ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಇಂದಿನ ಐಕಾನ್- ದೇವರೇ ಹೀಗೇಕೆ ಮಾಡಿದೆ ಎಂದು ನಾನು ಕೇಳುವುದಿಲ್ಲ! ಎಂದ ಆರ್ಥರ್ ಆಶ್ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 


ಅಮೆರಿಕಾದ ಈ ಲೆಜೆಂಡ್ ದೈತ್ಯ ಟೆನ್ನಿಸ್ ಆಟಗಾರನ ರೋಮಾಂಚಕ ಆದ ಬದುಕಿನ  ಕತೆಯನ್ನು ನನ್ನ ತರಬೇತಿಯಲ್ಲಿ ನೂರಾರು ಬಾರಿ ಹೇಳಿದ್ದೇನೆ. ಇದೀಗ ಮತ್ತೆ ನಿಮ್ಮ ಮುಂದೆ...

ಆತನ ಹೆಸರು ಆರ್ಥರ್ ಆಶ್. ಒಬ್ಬ ನೀಗ್ರೋ. ಅಮೆರಿಕ ಡೇವಿಸ್ ಕಪ್ ತಂಡಕ್ಕೆ ಆಯ್ಕೆ ಆದ ಮೊದಲ ನೀಗ್ರೋ ಈತ. ತನ್ನ ವಿಸ್ತಾರವಾದ ಟೆನ್ನಿಸ್ ಜೀವನದಲ್ಲಿ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್, ವಿಂಬಲ್ಡನ್ ಈ ಮೂರು ಪ್ರಶಸ್ತಿ ಗೆದ್ದವನು! ಅವನ ಟೆನ್ನಿಸ್ ಸಾಧನೆಯು ಜಗತ್ತಿನ ಗಮನ ಸೆಳೆದದ್ದು ಮತ್ತು ಲಕ್ಷಾಂತರ ಅಭಿಮಾನಿಗಳನ್ನು ಪಡೆದದ್ದು ಎಲ್ಲವೂ ಉಲ್ಲೇಖನೀಯ. 

ಆದರೆ ಅವನ ಜೀವನದ ಕೊನೆಯ 14 ವರ್ಷಗಳು ಅತ್ಯಂತ ದಾರುಣ ಆಗಿದ್ದವು. ಅವನು ಎರಡು ಬಾರಿ ಅತ್ಯಂತ ಕ್ಲಿಷ್ಟ ಹಾಗೂ ಸಂಕೀರ್ಣವಾದ ಬೈಪಾಸ್ ಸರ್ಜರಿಗೆ ಒಳಗಾದ. ಮುಂದೆ ಅಷ್ಟೇ ಸಂಕೀರ್ಣ ಆದ ಮೆದುಳಿನ ಸರ್ಜರಿ ನಡೆಯಿತು. ಕೊನೆಗೆ ಆಗಿನ ಕಾಲಕ್ಕೆ ಅತ್ಯಂತ ಅಪಾಯಕಾರಿ ಆಗಿದ್ದ ಏಡ್ಸ್ ಕಾಯಿಲೆ ಧೃಢವಾಗಿ ಪಡಬಾರದ ಪಾಡುಪಟ್ಟವನು ಆತ. ಆಸ್ಪತ್ರೆಯಲ್ಲಿ ರಕ್ತ ಪೂರಣ ಮಾಡುವಾಗ ಅವನಿಗೆ AIDS ಸೋಂಕು ತಗುಲಿತ್ತು. ನಿಜವಾದ ಸಾವು ಬದುಕಿನ ಹೋರಾಟದ 14 ವರ್ಷಗಳನ್ನು ಅವನು ದಾಟಿ ಬರಬೇಕಾಯಿತು.  

ಆಗ ಅವನ ಒಬ್ಬ ಉತ್ಕಟ ಅಭಿಮಾನಿಯು ತುಂಬಾ ಪ್ರೀತಿಯಿಂದ ಅವನಿಗೆ ಒಂದು ಪತ್ರವನ್ನು ಬರೆದಿದ್ದ. ಅದರ ಒಟ್ಟು ಸಾರಾಂಶ ಹೀಗೆ ಇತ್ತು- ಅರ್ಥರ್. ಎಷ್ಟು ನೋವು ಪಡುತ್ತೀಯಾ? ದೇವರೇ ಹೀಗೇಕೆ ಮಾಡಿದೆ ಎಂದು ನೀನು ಯಾಕೆ ಕೇಳುವುದಿಲ್ಲ? 

ಅದಕ್ಕೆ ಆರ್ಥರ್ ಕೊಟ್ಟ ಉತ್ತರ ಹೆಚ್ಚು ಮಾರ್ಮಿಕ ಆಗಿತ್ತು. 

"ಗೆಳೆಯಾ, ನಿನ್ನ ಕಳಕಳಿಗೆ ಥ್ಯಾಂಕ್ಸ್ ಹೇಳುವೆ. ಆದರೆ ಯೋಚನೆ ಮಾಡು. ನಾನು ಟೆನ್ನಿಸ್ ಆಟ ಆಡಲು ಮೊದಲ ಬಾರಿಗೆ ಇಳಿದಾಗ ಜಗತ್ತಿನಲ್ಲಿ ಐದು ಕೋಟಿ ಜನ ಟೆನ್ನಿಸ್ ಆಡ್ತಾ ಇದ್ದರು. ಅದರಲ್ಲಿ 50 ಲಕ್ಷ ಮಂದಿ ಜಿಲ್ಲಾ ಮಟ್ಟವನ್ನು ದಾಟಿರಬಹುದು. ಐದು ಲಕ್ಷ ಮಂದಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿರಬಹುದು. ಐವತ್ತು ಸಾವಿರ ಮಂದಿ ಮಾತ್ರ ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿರಬಹುದು. ಕೇವಲ ಐದು ಸಾವಿರ ಆಟಗಾರರು ರಾಷ್ಟ್ರವನ್ನು ಪ್ರತಿನಿಧಿಸುವ ಅವಕಾಶ ಪಡೆದಿರಬಹುದು.

ಅದರಲ್ಲಿ ಐನೂರು ಮಂದಿ ಮಾತ್ರ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿರಬಹುದು. ಅವರಲ್ಲಿ ಐವತ್ತು ಮಂದಿ ವಿಂಬಲ್ಡನ್ ಕೂಟದ ಮೊದಲ ಸುತ್ತು ತಲುಪಿರುವ ಸಾಧ್ಯತೆ ಇದೆ. ಎಂಟು ಮಂದಿ ಮಾತ್ರ ಕ್ವಾರ್ಟರ್ ಫೈನಲ್ ವರೆಗೆ ತಲುಪಿರುವ ಸಾಧ್ಯತೆ ಇದೆ. ಅವರಲ್ಲಿ ಕೂಡ ನಾಲ್ಕು ಮಂದಿ ಮಾತ್ರ ಸೆಮಿಫೈನಲಿನ ಭಾಗ್ಯ ಪಡೆದಿರುತ್ತಾರೆ. ಅದರಲ್ಲಿ ಕೂಡ ಕೇವಲ ಇಬ್ಬರು ವಿಂಬಲ್ಡನ್ ಫೈನಲ್ ಸುತ್ತು ತಲುಪುತ್ತಾರೆ. ದೇವರ ದಯೆ. ಆ ಇಬ್ಬರಲ್ಲಿ ನಾನೂ ಒಬ್ಬನಾಗಿ ಇದ್ದೆ. ಜಗತ್ತಿನ ಕೇವಲ ಇಬ್ಬರು ಟೆನ್ನಿಸ್ ಆಟಗಾರರು ಪಡೆಯುವ ಶ್ರೇಷ್ಟ ಅವಕಾಶ ಅಂದು ನನಗೆ ದೊರಕಿತ್ತು. ನಾನು ಜಗತ್ತಿನ ನಂಬರ್ ಟೂ ಆಟಗಾರನಾಗಿ ಬೆಳ್ಳಿಯ ಹೊಳೆಯುವ ತಳಿಗೆಯನ್ನು ಎತ್ತಿ ಹಿಡಿದು ಖುಷಿ ಪಟ್ಟಿದ್ದೆ! ಆಗ ನಾನು ದೇವರೇ, ನೀನೇಕೆ ಹೀಗೆ ಮಾಡಿದೆ? ಎಂದು ಕೇಳಲಿಲ್ಲ! ಜೀವನದ ಅತ್ಯಂತ ಖುಷಿಯ ಕ್ಷಣಗಳಲ್ಲಿ ನಾನು ದೇವರನ್ನು ದೂರುತ್ತಾ ಕುಳಿತುಕೊಳ್ಳಲಿಲ್ಲ. ಈಗ ನನ್ನ ಆರೋಗ್ಯ ಸಮಸ್ಯೆಗಳು ಎದುರಾದಾಗ ಹೇಗೆ ಕೇಳಲಿ? 

ನಮಗೆ ದೇವರು ದೊಡ್ಡ ಹೆಸರು, ಕೀರ್ತಿ, ಎತ್ತರದ ಪ್ರಶಸ್ತಿ, ಭಾರೀ ಪದವಿ, ಅಧಿಕಾರ, ರಾಶಿ ಹಣ ಕಾಸು, ಭಾರೀ ಪ್ರಭಾವ, ಹೃದಯ ತುಂಬಾ ಹ್ಯಾಪಿನೆಸ್ ಕೊಟ್ಟಾಗ ನಾವು ದೇವರೇ, ಹೀಗೇಕೆ ಮಾಡಿರುವೆ ಎಂದು ಕೇಳಿದ್ದು ಇದೆಯಾ? ಹಾಗಿರುವಾಗ ಸಮಸ್ಯೆ ಬಂದಾಗ, ಆರೋಗ್ಯ ಹಾಳಾದಾಗ, ಹಣ ಕಾಸು ನಷ್ಟ ಆದಾಗ, ಅನಾರೋಗ್ಯ ಮನೆ ಒಳಗೆ ಬಂದಾಗ ಯಾಕೆ ದೇವರನ್ನು ಕೇಳಬೇಕು? 

ಆರ್ಥರ್ ಆಶ್ ಹೇಳಿದ್ದು ನಿಜ ತಾನೇ? 

-ರಾಜೇಂದ್ರ ಭಟ್ ಕೆ,

ಜೇಸಿಐ ರಾಷ್ಟ್ರಮಟ್ಟದ ತರಬೇತುದಾರರು.

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು