮ ಲೋಕ ಇಂದು ಅತ್ಯಂತ ಸಂಕಟ, ಸವಾಲು ಹಾಗೂ ಅವಕಾಶಗಳ ವಿಲಕ್ಷಣ ಸನ್ನಿವೇಶವನ್ನು ಎದುರಿಸುತ್ತಿದೆ.
ಕೊರೊನಾ ಮಹಾಮಾರಿಯ ಪ್ರವೇಶವಾದ ಬಳಿಕವಂತೂ ಇತರ ಎಲ್ಲ ರಂಗಗಳಂತೆ ಮಾಧ್ಯಮರಂಗ ಅನೂಹ್ಯ ಪ್ರಮಾಣದ ಆಘಾತ ಅನುಭವಿಸಿದೆ. ಈ ವಿಚಾರವಾಗಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಎಲ್ಲರಿಗೂ ಮನಮುಟ್ಟುವಂತೆ ವಿಚಾರವನ್ನು ಪ್ರಸ್ತುತಪಡಿಸಿದ್ದಾರೆ ಹಿರಿಯ ಪತ್ರಕರ್ತ, ಸುವರ್ಣ ನ್ಯೂಸ್- ಕನ್ನಡಪ್ರಭ ಸಂಪಾದಕ ರವಿ ಹೆಗಡೆಯವರು.
ಬಹುಶಃ ಅವರನ್ನು ಹೊರತು ಇನ್ಯಾರೂ ಇಷ್ಟು ಸರಳವಾಗಿ, ನಿರುದ್ವಿಗ್ನವಾಗಿ ಇಂತಹ ಗಹನ ವಿಚಾರವನ್ನು ಪ್ರಸ್ತುಪಡಿಸುವುದು ಸಾಧ್ಯವಿರಲಿಲ್ಲ. ಕೇವಲ ಮಾಧ್ಯಮಗಳ ವಲಯದಲ್ಲಿ ಮಾತ್ರ ಪ್ರಸ್ತಾಪ, ಚರ್ಚೆಗೆ ಒಳಪಡುತ್ತಿರುವ ಈ ವಿಷಯವನ್ನು ಉಪಯುಕ್ತ ನ್ಯೂಸ್ ತನ್ನ ಓದುಗರ ಜತೆ ಹಂಚಿಕೊಳ್ಳುತ್ತಿದೆ.
ಮುದ್ರಣ ಮಾಧ್ಯಮಕ್ಕೆ ಕೊರೊನಾ ಹೊಡೆತ ಕೊನೆಯ ಮೊಳೆಯಂತೆ ಭಾಸವಾಗುತ್ತಿದ್ದರೆ, ಎಲೆಕ್ಟ್ರಾನಿಕ್ ಮಾಧ್ಯಮವಾದ ಟಿವಿ ಚಾನೆಲ್‌ಗಳು ಲಾಕ್‌ಡೌನ್ ಅವಧಿಯಲ್ಲಿ ವಿಪರೀತ ಟಿಆರ್‌ಪಿಯನ್ನೇನೋ ಪಡೆದುಕೊಂಡವು. ಆದರೆ ಆದಾಯದ ಏಕೈಕ ಮೂಲವಾದ ಜಾಹೀರಾತುಗಳು ತೀವ್ರ ಪ್ರಮಾಣದಲ್ಲಿ ಕುಸಿದವು.
ಭಾರತದ ಸುದ್ದಿವಾಹಿನಿಗಳು ಬಹುತೇಕ ಉಚಿತ (ಫ್ರೀ ಟು ಏರ್) ಚಾನೆಲ್‌ಗಳು. ಹಾಗಾಗಿ ವೀಕ್ಷಕರಿಂದ ಈ ಚಾನೆಲ್‌ಗಲಿಗೆ ಯಾವುದೇ ಆದಾಯವೂ ಬರುವುದಿಲ್ಲ ವೀಕ್ಷಕರು ಕೇಬಲ್ ಅಥವಾ ಡಿಟಿಎಸ್ ಸಂಪರ್ಕಕ್ಕೆ ಖರ್ಚು ಮಾಡುವ ಹಣ ಉಚಿತ ಚಾನೆಲ್‌ಗಳಿಗೆ ತಲುಪುವುದಿಲ್ಲ. ಹೀಗಾಗಿ ಜಾಹೀರಾತು, ಜಾಹೀರಾತು. ಜಾಹೀರಾತು ಮಾತ್ರವೇ ಅವುಗಳಿಗೆ ಆದಾಯದ ಮೂಲವಾಗಿದೆ.
ಹೆಚ್ಚಿನ ಜಾಹೀರಾತು ಬರಬೇಕಾದರೆ ಹೆಚ್ಚಿನ ವೀಕ್ಷಕರನ್ನು ಗಳಿಸಿಕೊಳ್ಳಬೇಕು. ಅದಕ್ಕೆ ಇರುವ ದಾರಿಯೆಂದರೆ ಸುದ್ದಿಗಳಲ್ಲಿ ನಾಟಕೀಯತೆ, ಉತ್ಪ್ರೇಕ್ಷಿತ ನಿರೂಪಣೆ ಇರಲೇಬೇಕು ಎಂಬ ಪರಿಸ್ಥಿತಿ ಬಂದಿದೆ. ಇದೊಂದು ವಿಷವರ್ತುಲವಾಗಿ ಪರಿಣಮಿಸಿದೆ.
ಇದನ್ನು ಬ್ರೇಕ್ ಮಾಡುವ ಶಕ್ತಿ ಇರುವುದು ವೀಕ್ಷಕರಿಗೆ ಮಾತ್ರ. ಫ್ರೀ ಟು ಏರ್ ಚಾನೆಲ್‌ಗಳಿಗೂ ವೀಕ್ಷಕರು ಒಂದು ಸಣ್ಣ ಮೊತ್ತದ ಹಣವನ್ನಾದರೂ ಕೊಟ್ಟು ನೋಡುವಂತಿದ್ದರೆ ಅಷ್ಟರ ಮಟ್ಟಿಗೆ ಜಾಹೀರಾತಿನ ಮೇಲಿನ ಅವಲಂಬನೆಯಿಂದ ಮಾಧ್ಯಮಗಳು ಕಳಚಿಕೊಳ್ಳಬಹುದು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಈ ಸಾಧ್ಯತೆ ಗೋಚರಿಸುತ್ತಿಲ್ಲ.
ಹೀಗಿರುವಾಗ ಸುದ್ಧಿ ಚಾನೆಲ್‌ಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ ಆಕ್ರೋಶಭರಿತ ಪ್ರತಿಕ್ರಿಯೆಗಳ ಬಗ್ಗೆ ಸ್ಪಂದಿಸಲಾಗದ ವಿಲಕ್ಷಣ ಸನ್ನಿವೇಶವನ್ನು ಅವುಗಳು ಎದುರಿಸುತ್ತಿವೆ.
ಭವಿಷ್ಯದ ಮಾಧ್ಯಮವೆಂದು ಪರಿಗಣಿತವಾದ ಡಿಜಿಟಲ್ ಮಾಧ್ಯಮಗಳು ಭರದಿಂದ ಮುನ್ನಡೆಯುತ್ತಿವೆ. ಆದರೆ ಇವೆಲ್ಲಕ್ಕೂ ಸವಾಲಾಗಿ ಸಾಮಾಜಿಕ ಮಾಧ್ಯಮಗಳು ಮುಂದೆ ನಿಂತಿವೆ. ಹೀಗಾಗಿ ಹಳೆಯ ಮಾಧ್ಯಮ, ನವಮಾಧ್ಯಮಗಳು ಸಹಜೀವನ-ಸಹಬಾಳ್ವೆ ನಡೆಸುವ ಸನ್ನಿವೇಶ ಹತ್ತಿರ ಬರುತ್ತಿದೆ.
ಗೌರವಾನ್ವಿತ ಸಂಪಾದಕರಾದ ರವಿ ಹೆಗಡೆಯವರ ವಿಚಾರಗಳನ್ನು ಅವರ ಮಾತುಗಳಲ್ಲೇ ಕೇಳಿ.
ಕಾಮೆಂಟ್ ಪೋಸ್ಟ್ ಮಾಡಿ