ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಅಷ್ಟಾಂಗ ಯೋಗ- ರಾಜ ಯೋಗ (ಭಾಗ ೨) ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ನಮಗೆಲ್ಲಾ ತಿಳಿದ ಒಂದು ಅದ್ಬುತ ಶ್ಲೋಕ- ದೇಹೋದೇವಾಲಯಃ ಪ್ರೋಕ್ತೋ ದೇವೋ ಜೀವ ಸದಾಶಿವಃ |ತ್ಯಜೇದಜ್ಞಾನನಿರ್ಮಾಲ್ಯಂ ಸೋ$ಹಂಭಾವೇನ ಪೂಜಯೇತ್|- ಭಾವಾರ್ಥ: ದೇಹವೇ ದೇಗುಲ, ದೇಹದಲ್ಲಿರುವ ಜೀವನೇ ದೇವನಾಗಿರತಕ್ಕ ಸದಾಶಿವ.ಅಜ್ಞಾನವನ್ನು ತ್ಯಜಿಸಿ ಮನಶುದ್ದಿಗೊಳಿಸಿ ನಮ್ಮೊಳಗಿರುವ ಆ ದೈವವೇ ನಾನೆಂಬ ಭಾವದಲ್ಲಿ ನನ್ನ ಮನಸ್ಸು ನನ್ನ ಆತ್ಮವ ಪೂಜಿಸಬೇಕು.

ಈಶಾವಾಸ್ಯೋಪನಿಷತ್ತಿನ ಧ್ಯಾನ ಶ್ಲೋಕ- ||ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಚತೇ... |

ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವ ಶಿಷ್ಯತೇ...|| ಓಂ ಶಾಂತಿಃ ಶಾಂತಿಃ ಶಾಂತಿಃ

ಭಾವಾರ್ಥ: ಅದೂ (ಭಗವಂತ ಯಾ ಪರಮಾತ್ಮ) ಪೂರ್ಣ. ಇದೂ (ಜೀವಾತ್ಮ) ಪೂರ್ಣವೇ. ಆ ಪೂರ್ಣದಿಂದ ಈ ಪೂರ್ಣ ಬಂತು. ಪೂರ್ಣದಿಂದ ಪೂರ್ಣವ ಕಳೆದರೂ ಪೂರ್ಣವು ಉಳಿಯುವುದು.  ಪ್ರತಿಯೊಬ್ಬರಿಗೂ ಅಧಿ ಭೌತಿಕ, ಅಧಿದೈವಿಕ, ಆಧ್ಯಾತ್ಮಿಕ ಶಾಂತಿ ದೊರೆಯಲಿ. ನಮ್ಮ ಸುತ್ತಮುತ್ತ ಮಂಗಳಕರವಾಗಿರಲಿ,  ದೈವ ಪ್ರೀತಿಯಗಳಿಸಿ ಉಳಿಸುವಂತಿರಲಿ, ನಮ್ಮ ದೇಹ ಸೌಖ್ಯವಾಗಿರಲಿ ಎಂದೇ.. ಇದರ ಪ್ರಮುಖ ಸಂದೇಶ - ಬ್ರಹ್ಮಾಂಡದಲ್ಲಿರತಕ್ಕ ಆ ಏಕವೇ ಪೂರ್ಣ ಚೈತನ್ಯವಾಗಿದ್ದು ನಮ್ಮೆಲ್ಲರ ಪಿಂಡಾಂಡದೊಳಗೆ ಅನೇಕವಾಗಿ ತೋರಿಕೊಳ್ಳುತ್ತಿದೆ. ಹೇಗೆ ಏಕ ಸೂರ್ಯನ ಪ್ರತಿಬಿಂಬವು ಅನೇಕ ಕನ್ನಡಿಯ ಚೂರುಗಳಲ್ಲಿ ಬಹುವಾಗಿ ತೋರಲ್ಪಡುವುದೋ ಹಾಗೆ... ಜೀವನದ ಜಂಜಡದ ಯಾವುದೇ ಸಂದರ್ಭದಲ್ಲಿ ಇದರ ಸ್ವ ಸಂಮೋಹನಗೊಳಿಸಿಕೊಳ್ಳುತ್ತಾ ಚಿಂತನೆಯೊಂದಿಗೆ ಅನುಸಂಧಾನ ಮಾಡಬೇಕು.

