ನಮ್ಮ ಪ್ರತಿನಿತ್ಯದ ಜೀವನದಲ್ಲಿ ಅಡುಗೆ ಮನೆಯಲ್ಲಿ ತುಂಬಾ ವಿಧವಾದ ಸಾಂಬಾರ ಪದಾರ್ಥವನ್ನು ನೋಡುತ್ತೇವೆ. ಹಾಗೂ ಅದರಲ್ಲಿ ಔಷಧೀಯ ಗುಣಗಳು ಕೂಡ ಇರುತ್ತದೆ. ಒಂದಕ್ಕಿಂತ ಒಂದು ತನ್ನದೇ ಆದ ಸಾಮರ್ಥ್ಯವನ್ನು ಹೊಂದಿಕೊಂಡು ಇರುತ್ತದೆ. ಅದರಲ್ಲಿ ಗಾತ್ರ ಚಿಕ್ಕದಾದರೂ ತನ್ನ ಪ್ರಾಮುಖ್ಯತೆಯನ್ನು ಪ್ರಬಲವಾಗಿ ಪ್ರದರ್ಶಿಸುವ ಸಾಂಬಾರ ಪದಾರ್ಥವೆಂದರೆ ಅದು ಮೆಂತ್ಯೆ.
ರುಚಿ ಕಹಿಯಾಗಿದ್ದರೂ ಅದನ್ನು ನಿತ್ಯ ಆಹಾರ ಕ್ರಮದಲ್ಲಿ ಸೇವಿಸುತ್ತಾ ಇದ್ದರೆ ಅದು ಆರೋಗ್ಯ ರಕ್ಷಿಸುವ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅನೇಕ ರೋಗಗಳಿಗೆ ಇದು ನಿರೋಧಕವಾಗಿಯೂ ಕಾರ್ಯ ನಿರ್ವಹಿಸುತ್ತದೆ.
ರಾತ್ರಿ ನೆನೆಸಲು ಹಾಕಿದ ಮೆಂತ್ಯೆ ಕಾಳನ್ನು ಬೆಳಗ್ಗೆ ಎದ್ದು ಸೇವನೆ ಮಾಡಿದರೆ ಅದು ಕರುಳಿನ ಕ್ಯಾನ್ಸರ್ ನ್ನು ತಡೆಯುತ್ತದೆ. ಅಷ್ಟೇ ಅಲ್ಲದೆ ಎದೆಯುರಿಯುವಿಕೆಯನ್ನು ಕೂಡ ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೆ ಒಂದು ಚಮಚ ಜೇನುತುಪ್ಪ ಮತ್ತು ನಿಂಬೆರಸದೊಡನೆ ಈ ಮೆಂತ್ಯೆ ಕಾಳನ್ನು ಸೇವನೆ ಮಾಡಿದರೆ ಜ್ವರವು ಶಮನವಾಗುತ್ತದೆ. ಇದರಲ್ಲಿ ಇರುವಂತಹ ಗೋಂದಿನಂತಹ ಅಂಶವು ಗಂಟಲ ಕಿರಿಕಿರಿಯನ್ನು ಕೂಡ ದೂರ ಮಾಡುತ್ತದೆ.
ಮಹಿಳೆಯರಿಗೆ ಈ ಕಾಳು ಅತ್ಯಂತ ಹೆಚ್ಚಾಗಿ ಉಪಯೋಗಕ್ಕೆ ಬರುತ್ತದೆ. ಋತುಚಕ್ರದ ಸಮಯದಲ್ಲಿ ಆಗುವ ಸೆಳೆತ ಹಾಗೂ ಹೊಟ್ಟೆ ನೋವು ನಿವಾರಣೆಗಾಗಿ ಕೂಡ ಇದನ್ನು ಸೇವಿಸುತ್ತಾರೆ. ಮಹಿಳೆಯರಿಗೆ ಕೂದಲು ಶೃಂಗಾರದ ಒಂದು ಮುಖ್ಯ ಅಂಶ. ಈ ಕೇಶ ರಾಶಿಯನ್ನು ಕಾಪಾಡುವಂತಹ ಪೋಷಕಾಂಶಗಳು ಈ ಮೆಂತ್ಯೆ ಕಾಳಿನಲ್ಲಿದೆ.
ರಾತ್ರಿ ನೆನೆಸಿಟ್ಟ ಮೆಂತ್ಯೆ ಕಾಳನ್ನು ಬೇಯಿಸಿಕೊಂಡು ಅದನ್ನು ತೆಂಗಿನ ಎಣ್ಣೆ ಜತೆಗೆ ಸೇರಿಸಿ ತಲೆಗೆ ಸರಿಯಾಗಿ ಮಸಾಜ್ ಮಾಡಿಕೊಂಡರೆ ಆಗ ಕೂದಲು ಉದುರುವುದನ್ನು ತಪ್ಪಿಸಬಹುದು. ತಲೆಹೊಟ್ಟು ನಿವಾರಣೆಗೆ ಕೂಡ ಇದು ಸಹಕಾರಿ. ಜೀರ್ಣಕ್ರಿಯೆಯ ಸಮಸ್ಯೆಯಿದ್ದರೆ ಆಗ ಮೆಂತ್ಯೆ ನೆನೆಸಿಟ್ಟು ಅದರ ನೀರನ್ನು ಕುಡಿದರೆ ಒಳ್ಳೆಯದು. ಚರ್ಮದಲ್ಲಿ ಮೂಡುವ ಮೊಡವೆಗಳನ್ನು ಕೂಡ ಇದು ನಿವಾರಣೆ ಮಾಡುತ್ತದೆ. ಹೆರಿಗೆ ಉತ್ತೇಜಿಸಲು ಹಾಗೂ ಗರ್ಭಕೋಶದ ಸಂಕೋಚನಕ್ಕೆ ಮೆಂತ್ಯೆ ತುಂಬಾ ಲಾಭಕಾರಿ. ಒಟ್ಟಾರೆಯಾಗಿ ನೋಡಲು ಅತ್ಯಂತ ಸಣ್ಣ ಗಾತ್ರದ್ದಾದರೂ ಅನೇಕ ಔಷಧೀಯ ಗುಣಗಳಿರುವ ಈ ಮೆಂತ್ಯೆಕಾಳಿನ ಮಹತ್ವವನ್ನು, ಪ್ರಯೋಜನವನ್ನು ಒಪ್ಪಿಕೊಳ್ಳಲೇಬೇಕಲ್ಲವೇ?
-ಅರ್ಪಿತಾ ಕುಂದರ್
(ಉಪಯುಕ್ತ ನ್ಯೂಸ್)
إرسال تعليق