ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಗಾಂಧೀಜಿ ದೃಷ್ಟಿಯಲ್ಲಿ ಶಿಕ್ಷಣ: ಅಕ್ಟೋಬರ್ 2, ಗಾಂಧಿ ಜಯಂತಿ ವಿಶೇಷ ಚಿಂತನ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಚಾರಿತ್ರ್ಯ ನಿರ್ಮಾಣವೇ ಶಿಕ್ಷಣದ ಗುರಿ, ಮಕ್ಕಳಲ್ಲಿ ಧೈರ್ಯ, ಶಕ್ತಿ ಮತ್ತು ಸದ್ಗುಣಗಳನ್ನು ಬೆಳೆಸುವುದು ಶೈಕ್ಷಣಿಕ ಕಲಿಕೆಗಿಂತಲೂ ಮುಖ್ಯವೆಂದು ಗಾಂಧೀಜಿ ಅಭಿಪ್ರಾಯ ಪಟ್ಟಿದ್ದಾರೆ. ಹೃದಯದ ಶಿಕ್ಷಣವನ್ನು ಪುಸ್ತಕಗಳ ಮೂಲಕ ಕಲಿಸುವುದು ಸಾಧ್ಯವಿಲ್ಲ; ಶಿಕ್ಷಕನ ಸಜೀವ ಸಂಸ್ಪರ್ಶದಿಂದ ಮಾತ್ರ ಸಾಧ್ಯ. ಆದ್ದರಿಂದ ಶಿಕ್ಷಕರಾದ ಪುರುಷರು ಮತ್ತು ಮಹಿಳೆಯರು ಶುದ್ಧ ಚಾರಿತ್ರ್ಯವನ್ನು ಹೊಂದಿರಬೇಕು ಎನ್ನುವುದು ಗಾಂಧೀಜಿಯವರ ಅಭಿಪ್ರಾಯವಾಗಿತ್ತು.

ಬಾಲ್ಯವೆಂಬುದು ಮಗುವಿನ ಬೆಳವಣಿಗೆಯಲ್ಲಿ ಪವಿತ್ರವಾದ ಹಾಗೂ ಅಮೂಲ್ಯವಾದ ಅನುಭವ. ವಿಶೇಷ ಮನೋವಿಜ್ಞಾನಿಗಳ ಪ್ರಕಾರ ಮಕ್ಕಳ ಲೋಕ ಗ್ರಹಿಕೆ ಸುಮಾರು ನಾಲ್ಕೈದು ವರ್ಷಗಳಿಂದ ಮೊದಲ್ಗೊಂಡು ಹದಿನಾಲ್ಕು-ಹದಿನೈದು ವರ್ಷಗಳ ಅವಧಿಯಲ್ಲಿ ತುಂಬಾ ತೀಕ್ಷ್ಮವಾಗಿರುತ್ತದೆ. ಪರಿಸರ ಭಾಷೆ ಅರ್ಥಾತ್ ಮಾತೃಭಾಷೆ ಇಲ್ಲಿ ಪ್ರಧಾನ ಪಾತ್ರವಹಿಸುತ್ತದೆ.

ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಬೇಕಾದ್ದು ಸಮಾಜದ ಆದ್ಯ ಕರ್ತವ್ಯ. ಮನುಷ್ಯನ ದುರಾಸೆ ಪೈಪೋಟಿ ಹೋಲಿಕೆಗಳ ದಾಳಿಗೆ ಮಕ್ಕಳು ಪ್ರಯೋಗ ಪಶುಗಳಾಗಬಾರದು. ಒತ್ತಡದ ಶಿಕ್ಷಣಕ್ಕೆ  ಒಳಗು ಮಾಡಿ ಅವರ ಸೃಜನ ಶಕ್ತಿಯನ್ನು ಮುರುಟಿಸಬಾರದು. ಬಾಲ್ಯಾನುಭವದ ಸುಮಧುರತೆ ಹಾಳಾಗಬಾರದು, ಕಲಿಕೆ ಪ್ರಯಾಸದ  ಶಿಕ್ಷೆಯಾಗದೆ ನಲಿಯುತ್ತಾ ಗ್ರಹಿಸುವ ವಿಕಾಸಶೀಲ ಗತಿಯಾಗಬೇಕು.

