ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ನವರಾತ್ರಿ ವಿಶೇಷ: ಅಷ್ಟಾದಶ ಶಕ್ತಿ ಪೀಠಗಳು ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



(ಚಿತ್ರ ಕೃಪೆ: ಯೂಟ್ಯೂಬ್)

ಶಕ್ತಿ ಪೀಠಗಳ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಅವುಗಳಲ್ಲಿ ಪ್ರಮುಖವಾದವು ಈ ಅಷ್ಟಾದಶ ಶಕ್ತಿ ಪೀಠಗಳ ಬಗ್ಗೆ ಜಗದ್ಗುರು ಶಂಕರಾಚಾರ್ಯರು ತಮ್ಮ ಸ್ತೋತ್ರದಲ್ಲಿ ಹೇಳಿದ್ದಾರೆ.

ಅಷ್ಟಾದಶ ಶಕ್ತಿ ಪೀಠಗಳ ವಿವರಣೆಯನ್ನು ಅದಿಶಂಕರಚಾರ್ಯ ವಿರಚಿತ ಸ್ತೋತ್ರದಿಂದ ತಿಳಿಯಬಹುದು. 18 ಶಕ್ತಿಪೀಠಗಳ ಉಲ್ಲೇಖವನ್ನು ಶಂಕರಾಚಾರ್ಯರು ಮಾಡಿದ್ದಾರೆ, ಅವೆಲ್ಲವೂ ಭಾರತ, ಶ್ರೀಲಂಕಾ, ಪಾಕಿಸ್ತಾನ, ನೇಪಾಳದಲ್ಲಿಯೂ ಇವೆ.

ಅಷ್ಟಾದಶ ಶಕ್ತಿ ಪೀಠ ಸ್ತೋತ್ರ.

ಲಂಕಾಯಾಂ ಶಾಂಕರೀದೇವೀ ಕಾಮಾಕ್ಷೀ ಕಾಂಚಿಕಾಪುರೇ |


ಪ್ರದ್ಯುಮ್ನೇ ಶೃಂಖಳಾದೇವೀ ಚಾಮುಂಡೀ ಕ್ರೌಂಚಪಟ್ಟಣೇ || 1 ||


ಅಲಂಪುರೇ ಜೋಗುಳಾಂಬಾ ಶ್ರೀಶೈಲೇ ಭ್ರಮರಾಂಬಿಕಾ |


ಕೊಲ್ಹಾಪುರೇ ಮಹಾಲಕ್ಷ್ಮೀ ಮುಹುರ್ಯೇ ಏಕವೀರಾ || 2 ||


ಉಜ್ಜಯಿನ್ಯಾಂ ಮಹಾಕಾಳೀ ಪೀಠಿಕಾಯಾಂ ಪುರುಹೂತಿಕಾ |


ಓಢ್ಯಾಯಾಂ ಗಿರಿಜಾದೇವೀ ಮಾಣಿಕ್ಯಾ ದಕ್ಷವಾಟಿಕೇ || 3 ||


ಹರಿಕ್ಷೇತ್ರೇ ಕಾಮರೂಪೀ ಪ್ರಯಾಗೇ ಮಾಧವೇಶ್ವರೀ |


ಜ್ವಾಲಾಯಾಂ ವೈಷ್ಣವೀದೇವೀ ಗಯಾ ಮಾಂಗಳ್ಯಗೌರಿಕಾ || 4 ||


ವಾರಣಾಶ್ಯಾಂ ವಿಶಾಲಾಕ್ಷೀ ಕಾಶ್ಮೀರೇತು ಸರಸ್ವತೀ |


ಅಷ್ಟಾದಶ ಸುಪೀಠಾನಿ ಯೋಗಿನಾಮಪಿ ದುರ್ಲಭಮ್ || 5 ||


ಸಾಯಂಕಾಲೇ ಪಠೇನ್ನಿತ್ಯಂ ಸರ್ವಶತ್ರುವಿನಾಶನಮ್ |


ಸರ್ವರೋಗಹರಂ ದಿವ್ಯಂ ಸರ್ವಸಂಪತ್ಕರಂ ಶುಭಮ್ || 6 ||

ಹಿಂದೂ ಧರ್ಮಗ್ರಂಥಗಳ ಪ್ರಕಾರವಾಗಿ ಶಿವನ ಮಡದಿಯಾದ ಸತಿ ದೇವಿಯು ಯಜ್ಞವೊಂದರಲ್ಲಿ ಅಗ್ನಿಗೆ ಸ್ವಯಂಆಹುತಿಯಾಗಿ ಪ್ರಾಣ ತ್ಯಾಗ ಮಾಡುತ್ತಾಳೆ. ಇದರಿಂದ ಮನನೊಂದ ಶಿವನು ಸತಿಯ ದೇಹವನ್ನು ಹಿಡಿದುಕೊಂಡು ದುಖ, ವೈರಾಗ್ಯಗಳಿಂದ ನರ್ತಿಸತೊಡಗುತ್ತಾನೆ.

