ಬದುಕನ್ನು ಹೈರಾಣಾಗಿಸಿದ ಕೊರೊನಾ
ಆರ್ಥಿಕ ಸಮೃದ್ಧಿಯ ಗುರಿಯೊಂದಿಗೆ ಜೋಡಿಸಲ್ಪಟ್ಟ ವೈಜ್ಞಾನಿಕ ಅನ್ವೇಷಣೆಗಳು, ತಂತ್ರಜ್ಞಾನದ ಪ್ರಗತಿ, ವಿಸ್ತಾರಗೊಳ್ಳುತ್ತಿರುವ ಮಾರುಕಟ್ಟೆಗಳು ಮಾನವನ ಹಾಗೂ ಆರ್ಥಿಕತೆಗಳ ಅಭಿವೃದ್ಧಿಯ ಗುರಿಯನ್ನು ಏರಿಸುತ್ತಾ ಹೋಯಿತು. ಎಲ್ಲವೂ ತಮ್ಮ ಮುಷ್ಟಿಯೊಳಗಿದೆ ಎಂದು ಬೀಗುವಾಗ ದುತ್ತನೆ ಗೋಚರಿಸಿ ತನ್ನ ವಿರಾಟರೂಪವನ್ನೆ ಪ್ರದರ್ಶಿಸಿತು ಕೊರೋನಾ ವೈರಸ್. ಮಾರಣಾಂತಿಕ ಕೊರೋನಾ ವೈರಸ್ ಗೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಮಾರಕ ಕೊರೊನಾ ವೈರಸ್ ನಿಂದಾಗಿ ಆರ್ಥಿಕತೆಗಳ ಮೇಲೆ ಇನ್ನಿಲ್ಲದಂತೆ ಮೇಲಿಂದ ಮೇಲೆ ತೀವೃವಾದ ಹೊಡೆತ ಬೀಳುತ್ತಲೇ ಇದೆ. ಹೋದೆಯಾ ಎಂದಾಗ ಬಂದೆ ಗವಾಕ್ಷಿಯೊಳಗಿನಿಂದ ಎಂತಾಗಿದೆ ಕೊರೋನಾದ ಎರಡನೇ ಅಲೆಯ ಹೊಡೆತ. ಮುಂದೆ ಮೂರನೇ ಅಲೆಯೂ ಇದೆ ಎಂದು ಎಚ್ಚರಿಸುತ್ತಿದ್ದಾರೆ ವಿಜ್ಞಾನಿಗಳು. ಈ ಎಚ್ಚರಿಕೆಗಳು ಎಲ್ಲರ ಎದೆಬಡಿತವನ್ನಂತೂ ಹೆಚ್ಚಿಸಿದೆ.
2020ರ ಮಾರ್ಚಿನಲ್ಲಿ ಕೋವಿಡ್-19 ಬಿಕ್ಕಟ್ಟು ಕಾಣಿಸಿಕೊಂಡ ಮೇಲೆ ವಿಶ್ವದಲ್ಲೇ ಅತ್ಯಂತ ಕಠಿಣವಾದ ಲಾಕ್ ಡೌನ್ ಅನ್ನು ಭಾರತದಲ್ಲಿ ಹೇರಲಾಯಿತು. ಬೇಡಿಕೆ ಕುಸಿತ, ಉತ್ಪಾದನೆ ಕುಂಠಿತ, ಉದ್ಯೋಗ ಕಡಿತ, ಜಿಡಿಪಿ ಇಳಿಕೆ ಎಂಬ ಸುದ್ದಿಗಳು ದಿನನಿತ್ಯದ ಮಾತಾಗಿದೆ. ಇದರಿಂದಾಗಿ ಜಿಡಿಪಿಯಲ್ಲಿ ಶೇ 24ರಶ್ಗ್ಟು ಕುಸಿಯಿತು. ಈ ವರ್ಷದ ಮಾರ್ಚ್ ಆರಂಭದಿಂದ ಕೊರೊನಾ ಎರಡನೇ ಅಲೆ ತಲೆ ಎತ್ತಿದೆ. ಸೋಂಕು ಪ್ರಕರಣಗಳು ಹೆಚ್ಚುತ್ತಿವೆ. ಕೋವಿಡ್ ಪ್ರಕರಣಗಳ ಸರದಿಯನ್ನು ಮುರಿಯುವ ಸಲುವಾಗಿ ಹಲವು ರಾಜ್ಯಗಳಲ್ಲಿ ಸ್ಥಳೀಯ ನಿರ್ಬಂಧಗಳನ್ನು ಹೇರಿದೆ. ಒಂದು ಕಡೆ ಕೋವಿಡ್-19ರ ಆತಂಕ, ಇನ್ನೊಂದೆಡೆ ಲಾಕ್ ಡೌನ್. ಇವೆರಡೂ ಮನುಷ್ಯರಲ್ಲಿ ಹಾಗೂ ದೇಶಗಳಲ್ಲಿ ಸಹಜವಾಗಿ ಆತಂಕ ಮೂಡಿಸುತ್ತದೆ. ಕಣ್ಣಿಗೆ ಕಾಣದ ವೈರಸ್ ಜನಸಾಮಾನ್ಯರ ಬದುಕನ್ನು ಹೈರಾಣಾಗಿಸಿದೆ.
ನಿಸ್ತೇಜವಾದ ಆರ್ಥಿಕತೆ:
ಕೊರೋನಾ ಸೋಂಕಿನ ಹರಡುವಿಕೆಯನ್ನು ತಡೆಯಲು ಲಾಕ್ ಡೌನ್ ಎಂಬ ಮನುಕುಲದ ಇತಿಹಾಸದಲ್ಲಿಯೇ ಅಭೂತಪೂರ್ವವಾದ ಅಸ್ತ್ರ ಬೆಳಕಿಗೆ ಬಂತು. ಸಾಮಾಜಿಕ ಅಂತರವನ್ನು ಜಾರಿಗೊಳಿಸಲು ಜನರನ್ನು ಅಂಗಳದಿಂದ ಆಚೆ ಬರಲು ಬಿಡದೆ ಆರ್ಥಿಕ ಚಟುವಟಿಕೆಗಳನ್ನು ಮೊಟಕುಗೊಳಿಸಲಾಗಿದೆ. ಕೋವಿಡ್-19 ಏಕಾಏಕಿ ಅಪಾರ ಮಾನವ ಸಂಕಟ ಮತ್ತು ಮಹಾ ಆರ್ಥಿಕ ಸವಾಲುಗಳಿಂದ ಹಪಹಪಿಸುತ್ತಿವೆ.
ಮೊದಲು ಜೀವ, ಮತ್ತು ಜೀವನ:
ವಿನಾಶಕಾರಿ ಕೊರೋನಾದ ನಿಯಂತ್ರಣ ಅದರ ಸೋಂಕನ್ನು ತಡೆಗಟ್ಟುವಲ್ಲಿ ಅಡಕವಾಗಿದೆ. ಮಹಾಮಾರಿ ಕೊರೋನಾದ ಕಬಂಧಬಾಹುಗಳಿಂದ ಜನರ ಜೀವವನ್ನು ರಕ್ಷಿಸುವುದು ಮಹತ್ವದ್ದಾಗಿದೆ. ಜೀವರಕ್ಷಣೆ ನಮ್ಮ ಮೊದಲ ಆದ್ಯತೆ ಎಂದುಕೊಂಡು ಆರ್ಥಿಕತೆಗೆ ಆಗಬಹುದಾದ ನಷ್ಟವನ್ನೂ ಪರಿಗಣಿಸದೆ ಬದುಕಿ ಉಳಿದರೆ ಮುಂದೆ ಬದುಕು ಕಟ್ಟಿಲೊಳ್ಳಬಲ್ಲೆವು ಎಂಬ ಆತ್ಮವಿಶ್ವಾಸದಿಂದ ಲಾಕ್‍ಡೌನ್ ನಂತಹ ದಿಟ್ಟ ಕ್ರಮವನ್ನು ಕೈಗೊಳ್ಳಲು ಸರಕಾರ ಮೀನ ಮೇಷ ಎಣಿಸಲಿಲ್ಲ.
1929ರ ಮಹಾ ಆರ್ಥಿಕ ಮುಗ್ಗಟ್ಟು ಪರಿಣಾಮಕಾರಿ ಬೇಡಿಕೆಯನ್ನು ತಗ್ಗಿಸಿ ಆರ್ಥಿಕತೆಗೆ ಹೊಡೆತ ನೀಡಿದರೆ ಕೊರೋನಾ ಸೋಂಕು ತಡೆಗಟ್ಟುವಲ್ಲಿ ಅನಿವಾರ್ಯವಾಗಿ ಕೈಗೊಂಡ ಲಾಕ್‍ಡೌನ್ ಅರ್ಥಾತ್ ಆರ್ಥಿಕ ಚಟುವಟಿಕೆಗಳ ಸ್ಥಗಿತತೆ ಆರ್ಥಿಕ ಹಿಂಜರಿತದ ಕರಿನೆರಳು ಚಾಚುವಂತೆ ಮಾಡಿದೆ.
ಮಾರುಕಟ್ಟೆ ಆರ್ಥಿಕತೆಯ ಎರಡು ಕೈಗಳಾದ ಪೂರೈಕೆ ಹಾಗೂ ಬೇಡಿಕೆ ಎರಡನ್ನೂ ಕೊರೊನಾ ಲಾಕ್‍ಡೌನ್ ಕಟ್ಟಿಹಾಕಿದೆ. ಬೇಡಿಕೆಯ ದೃಷ್ಟಿಯಿಂದ ವ್ಯಾಪಾರ, ಕೃಷಿ, ಸಾರಿಗೆ, ಪ್ರವಾಸೋದ್ಯಮ, ಹೋಟೇಲ್, ಕ್ರೀಡೆ ಮತ್ತು ಹಣಕಾಸು ವಲಯಗಳು ಬಹಳ ಸಂಕಷ್ಟಕ್ಕೀಡಾಗಿದೆ. ಪೂರೈಕೆ ಹಾಗೂ ಬೇಡಿಕೆಗಳೆರಡೂ ಹೊಡೆತಕ್ಕೊಳಗಾಗಿ ಆರ್ಥಿಕತೆಯು ನಿಶ್ಚಲವಾಗಿ ಆರ್ಥಿಕ ಹಿಂಜರಿತಕ್ಕೆ ಭಾಷ್ಯವನ್ನು ಬರೆದಿದೆ. ಖಾಲಿಯಾದ ಕಿಸೆಗಳು ಅಂಚಿನಲ್ಲಿ ಜೀವನ ಮಾಡುವ ಕುಟುಂಬಗಳನ್ನು ಬಡತನ ರೇಖೆಯ ಕೆಳಗೆ ಕೊಂಡೊಯ್ದದ್ದಂತೂ ಸತ್ಯ.
ಚಿಂತನೆಗೆ ಹಚ್ಚಿದ ದಿವಾಳಿತನ:
ಅನಿವಾರ್ಯವಾಗಿ ಲಾಕ್ ಡೌನ್ ತಂತ್ರವನ್ನು ಅಳವಡಿಸಿದಾಗ ಬಹಳಷ್ಟು ನಿರೀಕ್ಷಿತ ಹಾಗೂ ಅನಿರೀಕ್ಷಿತ ಸ್ಥಿತ್ಯಂತರಗಳಿಗೆ ನಾವು ಮೂಖಪ್ರೇಕ್ಷಕರಾದೆವು. ಒಂದು ದಿನ ಪೇಟೆಗೆ, ಅಂಗಡಿ ಸುತ್ತಲು ಹೋಗದಿದ್ದರೆ ಏನೋ ಕಳಕೊಂಡಂತಹ ಭಾವನೆ. ಲಾಕ್ ಡೌನ್ ಸಮಯದಲ್ಲಂತೂ ಅನಗತ್ಯ ಓಡಾಟವನ್ನು ನಿಯಂತ್ರಿಸುವುದೇ ಒಂದು ಹರಸಾಹಸವಾಗಿದೆ. ಒಬ್ಬೊಬ್ಬರದು ಒಂದೊಂದು ಸಬೂಬು. ಅಚ್ಚರಿಯೆಂದರೆ ಪ್ರತಿ ದಿನ ಬೆಳಿಗ್ಗೆ ಹೆಚ್ಚಿನವರು ಪೇಟೆಗೆ ಹಾಜರ್. ಹಾಲು ಮನೆಗೇ ಬರುತ್ತೆ, ಆದರೆ ತರಕಾರಿ, ಜೀನಸು ತರಬೇಕಲ್ಲಾ!. ಮತ್ತೆ ನಾಳೆ ನಿಯಮ ಬದಲಾದರೆ ಮನೆಯಲ್ಲಿ ರೇಶನ್ ಕಡಿಮೆಯಾಗಬಾರದಲ್ಲ ಎಂದುಕೊಂಡು ಅಗತ್ಯಕ್ಕಿಂತ ಜಾಸ್ತಿನೇ ಕೊಂಡುಕೊಂಡು ಮನೆಯಲ್ಲಿ ಪೇರಿಸಿ ಇಟ್ಟು, ಅನಾವಶ್ಯಕವಾಗಿ ಮಾರುಕಟ್ಟೆಯಲ್ಲಿ ಕೃತಕ ಕೊರತೆ ಸೃಷ್ಟಿಸಿಯೂ ಆಯ್ತು.
ಮನೆಯಿಂದ ಹೊರಗೆ ಹೋಗದೆ, ಎಲ್ಲರೂ ಸಾಮಾಜಿಕ ಜಾಲತಾಣದಲ್ಲಿ ಬೀಜಿû, ತಲೆಗೊಂದು ಅಭಿಪ್ರಾಯ, ಒಟ್ಟಾರೆಯಾಗಿ ಸಿಕ್ಕಿದ ಮಾಹಿತಿ ಯಾವುದು ಸತ್ಯ ಯಾವುದು ಮಿಥ್ಯ ಒಂದೂ ತಿಳಿಯದಂತಾಯಿತು. ನಾಲ್ಕು ಗೋಡೆಗಳ ನಡುವೆ ಬಂದಿಯ ತೆರನಾದ ಬದುಕು ನಮ್ಮನ್ನು ಆತ್ಮಾವಲೋಕನ ಮಾಡುವಂತೆ ಮಾಡಿದೆ.
ನೆಮ್ಮದಿಯ ಹುಡುಕಾಟದಲ್ಲಿ
ಗಿಜಿಗಿಜಿಗುಟ್ಟುವ ಜಾತ್ರೆ, ಸಂಬ್ರಮದ ಕೌಟುಂಬಿಕ ಕಾರ್ಯಕ್ರಮ, ಸಾಮಾಜಿಕ ಸಮಾವೇಶ ಮೊದಲಾದುವು ಇಲ್ಲದೆ ಸಾಮಾನ್ಯವಾಗಿ ನಮ್ಮಲ್ಲಿ ಏಕಾಂಗಿತನ, ಏಕಾತನತೆ ಮೂಡಿ ಜೀವನ ಅಸಹನೀಯವಾಗತೊಡಗಿದೆ. ಹಾಗಾದರೆ ನೆಮ್ಮದಿ ನಮ್ಮ ನಮ್ಮ ಮನೆಯಲ್ಲಿ ಕಂಡುಕೊಳ್ಳಲು ಸಾಧ್ಯವಿಲ್ಲವೇ?; ನಮ್ಮ ಹಿರಿಯರು ವಾರಗಟ್ಟಲೆ ಪೇಟೆಗೆ ಹೋಗದೆ ಸಂತೃಪ್ತಿಯ ಜೀವನ ನಡೆಸಲಿಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ಹೌದು ನಾಲ್ಕು ದಶಕಗಳ ಮೊದಲು ತಿಂಗಳಿಗೊಮ್ಮೆ ಜೀನಸು ತರುವ ಪರಿಪಾಠ ಇತ್ತು ಎಂಬುದು ನಮಗೆಲ್ಲಾ ತಿಳಿದ ವಿಚಾರವೇ. ನಮ್ಮ ತಾತನ ಕಾಲದಲ್ಲಿ ಅಂದರೆ ಆರೇಳು ದಶಕಗಳ ಮೊದಲು ವರ್ಷಕ್ಕೊಮ್ಮೆ ಎತ್ತಿನ ಗಾಡಿಯಲ್ಲೋ, ತಲೆಹೊರೆಯಾಗಿಯೋ ಜೀನಸು ಮನೆ ತಲುಪುತ್ತಿತ್ತು ಎಂದು ಹೇಳುತ್ತಿದ್ದರು. ತಾವು ಬೆಳೆದ ವಸ್ತುಗಳನ್ನು ಪೇಟೆಯಲ್ಲಿ ಮಾರಿ, ಬರುವಾಗ ವರ್ಷಕ್ಕೆ ಬೇಕಾದಷ್ಟು ಜೀನಸು ಮನೆಯ ಅಟ್ಟ ಸೇರುತ್ತಿತ್ತು.
ಪ್ರತಿದಿನ ಪೇಟೆಗೆ ಹೋಗಿ ಖರೀದಿ ಮಾಡುವುದಾದರೂ ಏನನ್ನು. ಇದಕ್ಕೆ ಇನ್ನೂ ಹೆಚ್ಚಿನದಾಗಿ ವಾರಕ್ಕೊಮ್ಮೆ ಮೋಜಿಗಾಗಿ ಶಾಪ್ಪಿಂಗ್ ಪರಿಪಾಠವೂ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ವಾರಕ್ಕೊಮ್ಮೆ ಎಲ್ಲರೂ ಒಟ್ಟಾಗಿ ಹೋಟೇಲ್ ತಿಂಡಿ, ಯಾಕಂದರೆ ದಿನಾ ಮನೆ ಊಟ ಸಾಕಾಗಿಹೋಗಿದೆ ಎಂಬ ಭಾವ. ನಾವು ದುಡಿದ ಹೆಚ್ಚಿನ ಭಾಗ ಅಗತ್ಯಗಳನ್ನು ಪೂರೈಸುವ ಬದಲು ದುಂದುವೆಚ್ಚಕ್ಕೇ ಮೀಸಲಾಗಿಬಿಟ್ಟಿರುವುದು ಖೇದಕರ. ಯಾಕೆ ಹೀಗಾಯಿತು ಎನ್ನುವುದೇ ಇಂದಿನ ಯಕ್ಷ ಪ್ರಶ್ನೆಯಾಗಿದೆ.
ಬಜೆಟ್ ಪರಿಕಲ್ಪನೆಯೇ ಇಲ್ಲ:
ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ನಾಣ್ಣುಡಿ ಈಗ ಸವಕಳಿ ನಾಣ್ಯ ಆಗಿಬಿಟ್ಟಿದೆ. ಕಾಲು ಉದ್ದ ಇದ್ದಷ್ಟೂ ಹಾಸಿಗೆ ಎಳೆಯುವ ಪ್ರವೃತ್ತಿ ಸಾಮಾನ್ಯವಾಗಿ ಬಿಟ್ಟಿದೆ. ಇಂದಿನ ಯುವಜನರಲ್ಲಿ ಶೋಕಿತನ, ದುಂದುವೆಚ್ಚ ಹೆಚ್ಚಾಗುತ್ತಿದೆ ಎಂಬ ಅಭಿಪ್ರಾಯ ಮನೆಯ ಹಿರಿಯರದು ಮಾತ್ರವಲ್ಲ ಮಾರುಕಟ್ಟೆಯನ್ನು ಸಮೀಪವಾಗಿ ಅಧ್ಯಯನ ಮಾಡಿದಾಗ ಇದು ವೇದ್ಯವಾಗುತ್ತದೆ.
ವೈಯುಕ್ತಿಕ ಆದಾಯ ಹಾಗೂ ವೆಚ್ಚಗಳ ಮೇಲೆ ಬಜೆಟ್ ಇಲ್ಲ ಹಾಗೂ ಖರ್ಚಿನ ಮೇಲೆ ಹಿಡಿತವೂ ಇಲ್ಲದಿರುವುದು ಹತ್ತು ಹ್‍ಲವು ಸಮಸ್ಯೆಗಳಿಗೆ ನಾಂದಿಯಾಗಿದೆ. ಸಂಪಾದಿಸಿದ ಹಣದ ನಿರ್ವಹಣೆಯಲ್ಲಿ ಸೋಲುತ್ತಿದ್ದಾರೋ ಎಂಬ ಅನುಮಾನ ಹೆಚ್ಚುತ್ತಾ ಇದೆ.
ಉಳಿತಾಯ ಎಂದರೇನು?
ಈ ಪ್ರಶ್ನೆಗೆ ದೊರೆಯುವ ಸಾಮಾನ್ಯವಾಗಿ ಸಿಗುವ ಉತ್ತರ ಆದಾಯದಿಂದ ವೆಚ್ಚವನ್ನು ಕಳೆದಾಗ ಸಿಗುವುದೇ ಉಳಿತಾಯ ಎನ್ನುವಾಗ ಅಚ್ಚರಿಯಾಗುತ್ತದೆ. ಹಣಕಾಸಿನ ನಿರ್ವಹಣೆಯ ತಜ್ಞರ ಪ್ರಕಾರ ಆದಾಯದಿಂದ ಮೊದಲು ನಿರ್ಧಿಷ್ಟ ಉಳಿತಾಯದ ಮೊತ್ತವನ್ನು ತೆಗೆದಿರಿಸಿ ಉಳಿದ ಹಣವನ್ನಷ್ಟೇ ನಾವು ವೆಚ್ಚ ಮಾಡಬೇಕು. ಹೆಚ್ಚಿನವರಿಗೆ ಇದು ಅಚ್ಚರಿಯ ಸಲಹೆ ಆದೀತು. ನಾವು ಗಳಿಸಿದ ಹಣ ನಮ್ಮ ಖರ್ಚಿಗೆ ಇಲ್ಲದಿದ್ದರೆ ಅದು ಯಾಕೆ ಎಂಬ ಮನೋಭಾವ ಹೆಚ್ಚಿನವರದ್ದು. ಈ ಮನೋಭಾವವೇ ದುಂದುವೆಚ್ಚಕ್ಕೆ ಮೂಲ ಕಾರಣ.
ಉಳಿಕೆ ಗಳಿಕೆಗೆ ಸಮಾನ. ಆಪತ್ಕಾಲದಲ್ಲಿ ನಮ್ಮ ನಿಜವಾದ ಸ್ನೇಹಿತ ಅವನೇ. ದುಂದುವೆಚ್ಚ ಬೇಡ, ದೂರದೃಷ್ಟಿ ಇರಲಿ. ಹೌದು ಜಾಗತೀಕರಣ ಮತ್ತು ವಿದೇಶಿ ಜೀವನ ಶೈಲಿಗೆ ಮಾರುಹೋಗಿ ನಾವು ಎರವಲಾಗಿ ಪಡೆದ ಕೊಳ್ಳುಬಾಕ ಸಂಸ್ಕೃತಿ ದುಂದುವೆಚ್ಚಕ್ಕೆ ಕಾರಣ. ಶೋಕಿಗಾಗಿ, ಸ್ನೇಹಿತರಿಗಾಗಿ, ಇಲ್ಲದ ಪೊಳ್ಳು ಗೌರವಕ್ಕಾಗಿ ದುಂದುವೆಚ್ಚಕ್ಕೆ ಬಲಿ ಬೀಳುವ ನಾವು ಮೊದಲಿಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕಾದುದು ಅತೀ ಅಗತ್ಯ.
ತಿಂಗಳ ಖರ್ಚು ಕಡಿಮೆ ಮಾಡಿ:
ಹೆಚ್ಚಿನವರಿಗೆ ನಿತ್ಯ ಪೇಟೆಗೆ ಹೋಗಿ ಏನಾದರೂ ವಸ್ತುವನ್ನು ಅಗತ್ಯವಿಲ್ಲದಿದ್ದರೂ ಖರೀದಿ ಮಾಡುವುದು ರೂಢಿಯಾಗಿದೆ. ಇದರಿಂದ ನಮ್ಮ ಆದಾಯದ ದೊಡ್ಡ ಪಾಲು ನಷ್ಟವಾಗುತ್ತದೆ. ಹೀಗಾಗಿ ಖರ್ಚು ಬದಲು ಉಳಿತಾಯ ಮಾಡೋಣ. ಉಳಿತಾಯದ ದಾರಿಗಳನ್ನು ಕಂಡುಕೊಂಡು ಸುರಕ್ಷಿತ ಯೋಜನೆಗಳಲ್ಲಿ ತೊಡಗಿಸೋಣ. ಮಿತವ್ಯಯ, ಉಳಿತಾಯ ಹಾಗೂ ಹೂಡಿಕೆ ನಮ್ಮ ನಿರಂತರ ಅಭ್ಯಾಸವಾಗಲಿ.
ಧರ್ಮಂ ಪ್ರಧಾನಂ:
ಧರ್ಮ, ಅರ್ಥ, ಕಾಮ, ಮೋಕ್ಷ-ಇವು ನಾಲ್ಕು ಭಾರತೀಯ ದಾರ್ಶನಿಕರು ಒಪ್ಪಿಕೊಂಡಿರುವ ಜೀವನ ಮೌಲ್ಯಗಳು. ಇವುಗಳಲ್ಲಿ ಮೋಕ್ಷ ಅಲೌಕಿಕವಾದುದು. ಉಳಿದ ಮೂರು ಲೌಕಿಕವಾದುದು. ಈ ಮೂರರಿಂದಲೇ ಲೌಕಿಕವಾದ ಸಿದ್ಧಿಯನ್ನು ಹಾಗೂ ಉತ್ತರೋತ್ತರ ಅಲೌಕಿಕ ಸಿದ್ಧಿಯನ್ನು ಪಡೆಯಬಹುದಾಗಿದೆ. ಆದಿಕವಿ ಪಂಪ ಈ ಮೂರರ ಪರಸ್ಪರ ಸಂಬಂಧ ಹೇಗಿರಬೇಕೆಂದು ಹೀಗೆ ಆದಿಪುರಾಣದಲ್ಲಿ ಸೂತ್ರೀಕರಿಸಿದ್ದಾನೆ. ಧರ್ಮಂ ಪ್ರಧಾನಮರ್ಥ; ಧರ್ಮಾಂಘ್ರಿಪ ಫಲಮದರ್ಕೆರಸಮದು ಕಾಮಂ. ಈ ಆದರ್ಶ ಸಂದೇಶವನ್ನು ತಮ್ಮ ಪೂರ್ವಿಕರು ತಮ್ಮ ನಡವಳಿಕೆಗಳ ಮೂಲಕ ನೀಡಿದ್ದಾರೆ. ಚಾಣಕ್ಯ ಸೂತ್ರೀಕರಿಸಿದಂತೆ ಸುಖದ ಮೂಲ ಧರ್ಮ, ಧರ್ಮದ ಮೂಲ ಅರ್ಥ, ಅರ್ಥದ ಮೂಲ ರಾಜ್ಯ, ರಾಜ್ಯದ ಮೂಲ ಇಂದ್ರಿಯನಿಗ್ರಹ.
ಬಯಕೆಯ ಕಾರ್ಮೋಡ ಬಿಸಿಲಗುದುರೆ ಏರಿ ಮರೀಚಿಕೆಯ ಬೆನ್ನುಹತ್ತಿದೊಡೆ ಕಾಣುವುದೆಲ್ಲಾ ಕನಸಲ್ಲದೆ ಮತ್ತೇನು ಎಂಬ ಮಾತು ಆಗಾಗ ಗುಣಗುಣಿಸುತ್ತಿದೆ. ಜಾಣಮರೆವಿನ ಕಾರಣ ಸುಖದ ಬೆಂಬತ್ತಿ ಸಾಗುತ್ತಿದ್ದ ನಮಗೆ ದುತ್ತನೆ ಬಂದೆರಗಿದ ಕೊರೊನಾ ಹಿರಿಯರ ಮಾರ್ಗದರ್ಶಿ ಸೂತ್ರದ ಮಹತ್ವವನ್ನರಿಯುವಂತೆ ಮಾಡಿದೆ. ಮಾರುಕಟ್ಟೆಯ ಆಕರ್ಷಣೆಗೆ ಬಲಿಬೀಳದೆ, ಆಯವ್ಯಯಗಳ ಮೇಲೆ ಹಿಡಿತ ಸಾಧಿಸಿ ಮುನ್ನಡೆದಾಗ ಜೀವನದ ಏರಿಳಿತಗಳನ್ನು ಅನಾಯಾಸವಾಗಿ ನಿರ್ವಹಿಸಬಹುದು ಎಂಬ ಸತ್ಯದ ಅರಿವಾಗತೊಡಗಿದೆ. ನಮ್ಮ ಹಿರಿಯರು ಪ್ರತಿಪಾದಿಸಿದ ಮೌಲ್ಯಗಳು ನಮಗೆ ಮಾರ್ಗದರ್ಶಿಯಾದಾಗ ಮಾತ್ರ ಇಂದಿನ ಹಲವು ಸ್ವಯಂಕೃತ ಚೌಕಟ್ಟುಗಳಿಂದ ಹೊರಬಂದು ನೆಮ್ಮದಿಯ ಬಾಳನ್ನು ನಮ್ಮದಾಗಿಸಬಹುದು. ಹಿರಿಯರ ಜೀವಾನುಭವವೇ ನಮಗಿಂದು ದಾರಿದೀಪ: ಇದು ಕೊರೊನಾ ಕಲಿಸಿದ ಪಾಠ.
-ಡಾ.ಎ.ಜಯಕುಮಾರ ಶೆಟ್ಟಿ
ಶ್ರೀ.ಧ. ಮಂ.ಕಾಲೇಜು, ಉಜಿರೆ
9448154001
ajkshetty@sdmcujire.in
Worth reading article sir
ಪ್ರತ್ಯುತ್ತರಅಳಿಸಿಕಾಮೆಂಟ್ ಪೋಸ್ಟ್ ಮಾಡಿ