ಗಾಂಧೀಜಿಯವರ ದೃಷ್ಟಿಯಲ್ಲಿ ಶಿಕ್ಷಣವೆಂದರೆ ಮಗುವಿನ ಸರ್ವಾಂಗೀಣ ಬೆಳವಣಿಗೆ. ಮಗುವಿನ ಮನಸ್ಸು ದೇಹ ಆತ್ಮಗಳ ಉತ್ತಮ ಶಕ್ತಿಗಳೆನ್ನಲ್ಲಾ ಸರ್ವೋತೋಮುಖವಾಗಿ ವಿಕಸನಗೊಳಿಸುವುದು. ಸಾಕ್ಷರತೆ ಪ್ರಾರಂಭವಾಗಲಿ ಅಥವಾ ಮುಕ್ತಾಯವಾಗಲಿ ಅಲ್ಲ. ಅದು ಜನತೆಯನ್ನು ಶಿಕ್ಷಿತರನ್ನಾಗಿ ಮಾಡಲು ಒಂದು ಸಾಧನವಾಗಿದೆ.



ಗಾಂಧೀಜಿಯವರ ಶಿಕ್ಷಣ ವಿಚಾರ ಹೀಗಿದ್ದಿತು. ಶಿಕ್ಷಣ ಬುದ್ಧಿಗೆ ಮಾತ್ರ ಸೀಮಿತವಾಗಿರದೆ ಹೃದಯ ಸಂಸ್ಕಾರಕ್ಕೆ ಹಾಗೂ ಕೈಕಸುಬುಗಳಿಗೆ ಆದ್ಯತೆ ನೀಡಬೇಕು. ಮಕ್ಕಳಿಗೆ ಅವರ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣದಲ್ಲಿಯೇ ಉಪಯೋಗಕರವಾದ  ಕೆಲವು ಕರಕುಶಲ  ಕಲೆಗಳನ್ನು ಕಲಿಸಬೇಕು. ಶಾಲೆಗಳಲ್ಲಿ ಮಕ್ಕಳಿಂದ ತಯಾರಾದ ವಸ್ತುಗಳನ್ನು ಸರ್ಕಾರ ಕೊಳ್ಳಬೇಕು. ಆ ಮೂಲಕ ಪ್ರತಿ ಶಾಲೆಯೂ ಸ್ವಾವಲಂಬನೆಯನ್ನು ಬೆಳೆಸಿಕೊಳ್ಳಬೇಕು.

ಮಗು ತನ್ನ ಕೈ, ಕಾಲು, ಕಣ್ಣು, ಕಿವಿ ಮೂಗು ಇವುಗಳನ್ನು ಜಾಣ್ಮೆಯಿಂದ ಬಳಸುವುದನ್ನು ಕಲಿತಾಗ ಅದರ ಬೌದ್ಧಿಕ ಶಕ್ತಿ ಬೇಗನೆ ಬೆಳೆಯುವುದಲ್ಲದೆ ಅದು ಹೆಚ್ಚು ತೀಕ್ಷ್ಣವಾಗುತ್ತದೆ. ಆದರೆ ನಗುವಿಗೆ ತನ್ನ ಆತ್ಮಶಕ್ತಿಯ ಅರಿವು ಹುಟ್ಟದಿದ್ದರೆ ದೇಹ ಮತ್ತು ಮನಸ್ಸುಗಳ ಬೆಳವಣಿಗೆ ಕೊರತೆಗಳಿಂದ ಕೂಡಿದ್ದು ಅಪೂರ್ಣವೆನಿಸುತ್ತದೆ.

ಕರಕೌಶಲಗಳನ್ನು ಯಾಂತ್ರಿಕವಾಗಿ ಕಲಿಸದೆ ವೈಜ್ಞಾನಿಕ ರೀತಿಯಲ್ಲಿ ಆಸಕ್ತಿ ಹುಟ್ಟಿಸುವಂತೆ ಕಲಿಸಬೇಕು. ಕಲಿಕೆಯ ಪ್ರತಿ ಹಂತದಲ್ಲಿ ಪ್ರಶ್ನೆಗಳು ಹುಟ್ಟುವಂತಿದ್ದು ಅವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುತ್ತ ಮಕ್ಕಳು ಮುಂದೆ ಸಾಗಬೇಕು. ಇಂತಹ ಶಿಕ್ಷಣ ಪದ್ಧತಿ ನಮ್ಮ ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಮಾಡುವುದಲ್ಲದೆ ದುಡಿಮೆಯ ಬಗ್ಗೆ ಅವರಲ್ಲಿ ಗೌರವ ಭಾವನೆ ಬೆಳೆಸುತ್ತದೆ ಎಂಬುದು ಗಾಂಧೀಜಿಯವರ ಅಭಿಪ್ರಾಯವಾಗಿತ್ತು.

ವಿಶ್ವದಲ್ಲಿನ ಶಿಕ್ಷಣ ತಜ್ಞರೆಲ್ಲರ ಅಭಿಪ್ರಾಯವೆಂದರೆ ಶಿಕ್ಷಣ ಮಾತೃಭಾಷೆಯ ಮೂಲಕ ನಡೆಯಬೇಕೆನ್ನುವುದು. ಗಾಂಧೀಜಿ ರೂಢಿಸಿದ ಮೂಲಶಿಕ್ಷಣ ಪದ್ಧತಿಯನ್ನು ಸರ್ಕಾರ ಅನುಷ್ಠಾನಗೊಳಿಸಿದ್ದರೆ ಹಲವಾರು ಸಾಮಾಜಿಕ ಸಮಸ್ಯೆಗಳು ನಿವಾರಣೆಯಾಗುತ್ತಿದ್ದವು. ಗಾಂಧೀಜಿ, “ಶಿಕ್ಷಣ ಮಾಧ್ಯಮವನ್ನು ಈ ಕ್ಷಣದಲ್ಲಿಯೇ ಬದಲಾಯಿಸಬೇಕು. ದೇಶ ಭಾಷೆಗಳಿಗೆ ಸರಿಯಾದ ಸ್ಥಾನ ಕೊಡಬೇಕು. ಉನ್ನತ ಶಿಕ್ಷಣದಲ್ಲಿ ಸ್ವಲ್ಪ ಮಟ್ಟಿನ ಅವ್ಯವಸ್ಥೆಯುಂಟಾದರೂ ಪರವಾಗಿಲ್ಲ” ಎಂದು ಹೇಳಿದರು.

ಪ್ರಾಥಮಿಕ ಶಿಕ್ಷಣದಲ್ಲಿ ಸಂಗೀತ ಸೇರಬೇಕೆಂದು ಗಾಂಧೀಜಿ ಹೇಳುತ್ತಿದ್ದರು. ಮಕ್ಕಳ ಶಿಕ್ಷಣದಲ್ಲಿ ಕೈಕಸಬು, ಚಿತ್ರಕಲೆ, ದೈಹಿಕ ಶಿಕ್ಷಣ ಮತ್ತು ಸಂಗೀತ ಇವುಗಳು ಜೊತೆಯಾಗಿ ಸಾಗಬೇಕೆನ್ನುವುದು ಅವರ ಅಭಿಪ್ರಾಯವಾಗಿತ್ತು. ಸಂಗೀತ ಹೃದಯಸ್ಪರ್ಶಿ ಗುಣವನ್ನು ಹೊಂದಿದ್ದು ಮಕ್ಕಳ ಭಾವನೆಗಳನ್ನು ಅರಳಿಸುತ್ತದೆ. ಮಕ್ಕಳು ನಿತ್ಯವೂ ಒಟ್ಟಾಗಿ ರಾಷ್ಟ್ರಭಕ್ತಿಯ ಗೀತೆಗಳನ್ನು ಹಾಡಬೇಕೆಂದು ಅವರು ಅಪೇಕ್ಷಿಸಿದ್ದರು.

ಭಾರತದಲ್ಲಿ ಉಚಿತ ಹಾಗೂ ಕಡ್ಡಾಯ ಪ್ರಾಥಮಿಕ ಶಿಕ್ಷಣ ಪದ್ಧತಿ ಜಾರಿಗೆ ಬರಬೇಕೆನ್ನುವುದು ಗಾಂಧೀಜಿಯವರ ಖಚಿತ ನಿಲುವಾಗಿತ್ತು ಗುಡಿಕೈಗಾರಿಕೆ, ಕರಕುಶಲಗಳನ್ನು ಮಕ್ಕಳ ಬಿಡುವಿನ ವೇಳೆಯಲ್ಲಿ ಕಲಿಸುವುದರ ಮೂಲಕ ಅವರ ಮನಸ್ಸು ದೇಹ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಬೆಳಸಬೇಕೆಂದು ಅವರು ಹೇಳಿದರು.



ಮನೆಯಲ್ಲಾಗಲಿ, ಶಾಲೆಯಲ್ಲಾಗಲಿ ಮಕ್ಕಳು ತಪ್ಪುಗಳನ್ನು ಮಾಡುತ್ತಲೆ ಕಲಿಯಬೇಕೆಂದು ಅವರು ಸೂಚಿಸುತ್ತಿದ್ದರು. ಶಿಕ್ಷಣದ ಗುರಿ ಎಂದರೆ ಹೃದಯ ಪರಿವರ್ತನೆ. ಆ ಮೂಲಕ ಆತ್ಮದ ಅರಿವು ಹುಟ್ಟಿ ಒಳಿತು ಕೆಡಕುಗಳ ವ್ಯತ್ಯಾಸವನ್ನು ತಿಳಿಯುವ ಸಾಮರ್ಥ್ಯ  ಪಡೆಯುವಂತಾಗಬೇಕೆಂಬುದು ಗಾಂಧೀಜಿಯವರ ವಿಚಾರವಾಗಿತ್ತು.

ಪುಸ್ತಕಗಳಿಂದ ಮಾತ್ರವೇ ವಿದ್ಯೆ ಕಲಿಸುವುದರಿಂದ ಪ್ರಯೋಜನವಿಲ್ಲ. ಅಭ್ಯಾಸದಿಂದ ಕಲಿಯಬೇಕು. ಮೂಲಶಿಕ್ಷಣದಲ್ಲಿ, ಉದ್ಯೋಗದ ಮೂಲಕ ಜನರಿಗೆ ವಿದ್ಯೆಯನ್ನು ಕಲಿಸಬೇಕು.

ಚಾರಿತ್ರ್ಯಹೀನತೆ ಎಲ್ಲೇ ಕಂಡುಬರಲಿ, ವಿದ್ಯಾರ್ಥಿಗಳಿಗೆ ಸರಿಯಾಗಿ ತಿಳಿಸಿ ಕೊಡದಿದ್ದರೆ, ಅವರ ಅಪಕ್ವಬುದ್ಧಿ, ಸಹಾಯರಹಿತ ವಿಚಾರಕ್ಕೆ ಏನು ತೋಚಿದರೆ ಅದನ್ನು ಹಿಡಿಯುತ್ತಾರೆ. ಈಗ ಶಿಕ್ಷಕರಿಗೂ ವಿದ್ಯಾರ್ಥಿಗಳಿಗೂ ಬಾಂಧವ್ಯವೆ ಇಲ್ಲ. ವಿದ್ಯಾರ್ಥಿಗಳಿಗೆ ಭಕ್ತಿ-ಅಭಿಮಾನಗಳೇ ಇಲ್ಲ. ಅವರಿಗೆ ಪೂರಾ ಆತುರ. ಆತುರದಿಂದ ಆತ್ಮ ಸಂಯಮ ನಾಶ. ಅದರಿಂದ ಅವರ ಶಕ್ತಿ ಋಜುವಲ್ಲದ ದಾರಿಯಲ್ಲಿ ಹೊರಹೊಮ್ಮುತ್ತದೆ. ಬರೀ ವಿದ್ಯೆಯಿಂದ ಏನೂ ಲಾಭವಿಲ್ಲ. ಸ್ವರಾಜ್ಯ ಪಡೆಯಲು ಶುದ್ಧ ಚಾರಿತ್ರ್ಯದಿಂದಲೇ ಸಾಧ್ಯ. ಸ್ವಾತಂತ್ರ್ಯದ ಸಸಿಯನ್ನು ನೆಟ್ಟು ನೀರೆರೆದು ಬೆಳಸಬೇಕು. ಕಾಲಾನುಕಾಲಕ್ಕೆ ಅದು ಸೊಗಸಾದ ಸ್ವರಾಜ್ಯವೃಕ್ಷವಾಗಿ ಬೆಳೆಯಲು, ಚಾರಿತ್ರ್ಯ ಬಲದಿಂದ ಮಾತ್ರವೇ ಅದು ಬೆಳೆದೀತು.

ಶಿಕ್ಷಣದಲ್ಲಿ ಬೌದ್ಧಿಕ ವಿಕಾಸವನ್ನಷ್ಟೇ ಉದ್ದೀಪಿಸುವ ಕಲಿಕೆಗಿಂತ ಮೂಲಶಿಕ್ಷಣದ ಮಹತ್ವವನ್ನು ಗಾಂಧೀಜಿ ಪ್ರತಿಪಾದಿಸಿದರು. ಮಗುವಿನ ಕುಟುಂಬಕ್ಕೆ ರೂಢಿಗತವಾಗಿ ಬಂದ ಕುಲಕಸುಬಿನ ಬಗ್ಗೆ ಸಮಗ್ರವಾಗಿ ಮತ್ತು ವೈಜ್ಞಾನಿಕವಾಗಿ ಮಾಹಿತಿ ನೀಡುವುದರಿಂದ  ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ ಸಾಧ್ಯವೆಂಬುದು ಗಾಂಧೀಜಿಯ ನಿಲುವಾಗಿತ್ತು. ಅದನ್ನು ನಿರಾಕರಿಸಿದುದರ ಪರಿಣಾಮವೇ ಪಾಶ್ಚಾತ್ಯರಿಂದ ಪ್ರಭಾವಿತಗೊಂಡು ವೈರಲ್ ಆದ ಕಾನ್ವೆಂಟ್ ಸಂಸ್ಕøತಿ. ಎಳೆಮನಸುಗಳ ಮೇಲೆ ಹೇರಲಾಗುತ್ತಿರುವ, ಪರಿಸರಕ್ಕೆ ಅಪರಿಚಿತವಾದ ಭಾಷೆ ಮತ್ತು ಬರವಣಿಗೆಗಳು. ದೇಶವನ್ನು ಭೂತಾಕಾರವಾಗಿ ಕಾಡುತ್ತಿರುವ ನಿರುದ್ಯೋಗ ಸಮಸ್ಯೆಯ ಮೂಲವೂ ಅದೇ.

ನಮ್ಮ ಮಕ್ಕಳಿಗೆ ಶರೀರ ಶ್ರಮದಲ್ಲಿ ತಿರಸ್ಕಾರ ಹುಟ್ಟುವಂತೆ ಕಲಿಸಬಾರದು. ನಿಜವಾದ ಶಿಕ್ಷಣ ನಮ್ಮೊಳಗಿರುವ ಉತ್ತಮೋತ್ತಮ ಶಕ್ತಿಯನ್ನು ಹೊರಗೆಳೆಯಬೇಕು. ನಿಜವಾಗಿ ಅದೇ ಉನ್ನತಿಕಾರಕ ಉತ್ತಮ ಜೀವನ ಪ್ರೇರಕ ವ್ಯಾಸಂಗ.


(ಇತ್ತೀಚೆಗೆ ಪ್ರಕಟಗೊಂಡ ಯುವ ಲೇಖಕಿ ಸುಮ ಚಂದ್ರಶೇಖರ್ ರವರ ಗಾಂಧಿ ವ್ಯಕ್ತಿತ್ವ ದರ್ಶನ ಸಂಕಲನದ ‘ಸತ್ಯ ಪಥದ ನಿತ್ಯ ಸಂತ’ ಕೃತಿಯಿಂದ ಆಯ್ದ ಲೇಖನ)

-ಸುಮ ಚಂದ್ರಶೇಖರ್

ನಂ.29/1, 5ನೇ ಕ್ರಾಸ್, 

ಈಜುಕೊಳ ಬಡಾವಣೆ, 

ಮಲ್ಲೇಶ್ವರ,  ಬೆಂಗಳೂರು-03 

ಮೊ.98800 60354


Tags: Education, Gandhi Jayanti, Gandhiji 150th birth anniversary, ಗಾಂಧಿ ಜಯಂತಿ, ಗಾಂಧೀಜಿ 150ನೇ ಜಯಂತಿ

1 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು