ಕೃಷಿಯಲ್ಲಿ ವಿನೂತನ ಪದ್ದತಿಗಳನ್ನು ಅಳವಡಿಸಿಕೊಂಡು ಕೃಷಿ ಮಾಡಿ ಅಧಿಕ ಲಾಭ ಗಳಿಸಬೇಕು ಹಾಗೂ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹಲವು ಕೃಷಿಕರ ಮನದಾಳದ ತುಡಿತ. ಇಂತಹದೇ ತುಡಿತದಿಂದ ಕೃಷಿಯೆಡೆಗೆ ಮುಖಮಾಡಿದವರು ಮುಸಲಾಪುರದ ಶ್ರೀ ಶ್ರೀನಾಥ್ ತೂನ. ಮೂಲತಃ ಸಾಫ್ಟ್‌ವೇರ್ ಇಂಜಿನಿಯರ್. ಕಳೆದ ನಾಲ್ಕು ವರ್ಷಗಳ ಹಿಂದೆ ಮುಸಲಾಪುರ ಗ್ರಾಮದಲ್ಲಿ ಜಮೀನು ಖರೀದಿಸಿ ಬೆಂಗಾಡಾಗಿದ್ದ ಜಮೀನನ್ನು ಹಸಿರುವನ ಮಾಡಿದ್ದಾರೆ.
ಸಾವಯವ ಪದ್ದತಿಯ ಒಲವಿನಿಂದ ಯಾವುದೇ ರಾಸಾಯನಿಕವನ್ನು ಜಮೀನಿಗೆ ಹಾಕದೇ ಕೇವಲ ಸಗಣಿ ಗೊಬ್ಬರ, ಜೀವಾಮೃತ ಮತ್ತು ಸಸ್ಯಜನ್ಯ ಕೀಟನಾಶಕಗಳ ನೆರವಿನಿಂದ ಪೋಷಣೆಮಾಡಿ ಬೆಳೆಗಳನ್ನು ಸಲಹುತ್ತಿರುವ ಇವರು ಸಾವಯವಕ್ಕೆ ಹೊಂದುವ ಯಾವುದೇ ನೂತನ ಆವಿಷ್ಕಾರಗಳನ್ನು ಕೂದಲೇ ಅಳವಡಿಸಿಕೊಳ್ಳುವ ಮನಸ್ಥಿತಿ ಹೊಂದಿದವರು. ಇವರ ತೋಟಕ್ಕೆ ಇವರು ಅಳವಡಿಸಿರುವ ಮಾದರಿ "ಪಂಚ ತರಂಗಿಣಿ".
ನಾಲ್ಕು ಎಕರೆ ಜಮೀನಿನಲ್ಲಿ ಅರಣ್ಯ ಆಧಾರಿತ ಕೃಷಿ ಪದ್ದತಿ ಅಳವಡಿಸಿ ಸಿಲ್ವರ್, ಹೆಬ್ಬೇವು ಮುಂತಾದ ಸಾವಿರಾರು ಮರಗಳನ್ನು ಬೆಳೆಸಿದ್ದಾರೆ. ಅಲ್ಲಲ್ಲಿ ಶ್ರೀಗಂಧವು ತಾನಾಗಿಯೇ ಬೆಳೆದಿದೆ. ಅವುಗಳ ಮಧ್ಯೆ ನಿಂಬೆ, ಮಾವು ಹಾಗೂ ದಾಳಿಂಬೆ ಫಲಕೊಡುತ್ತಿವೆ. ಜವಾರಿ ಬಾಳೆಯೂ ಗೊನೆ ಬಿಟ್ಟಿದೆ. ನೆಲವನ್ನೆಲ್ಲ ಗೆಣಸಿನ ಬಳ್ಳಿಗಳು ಆವರಿಸಿವೆ. ಪ್ರಾಯೋಗಿಕವಾಗಿ ಹಚ್ಚಿರುವ ಟೊಮ್ಯಾಟೊ ಚಿಗುರೊಡೆಯುತ್ತಿದೆ. ಬೆಳೆದ ಸಿಲ್ವರ್ ಮರಗಳಿಗೆ ಎಲೆ ಬಳ್ಳಿ ಹಬ್ಬಿಸುವ ಚಿಂತನೆ ನಡೆದಿದೆ.
ಸುಮಾರು 200 ಜವಾರಿ ಕೋಳಿಗಳು ತೋಟದಲ್ಲೆಲ್ಲಾ ಕಲರವ ಎಬ್ಬಿಸುತ್ತಿರುತ್ತವೆ. ಅವುಗಳ ಮೊಟ್ಟೆ ರೂ.12 ಕ್ಕೆ ಒಂದರಂತೆ ಸ್ಥಳೀಯವಾಗಿಯೇ ಮಾರಾಟವಾಗುತ್ತಿವೆ. ಪ್ರತಿ ತಿಂಗಳೂ ನಡೆಯುವ "ಮಣ್ಣಿನೊಂದಿಗೆ ಮಾತುಕತೆ"ಯಲ್ಲಿ ಸಕ್ರಿಯವಾಗಿ ಹೊಸ ಹೊಸ ವಿಷಯಗಳೊಂದಿಗೆ ಭಾಗವಹಿಸಿ ರೈತರೊಂದಿಗೆ ತಮ್ಮ ಅನುಭವ ಹಂಚಿಕೊಳ್ಳುವುದು ಹಾಗೂ ಸಮಾನ ಮನಸ್ಕ ರೈತರೊಡನೆ ಸೇರಿ "ಕೊಪ್ಪಳ ರೈತ ಮಾರುಕಟ್ಟೆ" ಸ್ಥಾಪಿಸಲು ಸಹಕರಿಸಿ ಪ್ರತಿ ಗುರುವಾರ ತಮ್ಮ ಉತ್ಪನ್ನಕ್ಕೆ ಮಾರುಕಟ್ಟೆ ಕಂಡುಕೊಂಡಿರುವುದು ಇವರ ರೈತಪರ ಕಾಳಜಿಗೆ ಉದಾಹರಣೆ.
ಕರೋನಾ ಇವರ ಪಾಲಿಗೆ ಆಪದ್ಬಾಂಧವ. "ಮನೆಯಿಂದಲೇ ಕೆಲಸ" ಇವರಿಗೆ ಕೃಷಿಯಲ್ಲಿ ತೊಡಗಿಕೊಳ್ಳಲು ಸಾಕಷ್ಟು ಬಿಡುವು ಕೊಟ್ಟಿದೆ. ಇವರ ಜೊತೆಗೆ ಕೈ ಜೋಡಿಸಲು ಇವರ ಇಡೀ ಕುಟುಂಬವಿದೆ. ಇವರೆಲ್ಲರ ಶ್ರಮದಿಂದ ಬಿಸಿಲನಾಡಿನಲ್ಲಿ ಭೂ ತಾಯಿಯು ಹಸಿರು ಹೊದ್ದು ದಾರಿಹೋಕರನ್ನು ಕೈಬೀಸಿ ಕರೆಯುತ್ತಿದ್ದಾಳೆ. ಅಂದ ಹಾಗೆ ಇವರ ತೋಟಕ್ಕೆ ಇವರಿಟ್ಟ ಹೆಸರು 'ಪ್ರಾಣ'. ಇವರನ್ನು ಮಾತನಾಡಿಸಲು 9663313051 ಗೆ ಕರೆ ಮಾಡಿ.
-ಡಾ. ಪಿ. ಆರ್. ಬದರಿಪ್ರಸಾದ್
ಸಹಾಯಕ ಪ್ರಾಧ್ಯಾಪಕರು (ಕೀಟಶಾಸ್ತ್ರ)
ಕೃಷಿ ಮಹಾವಿದ್ಯಾಲಯ, ಗಂಗಾವತಿ
Visit: Upayuktha Advertisements- A Dedicated place for Your Ads
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق