ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಪ್ರಕೃತಿ, ನಿಸರ್ಗ ಪ್ರೀತಿ ತಿಳಿಯದ ವಿಷಯವೇನಲ್ಲ. ಅನೇಕ ಬಾರಿ ತಮ್ಮ ಪ್ರಕೃತಿ ಪ್ರೇಮದ ಬಗ್ಗೆ ಅಲ್ಲಲ್ಲಿ ಉಲ್ಲೇಖಿಸುತ್ತಾ ಬಂದಿದ್ದಾರೆ. ಭಾನುವಾರದಂದು (ಆ.23) ಪ್ರಧಾನಿ ಮೋದಿಯವರು ತಮ್ಮ ನಿವಾಸದಲ್ಲಿ ಬಿಡುವಿನ ವೇಳೆ, ರಾಷ್ಟ್ರಪಕ್ಷಿ ನವಿಲಿಗೆ ಧಾನ್ಯಗಳನ್ನು ತಿನ್ನಿಸುವ, ಅದರೊಂದಿಗೆ ಸಮಯ ಕಳೆಯುವ ಕ್ಷಣಗಳ ಪುಟ್ಟ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ನವಿಲಿನ ಸೌಂದರ್ಯ ಬಣ್ಣಿಸುವ ಹಿಂದಿಯ ಒಂದು ಕವನವನ್ನೂ ಪೋಸ್ಟ್ ಮಾಡಿ ಅಮೂಲ್ಯ ಕ್ಷಣಗಳು ಎಂದು ಬಣ್ಣಿಸಿದ್ದಾರೆ.
1.47 ನಿಮಿಷದ ಈ ವೀಡಿಯೋವನ್ನು ನವದೆಹಲಿ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ಮೋದಿಯವರ ಅಧಿಕೃತ ನಿವಾಸದಲ್ಲಿ ಸೆರೆ ಹಿಡಿಯಲಾಗಿದೆ. ಅದರಲ್ಲಿ ಪ್ರಧಾನಿಯವರು ಕೈಯಾರೆ ನವಿಲಿಗೆ ಆಹಾರ ತಿನ್ನಿಸುವ, ಮೋದಿಯವರು ಕಡತಗಳನ್ನು ಪರಿಶೀಲಿಸುತ್ತಿರುವಾಗ ಪಕ್ಕದಲ್ಲೇ ನವಿಲು ಧಾನ್ಯಗಳನ್ನು ತಿನ್ನುವ ವಿವಿಧ ಫೊಟೋಗಳು, ಮುಂಜಾನೆಯ ವ್ಯಾಯಾಮ ಮಾಡುವ ವೇಳೆ ಪಕ್ಕದಲ್ಲೇ ನವಿಲು ಸುತ್ತಾಡುತ್ತಿರುವ ಮನಸೆಳೆಯುವ ಕ್ಷಣಗಳ ವಿಡಿಯೋಗಳ ಕೊಲ್ಯಾಜ್ ಕಾಣಿಸುತ್ತವೆ.
ಪ್ರಧಾನಿ ಹಂಚಿಕೊಂಡ ಹಿಂದಿ ಕವನದ ಕನ್ನಡ ಭಾವಾನುವಾದ ಇಲ್ಲಿದೆ:
ಮುಂಜಾನೆಯ ನಸುಕಿನಲ್ಲಿ
ಸದ್ದಿಲ್ಲದೇ ಮನವೆಂಬ ನವಿಲು
ಭಾವನೆಗಳ ರಂಗು ತುಂಬಿದೆ
ನೀಲಿ, ಬೂದು, ಕಪ್ಪು, ಸ್ವರ್ಣ
ಮನಮೋಹಕವಾಗಿರುವಷ್ಟೇ
ನವಿಲು ಬೆರಗು ಮೂಡಿಸಿದೆ
ವರ್ಣಗಳಿವೆ ಕ್ರೋಧವಿಲ್ಲ
ವೈರಾಗ್ಯದ ವಿಶ್ವಾಸ ತುಂಬಿದೆ
ಬೇಡಿಕೆಗಳಿಲ್ಲ, ನಿಟ್ಟುಸಿರುಗಳಿಲ್ಲ,
ಪ್ರತಿ ಮನೆಯಲ್ಲೂ ಗೀತೆ ಮಾರ್ದನಿಸಿದೆ
"ಬಾಳಿದರೆ ಮುರಳಿಯೊಂದಿಗೆ
ಮರಳಿದರೆ ಮುರಳೀಧರನೊಂದಿಗೆ"
ಜೀವಾತ್ಮವೇ ವಿಶ್ವಾತ್ಮವು
ಮನದ ಅನಂತ ಭಾವಧಾರೆ
ಮನ ಮಂದಿರವನ್ನು ಬೆಳಗಿಸಿದೆ
ವಾದ ವಿವಾದಗಳಿಲ್ಲದೆ
ಮಾತುಕತೆಯೂ ಇಲ್ಲದೆ
ಯಾವ ಸಂದೇಶವೂ ಇಲ್ಲದೇ
ಮೌನ ಕಲರವದೊಂದಿಗೆ
ನವಿಲು ಕಂಪನ್ನು ಪಸರಿಸಿದೆ
(ಕನ್ನಡ ಭಾವಾನುವಾದ ಕೃಪೆ: ಆತ್ರಾಡಿ ಸುರೇಶ್ ಹೆಗ್ಡೆ)
Tags: PM Modi, PM Modi feeding peacock, ನವಿಗೆ ಆಹಾರ ತಿನಿಸಿದ ಪ್ರಧಾನಿ ಮೋದಿ, ಪ್ರಧಾನಿ ಮೋದಿ
إرسال تعليق