ಆಗ ಸರ್ವತ್ರ ಸಮದರ್ಶನ ಭಾವ ಹೊಂದಿ ಸಹಜವಾಗಿ ಸಹಜ ಶಾಂತಿಗಳ ಹೊಂದಬಹುದು ಹಾಗೂ ಮನುಜ ತನ್ನ ಜೀವನದ ಸಹಜಾನಂದವೆಂಬ ಗುರಿಯ ತಲುಪಬಹುದು, ಜೀವನ ಸಾರ್ಥಕಗೊಳಿಸಿ ಕೊಳ್ಳಬಹುದು.ಹಾಗೇ ಆಗಬೇಕೆಂದೇ ನಮ್ಮ ಗುರುಹಿರಿಯರ ಅಪೇಕ್ಷೆ. ಶ್ಲೋಕಗಳ ಮಂತ್ರಗಳ ಯಾಂತ್ರಿಕವಾಗಿ ಹೇಳಿದರೆ ಅತ್ಯಲ್ಪ ಪ್ರಯೋಜನ. ಅದರ ಶ್ರವಣ ಮಾಡುತ್ತಾ ಅರ್ಥವ ತಿಳಿದು ಮನನ ಮಾಡುತ್ತಿದ್ದು ಅದರ ಅನುಸಂಧಾನ ಮಾಡುವ ಯತ್ನದಲಿದ್ದರೆ ಅದೊಂದು ದಿನ ನಮಗೆ ಸಿದ್ದಿಸೀತು. ಅದೇ ನಿಧಿಧ್ಯಾಸನ. ( ಶ್ರೋತವ್ಯಂ ಮಂತವ್ಯಂ ನಿಧಿಧ್ಯಾಸಿತವ್ಯಂ). ಇದೇ ಸಾಧನಾ ಪಥ.

ಮೇಲೆ ಹೇಳಿದ ಶ್ಲೋಕ, ಮಂತ್ರಗಳ ತಿಳಿಸಿದವರು ಋಷಿ ಮುನಿಗಳು. ಅವರು ನಮಗೆ ತಿಳಿಸಿದ ಅನೇಕ ಲೌಕಿಕ ವಿದ್ಯೆಗಳು ನಮಗೆ ಸರಿ ಇದೆ, ಉಪಯೋಗಿಯಾಗಿ ಇದೆ ಎಂದು ಅರಿವಾಗುತ್ತದೆ. ಹಾಗಿರುವಾಗ ಅವರು ಪ್ರಾಜ್ಞರು, ಸತ್ಯಸಂಧರು. ಅವರು ತಿಳಿ ಹೇಳಿದ ಅನೇಕ ವಿಚಾರಗಳು ಸತ್ಯವೆಂಬ ಅರಿವು ನಮಗೆಲ್ಲಾ ಇದೆ. ಹಾಗಿದ್ದಾಗ ಅವರು ತಿಳಿಸಿದ ಅಧ್ಯಾತ್ಮ ವಿಚಾರಗಳು ನಮಗೆ ಅರ್ಥವಾಗದಿದ್ದರೆ, ಅದನ್ನು ಸುಳ್ಳು ಎಂದು ಭಾವಿಸದೇ ಅದು ಋಷಿ ಮುನಿಗಳ ಆಪ್ತವಾಕ್ಯ (ಆಪ್ತರು ಸುಳ್ಳ ನುಡಿಯರು) ಎಂದೇ ತಿಳಿಯತಕ್ಕದ್ದು. ಅಲ್ಲವೇ?!

ಅಷ್ಟಾಂಗ ಯೋಗವ ರಾಜಯೋಗವೆಂದೂ ಕರೆಯುತ್ತಾರೆ ಹಾಗೂ ಇದು ಪ್ರಾಯೋಗಿಕವಾಗಿ ತತ್ವಗಳ ಅನುಸಂಧಾನ ಮಾಡಲು ಸಹಕರಿಸುವ ವಿಶೇಷ ವಿಜ್ಞಾನವೇ ಆಗಿದೆ. ಶ್ರೀ ಪತಂಜಲಿಯವರು ತಮ್ಮ ಯೋಗ ಸೂತ್ರಗಳಲ್ಲಿ ಯೋಗ ಸಾಧಕ ಅಳವಡಿಸಿಕೊಳ್ಳಬೇಕಾದ ಅನೇಕ ವಿಚಾರಗಳನ್ನು ಮಂಡಿಸಿದ್ದಾರೆ. ಅದಲ್ಲಿ ಮೊದಲನೇ ಸೂತ್ರವೇ- || ಅಥ ಯೋಗಾನುಶಾಸನಂ ||

ಶಾಸನ ಎಂದರೆ ರಾಜರು ಪ್ರಜೆಗಳ ಒಳಿತಿಗಾಗಿ ಅಳವಡಿಸುವ ಕಾನೂನು. ಅದನ್ನು ರಾಷ್ಟ್ರ ಹಿತಕ್ಕೋಸ್ಕರ ಪ್ರತಿಯೊಬ್ಬರೂ ಪರಿಪಾಲಿಸತಕ್ಕದ್ದು. ತಪ್ಪಿದರೆ ದಂಡ. ಆದರೆ ಅನುಶಾಸನವೆಂದರೆ ಯಾವುದೇ ಒತ್ತಡವಿಲ್ಲದೇ ತನ್ನ ಏಳಿಗೆಗೆ ಯಾವುದೇ ಒತ್ತಡಗಳಿಲ್ಲದೇ ಸಂತೋಷಂದ ಜೀವನದ ಶಿಸ್ತು ಅಳವಡಿಸಿಕೊಳ್ಳುವುದು. ಎಂದರೆ ಯಮ, ನಿಯಮ ಪಾಲನೆಯೆಂದೇ ಅರ್ಥ. ಅದರಲ್ಲೂ ಮುಖ್ಯವಾಗಿ ಸ್ವಾಧ್ಯಾಯ, ಈಶ್ವರಪ್ರಣಿಧಾನಂಗಳ ಅಳವಡಿಸುತ್ತಾ ಅಷ್ಟಾಂಗ ಯೋಗ ಸಾಧನೆ ಮಾಡುವುದಾದರೆ ಅದು ಮನವ ಶುದ್ದಗೊಳಿಸುವುದು. ಆಗ ಎರಡನೇ ಸೂತ್ರವಾದ- ||ಯೋಗಃ ಚಿತ್ತವೃತ್ತಿ ನಿರೋಧಃ|| ಎಂದರೆ ಚಿತ್ತದಲ್ಲಿ ಮೇಲಿಂದ ಮೇಲೆ ಏಳುವ ಆಲೋಚನೆಗಳಿಗೆ ಸಹಜ ಕಡಿವಾಣ ಒದಗುವುದು.

ಇದರಿಂದ ನಮ್ಮ ಸಾಧನೆ ಸುಲಲಿತಗೊಂಡು ಇಂದ್ರಿಯಗಳು ಅಂತರ್ಮುಖಿಗಳಾಗಿ ಸಹಜ ಪ್ರತ್ಯಾಹಾರ ಒದಗಿ ನಮ್ಮ ಆಂತರ್ಯದ ಏಳೂ ಚಕ್ರಗಳಲ್ಲಿ ಇರುವ ದೈವೀ ಚೈತನ್ಯವ ಧಾರಣೆ ಮಾಡುತ್ತಾ ಆ ದೈವವ ಧ್ಯಾನಿಸುತ್ತಾ ಪತಂಜಲಿ ಸೂತ್ರದ- 

||ಅನಂತ ಸಮಾಪತ್ತೀಭ್ಯಾಂ|| ಅಂದರೆ ನನ್ನ ದೇಹದ ಕಣಕಣಗಳಲ್ಲಿ ಇರುವ ಚೈತನ್ಯದ ಅರಿವು ಉಂಟಾಗಿ ಒಂದು ಅನಿರ್ವಚನೀಯ ಆನಂದ ನಮ್ಮೊಳಗೇ ಉಂಟಾಗಿ ಜೀವನ ಸಾರ್ಥೈಕ್ಯ ಭಾವ ಉಂಟಾಗದೇ ಇರದು. ಆದ್ದರಿಂದ ಅಷ್ಟಾಂಗ ಯೋಗಾಭ್ಯಾಸ ಎಂದರೆ ಅದು ದೈವ ಚಿಂತನೆಯ ಅನುಸಂಧಾನ ಮಾಡುತ್ತಾ ಮಾಡುವ ಪ್ರಕ್ರಿಯೆಯೇ. ಅನ್ಯಥಾ ಮಾಡುವುದಾದರೆ ಅದು ದೈವವಿಲ್ಲದೇ ಮಾಡುವ ಯಾ ಮನವು ದೈವ ಮಿಲನವಿಲ್ಲದೇ (ಯೋಗವಿಲ್ಲದೇ) ಯಾಂತ್ರಿಕವಾಗಿ ಮಾಡುವ ಸಾಮಾನ್ಯ ವ್ಯಾಯಾಮವಷ್ಟೇ. ನಮ್ಮ ಅಹಮಿಕೆಗೆ ಪೋಷಕವಾಗಬಹುದೇ ಹೊರತು ಯೋಗವೆಂಬ  ಸಾಗರವ ದರ್ಶಿಸಿದಂತೇ ಆಗದು. ಇದನರಿತು ನಿಜ ಯೋಗಾಭ್ಯಾಸ ಮಾಡೋಣವಲ್ಲವೇ?!

ಯೋಗಾಸನಾಭ್ಯಾಸ ಸಮಯದಲ್ಲಿ ಮನವ ಸ್ಥಿರತೆಯಲ್ಲಿ ಇರಿಸಿಕೊಳ್ಳಲು ಉಪಾಯವಾಗಿ ಬಳಸಲು ಇರಬೇಕಾದ ಮನಸ್ಥಿತಿ: ೧) ಚಿಂತೆಗೆ ಕಾರಣ ನನ್ನ ಅಹಂ. ಅದನ್ನು ಬದಿಗಿಟ್ಟು ಎಲ್ಲವೂ ಜಗನ್ನಿಯಾಮಕನ ಅಧೀನ. ಪುರುಷ ಪ್ರಯತ್ನ ಮಾಡುವೆವಾದರೂ ಫಲಾಫಲಗಳೆಲ್ಲಾ ಅವನಿಚ್ಚೆ ಎಂಬ ದೃಡ ಚಿತ್ತ. ಇದೇ || ಈಶ್ವರ ಪ್ರಣಿದಾನಾ ಧ್ವ || ಎಂಬ ಮನಸ್ಥಿತಿ- ಯೋಗ ಸೂತ್ರದ ತತ್ವ.

೨) ಎಷ್ಟು ಮಾತ್ರಕ್ಕೂ ಮನದ ಪ್ರಕೃತಿಯೇ ಚಂಚಲ. ಯಾವುದಾದರನ್ನು ಮಾಡು ಯಾ ಮಾಡಬೇಡವೆಂದು ಮನಸ್ಸಿಗೆ ಆಜ್ಞಾಪಿಸಿದರೆ ಅದಕ್ಕೆ ವಿರುದ್ದವಾಗಿ ನಡೆಯುವುದು ಮನಸ್ಸಿನ ಲಕ್ಷಣ.  ಆದ್ದರಿಂದ ಮೊದಲು ಯೋಗಾಸನವ ಬುದ್ದಿಯ ಮಟ್ಟದೊಂದಿಗೆ ತೊಡಗಿಸಿಕೊಳ್ಳಬೇಕು. ಯಾವಾಗ ಮನಸ್ಸಿನ ಮಾತನ್ನ ನಾವು ಕೇಳುವುದಿಲ್ಲವೋ ಆಗ ಮನ ತನ್ನ ಅಸ್ತಿತ್ವ ಕಳೆದುಕೊಳ್ಳುವ ಭಯಕ್ಕೆ ಒಳಗಾಗಿ ನಿಧಾನವಾಗಿ ಮನವು ಬುದ್ದಿಯ ಅಧೀನಕ್ಕೊಳಗಾಗಿ ಬುದ್ದಿಯ ದಾರಿಗೇ ಬರುವುದು. ಇದೇ ಯುಕ್ತಿಯಿಂದ ಮನವ ಗೆಲ್ಲುವ ಪರಿ.

ಆದ್ದರಿಂದ ನಾವು ಬುದ್ದಿಯ ಮಟ್ಟದಲ್ಲಿ ನಮಗೆ ನಾವೇ ಆಜ್ಞೆ ಕೊಡುತ್ತಿರಬೇಕು ಅಥವಾ ಹೇಳುತ್ತಿರಬೇಕು- 'ಓ ಮನವೇ ನೀನು ಏನು ಬೇಕಾದರೂ ಮಾಡು ನಾನು ಮಾತ್ರ ಆಸನದ ಪ್ರತೀ ಭಂಗಿಗಳ ಮಾಡುವಾಗ ಹಾಗೂ ವಿಶ್ರಾಂತಿ ಹೊಂದುವಾಗ ನನ್ನ ದೇಹದ ಒಳಗಿನ ಪ್ರತೀ ಅಂಗಗಳಿಗೆ ಒದಗಿ ಬರುವ ಒತ್ತಡ ಹಾಗೂ ವಿಶ್ರಾಂತಿಗಳ ಪ್ರೀತಿಯಿಂದ ದೈವೀ ಶಕ್ತಿಯ ಹರಿಯುವಿಕೆ ಎಂದೇ ಭಾವಿಸುತ್ತಾ ಉತ್ಸಾಹದಿಂದ ತೊಡಗಿಸಿಕೊಳ್ಳುವೆ' ಎಂದು. ಈಗ ಮನವು ತನ್ನ ಅಸ್ತಿತ್ವ ಕಳೆದುಕೊಳ್ಳುವ ಭಯಕ್ಕೆ ಒಳಗಾಗಿ ನಿಧಾನವಾಗಿ ಬುದ್ದಿಯ ಅಧೀನಕ್ಕೊಳಗಾಗಿ ಬುದ್ದಿಯ ದಾರಿಗೇ ಬರುವುದು. ಇದೇ ಯುಕ್ತಿಯಿಂದ ಮನವ ಗೆಲ್ಲುವ ಪರಿ.

೩) ಬುದ್ದಿಯ ಹಿಂದೆ ಅಹಂ, ಚಿತ್ತ (ಪೂರ್ವ ಜನ್ಮದ ವಾಸನೆ) ಇದೆ. ಈ ಅಹಂ ಮತ್ತು ಚಿತ್ತ ಬುದ್ದಿಗೆ ಋಣಾತ್ಮಕವಾಗಿ ನಾನು,ನನ್ನ ಬುದ್ದಿ ಎಂದು ಪ್ರಚೋದಿಸುವ ಅಪಾಯವಿದ್ದೇ ಇದೆ. ಇದನ್ನು ಮೀರಲು ನನ್ನ ಅಹಂನ ಸ್ವಾಧ್ಯಾಯವ ಅವಲಂಬಿಸಿ ಮಣಿಸಬೇಕು. ಸ್ವಾಧ್ಯಯ ಚಿಂತನೆ- 'ನನ್ನ ಬುದ್ದಿಯ ಪ್ರಚೋದಿಸುವ ಚೈತನ್ಯ ಬ್ರಹ್ಮಾಂಡದಲ್ಲಿ ಪೂರ್ಣವಾಗಿದ್ದು ನನ್ನೊಳಗೂ ಪೂರ್ಣವಾಗಿ ಇದೆ. ಅದೇ ಎಲ್ಲವೂ ಆಗಿದೆ (ಬ್ರಹ್ಮಾರ್ಪಣಂ ಬ್ರಹ್ಮ ಹವಿಃ...) ಎಂಬ ಆಪ್ತವಾಕ್ಯ ಅನುಸಂಧಾನ ಮಾಡುತ್ತಾ - 'ನಾನು ಕರ್ತನಲ್ಲ, ಕರ್ಮಫಲದಾತನ ಇಚ್ಚೆಯಂತೇ ಎಲ್ಲಾ ನಡೆಯಲಿ, ನಾನು ನಿಮಿತ್ತ ಮಾತ್ರನಾಗಿ ಉಚ್ಚ್ವಾಸ, ನಿಶ್ವಾಸಗಳ, ಪ್ರಾಣದ ಹರಿವ ಗಮನಿಸುತ್ತಾ ಯೋಗಾಸನ ಕರ್ಮಾದಿಗಳಲ್ಲಿ ತೊಡಗಿಸಿಕೊಳ್ಳುವೆ' ಎಂಬ ಭಾವದಲ್ಲಿದ್ದಾಗ ಸಾರ್ವತ್ರ ಸಮ ಭಾವವೆಂಬಂತೇ ಆದಾಗ ತನ್ನಿಂದ ತಾನೇ ಅಹಂ ನಾಶವುಂಟಾಗಿ ಚಿತ್ತ ಶುದ್ದಿಗೊಳಗಾಗಿ ನಾವೊಂದು ನಿರುಮ್ಮಳ ಧ್ಯಾನಸ್ಥ ಸ್ಥಿತಿಯ ತಲುಪಬಹುದು. ಈಗ ನಮಗೆ ಅರಿವಾಗುವುದು- ನಾನು ದೇಹ, ಮನೋಬುದ್ದಿ, ಅಹಂ ಚಿತ್ತಗಳಲ್ಲ. ಇವೆಲ್ಲಾ ನಿಜ ನಾನೇ ಆದ ವಿಶ್ವ ಚೈತನ್ಯದ ಪರಿಚಾರಕರು. ಅಥವಾ ದೇಹ ಮನೋಬುದ್ದ್ಯಾದಿಗಳ ಗಮನಿಸುವ ಒಂದು ತತ್ವ ನನ್ನ ಒಳಗೇ ಇದೆ. ಅದೇ ನಾನು. ಅದನ್ನೇ ಸಾಕ್ಷಿ ಎನ್ನುವುದು. ಅದು ಅದರ ಎಲ್ಲಾ ಪರಿಚಾರಕರ ಪ್ರಾಮಾಣಿಕತೆಯನ್ನೂ ಅರಿಯಬಲ್ಲದು ಹಾಗೂ ಅದಕ್ಕೆ ಸರಿಯಾದ ಫಲವನ್ನೂ (ಪೂರ್ಣ ತೊಡಗಿಸಿಕೊಳ್ಳುವಿಕೆಗೆ ಪೂರ್ಣ ತೃಪ್ತಿ ಯಾ  ಆನಂದವನ್ನು) ದಯಪಾಲಿಸಬಲ್ಲದು. ನಿರಂತರ ನಮ್ಮ ಮನೋಬುದ್ದ್ಯಾದಿಗಳ ಗಮನಿಸುವ ಅದೇ... ಆತ್ಮ ಸಾಕ್ಷಿ. ನಾವು ಅದಕ್ಕೆ ಮೋಸ ಮಾಡಲಾಗದು.

ಸಾಕ್ಷೀ ಭಾವದೊಂದಿಗೆ ಯೋಗಾಸನಗಳ ಮಾಡುವುದಾದರೆ ಅದರ ಎಲ್ಲಾ ಪರಿಚಾರಕರು ಸಾಕ್ಷಿಯೊಂದಿಗೆ ಸೇರಿದಂತೇ ಆಯಿತು. ಒಟ್ಟು ಸೇರುವಿಕೆಯೇ ಯೋಗ. ಯಾವ ಯಾವುದೆಲ್ಲಾ ಸೆರಬೇಕೋ ಅವುಗಳೆಲ್ಲಾ ಸೆರಿ ಆಸನದಿಗಳ ಮಾಡುವುದಾದರೆ ಯೋಗ ಮಾಡಿದಂತೆ. ಇಲ್ಲದಿದ್ದರೆ ಬರೀ ವ್ಯಾಯಾಮ ಮಾಡಿದಂತೇ ಆಗಬಹುದಷ್ಟೇ...

 - ಶ್ಯಾಮ ಪ್ರಸಾದ ಮುದ್ರಜೆ


ಇವನ್ನೂ ಓದಿ:

ಅಷ್ಟಾಂಗ ಯೋಗ ಸಾಧನಾ ಮಾರ್ಗ…Visit: Upayuktha Advertisements- A Dedicated place for Your Ads

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು