ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ವಚನಗಳಲ್ಲಿ ಪರಿಸರ ಕಾಳಜಿ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

ಜೂನ್ 5- ವಿಶ್ವ ಪರಿಸರ ದಿನ- ವಿಶೇಷ ಚಿಂತನ



ಏರುತ್ತಿರುವ ಜನಸಂಖ್ಯೆ; ಮಿತಿಮೀರಿದ ಭೂಕಬಳಿಕೆ, ಯಂತ್ರಕೇಂದ್ರಿತ ದೈನಂದಿನ ಜೀವನಶೈಲಿಗಳಿಂದ ಭೂಮಿ ಮೇಲಿನ ಪರಿಸರ ಮಾತ್ರವಲ್ಲ, ಆಕಾಶದ ಓಝೋನ್ ಪದರವೂ ನಾಶವಾಗುತ್ತಿದೆ ಎಂಬುದನ್ನು ಅರಿತು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿದೆ. ನಮ್ಮದೆಂಬುದು ಏನೂ ಇಲ್ಲ. ಪ್ರತಿಯೊಂದೂ ಭಗವಂತನ ದೇಣಿಗೆಯೇ ಎಂಬುದನ್ನು ಅರಿಯಬೇಕಾದರೆ ಮೇಲಿನ ಜೇಡರದಾಸಿಮಯ್ಯನ ವಚನವನ್ನು ಒಂದು ಸಲ ಪ್ರತಿ ಶಬ್ದದೊಂದಿಗೆ ಅರ್ಥ ಮಾಡಿಕೊಂಡು ಬದುಕಬೇಕಾಗಿದೆ. ವಚನಗಳು ಬಾಳನ್ನು ಸುಂದರವಾಗಿಸಿಕೊಳ್ಳಲು, ಸಾರ್ಥಕವಾಗಿಸಿಕೊಳ್ಳಲು ಇರುವ ನಿದೇರ್ಶಕ ಸೂತ್ರಗಳು ಆಗಿವೆ.  

ಶಿಶುನಾಳ ಷರೀಫ ಸಾಹೇಬರು ಕೂಡ ಇದನ್ನೇ ತಮ್ಮ ರಚನೆಯಲ್ಲಿ ಸೋರುತಿಹುದು ಮನೆಯ ಮಾಳಿಗೆ ಅಜ್ಞಾನದಿಂದ ಸೋರುತಿಹುದು ಮನೆಯ ಮಾಳಿಗೆ.. ಎಂದಿದ್ದಾರೆ. ಇಲ್ಲಿ ನಮ್ಮ ಅಜ್ಞಾನದಿಂದ, ಅವೈಜ್ಞಾನಿಕ ಸಾಹಸಗಳಿಂದಾಗಿ ಆಕಾಶದಲ್ಲಿ ಓಝೋನ್ ಪದರ ನಾಶವಾಗ್ತಿದೆ ಎಂಬುದರ ಸೂಚಕವನ್ನು ನಾವು ಅನ್ವಯಿಸಿಕೊಳ್ಳಬಹುದು. 

ಧರೆ ಹೊತ್ತಿ ಉರಿದೊಡೆ...

ನಮ್ಮ ಪ್ರಕೃತಿಯನ್ನು ನಾವೇ ನಾಶ ಮಾಡತೊಡಗಿದರೆ ಧರೆ ಹತ್ತಿ ಉರಿಯದೆ ಇದ್ದೀತೆ? ಎಂಬ ಬಸವಣ್ಣನವರ ಉಕ್ತಿಯನ್ನು ನಾವಿಂದು ನೆನೆಯಬೇಕಾಗಿದೆ 

ಒಲೆ ಹೊತ್ತಿ ಉರಿದೆಡೆ ನಿಲಬಹುದಲ್ಲದೆ 

ಧರೆ ಹೊತ್ತಿ ಉರಿದೆಡೆ ನಿಲಲಾರದು

ಏರಿ ನೀರುಂಬೊಡೆ, ಬೇಲಿ ಕೆಯ್ಯ ಮೇವೊಡೆ / 

ನಾರಿ ತನ್ನ ಮನೆಯಲ್ಲಿ ಕಳುವೊಕೆ

ತಾಯ ಮೊಲೆ ಹಾಲು ನಂಜಾಗಿ

ಕೊಲುವೆಡೆ/ ಇನ್ನಾರಿಗೆ ದೂರುವೆ 

ತಂದೆ ಕೂಡಲಸಂಗಮದೇವಾ!? 

ಭೂಕಂಪ ಸುನಾಮಿ ಚಂಡಮಾರುತಗಳಂಥ ಪ್ರಕೃತಿ ವಿಕೋಪದಿಂದ ಇಂದು ಭೂಮಿಯೇ ಹೊತ್ತಿಕೊಂಡು ಉರಿದರೆ ನಾವು ಬದುಕುವುದು ಸಾಧ್ಯವೇ? 

ನಾವು ನಮ್ಮ ಮಕ್ಕಳಿಗೆಂದು ಆಸ್ತಿ ಸಂಚಯದಲ್ಲಿ ತೊಡಗುತ್ತೇವೆ. ಆದರೆ ಮೊಲೆ ಹಾಲೇ ನಂಜಾಗುವಂತೆ, ನಮ್ಮ ಮಕ್ಕಳಿಗೆ ಕಲುಷಿತ ಪರಿಸರ ನೀಡುವ ಮೂಲಕ ಅವರ ಬದುಕಿಗೆ ನಾವೇ ಮಾರಕವೂ ಆಗುತ್ತಿದ್ದೇವೆ.

ಪ್ರಸ್ತುತ ಪ್ರಶ್ನೆ:

ಅನೇಕ ವಚನಗಳಲ್ಲಿ ನಮ್ಮ ಬದುಕಿನ ಮೌಲ್ಯಗಳ ಹೊತ್ತಿಗೆಯುಂಟು. ಧಾರ್ಮಿಕ ಮನೋಭಾವ ಸಿದ್ಧಿಗೊಳ್ಳಲು ಪರಿಸರ ಪ್ರಜ್ಞೆ ಅಗತ್ಯವೆಂಬ ನಿರ್ದೇಶನವುಂಟು. ಆದರೆ ನಾವು ನಮ್ಮ ಪೂರ್ವಜರ ತಿಳಿವನ್ನು ಎಷ್ಟರಮಟ್ಟಿಗೆ ಬಳಸಿಕೊಳ್ಳುತ್ತಿದ್ದೇವೆ ಎಂಬುದು ಸದ್ಯದ ಪ್ರಶ್ನೆ.

ಪರಿಸರ ನಾಶ ಎಂದರೆ ಕೇವಲ ಕಾರ್ಖಾನೆಗಳು ಹಾಗೂ ವಾಹನಗಳು ಉಗುಳುವ ಹೊಗೆಯಿಂದ ಆಗುವುದಲ್ಲ. ಇತ್ತೀಚಿನ ವರ್ಷಗಳಲ್ಲಿ ಭೂಮಿಯ ಮಾರಾಟ ಇರುವ ಹೊಲ ಗದ್ದೆಗಳು ಕೂಡ ರಿಯಲ್ ಎಸ್ಟೇಟ್ ದಂಧೆಯಲ್ಲಿ ಸಿಕ್ಕು ಎಲ್ಲಿ ನೋಡಿದಲ್ಲಿ ಅಪಾರ್ಟಮೆಂಟ್ ತಲೆ ಎತ್ತುವ ಮೂಲಕ ಬೇಸಾಯಕ್ಕೂ ಭೂಮಿ ಉಳಿಯುತ್ತಿಲ್ಲವಾಗಿದೆ. ಅಷ್ಟೇ ಅಲ್ಲ, ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದ ರೈತ ಜೋಳ, ಗೋಧಿ, ತರಕಾರಿ ಬೆಳಗಳತ್ತ ಮುಖ ತೋರಿಸದಿರುವ ಕಾರಣ ಅದರಲ್ಲೂ ಈ ವರ್ಷ ಮಳೆ ಇಲ್ಲದೇ ತರಕಾರಿಗಳ ಬೆಲೆ ದಿನದಿನಕ್ಕೆ ಗಗನಕ್ಕೆ ಏರುತ್ತಿದೆ. ಜೊತೆಗೆ ಬೇಕಾಗುವಷ್ಟು ಸ್ಥಳದಲ್ಲಿ ಬೆಳೆ ಫಸಲು ತಗೆಯಲು ಆಗುತ್ತಿಲ್ಲ. ಇದು ಕೂಡ ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಅಂಶವೇ.

ಅದಕ್ಕೆ ನಮ್ಮ ವಚನಕಾರರು:

ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿದ್ದರೆ /  

ಆ ಬೆವಸಾಯದ ಘೋರವೇತಕಯ್ಯ? 

ಕ್ರಯ ವಿಕ್ರಯವ ಮಾಡಿ ಮನೆಯ ಸಂಚ ನಡೆಯದಿದ್ದರೆ / ಆ 

ಕ್ರಯವಿಕ್ರಯದ ಘೋರವೇತಕಯ್ಯ? -ಎಂದು ಪ್ರಶ್ನಿಸಿದ್ದಾರೆ. 

ಕೇವಲ ಹಣ ಸಂಪಾದನೆಗೋಸ್ಕರ ಸಂಬಂಧಗಳನ್ನು ತಿರಸ್ಕರಿಸಿ ಮಾಡುವ ವಾಣಿಜ್ಯೀಕರಣದ ಬದುಕಿನಲ್ಲಿ ನಾವು ಸ್ಪಂದನೆ ಕಳೆದುಕೊಳ್ಳುತ್ತಿದ್ದೇವೆ. ಈ ಮೂಲಕ ನಮ್ಮತನ, ನಮ್ಮ ಸಂಸ್ಕøತಿ-ಸಂಸ್ಕಾರ ಮರೆಯುತ್ತಿದ್ದೇವೆ. ನಿತ್ಯ ಉಣ್ಣುವ ತುತ್ತು ಎತ್ತಿಡುವ ಬದುಕು ನಮ್ಮ ದಾಗಬೇಕಿದೆ. ಕ್ರಯ ವಿಕ್ರಯವ ಮಾಡಿ ಮನೆಯ ಸಂಚ ನಡೆಯದಿದ್ದರೆ ಆ ಕ್ರಯ ವಿಕ್ರಯದ ಘೋರವೇತಕಯ್ಯ ಎಂಬಂತೆ ನಮ್ಮ ಭೂಮಿಯನ್ನು ಉಳಿಸಬೇಕಿದೆ. ಅದರಲ್ಲಿ ನಮಗೂ ನಮ್ಮ ಸಂಬಂಧಿಗಳಿಗೂ ಆಗುವಷ್ಟು ಬೆಳೆದು ಉಳಿದುದನ್ನು ಮಾರಿ ಅದರಲ್ಲೂ ದಾನ ಧರ್ಮಕ್ಕೆಂದು ಹಣ ತಗೆದಿಡಬೇಕಿದೆ. ಆ ಮೂಲಕ ಅಳಿಯುತ್ತಿರುವ ಭೂಮಿಯಲ್ಲಿಯೂ ಕೂಡ ಉತ್ತಮ ವ್ಯವಸಾಯವನ್ನು ಮಾಡಬಹುದಾಗಿದೆ. ಮುಖ್ಯವಾಗಿ, ಆ ಶ್ರದ್ಧೆ ನಮ್ಮಲ್ಲಿರಬೇಕಷ್ಟೆ. ಅಲ್ಲಮ ಪ್ರಭುದೇವರ ಮೇಲಿನ ವಚನ ಈ ನಿಟ್ಟಿನ ತಿಳಿವನ್ನು ನಮಗೆ ನೀಡುತ್ತದೆ.

ಪರಿಹಾರೋಪಾಯಗಳು:

ಧಾರ್ಮಿಕ ಹಬ್ಬಗಳಂತೆ ಇತ್ತೀಚೆಗೆ ಪರಿಸರ ದಿನವೇ ಮೊದಲಾದ ಕಾಳಜಿಯ ದಿನಗಳೂ ಕೇವಲ ಸಾಂಕೇತಿಕ ಆಚರಣೆಗೆ ಸೀಮಿತವಾಗುತ್ತಿವೆ. ಹಾಗೆ ಆಗದೆ, ಶರಣರು ನೀಡಿದ ಹಿತವಚನಗಳ ನೆಲೆಯಲ್ಲಿ ಬದುಕನ್ನು ರಕ್ಷಿಸಿ ಉತ್ತಮ ಸಂಸ್ಕಾರದೊಡನೆ ಪರಿಸರವನ್ನು ಉಳಿಸಿಕೊಳ್ಳಬೇಕಿದೆ.

ಈ ಕಾರ್ಯಕ್ಕೆ ಹಲವು ಪರಿಹಾರಗಳನ್ನು ನಮ್ಮ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಮಳೆ ಕೊಯ್ಲು, ಪರಿಸರ ಸ್ನೇಹಿ ವಸ್ತುಗಳ ಬಳಕೆ, ಸಾವಯವ ಕೃಷಿ, ಸಾವಯವ ವಸ್ತುಗಳ ಬಳಕೆ, ವಾಹನ ಓಡಾಟದಲ್ಲಿ ಕಡಿತ ಇತ್ಯಾದಿ ನಮಗೆ ಗೊತ್ತಿರುವಂಥವೇ ಆದ ಸರಳ ಪರಿಹಾರೋಪಾಯಗಳು ಕಣ್ಣೆದುರಿಗಿವೆ. ಅವನ್ನು ಅನುಸರಿಸಿ, `ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ’ ಎಂಬುದನ್ನು ಸ್ಮರಿಸುತ್ತ ನಿಜಾರ್ಥದ ಧಾರ್ಮಿಕತೆ ತೋರಬೇಕಿದೆ.  

ಒಂದು ಕುಟುಂಬಕ್ಕೆ ಎರಡು ಮನೆ ಕಟ್ಟಿಕೊಳ್ಳುವುದು ಮನುಷ್ಯ ಮಾತ್ರ. ಇವತ್ತಿನ ಸನ್ನಿವೇಶದಲ್ಲಿ ಪರಿಸರವನ್ನು ಸಂರಕ್ಷಿಸಲು ಅನುಸರಿಸಬೇಕಾದ ಮುಖ್ಯ ಮಾರ್ಗವೆಂದರೆ, ದುರಾಸೆಯನ್ನು ಬಿಡುವುದೇ ಆಗಿದೆ. ಪರಿಸರ ಸಂರಕ್ಷಣೆಗೆ ಮನುಷ್ಯ ಹೊಸತಾಗಿ ಏನನ್ನೋ ಮಾಡಬೇಕಿಲ್ಲ. ಇರುವ ದುರಾಸೆಯನ್ನು ಬಿಟ್ಟರೆ ಸಾಕು ಎನ್ನುವಂತ ಪರಿಸ್ಥಿತಿ ಇಂದಿನದು. 

ಅರಳಿ ಮರ ಹೆಚ್ಚು ಪ್ರಮಾಣದಲ್ಲಿ ಆಮ್ಲಜನಕ ನೀಡುವಂಥದ್ದಾಗಿತ್ತು. ತನ್ನ ಸುತ್ತಲೂ ಪಾಸಿಟಿವ್ ಎನರ್ಜಿಯನ್ನು ಪಸರಿಸುತ್ತದೆ. ಹಾಗೆಂದೇ ಪ್ರತಿ ಹಳ್ಳಿಯ ಆಯಕಟ್ಟಿನ ಜಾಗದಲ್ಲಿ ಅರಳಿಕಟ್ಟೆ ಇರುವುದನ್ನು ನೋಡಬಹುದು. ದೇವರ ಕಾಡು ಅಂದರೆ ದೇವರ ಹೆಸರಲ್ಲಿ ಕಾಯ್ದಿಟ್ಟ ಚಿಕ್ಕ ಕಾಡು ಅತ್ಯಂತ ಪವಿತ್ರ. ಇಲ್ಲಿನ ಒಣ ಸೌದೆಯನ್ನೂ ಅನುಮತಿಯಿಲ್ಲದೆ ಇತರರು ಒಯ್ಯುವ ಹಾಗಿಲ್ಲ. ದೇವರ ಮೀನುಗಳೂ ಹಾಗೆಯೇ, ಈ ಮೀನುಗಳನ್ನು ಹಿಡಿಯುವ ಹಾಗಿರುವುದಿಲ್ಲ.

ಹೀಗೆ ಅಳಿವಿನಂಚಿನ ಅಥವಾ ಪರಿಸರ ಸಮತೋಲನಕ್ಕೆ ಮುಖ್ಯವಾದ ಅಂಶಗಳನ್ನು ದೇವರ ಹೆಸರಿನೊಂದಿಗೆ ಜೋಡಿಸಿ ಸಂರಕ್ಷಿಸುವ ಜಾಣತನವನ್ನು ನಮ್ಮ ಹಿರಿಯರು ಜೋಡಿಸಿದ್ದರು. ಈಗಂತೂ ನಮಗೆ ಈ ಎಲ್ಲದರ ವೈಜ್ಞಾನಿಕ ಮಹತ್ವ ಮತ್ತು ನಮ್ಮ ಬದುಕಿಗೆ ಅವೆಷ್ಟು ಅನಿವಾರ್ಯ ಎಂಬುದು ತಿಳಿದಿದೆ. ಪುನಃ ಪರಿಸರದ ಆರಾಧನೆಗೆ ಮರಳಲು, ಅವುಗಳೊಳಗಿನ ಭಗವಂತನನ್ನು ಗುರುತಿಸಿ ಗೌರವಿಸಲು ಹಾಗೂ ಭಗವಂತನ ಆವಾಸ ಸ್ಥಾನವಾದ ಪರಿಸರವನ್ನು ರಕ್ಷಿಸಲು ನಾವು ಮುಂದಾಗಬೇಕಿದೆ. 

(ವಿವಿಧ ಮೂಲಗಳಿಂದ)

ಡಾ. ಗುರುರಾಜ ಪೋಶೆಟ್ಟಿಹಳ್ಳಿ,

ಸಂಸ್ಕೃತಿ ಚಿಂತಕರು, 9739369621


Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು