ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಶಿವರಾತ್ರಿ- ಶಿವಸ್ಮರಣೆ: 'ಜಗವು ಶಿವನೊಳಗುಂಟು ಜಗದೊಳು ಶಿವನಿಲ್ಲ ...! ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad





• ಕೆ.ಎಲ್. ಕುಂಡಂತಾಯ

{ಮಾಘ ಮಾಸದಲ್ಲಿ‌ ಸನ್ನಿಹಿತವಾಗುವ ಬಹುಳ ಚತುರ್ದಶಿಯಂದು "ಶಿವರಾತ್ರಿ". ಇದು ಹಬ್ಬವಲ್ಲ ವ್ರತ. ಅಭಿಷೇಕ- ಅರ್ಚನೆಗಳೇ ಪ್ರಧಾನವಾಗಿರುವ ಆರಾಧನೆ. ಉಪವಾಸದ ಶ್ರದ್ಧೆ, ದಿನಪೂರ್ತಿ ಮಹೇಶ್ವರನ ಸನ್ನಿಧಾನದಲ್ಲಿ ಕಾಲಕಳೆಯುವ ವ್ರತ ನಿಷ್ಠೆಗಳ ಸಂಕಲ್ಪ. ಇದೇ ಶಿವರಾತ್ರಿ.}


ಸೃಷ್ಟಿ ಕರ್ತನಾದ ಬ್ರಹ್ಮನ ಸತ್ಯಲೋಕ ಎಲ್ಲಿದೆ, ಪಾಲನಾ ಕರ್ತನಾದ ನಾರಾಯಣನ ವೈಕುಂಠ ಎಲ್ಲಿದೆ,ಇಂದ್ರನ ಸ್ವರ್ಗ ಎಲ್ಲಿದೆ, ಯಮನ ಶೈಮಿನಿ ಎಲ್ಲಿದೆ. ಇವೆಲ್ಲ ಪುರಾಣದ ವರ್ಣನೆಗಳಿಂದ ಋಷಿ ವಾಕ್ಯಗಳಿಂದ  ಕಲ್ಪನೆಯಲ್ಲಿ ಸಂಭವಿಸುವ ಅಥವಾ ಅರ್ಥೈಸಿಕೊಳ್ಳಬಹುದಾದ ಲೋಕಗಳು. ಆದರೆ ಲಯಾಧಿಕಾರಿಯಾದ ಮಹಾದೇವನ ವಾಸಸ್ಥಾನ ಎಲ್ಲಿದೆ ಎಂಬ ಪ್ರಶ್ನೆಗೆ ಉತ್ತರ ಸರಳ. ಅದು ಭರತ ವರ್ಷದ ಉತ್ತರದಲ್ಲಿರುವ ಬೆಳ್ಳಿಬೆಟ್ಟ, ಗೌರಿಶಂಕರ ಅಥವಾ ಕೈಲಾಸ. ಈ ನೆಲೆಯನ್ನು ಕಲ್ಪಿಸಬೇಕಾಗಿಲ್ಲ, ಭೂಮಿಯಲ್ಲಿ ಬದುಕುವ ಪ್ರತಿಯೊಬ್ಬನೂ ಆಲೋಚಿಸಿ ನಿರ್ಧರಿಸಬಹುದಾದ ನೆಲೆಯಾಗಿದೆ   ಮಹಾದೇವನ ವಾಸಸ್ಥಾನ.‌ ಆದುದರಿಂದಲೇ ಮಹಾ ರುದ್ರದೇವರು ಸುಲಭ ಗ್ರಾಹ್ಯರು, ಜನಮಾನಸಕ್ಕೆ ಸಮೀಪದ ದೇವರು. ಜನಪದರ ಆರಾಧ್ಯ ಮೂರ್ತಿ, ಶಿಷ್ಟ ಚಿಂತನೆಯಲ್ಲಿ  'ಅಧ್ಯಾತ್ಮದ ಒಂದು ಬೆರಗು'. ಜಗತ್ತಿಗೆ ಮಾತೃ- ಪಿತೃ ಸ್ಥಾನದಲ್ಲಿರುವ ಪಾರ್ವತಿ ಸಮೇತನಾದ ಮಹೇಶ್ವರ; ಇವರ ದಾಂಪತ್ಯ ಆದರ್ಶ ಎಂದೇ ಮನುಕುಲ‌ ಸ್ವೀಕರಿಸಿದೆ. 


