ಒಂದು ಯಶಸ್ವಿ ಉದ್ಯಮವನ್ನು ಮುನ್ನಡೆಸಬೇಕಾದರೆ ಉತ್ತಮ ಶೈಕ್ಷಣಿಕ ಹಿನ್ನೆಲೆ ಮತ್ತು ಹಣಕಾಸಿನ ಬೆಂಬಲ ಅತ್ಯಗತ್ಯ. ಅನಿರೀಕ್ಷಿತ ಸವಾಲುಗಳನ್ನೆದುರಿಸಲು ಇವು ಸಹಾಯ ಮಾಡುತ್ತವೆ. ಆದರೆ ಹತ್ತನೆ ತರಗತಿ ಮಾತ್ರ ಕಲಿತ ಹುಡುಗನೊಬ್ಬ ತನಗೆದುರಾದ ಪ್ರತಿಕೂಲ ಪರಿಸ್ಥಿತಿಗಳನ್ನೆಲ್ಲ ತನ್ನ ಅನುಕೂಲಕ್ಕೆ ತಕ್ಕಂತೆ ಪರಿವರ್ತಿಸಿಕೊಂಡು ಯಶಸ್ವಿ ಉದ್ಯಮವನ್ನು ಆರಂಭಿಸಿ ಮುನ್ನಡೆಸಿದ ಯಶೋಗಾಥೆ ಬಾಲಾಜಿ ವೇಫರ್ಸ್ ನ ಮಾಲೀಕ ಚಂದು ಭಾಯ್ ವಿರಾನಿಯವರದ್ದು. ಭೀಕರ ಬರಗಾಲಕ್ಕೆ ಸಿಲುಕಿ ತನ್ನ ಜಮೀನನ್ನೆ ಮಾರಿದ ಕುಟುಂಬ ಇಂದು ವಾರ್ಷಿಕ 2 ಸಾವಿರ ಕೋಟಿ ವ್ಯವಹಾರ ನಡೆಸುವ ಉದ್ಯಮದ ಒಡೆಯರಾದ್ದು ಒಂದು ಅಚ್ಚರಿಯೇ ಸರಿ.
ಗುಜರಾತ್ ನ ಜಾಮ್ ನಗರ ಜಿಲ್ಲೆಯ ಕಾಲವಡ ತಾಲೂಕಿನ ದುಂಡೋರಾಜಿಯ ಪೋಪಟ್ ರಾಮ್ಜಿ ವಿರಾನಿಗೆ ಮೂವರು ಮಕ್ಕಳು ಮೇಘ್ಜಿ ಭಾಯ್, ಚಂದು ಭಾಯ್ ಮತ್ತು ಬೀಕು ಭಾಯ್. 1972 ರ ಸುಮಾರಿಗೆ ಗುಜರಾತ್ ನಲ್ಲಿ ಭೀಕರ ಬರಗಾಲ. ಪೋಪಟ್ ರಾವ್ ವಿರಾನಿಗೆ ಬೇಸಾಯ ಮಾಡಲು ಕಷ್ಟವಾಗುತ್ತದೆ. ಬರ ಜನರನ್ನು ದಿಕ್ಕೆಡಿಸುತ್ತದೆ. ತನ್ನ ಜಮೀನು ಮಾರಿದ ಪೋಪಟ್ ರಾವ್ ಮೂವರು ಮಕ್ಕಳಿಗೆ ತಲಾ ರೂ.20,000 ನೀಡುತ್ತಾರೆ. ಮಕ್ಕಳು ಉದ್ಯೋಗ ಅರಸಿ ರಾಜ್ ಕೋಟ್ ಗೆ ಬರುತ್ತಾರೆ. ಚಂದು ಭಾಯ್ ಅಣ್ಣಂದಿರಿಬ್ಬರು ಕೃಷಿ ಸಲಕರಣೆಗಳು ಮತ್ತು ರಸಗೊಬ್ಬರ ಮಾರುವ ವ್ಯವಹಾರ ಆರಂಭಿಸುತ್ತಾರೆ. ಆದರೆ ನಕಲಿ ಉತ್ಪನ್ನಗಳ ಕಾರಣದಿಂದ ನಷ್ಟ ಅನುಭವಿಸುತ್ತಾರೆ.
ಹತ್ತನೇ ತರಗತಿ ಪಾಸಾಗಿದ್ದ ಚಂದು ಭಾಯ್ ಗೆ ಆಗ 15ರ ಹರೆಯ. ಆಸ್ಟ್ರನ್ ಥಿಯೇಟರ್ ನ ಕ್ಯಾಂಟೀನ್ ನಲ್ಲಿ ಕೆಲಸಕ್ಕೆ ಸೇರುತ್ತಾನೆ ಆತ. ಸಿನಿಮಾ ಪೋಸ್ಟರ್ ಅಂಟಿಸುವುದು, ಬಾಗಿಲು ಕಾಯುವುದು ಕೂಡ ಆತನ ಕೆಲಸವಾಗಿತ್ತು ಸಂಬಳ ತಿಂಗಳಿಗೆ 90 ರೂಪಾಯಿ. ರಾತ್ರಿ ಶೋದ ನಂತರ ಥಿಯೇಟರ್ ನ ಚಯರ್ ಗಳನ್ನು ರಿಪೇರಿ ಮಾಡುತ್ತಿದ್ದ ಚಂದು ಭಾಯ್ ಗೆ ಪ್ರತಿಯಾಗಿ ಗುಜರಾತಿ ಚೋಫರಿ ಮತ್ತು ಚಟ್ನಿ ಸಿಗುತ್ತಿತ್ತು. ಬಾಡಿಗೆ ಮನೆಯಲ್ಲಿ ಇದ್ದ ಚಂದುಭಾಯ್ ಗೆ ಒಮ್ಮೆ ಮನೆ ಬಾಡಿಗೆ 50 ರೂಪಾಯಿ ನೀಡಲು ಕಷ್ಟವಾಗಿ ರಾತ್ರೋರಾತ್ರಿ ಹೇಳದೆ ಮನೆ ಖಾಲಿ ಮಾಡಿದ್ದರು. 1 ವರ್ಷದ ನಂತರ ಆ ಸಿನಿಮಾ ಹಾಲ್ ನ ಮಾಲಿಕ 1 ಸಾವಿರ ರೂಗಳ ಬಾಡಿಗೆಯ ಒಪ್ಪಂದ ಮಾಡಿಕೊಂಡು ಕ್ಯಾಂಟೀನನ್ನು ಚಂದು ಭಾಯ್ ಗೆ ಬಿಟ್ಟು ಕೊಡುತ್ತಾನೆ.
ತನ್ನ ಅಣ್ಣನ ಜೊತೆಗೂಡಿ ಚಂದುಭಾಯ್ ಕ್ಯಾಂಟೀನ್ ನಲ್ಲಿ ವಿವಿಧ ತಿಂಡಿಗಳನ್ನು ಮಾಡಲು ಆರಂಭಿಸುತ್ತಾನೆ. ಕ್ಯಾಂಟೀನ್ ಗೆ ವೇಪರ್ಸ್ ನೀಡುವ ವ್ಯಕ್ತಿ ಪ್ರತಿ ಬಾರಿಯೂ ತಡವಾಗಿ ಬರುತ್ತಿರುತ್ತಾನೆ. ಇದು ಸಿನಿಮಾ ವೀಕ್ಷಕರ ಸಿಟ್ಟಿಗೆ ಕಾರಣವಾಗಿತ್ತು. ಆಗಲೇ ಚಂದುಭಾಯ್ ಮನಸ್ಸಲ್ಲಿ ತಾನೇ ಯಾಕೆ ಬಟಾಟೆ ವೇಪರ್ಸ್ ತಯಾರಿಸಬಾರದೆಂಬ ಆಲೋಚನೆ ಹೊಳೆಯಿತು.
1982ರಲ್ಲಿ ಪೋಪಟ್ ರೋವ್ ರ ಇಡೀ ಕುಟುಂಬ ರಾಜ್ ಕೋಟ್ ಗೆ ಬರುತ್ತದೆ. ದೊಡ್ಡ ಕಂಪೌಂಡ್ ಇರುವ ಮನೆಯೊಂದನ್ನು ಬಾಡಿಗೆಗೆ ಹಿಡಿಯುತ್ತದೆ. ಮನೆಯಲ್ಲೆ ಮಸಾಲಾ ಸ್ಯಾಂಡ್ ವಿಚ್ ಗಳನ್ನು ತಯಾರಿಸಿ ಕ್ಯಾಂಟೀನ್ ಗಳಿಗೆ ವಿತರಿಸುವ ಕೆಲಸವನ್ನು ಕುಟುಂಬ ಆರಂಭಿಸುತ್ತದೆ. ಇದರಲ್ಲಿ ಯಶಸ್ಸು ಸಿಗುತ್ತದೆ. ಆದರೆ ಚಂದುಭಾಯ್‌ಗೆ ಬಟಾಟೆ ವೇಪರ್ಸ್ ಮಾರಾಟದಲ್ಲಿ ಮತ್ತಷ್ಟು ಯಶಸ್ಸು ಸಂಪಾದಿಸಬಹುದೆಂಬ ಆಶಾಭಾವನೆ ಬೆಳೆಯುತ್ತದೆ.
ತಡ ಮಾಡದ ಚಂದುಭಾಯ್ ಮನೆಯ ಕಂಪೌಂಡ್ ಬದಿಯಲ್ಲಿ ಸಣ್ಣ ಶೆಡ್ ಹಾಕಿ ಕೇವಲ ರೂ 10,000 ಬಂಡವಾಳದೊಂದಿಗೆ ತನ್ನ ಕ್ಯಾಂಟೀನ್ ಕೆಲಸದ ನಂತರ ವೇಫರ್ಸ್ ತಯಾರಿಸಲು ಆರಂಭಿಸುತ್ತಾರೆ. ವೇಪರ್ಸ್ ತಯಾರಿಸುವ ದೊಡ್ಡ ಮೆಷಿನ್ ಗಳ ಬೆಲೆ ಕೈಗೆಟುಕದ್ದರಿಂದ 5 ಸಾವಿರ ಬೆಲೆಯ ಸಣ್ಣ ಮೆಷಿನ್ ಖರೀದಿಸುತ್ತಾರೆ ಚಂದುಭಾಯ್. ವೇಫರ್ಸ್ ತಯಾರಿಸುವ ನೌಕರ ಪ್ರತಿದಿನ ಬರಲು ತಡವಾಗುತ್ತಿದ್ದರಿಂದ ಪ್ರತಿ ರಾತ್ರಿ ನಿದ್ರೆಗೆಡುವುದು ಅನಿವಾರ್ಯವಾಯಿತು. ಆರಂಭದ ದಿನಗಳಲ್ಲಿ ಅಭ್ಯಾಸ ಬಲದ ಕೊರತೆಯಿಂದ ನಷ್ಟವಾದರೂ ಚಂದುಭಾಯ್ ಎದೆಗುಂದಲಿಲ್ಲ. ಭರವಸೆ ಕಳೆದುಕೊಳ್ಳದೆ ಮುಂದುವರಿಸಿದರು.
ಈ ವೇಳೆಗೆ ಚಂದು ಭಾಯ್ 3 ಕ್ಯಾಂಟೀನ್‌ನ ಮಾಲಿಕರಾದರು. 2 ಆಸ್ಟ್ರನ್ ಥಿಯೇಟರ್ ನಲ್ಲಿದ್ದರೆ ಇನ್ನೊಂದು ಕೋಟೆಚಾ ಬಾಲಕಿಯರ ಪ್ರೌಢಶಾಲೆಯಲ್ಲಿತ್ತು, ಜೊತೆಗೆ 25-30 ಅಂಗಡಿಗಳಿಗೆ ಕೂಡ ವಿತರಿಸಲು ಆರಂಭಿಸುತ್ತಾರೆ. 1984ರ ಸುಮಾರಿಗೆ ತನ್ನ ಬಟಾಟೆ ವೇಪರ್ಸ್ ಗೆ "ಬಾಲಾಜಿ" ಎಂಬ ಬ್ರಾಂಡ್ ನೇಮ್ ನೀಡುತ್ತಾರೆ ಚಂದು ಭಾಯ್. ಗ್ರಾಹಕರ ಸಂಖ್ಯೆ ಹೆಚ್ಚಾದಂತೆ ಸಂಕಷ್ಟಗಳು ಹೆಚ್ಚಾದವು. ಚೆನ್ನಾಗಿಲ್ಲವೆಂದು ಅರ್ಧ ತಿಂದ ಪ್ಯಾಕೇಟನ್ನು ಕೆಲವು ಅಂಗಡಿ ಮಾಲೀಕರು ನೀಡಿದರೆ ಇನ್ನು ಕೆಲವರು ಮುಂಗಡ ಹಣ ನೀಡಿದ್ದೇನೆಂದು ಮೋಸ ಮಾಡುತ್ತಿದ್ದರು. ಉತ್ಸಾಹ ಗುಂದದ ಚಂದು ಭಾಯ್ ವೇಫರ್ಸ್ ನ ಗುಣಮಟ್ಟದಲ್ಲಿ ಮಾತ್ರ ಕಡಿಮೆ ಮಾಡಲಿಲ್ಲ.
ತನ್ನ ಉದ್ಯಮವನ್ನು ಮತ್ತಷ್ಟು ವಿಸ್ತರಿಸಲು ನಿರ್ಧರಿಸಿದ ಚಂದು ಭಾಯ್ ತನ್ನ ಉಳಿತಾಯ ಮತ್ತು ಬ್ಯಾಂಕ್ ಲೋನ್ ಮೂಲಕ 50 ಲಕ್ಷ ಬಂಡವಾಳ ಹೂಡಿ 1989 ರಲ್ಲಿ ಗುಜರಾತ್ ನ ಅತಿ ದೊಡ್ಡ ಬಟಾಟೆ ವೇಫರ್ಸ್ ಫ್ಯಾಕ್ಟರಿ ಆರಂಭಿಸುತ್ತಾರೆ. ಮೆಷಿನ್ ರಿಫೇರಿಗೆ ಬರುವ ಕಂಪನಿ ಇಂಜಿನಿಯರ್ ಗಳ ಕಿರುಕುಳದಿಂದ ಬೇಸತ್ತು ತಾನೇ ರಿಪೇರಿ ಕೂಡ ಕಲಿಯುತ್ತಾರೆ. ಉದ್ಯಮದ ಕೌಶಲ್ಯಗಳನ್ನೆಲ್ಲ ಕಲಿತುಕೊಳ್ಳುತ್ತಾರೆ. ಆರಂಭದ 10 ವರ್ಷಗಳಲ್ಲಿ ದೊಡ್ಡ ಲಾಭ ಸಿಗುವುದಿಲ್ಲ ಚಂದು ಭಾಯ್‌ಗೆ.
1992ರ ಸುಮಾರಿಗೆ ಕಂಪನಿ ಬಾಲಾಜಿ ವೇಪರ್ಸ್ ಪ್ರೈ ಲಿಮಿಟೆಡ್ ಆಗಿ ಬೆಳೆಯುತ್ತದೆ. 3 ಜನ ಸಹೋದರರು ಅದರ ನಿರ್ದೇಶಕರಾಗುತ್ತಾರೆ. ಎದುರಾಳಿಗಳಿಂದ ಸ್ಪರ್ಧೆ ಎದುರಿಸಿದರೂ ಕ್ವಾಲಿಟಿಯಲ್ಲಿ ರಾಜಿ ಮಾಡಿಕೊಳ್ಳದ ಚಂದುಭಾಯ್ ಯಶಸ್ಸಿನ ಹೆಜ್ಜೆಯಿಡುತ್ತಾರೆ. ವಿತರಕರು, ಅಂಗಡಿ ಮಾಲೀಕರು, ಗ್ರಾಹಕರ ಜೊತೆಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುತ್ತಾರೆ. ಗುಣಮಟ್ಟ ಮತ್ತು ಸೇವೆಗೆ ಮೊದಲ ಆದ್ಯತೆ ನೀಡುತ್ತಾರೆ.
ಪ್ರತಿನಿತ್ಯ 10 ಲಕ್ಷ ಕೆ.ಜಿ ಗೂ ಅಧಿಕ ಉತ್ಪನ್ನಗಳನ್ನು ಮಾರುವ ಬಾಲಾಜಿ ವೇಪರ್ಸ್ ಇನ್ನೂ 30 ವಿವಿಧ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. 2008ರಲ್ಲಿ ವಲ್ಸಾದ್ ನಲ್ಲಿ ಗಂಟೆಗೆ 9 ಸಾವಿರ ಬಟಾಟೆ ಸಂಸ್ಕರಿಸುವ ಪ್ಲಾಂಟ್ ಆರಂಭಗೊಳ್ಳುತ್ತದೆ. ಆಗ ಇದು ಏಷ್ಯಾದಲ್ಲೆ ಅತಿ ದೊಡ್ಡ ಪ್ಲಾಂಟ್ ಆಗಿತ್ತು.
2016ರಲ್ಲಿ ಇಂದೋರ್‌ನಲ್ಲಿ ಇನ್ನೊಂದು ಪ್ಲಾಂಟ್ ಆರಂಭಿಸುವ "ಬಾಲಾಜಿ ವೇಪರ್ಸ್" ಗುಜರಾತ್, ಮಹಾರಾಷ್ಟ್ರ, ರಾಜಸ್ತಾನ ಹಾಗೂ ಗೋವಾದ 60% ಮಾರ್ಕೆಟ್ ಶೇರನ್ನು ಹೊಂದಿದೆ.
5 ಸಾವಿರ ನೌಕರರನ್ನು ಹೊಂದಿರುವ ಕಂಪನಿಯ ಅರ್ಧದಷ್ಟು ನೌಕರರು ಮಹಿಳೆಯರು.6 ಮೈನ್ ಡೀಲರ್ಸ್, 700 ವಿತರಕರು ಹಾಗೂ 8 ಲಕ್ಷ ಅಂಗಡಿಗಳ ಬೃಹತ್ ಸಮೂಹ ಹೊಂದಿದ್ದು ಈಗ ವಾರ್ಷಿಕ 2 ಸಾವಿರ ಕೋಟಿಗಳ ವ್ಯವಹಾರ ದಾಖಲಿಸಿರುವ ಬಾಲಾಜಿ ವೇಪರ್ಸ್ ನ ಪ್ರತಿಯೊಬ್ಬ ಗ್ರಾಹಕರು ಬಾಲಾಜಿ ಕುಟುಂಬದವರು ಎಂಬ ಭಾವನೆ ಚಂದು ಬಾಯ್ ವಿರಾನಿಯವರದ್ದು.
ಬೃಹತ್ ಉದ್ಯಮ ಸಮೂಹ ಕಟ್ಟಿದ ಚಂದು ಭಾಯ್ ಯಶೋಗಾಥೆಯನ್ನು ಹಂಚಿಕೊಳ್ಳಲು ಅನೇಕ ಕಂಪನಿಗಳು, ವಿಶೃವಿದ್ಯಾನಿಲಯಗಳು ತಮ್ಮಲ್ಲಿಗೆ ಆಹ್ವಾನಿಸಿವೆ.
"ಯಶಸ್ಸಿಗೆ ಅಡ್ಡದಾರಿಗಳಿಲ್ಲ, ಅದನ್ನು ಪಡೆಯುವ ಹಾದಿ ಕಠಿಣವಾದರೂ ಅಸಾಧ್ಯವಾದುದಲ್ಲ. ಹಂತ-ಹಂತವಾಗಿ ನಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದರೆ ಯಶಸ್ಸು ನಮ್ಮದಾಗುತ್ತದೆ" ಎನ್ನುತ್ತಾರೆ ಚಂದು ಭಾಯ್ ವಿರಾನಿ.
-ತೇಜಸ್ವಿ ಕೆ, ಪೈಲಾರು, ಸುಳ್ಯ
Tags: Success Story, Business, ಯಶೋಗಾಥೆ, ಉದ್ಯಮ
ಕಾಮೆಂಟ್ ಪೋಸ್ಟ್ ಮಾಡಿ