ನಮ್ಮ ದೇಶದ ಎರಡನೆಯ ಪ್ರಧಾನಮಂತ್ರಿ ಲಾಲ್ ಬಹಾದುರ್ ಶಾಸ್ತ್ರಿ ಅವರ ಜನ್ಮದಿನವಿಂದು.
ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಆಯಾಮ ನೀಡಿದ ಮಹಾನ್ ಚೇತನ, ಅಜಾತ ಶತ್ರು ರಾಜಕಾರಣಿ, ದೇಶ ಕಂಡ ಅಪರೂಪದ ಪ್ರಧಾನಿ ಶಾಸ್ತ್ರೀಜಿ.
ಕೇವಲ 17 ತಿಂಗಳ ಕಾಲ ಪ್ರಧಾನಿಯಾಗಿದ್ದ ಶಾಸ್ತ್ರೀಜಿ ವರ್ಷಾನುಗಟ್ಟಲೆ ದೇಶವನ್ನಾಳಿ ದೇಶ ಒಡೆಯಲು ಕುಮ್ಮಕ್ಕು ಕೊಟ್ಟು, ಕಪಟದಿಂದ ಆಡಳಿತ ಪಡೆದ so called ವ್ಯಕ್ತಿಯನ್ನೇ ಮೀರಿಸಿಬಿಟ್ಟರು.
ಇವರ ಹೆಸರು ನೆನೆಪಾಗುವುದು 1965ನೆ ಘಟನೆಯಿಂದ. ಅಂದು ಆಗಸ್ಟ್ 15 ಕೆಂಪುಕೋಟೆಯಲ್ಲಿ ನಿಂತು ಉಚ್ಛ ಕಂಠದಿಂದ "ಹತ್ಯಾರೊಂ ಕಾ ಜವಾಬ್ ಹತ್ಯಾರೊಂ ಸೆ ದೇಂಗೆ" ಎಂಬ ಅವರ ಮಾತು ವೈರಿಗಳಲ್ಲಿ ನಡುಕ ಹುಟ್ಟಿಸಿತೆಂದರೆ ತಪ್ಪಾಗಲಾರದು.
ಅದು ಭಾರತದ ಪಾಲಿಗೆ ಸಂಕಷ್ಟದ ದಿನಗಳು. ಪಾಕಿಸ್ತಾನದ ಕುತಂತ್ರದಿಂದಾಗಿ ಕಾಶ್ಮೀರ ಪ್ರದೇಶವನ್ನು ಕಳೆದುಕೊಳ್ಳುವ ಅಪಾಯ ಎದುರಾಗಿತ್ತು.
ಅಂದು ಆಗಸ್ಟ್ 31, 1965 ರಂದು ಶಾಸ್ತ್ರಿಗಳು ಮನೆಗೆ ಬಂದಾಗ ಅವರ ಬಳಿ ಧಾವಿಸಿ ಬಂದ ಅವರ ಆಪ್ತಕಾರ್ಯದರ್ಶಿ ಶಾಸ್ತ್ರಿಗಳ ಬಳಿ ಏನೋ ಸೂಕ್ಷ್ಮವಾಗಿ ಒಂದು ವಿಚಾರವನ್ನು ಅವರ ಹತ್ತಿರ ಬಂದು ಪಿಸುಗುಟ್ಟಿದರು.
ಆ ವಿಷಯ ಕೇಳಿದ ತಕ್ಷಣವೇ ಶಾಸ್ತ್ರಿಗಳು ಪ್ರಧಾನಿ ಕಚೇರಿಗೆ ಹೋದರು. ಅಷ್ಟರಲ್ಲೇ ಅವರ ಬರುವಿಕೆಗಾಗಿ ಕಾಯುತ್ತಿದ್ದ ಭೂಸೇನೆ, ವಾಯುಸೇನೆ, ನೌಕಾಪಡೆ ಮುಖ್ಯಸ್ಥರೆಲ್ಲರೂ ಸೇರಿ ಪ್ರಮುಖ ನಿರ್ಧಾರ ತೆಗೆದುಕೊಂಡೇ ಬಿಟ್ಟರು.
ಆ ಅಚಲ ನಿರ್ದಾಕ್ಷಿಣ್ಯ ನಿರ್ಧಾರದ ಫಲವಾಗಿ ತಕ್ಷಣವೇ ಪಾಕ್ ನ ಮೇಲೆ ಭಾರತದಿಂದ ಅಧಿಕೃತವಾಗಿ ಯುದ್ಧ ಘೋಷಣೆಯಾಗಿಯೇ ಬಿಟ್ಟಿತು.
ಆ ದಿನಗಳ ಶಾಸ್ತ್ರಿಗಳ ನಿರ್ಧಾರದಿಂದಲೇ ಇಂದು ನಮ್ಮ ಪ್ರಧಾನ ಸೇವಕರಿಗೆ ಕಾಶ್ಮೀರದ ವಿಶೇಷ ಸ್ಥಾನ ಮಾನ ಹಿಂಪಡೆಯಲು ನೆರವಾಯಿತು ಎಂದರೆ ತಪ್ಪಾಗಲಾರದು.
ಅಂದು ಪಾಪಿ ಪಾಕಿಸ್ತಾನದ ಕುತಂತ್ರಿಗಳು ಬಹುತೇಕ ಜಮ್ಮುವನ್ನು ವಶಪಡಿಸಿಕೊಂಡು ಮುಂದೆ ಮುಂದೆ ಬರುತ್ತಿರುವಾಗ ಸೇನಾ ಮುಖ್ಯಸ್ಥ ಅರ್ಜುನ್ ಸಿಂಗ್ ವಿಜಯದ ಅನುಮಾನ ವ್ಯಕ್ತಪಡಿಸಿದಾಗ, ಶಾಸ್ತ್ರಿಗಳು ದೃತಿಗೆಡದೇ, ವಿಶ್ವಸಂಸ್ಥೆಯ ಬಳಿ ಧಾವಿಸದೇ, ಅಂತಾರಾಷ್ಟ್ರೀಯ ಒತ್ತಡಗಳ ಬಗ್ಗೆ ಚಿಂತಿಸದೇ, "ಹಮಾರಾ ದೇಶ ರಹೇಗಾ ತೋ ಹಮಾರಾ ತಿರಂಗಾ ರಹೇಗಾ" ಎಂದು ಭಾರತೀಯ ಸೈನ್ಯಕ್ಕೆ ಧೈರ್ಯತುಂಬಿ ಮುನ್ನುಗಲು ನಿರ್ದೇಶನ ನೀಡಿಯೇ ಬಿಟ್ಟರು.
ಯುದ್ದ ತೀವ್ರ ಹಂತಕ್ಕೆ ತಿರುಗಿದಾಗ ಪಾಕಿಸ್ತಾನ ಅಮೇರಿಕಾದ ಮೊರೆ ಹೋಗಿ ಮಧ್ಯಪ್ರದೇಶ ಮಾಡುವಂತೆ ಗೋಗರೆಯಿತು. ಆಗ ಅಮೇರಿಕ ಗೋಧಿಯ ರಫ್ತನ್ನು ನಿಲ್ಲಿಸುತ್ತೇವೆ ಎಂದು ಬೆದರಿಕೆಯೊಡ್ಡಿದಾಗ ಶಾಸ್ತ್ರೀ, ನಿಲ್ಲಿಸಿ ತೊಂದರೆಯಿಲ್ಲ ದುಡ್ಡು ಕೊಟ್ಟು ನಿಮ್ಮ ಕಳಪೆ ಗುಣಮಟ್ಟದ ಕೆಂಪು ಗೋಧಿ ತಿನ್ನುವುದಕ್ಕಿಂತ ಹಸಿವಿನಿಂದ ಸಾಯುವುದೇ ಲೇಸು ಎಂದರು.
(ಶಾಸ್ತ್ರೀಜಿ ಕೊಲಾಜ್ ಚಿತ್ರ: ಅತುಲ್ ಎಸ್ ಭಟ್)
ನಂತರ ದೆಹಲಿಯ ರಾಮಲೀಲಾ ಮೈದಾನದಲ್ಲಿ ಶಾಸ್ತ್ರೀಜಿ ಜನತೆಯನ್ನುದೇಶಿಸಿ, ಇಂಡೋ-ಪಾಕ್ ಯುದ್ಧದ ಪರಿಣಾಮವಾಗಿ ಗೋಧಿ ಅಮದಾಗುವುದು ನಿಂತಿದೆ ದೇಶದ ಜನ ಕೈಜೋಡಿಸಬೇಕು, ನೀವೆಲ್ಲರೂ ಪ್ರತಿ ಸೋಮವಾರ ಉಪಾವಸ ವ್ರತವನ್ನು ಆಚರಿಸುವ ಮುಖಾಂತರ ನಮ್ಮ ಸೇನೆಗೆ ಸಹಾಯ ಮಾಡಬೇಕು ಎಂದರು.
ಶಾಸ್ತ್ರಿಯವರ ಈ ಕರೆಗೆ ಓಗೊಟ್ಟು ಲಕ್ಷಾಂತರ ಜನ ಉಪವಾಸಗೈದರು. ಶಾಸ್ತ್ರಿಗಳು ತನ್ನ ಮನೆಗೆ ಕೆಲಸಕ್ಕೆಂದು ಬರುತ್ತಿದ್ದ ಮಹಿಳೆಯನ್ನು ಇನ್ನೂ ಮುಂದೆ ನೀನು ಕೆಲಸಕ್ಕೆ ಬರಬೇಡಮ್ಮ; ನಿನಗೆ ನೀಡುವ ಹಣವನ್ನೂ ನಾನು ದೇಶಕ್ಕಾಗಿ ಸಮರ್ಪಿಸುತ್ತೇನೆ ಏನೇ ಕೆಲಸವಿದ್ದರೂ ನಾನೇ ಸ್ವತಃ ಮಾಡುತ್ತೇನೆ ಎಂದದ್ದನ್ನು ಹೇಗೆ ತಾನೇ ಮರೆಯಲು ಸಾಧ್ಯ.
ಕೊನೆಗೂ ವಿಶ್ವಸಂಸ್ಥೆಯ ಮಧ್ಯಪ್ರವೇಶದಿಂದ ಸೆಪ್ಟೆಂಬರ್ 21ರಂದು ಭಾರತ ಮತ್ತು ಪಾಪಿ ಪಾಕ್ ನಡುವೆ ಕದನ ವಿರಾಮ ಒಪ್ಪಂದವೇರ್ಪಟ್ಟಿತು.
1966 ಜನವರಿ 10 ರಂದು ತಾಷ್ಕೆಂಟ್ ಒಪ್ಪಂದಕ್ಕೆ ಶಾಸ್ತ್ರೀ ಮತ್ತು ಅಯೂಬ್ ಖಾನ್ ನಿಂದ ಸಹಿಯೇನೋ ಬಿತ್ತು, ಆದರೇ ಸಹಿಯ ಶಾಹಿ ಆರುವ ಮೊದಲೇ ಭಾರತಕ್ಕೆ ಒಂದು ಆಘಾತಕಾರಿ ಸುದ್ದಿ ಬಂದೊದಗಿತು, ಅದೇ ಶಾಸ್ತ್ರೀಜಿಯ ಅನುಮಾನಾಸ್ಪದ ಹೃದಯಾಘಾತ ಸಾವು.
ಅಂದು1966 ರ ಜನವರಿ 10 ಒಪ್ಪಂದಕ್ಕೆ ಸಹಿ ಹಾಕಿ ಮಲಗಿದ್ದ ಶಾಸ್ತ್ರೀಜಿ ಅಂದೇ ಕೊನೆಯುಸಿರೆಳೆದರು. ದುರದೃಷ್ಟವಶಾತ್ ಇಂದಿಗೂ ಈ ವಿಷಯ ಅನುಮಾನಸ್ಪದವಾಗಿಯೇ ಉಳಿದಿದೆ.
ಎಂತಹ ಒತ್ತಡದ ಸ್ಥಿತಿಯಲ್ಲೂ ಧೃತಿಗೆಡದೆ ಭಾರತವನ್ನು ಅಪಾಯದ ಅಂಚಿನಿಂದ ಪಾರುಮಾಡಿದ ಧೀಮಂತ ಪ್ರಧಾನಿ ಶಾಸ್ತ್ರೀಜಿಗೆ ಹೇಗೇ ತಾನೇ ಹ್ರದಯಾಘಾತವಾಗಲು ಸಾಧ್ಯ? ಎಂಬ ಪ್ರಶ್ನೆ ಸಹಜವಾಗಿಯೇ ಇಂದಿಗೂ ಎಲ್ಲರಲ್ಲೂ ಇದೆ, ಆದರೆ ಉತ್ತರವಿಲ್ಲವಷ್ಟೇ!
ಅಂದೇ ಸಾವರ್ಕರ್ ಹೇಳಿದ್ದರಂತೆ ಶಾಸ್ತ್ರಿಗಳೇ ನಾವು ಗೆದ್ದಾಗಿದೆ ನೀವು ಯಾವುದೇ ಕಾರಣಕ್ಕೂ ತಾಸ್ಕೆಂಟ್ ಗೆ ಹೋಗಬೇಡಿ; ಬೇಕಾದರೆ ಅವರೇ ನಮ್ಮಲ್ಲಿಗೆ ಬರಲಿ ಎಂದು ಆದರೇ ಅಪ್ರತಿಮ ಕ್ರಾಂತಿಕಾರಿತಿಯ ಮಾತನ್ನು ಕಡೆಗಣಿಸಿ ನೆಡೆದುಕೊಂಡು ಹೋದ ಶಾಸ್ತ್ರೀಗಳನ್ನು ಹೊತ್ತುಕೊಂಡು ತರಬೇಕಾಯಿತು..
ಶಾಸ್ತ್ರಿಗಳ ಆತ್ಮ ಇಂದು ಎಲ್ಲೇ ಇದ್ದರೂ ಪ್ರಸ್ತುತ ವಿಶೇಷ ಸ್ಥಾನ ಮಾನ ರದ್ದತಿಯನ್ನು ಕಂಡು ಸಂತೃಪ್ತಿ ಹೊಂದುವುದೆಂದರೆ ತಪ್ಪಾಗದು. ಅಂದು ಶಾಸ್ತ್ರಿಗಳು ನಮ್ಮ ಕಿರೀಟ ಸದೃಶವಾದ ಕಾಶ್ಮೀರವನ್ನು ಉಳಿಸಿದರು. ಇಂದು ಈ ನರೇಂದ್ರರು ಆ ಕಾರ್ಯಕ್ಕೆ ಮುಂದಡಿ ಇಟ್ಟಿದ್ದಾರೆ ಎಂದರೆ ಬಹುಶಃ ತಪ್ಪಾಗಲಾರದು.
ಕೆಲಸ, ಮನಸ್ಸು, ಮಾತು ಮೂರನ್ನೂ ಶುದ್ಧವಾಗಿಟ್ಟುಕೊಂಡು ಬಾಳಿದ ಜೀವವೇ ಶಾಸ್ತ್ರೀಜಿ. ಈ ಮಹಾನ್ ಚೇತನವನ್ನು ಅವರ ಜನ್ಮದಿನದಂದು ನೆನೆಪಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಅಲ್ಲವೇ?
ಜೈ ಜವಾನ್ ಜೈ ಕಿಸಾನ್
-ಕೆ. ರಾಘವೇಂದ್ರ ಭಟ್
Tags: Lal Bahadur Shastri, Lal Bahadur Shastri Jayanti, ಲಾಲ್ ಬಹಾದುರ್ ಶಾಸ್ತ್ರಿ, ಶಾಸ್ತ್ರಿ ಜಯಂತಿ
إرسال تعليق