• ಪಾರ್ವತಿಯ ಶಿವತಪಸ್ಸು, ಶಿವಭಕ್ತ ಮಾರ್ಕಾಂಡೇಯ, ಬೇಡರ ಕಣ್ಣಪ್ಪ, ಶ್ವೇತಕುಮಾರ ಮುಂತಾದ ಪುರಾಣ ಹೇಳುವ ಶಿವಭಕ್ತರ ಕಥೆಗಳು ಜನಜನಿತ. ಸರಳ- ಸಹಜ ಭಕ್ತಿಗೆ ಒಲಿಯುವ ಶಿವ ಕಪಟವರಿಯದ ಮುಗ್ಧನೆಂದೂ ಭಸ್ಮಾಸುರನ ಪ್ರಕರಣವನ್ನು ಉಲ್ಲೇಖಿಸಿ ವಿಮರ್ಶಕರು ವ್ಯಾಖ್ಯಾನಿಸುತ್ತಾರೆ. 


• ರಾಕ್ಷಸರಿಗೆ ವರ ಕೊಡುವಲ್ಲಿ ಶಿವನ ಹೃದಯವಂತಿಕೆ ಮಿಡಿಯುವ ಕ್ರಮ ಗಮನಸೆಳೆಯುತ್ತದೆ. ಭವಿಷ್ಯದ ಯೋಚನೆ ಇಲ್ಲದೆ 'ತಪಸ್ಸು, ತಾನು ಒಲಿಯಬೇಕು' ಎಂಬ ಮುಗ್ಧತೆ ಮಾತ್ರ ಪ್ರಧಾನವಾಗುವ ಮಹಾದೇವನ ಚರ್ಯೆ ಬಹುತೇಕ ಮನುಷ್ಯ ಸಹಜವಾಗಿಯೇ ವ್ಯಕ್ತವಾಗುತ್ತದೆ.  

      

  • ಶಿವ ಶರಣರು, ದಾಸರು ಶಿವನನ್ನು ಕಂಡ ಬಗೆಯೂ ವಿಶಿಷ್ಟ.

       - 'ಜಗವು ಶಿವನೊಳಗುಂಟು

        ಜಗದೊಳು ಶಿವನಿಲ್ಲ

        ಜಗವು ಶಿವನಿಂದ ಬೇರಿಲ್ಲ ಈ ಬೆಡಗ 

        ಅಘಹರನೇ ಬಲ್ಲ ಸರ್ವಜ್ಞ'

'ತ್ರಿಪದಿ ಕವಿ ಸರ್ವಜ್ಞನ ನಿರೂಪಣೆಯಂತೆ ಜಗವು ಶಿವನಿಂದ ಬೇರಿಲ್ಲ'.

- 'ರಾತ್ರಿಯೊಳು ಶಿವರಾತ್ರಿ' ಎಂದೂ ಸರ್ವಜ್ಞ ಉದ್ಗರಿಸಿದ್ದಿದೆ. 

- ಶಿವರಾತ್ರಿಯ ಜಾಗರಣೆಯಲ್ಲಿ ತನಗೆ ಶಿವ ದರ್ಶನವಾದುದನ್ನು ದಾಸವರೇಣ್ಯ ಪುರಂದರದಾಸರು ಹಾಡುತ್ತಾರೆ.  

-ಭಕ್ತಿ ಭಂಡಾರಿ ಬಸವಣ್ಣನವರಿಗೆ ಶಿವ ಎಲ್ಲೆಲ್ಲೂ ಕಾಣುತ್ತಾನೆ ,ವಿಶ್ವವೇ ಶಿವಮಯವಾಗಿ ಭಾಸವಾಗುತ್ತದೆ. ತ್ರಿನಯನನ ಕಣ್ಣಿನ ಕಾಂತಿಯ ಬೆಳಕಿನಿಂದಲೇ ಓಡಾಡುತ್ತಾರೆ ಬಸವಣ್ಣನವರು.


- 'ಚೆನ್ನಮಲ್ಲಿಕಾರ್ಜುನಯ್ಯ, ಆತ್ಮ ಸಂಗಾತಕ್ಕೆ  ನೀನೆನಗುಂಟು', ಎನ್ನುತ್ತಾ ಸಂಸಾರ ತ್ಯಾಗ ಮಾಡಿ ಹೊರಟಳು ಮಹಾಶಿವಶರಣೆ ಅಕ್ಕಮಹಾದೇವಿ.

• ನಮ್ಮ ದೈವ- ಬೂತಗಳ ನಡುವಣ ಲೋಕದಲ್ಲಿ ಅಬ್ಬರಿಸುವ ಸತ್ಯಗಳ ಕಥೆಗಳು ರೋಚಕ.

- ಪಂಜುರ್ಲಿ ಪಾಡ್ದನವು ಶಿವನು ಹೇಗೆ ಈ ದೈವೀಶಕ್ತಿ ಪ್ರಕಟಗೊಳ್ಳುವಂತೆ ಮಾಡಿ ಭೂಮಿಗೆ ಕಳುಹಿಸಿದನೆಂಬ ಕಥೆಯನ್ನು ವಿವರಿಸುತ್ತದೆ.

 - ಮುಂಡತ್ತಾಯ ದೈವವು ಶಿವ ದೇವರ ಹಣೆಯಿಂದ ಜನಿಸಿತಂತೆ.

- ಜೋಗಿ ಪುರುಷರಿಗೆ ಸಂಬಂಧಿಸಿದ ಕೆಲವು ಪಾಡ್ದನಗಳು ಕದಿರೆಯ ಮಂಜುನಾಥ ದೇವರನ್ನು ಉಲ್ಲೇಖಿಸಿವೆ.

- ಗುಳಿಗ ದೈವವು ಶಿವಾಂಶವೆಂಬ ವರ್ಣನೆ ಇದೆ.  

- ಗಣಪತಿಯ ಜನನದ ಕುರಿತಾದ ಜಾನಪದ ಪಾಡ್ದನವೊಂದರಲ್ಲಿ‌ ಶಿವನ ಪ್ರೇಮ ವಿಲಾಸದ ವರ್ಣನೆ ಇದೆ. ಬಾಮಕುಮಾರನೆ ಗಣಪತಿ.

- ಶಿವಪಾರ್ವತಿಯರು ಬೇಡರಾಗಿಯೋ, ಕೊರವಂಜಿಗಳಾಗಿಯೋ 'ಮೇಗಿ' ಲೋಕದಿಂದ ಭೂಲೋಕಕ್ಕೆ ಇಳಿಯುವಂತಹ ಕಥಾನಕಗಳಿವೆ.

ಶಿವ- ಪಾರ್ವತಿಯರ ಭೂಲೋಕ ಸಂಚಾರದ ಕತೆಗಳು ಮತ್ತು ಆ ಸಂದರ್ಭಗಳ‌ಲ್ಲಿ ಸಂಭವಿಸಿದ ಘಟನೆಗಳಿಂದ ಕೆಲವೊಂದು ಕ್ಷೇತ್ರಗಳು ನಿರ್ಮಾಣವಾಗುವುದನ್ನು ಕೇಳಬಹುದು- ನೋಡಬಹುದು.

ಈ ಮೇಲಿನ ವಿವರಣೆಗಳಿಂದ ಶಿವ ಮನುಷ್ಯನ ಬದುಕಿಗೆ ಸಮೀಪದ ದೇವರಾಗಿ ಒಮ್ಮೆ ನಮ್ಮೊಂದಿಗೆ ನಮ್ಮವನಾಗಿ ನಮ್ಮಂತೆಯೇ ನಮ್ಮ ಕಷ್ಟಸುಖ ವಿಚಾರಿಸುವ; ಮತ್ತೊಮ್ಮೆ ದೇವತ್ವದ ತುತ್ತತುದಿಗೇರುತ್ತಾ ಮಹನೀಯನಾಗುವ ಆ ಮೂಲಕ ಭವ ಬಂಧನದಿಂದ ಮುಕ್ತಿಕೊಡುವ ಮಹಾದೇವನಾಗಿ ಅನಾವರಣಗೊಳ್ಳುತ್ತಾನೆ.

ಈ ದೇಶದಲ್ಲಿ ಶಿವನು ಆದಿಮದಿಂದ ವೈದಿಕ ಸಂಸ್ಕೃತಿಯ ವರೆಗೆ ವಿವಿಧ ರೂಪಗಳಿಂದ, ಅನುಸಂಧಾನ ವಿಧಾನಗಳಿಂದ, ಸ್ವೀರಿಸಲ್ಪಟ್ಟ ದೇವರು. ತುಳುನಾಡಿನಲ್ಲಂತೂ ಬಹುಪುರಾತನದಿಂದ ಪೂಜೆಗೊಂಡ ದೇವರು.


ವಿರಕ್ತಿ- ಅನುರಕ್ತಿ:

ಸದಾ ಧ್ಯಾನಾಸಕ್ತನಾಗಿರುವ ಶಿವನು ಎಷ್ಟು ವಿರಕ್ತನೋ ಅಷ್ಟೇ ಅನುರಕ್ತನು.

ಸರ್ವಸಂಗ ಪರಿತ್ಯಾಗದಂತಹ ನಿವೃತ್ತಿಯು ಎಷ್ಟು ಗಾಢವಾಗಿದೆಯೋ ಅಷ್ಟೆ ತೀವ್ರವಾದ ಪ್ರವೃತ್ತಿಯು ಶಂಕರನಲ್ಲಿ ಕಾಣಬಹುದು.  

ಗೊಂದಲಗಳ ಗೂಡಾಗಿ ಕಾಣುವ, ವಿರೋಧಾಭಾಸಗಳ ಕೇಂದ್ರವೇ ಆಗಿರುವ ಶಿವ- ಶಿವ ಪರಿವಾರ ಸ್ವತಃ ದೇವದೇವನೇ ಮಾನವಕೋಟಿಗೆ ಒಂದು ಆದರ್ಶದ ಸಂದೇಶವನ್ನು ನೀಡುವಂತಿದೆ. ಕಾಮನನ್ನು ದಹಿಸಿ ಕಾಮಿನಿಯನ್ನು ವರಿಸುವ ಶಿವ ನಮಗೆ ಹತ್ತಿರದವನೇ ಆಗುತ್ತಾನೆ. ಮನುಕುಲ ಸಹಜವಾಗಿ ಸಾಧಿಸಬೇಕಾದುದನ್ನು ಬೋಧಿಸುವಂತಿದೆ ಭಗವಾನ್ ಭರ್ಗನ ಪರಿಕಲ್ಪನೆ, ಅನುಸಂಧಾನ, ಸ್ತುತಿ ಇತ್ಯಾದಿ.

ಶಿವರಾತ್ರಿ:

ಸ್ವಯಂಭುವಾಗಿ ಲಿಂಗರೂಪದಲ್ಲಿ ಉದ್ಭವಿಸಿದ ದಿನ. ಹಾಲಾಹಲ ವಿಷ ಪ್ರಾಶನ ಮಾಡಿದ ಸುಂದರ್ಭ, ತಾಂಡವವಾಡಿದ ಸುದಿನವೇ ಶಿವರಾತ್ರಿ ಪರ್ವಕಾಲ; ಹೀಗೆ ಹಲವು ನಿರೂಪಣೆಗಳಿವೆ.

ರುದ್ರ- ಪರ್ಜನ್ಯ:

ವೇದವು ವಿದ್ಯೆಗಳಲ್ಲಿ ಶ್ರೇಷ್ಠ ವಾದುದು. ವೇದದಲ್ಲಿ ಹನ್ನೊಂದು ಅನುವಾಕಗಳಿರುವ 'ರುದ್ರನಮಕ'ವು ಉತ್ಕ್ರಷ್ಟವಾದುದು. ಅದರಲ್ಲಿರುವ ಮಂತ್ರಗಳಲ್ಲಿ 'ನಮಃ ಶಿವಾಯ ಶಿವ ತರಾಯಚ' ಎಂಬ ವಾಕ್ಯವಿದೆ. ಇದರಿಂದ ಆಯ್ದ ಮಂತ್ರ ಪಂಚಾಕ್ಷರೀ. ಆದುದರಿಂದ ಪಂಚಾಕ್ಷರೀ ವೇದೋಕ್ತ ಮಂತ್ರ ಎಂಬುದು ವಿದ್ವಾಂಸರ ಅಭಿಪ್ರಾಯ. ಶಿವ ಶಬ್ದವು ಶುಭ ಕಲ್ಯಾಣ, ಮಂಗಳ ಮುಂತಾದ ಅರ್ಥಗಳನ್ನು ಧ್ವನಿಸುತ್ತದೆ. 'ಅಚ್' ಪ್ರತ್ಯಯವು ಸೇರಿ ಕಲ್ಯಾಣ ಗುಣಗಳುಳ್ಳವ ಎಂಬ ಅರ್ಥದಲ್ಲಿ ನಿಷ್ಪನ್ನವಾಗುತ್ತದೆ.    

ಅನ್ನಾದ್ಭವಂತಿ ಭೂತಾನಿ ಪರ್ಜನ್ಯಾದನ್ನ ಸಂಭವಃ | 

ಯಜ್ಞಾದ್ ಭವತಿ ಪರ್ಜನ್ಯೋ ಯಜ್ಞಃ ಕರ್ಮ

ಸಮುದ್ಭವಃ||

ಅನ್ನ- ಜೀವರಾಶಿ, ಅನ್ನ- ಮಳೆ, ಮಳೆ- ಯಜ್ಞ ಈ ಸಂಬಂಧವನ್ನು ವಿವರಿಸುವ ಈ ಶ್ಲೋಕವು ಯಜ್ಞದ ಪರಮ ಲಕ್ಷ್ಯವನ್ನು ಹೇಳುತ್ತದೆ. ಸಕಾಲಿಕ ಮಳೆಗೆ ಯಜ್ಞಕರ್ಮವೇ ಪೂರಕ ವೈದಿಕ ಪ್ರಕ್ರಿಯೆ ಎಂದು ದೃಢೀಕರಿಸುತ್ತದೆ.

ಶಿವ, ಸದಾಶಿವ, ಪರಶಿವ, ಇವು ಪರಮಾತ್ಮನ ಮನೋಜ್ಞ ಹೆಸರುಗಳು.

ಇವನು ರುದ್ರನೂ ಹೌದು. ಮಳೆ  ಸುರಿಸಿ ನೀರುಕೊಡುವವನು  ಅಧಿಕ ಶಬ್ದ ಮಾಡುತ್ತಾ ನೀರನ್ನು ಕೊಡುವವನು‌ ಎಂಬುದು 'ರುದ್ರ' ಶಬ್ದಕ್ಕೆ ಯಾಸ್ಕಾಚಾರ್ಯರು ನೀಡುವ ಅರ್ಥ.

ಮಳೆ ಸುರಿಸುವ ಶಿವ, ಮಳೆಗೆ ಪೂರಕವಾದ ಯಜ್ಞ ಕರ್ಮ: ಈ ಎರಡು ಸಿದ್ಧಾಂತಗಳಿಂದ ರುದ್ರ ದೇವರನ್ನು ಅಗ್ನಿ‌ ಮುಖದಿಂದ ಆರಾಧಿಸಿದರೆ ಮಳೆಯಾಗುತ್ತದೆ. ಮಳೆಯಿಂದ ಬೆಳೆ, ಬೆಳೆಯಿಂದ ಸಮೃದ್ಧಿ ತಾನೆ? ಲೋಕ ಸುಭಿಕ್ಷಗೆ ರುದ್ರದೇವರನ್ನು ಆರಾಧಿಸುವುದು, ಆಮೂಲಕ‌ ಕ್ಷೋಭೆಗಳಿಲ್ಲದ, ನಿರ್ಭಯದಿಂದ ಬದುಕುವ ಪರಿಸರ ನಿರ್ಮಾಣದ ನಿರೀಕ್ಷೆ ಋಜುಮಾರ್ಗದ ಸಂಕಲ್ಪವಲ್ಲವೆ.

ಮಂಗಳಕರ ಮಹಾದೇವನನ್ನು‌ ಶಿವರಾತ್ರಿ ಪರ್ವದಿನದಂದು ಸ್ಮರಿಸುತ್ತಾ ಬಿಲ್ವ ದಳವನ್ನು ಅರ್ಪಿಸುತ್ತಾ ಲೋಕಶಾಂತಿಯನ್ನು ಹಾರೈಸೋಣ.


Post a Comment

ನವೀನ ಹಳೆಯದು