ಹೀಗೆ ಸತಿಯ ದೇಹ ಶಿವನ ಕೈಗಳಲ್ಲಿರುವವರೆಗೂ ಶಿವನ ಕೋಪ, ದುಖ ತಣಿಯಲಾರದೆ ಲೋಕವೆ ಸಂಕಷ್ಟಕ್ಕೆ ಸಿಲುಕಬಹುದೆಂದು ದೇವತೆಗಳೆಲ್ಲರು ಅರಿತು ವಿಷ್ಣುವಿನ ಮೊರೆ ಹೋಗುತ್ತಾರೆ.

ಇದರ ಬಾಧ್ಯತೆಗಳನ್ನರಿತ ವಿಷ್ಣುವು, ಸತಿಯ ದೇಹವನ್ನೆ ಅದೃಶ್ಯಮಾಡುವ ಉದ್ದೇಶದಿಂದ ತನ್ನ ಸುದರ್ಶನ ಚಕ್ರಕ್ಕೆ ಸತಿಯ ದೇಹಗಳನ್ನು ಒಂದೊಂದು ಭಾಗಗಳಲ್ಲಿ ತುಂಡರಿಸಿ ವಿಸರ್ಜಿಸಲು ಆಜ್ಞಾಪಿಸುತ್ತಾನೆ. ಈ ರೀತಿ ನರ್ತಿಸುತ್ತಿರುವಾಗ ಸತಿಯ ದೇಹದ ಒಂದೊಂದು ಭಾಗಗಳು ಒಂದೊಂದು ಸ್ಥಳಗಳಲ್ಲಿ ಕಳಚಿ ಬೀಳಲಾರಂಭಿಸುತ್ತವೆ. ದೇಹದ ಭಾಗಗಳು ಬಿದ್ದ ಜಾಗಗಳೆಲ್ಲಾ ಶಕ್ತಿ ಪೀಠಗಳಾಗಿವೆ.

ಮೂಲತಃ 108 ಪೀಠಗಳೆಂದು ಪುರಾಣಗಳು ಹೇಳುತ್ತವೆ ಆದರೆ 18 ಪೀಠಗಳು ಮಾತ್ರ ಹೆಚ್ಚಿನ ಮಹತ್ವವನ್ನು ಪಡೆದಿವೆ. ಲಂಕೆಯಿಂದ ಕಾಶ್ಮೀರದವರೆಗೂ ವಿಸ್ತರಿಸಿವೆ.

1. ಕಂಚಿ ಕಾಮಾಕ್ಷಿ: ತಮಿಳುನಾಡು ರಾಜ್ಯದಲ್ಲಿರುವ ಕಾಂಚಿಪುರಂನಲ್ಲಿರುವ ಕಾಮಾಕ್ಷಿ ಅಮ್ಮನವರ ದೇವಸ್ಥಾನ ಒಂದು ಶಕ್ತಿ ಪೀಠವಾಗಿದೆ. ಇದನ್ನು ಕಂಚಿ ಕಾಮಕೋಟಿ ಪೀಠಂ ಎಂತಲೂ ಸಹ ಕರೆಯಲಾಗಿದೆ. ಸತಿಯ ಅಕ್ಷಿ ಅಂದರೆ ಕಣ್ಣುಗಳು ಈ ಭಾಗದಲ್ಲಿ ಬಿದ್ದಿತ್ತೆನ್ನಲಾಗಿದ್ದು ಆ ಸ್ಥಳದಲ್ಲಿಯೆ ಕಾಮಾಕ್ಷಿ ದೇವಿಯು ನೆಲೆಸಿದ್ದಾಳೆನ್ನಲಾಗಿದೆ.

ಶಂಕರಾಚಾರ್ಯರು ದೇಶದ ನಾಲ್ಕು ದಿಕ್ಕುಗಳಲ್ಲಿ ಮಠಗಳನ್ನು ಸ್ಥಾಪಿಸಿದರು. ಅದರಲ್ಲಿ ಇದು ಒಂದು.

2. ಚಾಮುಂಡೇಶ್ವರಿ ದೇವಿ, ಮೈಸೂರು: ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೆ ಕರೆಸಿಕೊಳ್ಳುವ ಹಾಗೂ ಪ್ರವಾಸಿ ಪ್ರಖ್ಯಾತಿಯ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ಚಾಮುಂಡೇಶ್ವರಿ ದೇವಾಲಯವು ಒಂದು ಶಕ್ತಿಪೀಠವಾಗಿದೆ. ಪುರಾಣಗಳ ಕಾಲದಲ್ಲಿ ಈ ಕ್ಷೇತ್ರವು ಕ್ರೌಂಚಪುರಿ ಎಂದು ಗುರುತಿಸಲ್ಪಡುತ್ತಿತ್ತು ಹಾಗಾಗಿ ಇದನ್ನು ಕ್ರೌಂಚಪೀಠ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ.

3. ಜೋಗುಳಾಂಬಾ ದೇವಿ: ತೆಲಂಗಾಣ ರಾಜ್ಯದ ಮೆಹಬೂಬ್ ನಗರ ಜಿಲ್ಲೆಯ ಆಲಂಪೂರದಲ್ಲಿರುವ ಈ ದೇವಿಯ ದೇವಾಲಯವು ಒಂದು ಶಕ್ತಿಪೀಠವಾಗಿದೆ. ತುಂಗಭದ್ರಾ ಹಾಗೂ ಕೃಷ್ಣಾ ನದಿಗಳ ಸಮಾಗಮದಿಂದಾಗಿ ದಕ್ಷಿಣ ಕಾಶಿ ಎಂತಲೂ ಸಹ ಕರೆಯಲ್ಪಡುವ ಆಲಂಪೂರವು ಕರ್ನೂಲ್ ಪಟ್ಟಣದಿಂದ ಕೇವಲ 27 ಕಿ.ಮೀ ಗಳಷ್ಟು ದೂರದಲ್ಲಿದೆ.

4. ಭ್ರಮರಾಂಬಾ ದೇವಿ: ಪ್ರಖ್ಯಾತ ಧಾರ್ಮಿಕ ಸ್ಥಳವಾದ ಆಂಧ್ರಪ್ರದೇಶ ರಾಜ್ಯದಲ್ಲಿರುವ ಶ್ರೀಶೈಲಂನ ಭ್ರಮರಾಂಬಾದೇವಿಯ ದೇವಾಲಯವು ಒಂದು ಶಕ್ತಿಪೀಠವಾಗಿದೆ. ಶ್ರೀಶೈಲ ಪೀಠಂ ಎಂದು ಕರೆಯಲ್ಪಡುವ ಈ ಕ್ಷೇತ್ರವು ಶಿವನು ಮಲ್ಲಿಕಾರ್ಜುನನ ರೂಪದಲ್ಲಿರುವ ದೇವಾಲಯವನ್ನೂ ಸಹ ಹೊಂದಿದ್ದು 12 ಪವಿತ್ರ ಜ್ಯೋತಿರ್ಲಿಂಗ ತಾಣಗಳ ಪೈಕಿ ಒಂದಾಗಿದೆ.

ನೆಲ್ಲಮಲ್ಲ ಬೆಟ್ಟಗಳ ಮೇಲೆ ಸ್ಥಿತವಿರುವ ಮಲ್ಲಿಕಾರ್ಜುನ ಹಾಗೂ ಭ್ರಮರಾಂಬ ದೇವಿಯ ದೇವಸ್ಥಾನಗಳು ದಕ್ಷಿಣ ಭಾರತದಿಂದ ಸಾಕಷ್ಟು ಭಕ್ತಾದಿಗಳನ್ನು ಸೆಳೆಯುತ್ತದೆ.

5. ಕೊಲ್ಹಾಪುರ ಮಹಾಲಕ್ಷ್ಮಿ: ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರದ ಪ್ರಖ್ಯಾತ ಮಹಾಲಕ್ಷ್ಮಿ ದೇವಾಲಯವು ಜನಪ್ರೀಯ ಶಕ್ತಿಪೀಠವಾಗಿದೆ.

ಪೌರಾಣಿಕ ಹಿನ್ನಿಲೆಯ ಪ್ರಕಾರ, ಹಿಂದೆ ಕೋಲಾಸುರನೆಂಬ ಅಸುರನು ದೇವತೆಗಳಿಗೆ ಬಲು ಕಷ್ಟ ನೀಡುತ್ತಿದ್ದನು. ಅವನ ಕ್ರೌರ್ಯತೆಯಿಂದ ಪಾರು ಮಾಡುವಂತೆ ದೇವತೆಗಳು ಮೊರೆಯಿಟ್ಟಾಗ ದೇವಿಯು ಭೂಮಿಗೆ ಬಂದು ಆತನನ್ನು ವಧಿಸಿದಳು ನಂತರ ದೇವಿಯು ಸ್ಥಿರವಾಗಿ ಇಲ್ಲಿಯೆ ನೆಲೆಸಿದಳು ಹಾಗೂ ಈ ಸ್ಥಳಕ್ಕೆ ಕೊಲ್ಲಾಪುರ ಎಂಬ ಹೆಸರು ಬಂದಿತು.

6. ಮಾಹೂರು ರೇಣುಕಾದೇವಿ: ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಮಾಹೂರು ಅಥವಾ ಮಾಹೂರ್ಗಡ್ ಎಂಬ ಪಟ್ಟಣದಲ್ಲಿರುವ ರೇಣುಕಾ ದೇವಿಯ ದೇವಾಲಯವು ಒಂದು ಶಕ್ತಿಪೀಠವಾಗಿದೆ. ಇಲ್ಲಿ ದೇವಿಯನ್ನು ಏಕವೇರಿಕಾ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ.ಈ ಶಕ್ತಿ ದೇವಿಯನ್ನು ಆರಾಧಿಸುವವರು ಮಹಾರಾಷ್ಟ್ರದ ಎಲ್ಲಾ ಕಡೆ ಕಂಡುಬರುತ್ತಾರೆ. ಅಲ್ಲದೆ ದೇಶದ ವಿವಿಧ ಭಾಗಗಳಿಂದಲೂ ಸಹ ಭಕ್ತಾದಿಗಳು ಇಲ್ಲಿಗೆ ಬರುತ್ತಾರೆ. 

7. ಮಹಾಕಾಳಿ ದೇವಿ: ಮಧ್ಯಪ್ರದೇಶ ರಾಜ್ಯದ ಉಜ್ಜಯಿನಿಯಲ್ಲಿರುವ ಮಹಾಕಾಳಿ ದೇವಾಲಯವು ಒಂದು ಹದಿನೆಂಟು ಶಕ್ತಿಪೀಠಗಳ ಪೈಕಿ ಒಂದಾಗಿದ್ದು ಉಜ್ಜೈನಿಪೀಠ ಎಂದು ಕರೆಯಲ್ಪಡುತ್ತದೆ. ಆದರೆ ಇಲ್ಲಿ ಮಹಾ ಕಾಳಿ ದೇವಿಯು ಹೆಚ್ಚಾಗಿ ಹರ ಸಿದ್ಧಿ ಮಾತಾ ಎಂದೆ ಹೆಸರುವಾಸಿಯಾಗಿದ್ದಾಳೆ. ಹೀಗಾಗಿ ಇಲ್ಲಿನ ಜನರು ಈ ದೇವಸ್ಥಾನವನ್ನು ಹರಸಿದ್ಧಿ ಮಾತಾ ದೇವಾಲಯ ಎಂತಲೆ ಗುರುತಿಸುತ್ತಾರೆ.

ಸತಿ ದೇವಿಯ ನಾಲಿಗೆಯು ಈ ಭಾಗದಲ್ಲಿ ಬಿದ್ದಿತ್ತೆನ್ನಲಾಗಿದೆ. ಹಿಂದೆ ವಿಕ್ರಮಾದಿತ್ಯ ರಾಜನು ಹರಸಿದ್ಧಿ ಮಾತಾಳ ಅತಿ ಪರಮ ಭಕ್ತನಾಗಿದ್ದನು.

ಎಲ್ಲಾ ಬೇಡಿಕೆಗಳನ್ನು ನೆರೆವೆರಿಸುವುದರಿಂದ ಈಕೆಗೆ ಹರಸಿದ್ಧಿ ಮಾತಾ ಎಂದು ಕರೆಯಲಾಗಿದೆ.

8. ಪುರುಹುಟಿಕಾ ದೇವಿ: ಪುಷ್ಕರಿಣಿ ಪೀಠ ಎಂದು ಕರೆಯಲ್ಪಡುವ ಈ ದೇವಾಲಯವು ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯ ಪಿತಾಪುರಂ ಎಂಬ ಪಟ್ಟಣದಲ್ಲಿದೆ. ಈ ಪಟ್ಟಣದಲ್ಲಿರುವ ಶಿವನಿಗೆ ಮುಡಿಪಾದ ಕುಕ್ಕುಟೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಈಶಾನ್ಯದಲ್ಲಿ ಪುರುಹುಟಿಕಾ ದೇವಿಯ ದೇವಾಲಯವಿದೆ. ಪುರುಹುಟಿಕಾ ದೇವಿಯು ನಾಲ್ಕು ಕೈಗಳನ್ನು ಹೊಂದಿದ್ದು ಅವುಗಳಲ್ಲಿ ಪ್ರತ್ಯೇಕವಾಗಿ ಕಮಲದ ಹೂವು, ಕೊಡಲಿ, ಮಧು ಪಾತ್ರೆ, ಧಾನ್ಯದ ಬೀಜಗಳನ್ನು ಹಿಡಿದಿರುತ್ತಾಳೆ ಹಾಗೂ ಈಕೆಯ ಹಿನ್ನಿಲೆಯೂ ಸಹ ಅತಿ ರೋಚಕತೆಯಿಂದ ಕೂಡಿದೆ.

ಒಮ್ಮೆ ಇಂದ್ರನು ಗೌತಮ ಮಹರ್ಷಿಗಳ ಮಡದಿಯಾದ ಅಹಲ್ಯಾಳ ಸೌಂದರ್ಯಕ್ಕೆ ಮಾರು ಹೋಗಿ ಅವಳನ್ನು ಕೂಡಬೇಕೆಂದು ಯೋಜಿಸಿ ಋಷಿಗಳು ಇಲ್ಲದ ಸಮಯ ಸಾಧಿಸಿ ಗೌತಮ ಮಹರ್ಷಿಗಳ ವೇಷದಲ್ಲಿಯೆ ಮನೆಗೆ ಬಂದು ಅಹಲ್ಯಳನ್ನು ಸೇರುತ್ತಾನೆ. ಈ ವಿಷಯ ಮುನಿಗಳಿಗೆ ತಿಳಿದು ಕೋಪದಿಂದ ಇಂದ್ರನಿಗೆ ಶಾಪ ಕೊಡುತ್ತಾರೆ. ಇಂದ್ರನ ಶಾಪ ವಿಮೋಚನೆಗಾಗಿ ಪುರುಹುತಿಕಾ ದೇವಿಯಾಗಿ ಪಾರ್ವತಿ ಪ್ರತ್ಯಕ್ಷವಾಗುತ್ತಾಳೆ.

9. ಬಿರಾಜ ಅಥವಾ ಗಿರಿಜಾ ದೇವಾಲಯ: ಒಡಿಶಾ ರಾಜ್ಯದ ಭುವನೇಶ್ವರ ನಗರದಿಂದ ಸುಮಾರು 125 ಕಿ.ಮೀ ಗಳಷ್ಟು ದೂರದಲ್ಲಿರುವ ಜಜಪುರ ಎಂಬಲ್ಲಿ ಬಿರಾಜ/ಗಿರಿಜಾ ಎಂದು ಕರೆಯಲ್ಪಡುವ ದುರ್ಗಾ ದೇವಿಯ ಈ ದೇವಾಲಯವಿದೆ. ಇದೊಂದು ಶಕ್ತಿ ಪೀಠವಾಗಿದ್ದು ಜಜಪುರಕ್ಕೆ ಬಿರಾಜಕ್ಷೇತ್ರ ಎಂದೂ ಕರೆಯಲಾಗಿದೆ.

ಕೃಷ್ಣ ಪಕ್ಷ ಅಷ್ಟಮಿಯಂದು ಶಾರದೀಯ ದುರ್ಗಾ ಪೂಜೆಯನ್ನು ಈ ಕ್ಷೇತ್ರದಲ್ಲಿ ಅತ್ಯಂತ ಸಡಗರದಿಂದ ಮಾಡಲಾಗುತ್ತದೆ. ಸುಮಾರು 16 ದಿನಗಳ ಕಾಲ ಶೋಡಶ ಪೂಜೆಯು ನಡೆಯುತ್ತದೆ. ಈ ಶಕ್ತಿಪೀಠವನ್ನು ಒಡ್ಡಾಯನಪೀಠ ಎಂದು ಕರೆಯಲಾಗುತ್ತದೆ.

10. ಮಾಣಿಕ್ಯಾಂಬಾ ದೇವಿ ದೇವಾಲಯ: ಆಂಧ್ರಪ್ರದೇಶದ ಪಂಚರಾಮಂ ಕ್ಷೇತ್ರಗಳ ಪೈಕಿ ಒಂದಾದ ದ್ರಕ್ಷರಾಮಂನಲ್ಲಿರುವ ದ್ರಕ್ಷರಾಮದ ದೇವಾಲಯ ಸಂಕೀರ್ಣದಲ್ಲಿ ಮಾಣಿಕ್ಯಾಂಬಳ ದೇವಸ್ಥಾನವಿದೆ. ಇಲ್ಲಿರುವ ಮುಖ್ಯ ದೇವಾಲಯವು ಶಿವನಿಗೆ ಮುಡಿಪಾಗಿದ್ದು ಶಿವನು ಇಲ್ಲಿ ಭೀಮೇಶ್ವರ ಸ್ವಾಮಿಯಾಗಿ ನೆಲೆಸಿದ್ದಾನೆ ಹಾಗೂ ಅವನ ಮಡದಿಯಾಗಿ ಮಾಣಿಕ್ಯಾಂಬಾ ದೇವಿಯು ನೆಲೆಸಿದ್ದಾಳೆ. ಈ ಕ್ಷೇತ್ರದಲ್ಲಿ ಸತಿ ದೇವಿಯ ನಾಭಿ ಬಿದ್ದಿತ್ತೆನ್ನಲಾಗಿದೆ.

11. ಕಾಮರೂಪ ದೇವಿ ದೇವಾಲಯ: ಅಸ್ಸಾಂ ರಾಜ್ಯದ ಗುವಾಹಟಿ ನಗರದಲ್ಲಿರುವ ಪ್ರಖ್ಯಾತ ಕಾಮಾಖ್ಯ ದೇವಿಯ ದೇವಾಲಯವೆ ಕಾಮರೂಪ ದೇವಿಯ ದೇವಾಲಯವಾಗಿದ್ದು ಶಕ್ತಿಪೀಠಗಳ ಪೈಕಿ ಒಂದಾಗಿದೆ. ಒಂದು ಆಚರಣೆಯನ್ನು 'ಅಂಬಾಬುಚಿ ಮೇಳ' ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಕಾಮಾಖ್ಯ ದೇವಾಲಯವು ಒಂದು ಪುರಾತನ ದೇವಾಲಯವಾಗಿದ್ದು ಈ ದೇವಾಲಯಕ್ಕೆ ಹಿಂದೂ ಧರ್ಮದವರು ಅದರಲ್ಲೂ ಪ್ರಮುಖವಾಗಿ ತಂತ್ರ ವಿದ್ಯೆಗಳನ್ನು ಆಚರಿಸುವವರು ನಡೆದುಕೊಳ್ಳುತ್ತಾರೆ. 

12. ಮಾಧವೇಶ್ವರಿ ದೇವಿ: ಅಲೋಪಿ ಮಾತಾ ಹಾಗೂ ಲಲಿತಾ ಎಂಬ ಹೆಸರಿನಿಂದಲೂ ಸಹ ಕರೆಯಲ್ಪಡುವ ಮಾಧವೇಶ್ವರಿ ದೇವಿಯು ನೆಲೆಸಿರುವ ಈ ಶಕ್ತಿಪೀಠವು ಪವಿತ್ರ ಸ್ಥಳವಾದ ಪ್ರಯಾಗ್ (ಪ್ರಸ್ತುತ ಉತ್ತರ ಪ್ರದೇಶದ ಅಲಹಾಬಾದ್) ನಲ್ಲಿ ನೆಲೆಸಿದೆ. ಪ್ರಯಾಗ್ ಪೀಠಂ ಎಂದು ಕರೆಯಲ್ಪಡುವ ಈ ಶಕ್ತಿಪೀಠ ಸ್ಥಳದಲ್ಲಿ ಸತಿ ದೇವಿಯ ಬೆರಳುಗಳು ಬಿದ್ದಿತ್ತೆನ್ನಲಾಗಿದೆ.

ಅಲೋಪಿ ಎಂದರೆ ಅದೃಶ ಎಂದಾಗುತ್ತದೆ. ಗಂಗಾ, ಯಮುನಾ ಹಾಗೂ ಸರಸ್ವತಿಗಳ ತ್ರಿವೇಣಿ ಸಂಗಮದ ಅತಿ ಪವಿತ್ರ ಸ್ಥಳದಲ್ಲಿ ಈ ಶಕ್ತಿಪೀಠವಿರುವುದರಿಂದ ಹೆಚ್ಚಿನ ಪ್ರಾಮುಖ್ಯತೆಯನ್ನುಗಳಿಸಿದೆ. ಪವಿತ್ರ ತ್ರಿವೇಣಿ ಸಂಗಮ.

13. ಜ್ವಾಲಾಮುಖಿ ದೇವಾಲಯ: ಜ್ವಾಲಾಜಿ ದೇವಿ ಎಂದು ಕರೆಯಲ್ಪಡುವ ಈ ವೈಷ್ಣವಿ ದೇವಿಯ ದೇವಾಲಯವು ಹಿಮಾಚಲಪ್ರದೇಶ ರಾಜ್ಯದ ಕಂಗ್ರಾ ಜಿಲ್ಲೆಯ ಜ್ವಾಲಾಮುಖಿ ಎಂಬ ಪಟ್ಟಣದಲ್ಲಿದೆ. ಜ್ವಾಲಾಮುಖಿ ಪೀಠಂ ಎಂದು ಕರೆಯಲ್ಪಡುವ ಈ ದೇವಾಲಯದಲ್ಲಿ 9 ಅಖಂಡ ಜ್ಯೋತಿಗಳು ಯಾವುದೇ ತೈಲವಿಲ್ಲದೆ ಹಿಂದಿನಿಂದಲೂ ಇಂದಿನಿವರೆಗೂ ಉರಿಯುತ್ತಿವೆ. 9 ಜ್ಯೋತಿಗಳಿಗೂ ಬೇರೆ ಬೇರೆ ಹೆಸರುಗಳಿವೆ.

14. ಸರ್ವಮಂಗಳ ದೇವಿ: ಬಿಹಾರದ ಗಯಾ ಪಟ್ಟಣದಲ್ಲಿರುವ ದುರ್ಗಾ ದೇವಿಯ ಅವತಾರ, ಸರ್ವಮಂಗಳಾ ದೇವಿ ಅಥವಾ ಮಹಾಗೌರಿಯ ದೇವಾಲಯವು ಒಂದು ಶಕ್ತಿಪೀಠವಾಗಿದೆ. ಪದ್ಮಪುರಾಣ, ವಾಯುಪುರಾಣ, ಅಗ್ನಿಪುರಾಣ ಹಾಗೂ ಇತರೆ ತಂತ್ರ ಶಾಸ್ತ್ರದ ಗ್ರಂಥಗಳಲ್ಲಿ ಈ ದೇವಾಲಯದ ಕುರಿತು ಉಲ್ಲೇಖವಿದೆ. ಗಯಾಪೀಠಂ ಎಂದು ಕರೆಯಲಾಗುವ ಈ ಸ್ಥಳ ಅತ್ಯಂತ ಪ್ರಸಿದ್ಧ. ಇಲ್ಲಿಗೆ ಬರುವ ಭಕ್ತಾದಿಗಳು ಮಂಗಳಗೌರಿ ಪೂಜೆಯನ್ನು ಸಲ್ಲಿಸುತ್ತಾರೆ ದೇವಿಗೆ ಬಾಗಿನವನ್ನು ಅರ್ಪಿಸುತ್ತಾರೆ.

15. ವಿಶಾಲಾಕ್ಷಿ ದೇವಾಲಯ: ವಾರಣಾಸಿ ಪೀಠಂ ಎಂದು ಕರೆಯಲಾಗುವ ಕಾಶಿ ಅಥವಾ ವಾರಣಾಸಿಯು ಹಿಂದೂ ಧರ್ಮದಲ್ಲಿ ಅತಿ ಪವಿತ್ರ ಸ್ಥಳವೆಂಬ ಖ್ಯಾತಿಗೆ ಪಾತ್ರವಾಗಿದೆ. ಅದರಂತೆ ಇಲ್ಲಿ ಹರಿದಿರುವ ಗಂಗಾ ನದಿಯಿಂದಾಗಿ ಪಾಪ ಕರ್ಮಗಳು ನಶಿಸುತ್ತವೆ ಎಂಬ ನಂಬಿಕೆಯಿದೆ. ಆ ಕಾರಣ ಇಲ್ಲಿ ಸಾಕಷ್ಟು ಘಾಟ್‌ಗ‌ಳನ್ನು ಕಾಣಬಹುದು. ಮೀರ್ ಘಾಟ್ ಬಳಿಯಲ್ಲಿ ವಿಶಾಲಾಕ್ಷಿಯ ಈ ಶಕ್ತಿಪೀಠವು ಸ್ಥಿತವಿದೆ. ಕಾಶಿ ಪಟ್ಟಣವು ಭಾರತದ ಅತ್ಯಂತ ಪುರಾತನ ದೇವಾಲಯವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಿಕರ ಸಂದಣಿ ಕಾಶಿ ಪಟ್ಟಣ್ಣಕ್ಕೆ ಇದೆ ಎನ್ನಲಾಗುತ್ತಿದೆ. 3000ಕ್ಕೂ ಹೆಚ್ಚು ದೇವಾಲಯಗಳು ಕಾಶಿಯಲ್ಲಿವೆ. ದೇಶದ ಅತ್ಯಂತ ಪ್ರಾಚೀನ ನಗರವು ಇದಾಗಿದೆ.

16. ಶೃಂಖಲಾ ದೇವಿ: ಪಶ್ಚಿಮ ಬಂಗಾಳ ರಾಜ್ಯದ ಹೂಗ್ಲಿ ಜಿಲ್ಲೆಯಲ್ಲಿರುವ ಪಂಡುವಾ ಎಂಬ ಚಿಕ್ಕ ಪಟ್ಟಣವೊಂದರಲ್ಲಿ ಪ್ರದ್ಯುಮ್ನ ಪೀಠಂ ಎಂದು ಕರೆಯಲ್ಪಡುವ ಈ ಮಹಾ ಶಕ್ತಿಪೀಠವಿದೆ. ಶೃಂಖಲಾ ದೇವಿಗೆ ಮುದಿಪಾದ ಈ ತಾಣದಲ್ಲಿ ಸತಿ ದೇವಿಯ ಹೊಟ್ಟೆಯ ಭಾಗ ಬಿದ್ದಿತ್ತೆನ್ನಲಾಗಿದೆ. ವಿಚಿತ್ರವೆಂದರೆ ಪ್ರಸ್ತುತ ಇಲ್ಲಿ ದೇವಾಲಯ ಕಂಡುಬರುವುದಿಲ್ಲ ಬದಲಾಗಿ ಒಂದು ಮಿನಾರ್ ಅಥವಾ ಸ್ತೂಪವೊಂದನ್ನು ಮಾತ್ರ ಕಾಣಬಹುದಾಗಿದೆ. ಕೆಲವರ ಪ್ರಕಾರ, ಶೃಂಖಲಾ ದೇವಿಯ ದೇವಾಲಯವು ಆದಿನಾಥ ಕ್ಷೇತ್ರದ ಗಂಗಾಸಾಗರದಲ್ಲಿದೆ ಎಂದಿದ್ದಾರೆ.

17. ಸರಸ್ವತಿ ದೇವಾಲಯ: ಪುರಾಣಗಳ ಪ್ರಕಾರ, ಸತಿಯ ಬಲಗೈ ಬಿದ್ದಿತ್ತೆನ್ನಲಾದ ಸ್ಥಳವೆ ಸರಸ್ವತಿ ಪೀಠವಾಗಿದ್ದು ಹದಿನೆಂಟು ಶಕ್ತಿಪೀಠಗಳ ಪೈಕಿ ಒಂದಾಗಿದೆ. ಪ್ರಸ್ತುತ ಪಾಕಿಸ್ತಾನ ಕಾಶ್ಮೀರ ಭಾಗದ, ಗಡಿ ರೇಖೆಯ ಬಳಿಯಿರುವ ಶಾರದಾ ಎಂಬ ಹಳ್ಳಿಯಲ್ಲಿ ಈ ದೇವಾಲಯ ತಾಣವಿದೆ. ಇದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದೆ. ಅಲ್ಲದೆ ದೇವಾಲಯವು ಹೆಚ್ಚುಕಡಿಮೆ ನಾಶಗೊಂಡಿದ್ದು ಕೇವಲ ಅವಶೇಷಗಳನ್ನು ಮಾತ್ರವೆ ಕಾಣಬಹುದು.

'ನಮಸ್ತೇ ಶಾರದಾದೇವಿ ಕಾಶ್ಮೀರ ಪುರವಾಸಿನಿ' ಎಂದು ನಾವು ಹೇಳುವ ಶಾರದಾ ಕ್ಷೇತ್ರವಿದೆ.

18. ಶಂಕರಿ ದೇವಿ: ಪೂರ್ವ ಶ್ರೀಲಂಕಾದ ತ್ರಿಕೋನಮಲೈ ಎಂಬ ಪಟ್ಟಣದಲ್ಲಿರುವ ಹಿಂದೂ ದೇವತೆಯ ಮತ್ತೊಂದು ಪ್ರಖ್ಯಾತ ಹಾಗೂ ಶಿವನಿಗೆ ಮುಡಿಪಾದ ದೇಗುಲವಾದ ಕೋನೇಶ್ವರಂ ದೇವಾಲಯದ ಬಳಿ ಸ್ಥಿತವಿದೆ.

ಶಂಕರಿ ಪೀಠಂ ಎಂದು ಕರೆಯಲ್ಪಡುವ ಈ ಶಕ್ತಿಪೀಠವು ಶ್ರೀಲಂಕಾ ದೇಶದಲ್ಲಿ ಸ್ಥಿತವಿದೆ. ಈ ಕ್ಷೇತ್ರದಲ್ಲಿ ಸತಿ ದೇವಿಯ ಹೃದಯ ಭಾಗವು ಬಿದ್ದಿತ್ತೆನ್ನಲಾಗಿದೆ. ಪ್ರಸ್ತುತ ಲಭ್ಯವಿರುವ ಮಾಹಿತಿ ಪ್ರಕಾರ ಶಂಕರಿ ದೇವಿಯ ದೇವಾಲಯವು ಬೆಟ್ಟದ ತುದಿಯೊಂದರ ಮೇಲೆ ನೆಲೆಸಿತ್ತೆನ್ನಲಾಗಿದೆ. ಹಿಂದೆ ವಿದೇಶಿಯರ ಆಕ್ರಮಣದಿಂದ ಆ ದೇವಾಲಯ ನಾಶ ಹೊಂದಿದರೂ ಮೂಲ ದೇವಿ ಪ್ರತಿಮೆಯನ್ನು ಇಂದು ಕಂಡುಬರುವ ದೇವಸ್ಥಾನದಲ್ಲಿರಿಸಿದೆ ಎನ್ನಲಾಗಿದೆ.

ಅತ್ಯಂತ ಪುರಾತನ ಹಿನ್ನೆಲೆಯುಳ್ಳ ಈ ಕ್ಷೇತ್ರಗಳು ಇಂದಿಗೂ ಜನ ಜಂಗುಳಿಯಿಂದ ತುಂಬಿದಂತಹ ಕ್ಷೇತ್ರಗಳಾಗಿವೆ, ಶಕ್ತಿ ಪೀಠಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದ್ದು ಮಹಾಶಕ್ತಿಯ ಆರಾಧಕರಿಗೆ ಪುಣ್ಯಪ್ರದಾಯಕ ಸ್ಥಳಗಳು. ಎಲ್ಲರಿಗೂ ಇಂತಹ ಕ್ಷೇತ್ರಗಳ ದರ್ಶನ ಲಭಿಸಲಿ, ಜೈ ದುರ್ಗೆ....

-ಹೇಮಾ ವೆಂಕಟೇಶ್. ಹಂದ್ರಾಳ, ಬಾಗಲಕೋಟೆ


Tags: Shakthi Peetha, Goddess Durga, Navarathri, ನವರಾತ್ರಿ, ದುರ್ಗಾ ದೇವಿ, 18 ಶಕ್ತಿ ಪೀಠಗಳು


Post a Comment

أحدث أقدم