ನನಗೆ ನೆನಪಿದ್ದಂತೆ ನಮ್ಮ ಹಟ್ಟಿಯಲ್ಲಿ ಇದ್ದದ್ದು ಸಿಂಧಿ ದನಗಳು ಮತ್ತು ಎಮ್ಮೆಗಳು. ಗರ್ಭಧಾರಣೆಗಾಗಿ ಸಿಂದಿ ಹೋರಿ ಮತ್ತು ಒಂದು ಕೋಣ ಇತ್ತು. ಮಲೆನಾಡು ಗಿಡ್ಡ ಹಸುಗಳು ನಮ್ಮ ಹಟ್ಟಿಯಲ್ಲಿ ಆಗಲೇ ಹೊರಟು ಹೋಗಿದ್ದುವು. ಕಾರಣ ಪುತ್ತೂರು ಪೇಟೆಯಲ್ಲಿನ ಕೆಲವು ಹೋಟೆಲಿಗೆ ನಮ್ಮ ಹಾಲೇ ಬೇಕಿತ್ತು. ಆಗಂತೂ ಎಮ್ಮೆ ಹಾಲಿಗೆ ಡಿಮಾಂಡಪ್ಪೋ ಡಿಮಾಂಡ್. ಗೊಬ್ಬರದ ಹಟ್ಟಿ ಮಳೆಗಾಲದಲ್ಲಂತೂ ನುಸಿ ನೊಣ ಗುಯಿ ಗುಟ್ಟಿಕೊಂಡು ಇರುತ್ತಿದ್ದವು. ನಮ್ಮಪ್ಪ ಬೆಳಿಗ್ಗೆ ನಾಲ್ಕು ಗಂಟೆಯ ಮೇಲೆ ನಿದ್ದೆ ಮಾಡುವುದು ಅಪರಾಧ ಎಂದು ತಿಳಿದಿದ್ದರು. ಹಾಗೇ ಎದ್ದು ಹಾಲು ಕರೆದು 7 ಗಂಟೆಯ ಒಳಗೆ ಪುತ್ತೂರು ಪೇಟೆಗೆ ಹಾಲು ತಲುಪಿಸುವ ವ್ಯವಸ್ಥೆ ಮಾಡಿದ್ದರು. ಆಗ ಇದ್ದದ್ದು ಮುರಾ ಎಮ್ಮೆಗಳು. ಬಹು ಸಾಧು ಸ್ವಭಾವದವುಗಳು ಅವುಗಳ ಬೆನ್ನೇರಿ ನಾವು ಮಕ್ಕಳು ಸವಾರಿ ಹೋಗುತ್ತಿದ್ದೆವು. ಸ್ವಲ್ಪ ದೂರದ ತೋಡಿನ ಹಳ್ಳದಲ್ಲಿ ಸ್ನಾನಕ್ಕಾಗಿ ಎಮ್ಮೆಗಳ ಮಾರ್ಚ್ ಫಾಸ್ಟ್ ಇರುತ್ತಿತ್ತು. ನಾವು ಮಕ್ಕಳು ಅದರೊಂದಿಗೆ ಹೋಗಿ ಸ್ನಾನ ಮಾಡಿಸಿ ಬರುತ್ತಿದ್ದೆವು. ಒಟ್ಟಿನಲ್ಲಿ 25 ಸಂಖ್ಯೆಗಿಂತ ಕಮ್ಮಿ ಜಾನುವಾರುಗಳು ಇರಲೇ ಇಲ್ಲ.
ಆಗಿನ ಕಾಲದಲ್ಲಿ ಆದರ್ಶ ಹೈನುಗಾರ ಎಂಬ ಕಾರಣಕ್ಕಾಗಿ ನನ್ನಪ್ಪನಿಗೆ ಪಶುಸಂಗೋಪನಾ ಇಲಾಖೆಯ ಡಾಕ್ಟರ್ ಗಳೊಂದಿಗೆ ಆತ್ಮೀಯ ಸಂಬಂಧ ಇರುತ್ತಿತ್ತು. ಹೀಗಿದ್ದ ನಮ್ಮ ಹಟ್ಟಿಗೆ ನಿಧಾನಕ್ಕೆ ಜರ್ಸಿ ಎಚ್. ಎಫ್. ತಳಿಗಳು ಕೃತಕ ಗರ್ಭಧಾರಣೆಯ ಮೂಲಕ ಎಂಟ್ರಿ ಕೊಟ್ಟವು. ವೈಜ್ಞಾನಿಕವಾಗಿ ದನ ಸಾಕುವ ಬಗ್ಗೆ ಅಪ್ಪನಿಗೆ ಉಚಿತ ಸಲಹೆಗಳು ಬಂತು. ಮಾರುಹೋದರು.
ಉತ್ತಮ ತಳಿಯ ಹೋರಿಗಳನ್ನು ಸಾಕಿ ವೀರ್ಯ ಸಂಗ್ರಹಿಸಿಟ್ಟು ಎಲ್ಲಿಗೆ ಬೇಕಾದರೆ ಅಲ್ಲಿಗೆ ಸಾಗಿಸಿ ಕೃತಕ ಗರ್ಭಧಾರಣೆ ಯನ್ನು ಮಾಡಿ ಕರು ಹಾಕಿಸುವ ತಂತ್ರಜ್ಞಾನವನ್ನು ಬೋಧಿಸಲಾಯಿತು. ಪ್ರತಿಯೊಬ್ಬನೂ ಒಂದೊಂದು ಹೋರಿ ಸಾಕುವ ಬದಲು ಎರಡೆರಡು ದನ ಸಾಕುವುದು ಉತ್ತಮ ಎಂಬ ಸಲಹೆಗಳು ಬಂತು. ಹುಟ್ಟಿದ ಕೂಡಲೇ ಕರುಗಳನ್ನು ತಾಯಿಯಿಂದ ಪ್ರತ್ಯೇಕಿಸಿ ದೂರದಲ್ಲಿ ಕಟ್ಟಿ ಲೆಕ್ಕಾಚಾರದ ಹಾಲು ಕೊಟ್ಟು ಸಾಕಿದಲ್ಲಿ ಕರುಗಳಿಗೆ ಯಾವುದೇ ಸೋಂಕು ಬರಲಾರದು ಎಂಬ ವೈಜ್ಞಾನಿಕತೆಯನ್ನು ತುರುಕಲಾಯಿತು. ಹೈನುಗಾರಿಕೆ ಲಾಭದಾಯಕ ವಾಗಬೇಕಾದರೆ ಯಾವುದೇ ಪಾಪ-ಪುಣ್ಯಗಳಿಗೆ ಅಲ್ಲಿ ಬೆಲೆ ಇರಬಾರದು ಎಂಬ ಹೊಸ ವಾದಕ್ಕೆ ನಾಂದಿ ಹಾಡಲಾಯಿತು. ಹೀಗೆ ಬೆಳೆದ ಆಧುನಿಕ ಹೈನುಗಾರಿಕೆ ಅಪ್ಪನಿಂದ ನನಗೂ ಬೋಧನೆ ಆಯಿತು. 6 ವರ್ಷದ ಹಿಂದಿನವರೆಗೂ ಹೀಗೇ ಮುಂದುವರೆಯಿತು. ಈ ಮಿಶ್ರತಳಿ ಹಸುಗಳು ಬರೀ ಮೊದ್ದುಗಳು. ಕರು ಇಲ್ಲದಿದ್ದರೂ ಹಾಲು ಸುಲಭದಲ್ಲಿ ಕೊಡುತ್ತಿದ್ದುವು.
ಹೆಣ್ಣು ಕರುಗಳನ್ನು ಸ್ವಲ್ಪ ಹೆಚ್ಚಾಗಿ ಹಾಲು ಕುಡಿಸಿ 8-9 ತಿಂಗಳ ಆಗಬೇಕಾದಲ್ಲಿ ಬೆದೆಗೆ ಬರಿಸುವುದರಲ್ಲಿ ಸ್ಪರ್ಧೆಯನ್ನು ನಡೆಸುತ್ತಿದ್ದೆವು. 2 ವರ್ಷದ ಒಳಗೆ ಹೆಣ್ಣು ಕರುಗಳು ಕರು ಹಾಕಿದಲ್ಲಿ ಇಲಾಖೆಯಿಂದ ಬಹುಮಾನವು ಸಿಗುತ್ತಿತ್ತು. ಗಂಡು ಕರುಗಳು ಮಾತ್ರ ಎರಡು ತಿಂಗಳಿಗಿಂತ ಜಾಸ್ತಿ ಸೂರ್ಯೋದಯವನ್ನು ನೋಡುತ್ತಿರಲಿಲ್ಲ. ಹುಟ್ಟಿದ ಕರುವನ್ನು ಹಗ್ಗದಲ್ಲಿ ಒಮ್ಮೆ ಬಂಧಿಸಿದರೆ ಮತ್ತೆ ಅವು ಹೊರಹೋಗುವುದು ಮಾರಾಟವಾದರೆ ಮಾತ್ರ. ಇಲ್ಲವಾದರೆ ಇಹಲೋಕವನ್ನು ತ್ಯಜಿಸಿದರೆ. ಹಳೆಯ ಬೂಸಾಗಳು ಹಿಂಡಿಗಳು ಮೂಲೆ ಸೇರಿದವು. ಆಧುನಿಕ ಪಶು ಆಹಾರಗಳು ಬಂದುವು. ಪಶು ಆಹಾರಗಳಲ್ಲಿ ನಾನಾ ವೈವಿಧ್ಯಗಳು ಹಾಲು ಕೊಡುವ ದನಕೊಂದು, ಗಬ್ಬದ ದನಕ್ಕೊಂದು, ಕರುಗಳಿಗೆ ಒಂದು, ತುಂಬಾ ಹಾಲು ಕೊಡುವುದಕ್ಕೆ ಇನ್ನೊಂದು, ಹೀಗೆ ಉಪಚಾರಗಳು.
ಎಲ್ಲೆಲ್ಲಿ ತಂತ್ರಜ್ಞಾನಗಳು ಬೆಳೆದುವೊ, ವೈಜ್ಞಾನಿಕತೆ ಹೊಕ್ಕಿತೋ, ಅದರೊಂದಿಗೆ ಸಮಸ್ಯೆಗಳ ಬೆಟ್ಟವೇ ಸೃಷ್ಟಿಯಾಯಿತು. ಗಬ್ಬ ಕಟ್ಟದೆ ಇರುವುದು, ಕರು ಸರಿಯಾಗಿ ಹಾಕದೆ ಇರುವುದು, ಹಾಕಿದರೂ ಕಸ ಬೀಳದೇ ಇರುವುದು, ಹೊಟ್ಟೆಯುಬ್ಬರ, ಕೆಚ್ಚಲು ನೋವು, ಬೆದೆಗೆ ಬಾರದೆ ಇರುವುದು, ಚರ್ಮ ಕಾಯಿಲೆಗಳು, ಸಾಂಕ್ರಾಮಿಕ ರೋಗಗಳು ಬಾರದಂತೆ ಅದಕ್ಕೆ ನಿರೋಧಕಗಳು. ಒಟ್ಟಿನಲ್ಲಿ ವಾರಕ್ಕೊಮ್ಮೆಯಾದರೂ ಡಾಕ್ಟರರ ಭೇಟಿ ಮನೆಗೆ ಆಗಲೇ ಬೇಕಿತ್ತು. ಸಣ್ಣ ವೆಟರ್ನರಿ ಔಷಧಾಲಯ ಮನೆಯಲ್ಲಿ ಇರಲೇಬೇಕಿತ್ತು.
ಈ ಅನೇಕ ಸಮಸ್ಯೆಗಳಿಗೆ ಮೂಲ ಕಾರಣ ನಾವು ಕೊಡುವ ಪಶು ಆಹಾರದಲ್ಲಿ ಇದೆ ಎಂಬುದನ್ನು ಮೊದಲಾಗಿ ಪತ್ತೆಹಚ್ಚಿದವರು ನನಗೆ ಗೊತ್ತಿದ್ದಂತೆ ಡಾಕ್ಟರ್ ಕೆ.ಎಂ. ಕೃಷ್ಣಭಟ್ಟರು. ಸುಮಾರು 20 ವರ್ಷಗಳಿಗೆ ಮುಂಚೆ ಅವರು ಒಂದು ಆಂದೋಲನವನ್ನೇ ನಡೆಸಿದರು ಪಶು ಆಹಾರಗಳಲ್ಲಿ ಬಳಸುವ ಯೂರಿಯಾ ಗೊಬ್ಬರದ ಬಗ್ಗೆ. ಆಗ ಬಿಟ್ಟ ಪಶು ಆಹಾರವನ್ನು ಮತ್ತೆ ನಾನು ಎಂದೂ ಬಳಸಿಲ್ಲ ಆ ಕಾರಣದಿಂದ ಅನೇಕ ಆರೋಗ್ಯ ಸಮಸ್ಯೆಗಳಲ್ಲಿ ಪರಿಹಾರ ಕಂಡುಕೊಂಡೆ.
ಅದೇ ಸಮಯಕ್ಕೆ ಸರಿಯಾಗಿ ಇಂಗ್ಲೆಂಡಿನಲ್ಲಿ ಪಶು ಆಹಾರಕ್ಕೆ ಮಾಂಸವನ್ನು ಮಿಶ್ರಮಾಡಿ ದನಗಳನ್ನು ಮಾಂಸಕ್ಕಾಗಿ ಕಡಿಯ ಹೊರಟರು. ಶುದ್ಧ ಸಸ್ಯಾಹಾರಿಯಾದ ದನಗಳು ಮಾಂಸ ತಿಂದು ಕೊಬ್ಬಿದವು. "ಯುರೇಕಾ" ಎಂದು ವಿಜ್ಞಾನಿಗಳು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡರು. ಆದರೆ ಹೆಚ್ಚು ಸಮಯ ಬೆನ್ನು ತಟ್ಟುವಿಕೆ ಉಳಿಯಲಿಲ್ಲ. ಹುಚ್ಚು ರೋಗ ಕಾಣಿಸಿಕೊಂಡ ದನಗಳು ಹಟ್ಟಿಯಲ್ಲಿ ಹುಚ್ಚೆದ್ದು ಕುಣಿದುವು. ಪರಿಣಾಮ ಮಾಂಸ ತಿನ್ನಿಸಿದ 2 ಲಕ್ಷಕ್ಕಿಂತಲೂ ಹೆಚ್ಚು ಗೋವುಗಳ ಮಾರಣಹೋಮವನ್ನು ಮಾಡಲಾಯಿತು. ಇದೆಲ್ಲಾ ವೈಜ್ಞಾನಿಕತೆ! ಈ ಎಲ್ಲಾ ಸಮಸ್ಯೆಗಳು, ಅದರೊಂದಿಗೆ ಹೋರಾಟ, ನೋಡುತ್ತಾ ನೋಡುತ್ತಾ ಇದ್ದ ನಾನು ಬಿಡುಗಡೆಯ ಕಡೆಗೆ ಮುಖ ಮಾಡಿದೆ.
-ಎ.ಪಿ. ಸದಾಶಿವ ಮರಿಕೆ
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