ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 'ಪತ್ತನಾಜೆ' ಪೂರ್ವೋತ್ತರ: 'ಪೃಥ್ವೀ ಗಂಧವತೀ' ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

ಮೇ 24: ಪತ್ತನಾಜೆ      



'ಪತ್ತನಾಜೆ' ಎಂದರೆ ಆಟ. ಕೋಲ‌, ಬಲಿ‌, ಅಂಕ, ಆಯನಗಳಿಗೆ ಅಲ್ಪವಿರಾಮ ಎಂಬ ನಂಬಿಕೆ ಸರಿಯಾದುದೇ. ಆದರೆ ಸಾಕು ಸಂಭ್ರಮ- ಗೌಜಿ ಗದ್ದಲ, ಉತ್ಸವಗಳ ಗುಂಗಿನಿಂದ ಹೊರಗೆ ಬಾ, ತೊಡಗು ಕೃಷಿಗೆ ಎಂಬ ಎಚ್ಚರಿಕೆಯೂ 'ಪತ್ತನಾಜೆ'ಯ ನೆನಪಿನಲ್ಲಿದೆ. ಆಚರಣೆಗಳು ಇಲ್ಲದಿದ್ದರೂ ಜೀವನಾಧಾರವಾದ ಬೇಸಾಯಕ್ಕೆ ಪ್ರವೃತ್ತನಾಗು ಎಂಬ ನಿರ್ದೇಶನ ಪತ್ತನಾಜೆ ಒದಗಿ ಬರುವ ಸಂದರ್ಭದಲ್ಲಿ ನಿಚ್ಚಳ.

ತುಳುವರ ಬೇಶ ತಿಂಗಳ ಹತ್ತನೇ ದಿನವೇ ಪತ್ತನಾಜೆ. ಸೌರ ಪದ್ಧತಿಯ ಎರಡನೇ ತಿಂಗಳು ವೃಷಭ.‌ ವೃಷಭ ಎಂದರೆ ಬೇಶ. ಹತ್ತನೇ ದಿನವನ್ನು ತಿಂಗಳು ಸಾಗುವ ಹತ್ತನೇ ಹೆಜ್ಜೆ (ಅಜೆ)ಎಂದು ಗ್ರಹಿಸಿ 'ಪತ್ತನಾಜೆ"ಎಂದಿರ ಬಹುದು.

'ಬೇಶ' ತಿಂಗಳು ತನ್ನ ವಿಶೇಷಗಳಿಂದ, ಪುರಾತನ ಒಪ್ಪಿಗೆಗಳೊಂದಿಗೆ ಬಹಳ ಮುಖ್ಯ ತಿಂಗಳು.‌ 'ಬೇಶದ ತನು- ಬೇಶದ ತಂಬಿಲ‌' ತುಳುವರಿಗೆ ಆಚರಣೆಗಳ ಪರ್ವಕಾಲ. 'ಬೆನ್ನಿ' ಅಥವಾ 'ಬೇಸಾಯ'ಕ್ಕೆ ತೊಡಗುವ ಮುನ್ನ ತಮ್ಮ ಮೂಲಸ್ಥಾನಗಳಿಗೆ ಹೋಗಿ ಭೂಮಿ ಪುತ್ರನಾದ ಈ ನೆಲದ ಸರ್ವಾಧಿಕಾರಿ 'ನಾಗನಿಗೆ'; "ತನು ಮಯಿಪಾದ್ ತಂಬಿಲಕಟ್ಟಾದ್", ದೈವಗಳಿಗೆ ಭೋಗ ಕೊಟ್ಟು ಬಂದು ಬೇಸಾಯಕ್ಕೆ ಆರಂಭಿಸುವ ಸಂಪ್ರದಾಯ ತುಳುವರದ್ದಾಗಿತ್ತು. ಈಗ ಕಾಲ ಬದಲಾಗಿದೆ, ಮನಸ್ಸು ಬಂದಾಗ 'ಮೂಲತಾನ'ಗಳಿಗೆ ಹೋಗಿ 'ನಾಗ- ದೈವ'ಗಳಿಗೆ ಸೇವೆ ಸಲ್ಲಿಸುವ ಆರ್ಥಿಕ ಸಬಲತೆ ಇದೆ- ಸ್ವಂತ ವಾಹನ ಸೌಲಭ್ಯಗಳಿವೆ. 

ಬದಲಾಗುತ್ತಿರುವ ಕಾಲ- ಸಂದರ್ಭ- ಮನೋಧರ್ಮಗಳಿಂದಾಗಿ ತಮ್ಮ ಮೂಲಸ್ಥಾನ ತೊರೆದು ಬದುಕು ಕಟ್ಟುವ ಉದ್ದೇಶದಿಂದ ಬೇಸಾಯದ ಅವಕಾಶ ಬಯಸಿ ದೂರದ ಪ್ರದೇಶಗಳಿಗೆ ಹೋಗಿ ಬೇಸಾಯದ ಜೀವನ ಆರಂಭಿಸಿದ್ದ ಮಾನವನ ಚರ್ಯೆಗೆ ಅಥವಾ ಮನೋಧರ್ಮಕ್ಕೆ ಶತಮಾನಗಳೇ ಸಂದು ಹೋದುವು. ಈ ಪರಿಸ್ಥಿತಿಯಲ್ಲೂ ಬೇಸಾಯಕ್ಕೆ ಆರಂಭಿಸುವ ಮುನ್ನ ಮೂಲಕ್ಕೆ ಹೋಗುವುದು ಶಿಷ್ಟಾಚಾರವಾಯಿತು. ವರ್ಷಕ್ಕೆ ಒಂದೆರಡು ಬಾರಿಯಾದರೂ ಮೂಲಕ್ಕೆ ಸಂದರ್ಶನ ನೀಡುವ ಆಸ್ತಿಕರು ಬೇಶದಲ್ಲಿ ಖಂಡಿತ ಹೋಗುತ್ತಾರೆ. ಆ ದಿನ  ಪತ್ತನಾಜೆಯ ಆಸುಪಾಸಿನಲ್ಲಿರುತ್ತದೆ. 

ಮಕರ - ಪುಯಿಂತೆಲ್ ತಿಂಗಳು:

ಕೊನೆಯ ಮೂರು ದಿನಗಳ "ಕೆಡ್ಡಸ" ಆಚರಣೆಯಲ್ಲಿ ಭೂಮಿದೇವಿ ಪುಷ್ಪವತಿಯಾದಳು ಎಂಬ ನಂಬಿಕೆ ನಮ್ಮದು. ಅಂದರೆ ನಿಸರ್ಗದಲ್ಲಿ ಅದ್ಭುತ ಬದಲಾವಣೆಯಾಗುವ ಕಾಲವದು.‌ ಹೆಣ್ಣು ಮಗಳು 'ಪುಷ್ಪವತಿ' ಯಾದಳೆಂದರೆ 'ಫಲವತಿ'ಯಾಗಲು ಸಿದ್ಧಳಾದಳು ಎಂದಲ್ಲವೇ ಅರ್ಥ. ಪುಯಿಂತೆಲ್- ಮಕರ ತಿಂಗಳಲ್ಲೆ ಪ್ರಕೃತಿ ಬದಲಾಗಲು ತೊಡಗುತ್ತದೆ, ಕೃಷಿಯ ಸಣ್ಣ ಪುಟ್ಟ ತಯಾರಿ ನಡೆಯಲಾರಂಭವಾಗುತ್ತದೆ.

'ಮಾಯಿ- ಕುಂಭ' ತಿಂಗಳು ಮುಗಿಯುತ್ತಿರುವಂತೆ 'ಸುಗ್ಗಿ- ಮೀನ' ತಿಂಗಳು. ಬೆಳೆದ ಗೆಣಸು ಮುಂತಾದುಗಳನ್ನು‌ ಅಗೆದು ತೆಗೆಯದಿದ್ದರೆ ಅವು 'ಮಾಯಿ ತಿಂಗಳಲ್ಲಿ ಮಾಯವಾಗುತ್ತವಂತೆ". ಹೀಗೊಂದು ಒಡಂಬಡಿಕೆ. ಮುಂದೆ  ಹಂತಹಂತವಾಗಿ ಬೇಸಾಯಕ್ಕೆ ಅಣಿಯಾಗುವ ರೈತ ಸುಗ್ಗಿ ತಿಂಗಳು  ಮುಗಿದು ಪಗ್ಗು ತಿಂಗಳ 'ಮೊದಲ ದಿನ- ತಿಂಗೊಡೆ' ಮೊದಲ ಹಬ್ಬ ಯುಗಾದಿ ಅಥವಾ ಇಗಾದಿ- ವಿಷು ಆಚರಿಸುತ್ತಾನೆ. ಇಗಾದಿ ಆಚರಣೆ ಸರಳವಾದುದು, ಚೌತಿ, ದೀಪಾವಳಿಗಳಂತೆ ಸಂಭ್ರಮಗಳಿಲ್ಲ. ಆದರೆ ಕೃಷಿಕನಿಗೆ "ಪುಂಡಿಬಿತ್ತ್ ಪಾಡುನು- ನಾಲೆರು ಮಾದಾವುನ" ಕೃಷಿ ಚಕ್ರವನ್ನು ಮತ್ತೆ ಆರಂಭಿಸುವ ಕ್ರಮವಿದೆ. ಮುಂದೆ 'ಪಗ್ಗು ತಿಂಗಳ‌ ಹದಿನೆಂಟು ಹೋಗುವ ದಿನ' ತನ್ನ ಕೃಷಿ ಭೂಮಿಗೆ ಬೇಕಾಗುವಷ್ಟು 'ನೇಜಿ' ಹಾಕುವ ಸಾಂಪ್ರದಾಯಿಕ ಕ್ರಮ. ಈ ನಡುವೆ 'ಕಜೆಬಿದೆ ಆವ- ಮಡಿಬಿದೆ ಆವ' ಎಂಬ ನಿಷ್ಕರ್ಷೆಗೆ ಅನುಗುಣವಾಗಿ ನೇಜಿ ಹಾಕುವ ಪದ್ಧತಿಯೂ ಒಂದಿದೆ.

ಕೃತ್ತಿಕಾ ಮಳೆಯ ಕಾಲ  ಆರಂಭವಾಗುತ್ತದೆ. ಈ ಮಳೆ ಬರಬಾರದು "ಕಿರ್ತಿಕೆ ಕಾಯೊಡು"- ಕೃತ್ತಿಕೆಯ ಬಿಸಿಲಿಗೆ ಭೂಮಿ ಸುಡಬೇಕು- ಬಿಸಿಗೆ ಭೂಮಿ 'ಬಿರಿಯ' ಬೇಕು. ಭಾಗೀರಥೀ ಜನ್ಮದಿನ‌' ಒದಗಿಬರುತ್ತದೆ. ಮಳೆಬಂದಾಗ ಭೂಮಿ ತನ್ನೊಳಗೆ ಮಳೆ ನೀರು ಇಳಿಸಿಕೊಂಡು- ಹಾಕುವ ಗೊಬ್ಬರ ಮತ್ತು ಸಿದ್ಧಗೊಳಿಸಿದ ಸುಡುಮಣ್ಣುಗಳಿಂದಾಗಿ (ತೂಟಾನ್- ತೂಂಟಾನ್) ಫಲವತ್ತಾದ ಕ್ಷೇತ್ರವಾಗುತ್ತದೆ, ಮುಂದೆ ಬೀಜಾಂಕುರವಾದಾಗ ಭೂಮಿದೇವಿ ತನ್ನ ಫಲವಂತಿಕೆಯನ್ನು ವ್ಯಕ್ತಗೊಳಿಸುತ್ತಾಳೆ.

ಬಿಸಿಲ ಬೇಗೆಗೆ ಸುಟ್ಟ ಗದ್ದೆಗೆ ಮೊದಲ ಮಳೆ ನೀರು ಬಿದ್ದಾಗ ಒಂದು‌ ಅಪೂರ್ವ ಪರಿಮಳ ಭೂಗರ್ಭದಿಂದ ಹೊರಬರುತ್ತದೆ. ಅದಕ್ಕಲ್ಲವೇ "ಪೃಥ್ವೀ ಗಂಧವತೀ" ಎಂದರು ನಮ್ಮ ಪೂರ್ವಸೂರಿಗಳು. ಇದು ಮಣ್ಣಿನ ಪರಿಮಳ, ಇದೇ ಕಾರಣವಾಗಿ ಬೆನ್ನಿ- ಬೇಸಾಯ ಸಮೃದ್ಧವಾಗಿತ್ತು ಒಂದು ಕಾಲದಲ್ಲಿ. ಈಗ ಮಣ್ಣಿಗೆ ಅಥವಾ ಪೃಥ್ವಿಗೆ ಗಂಧವಿದೆಯಾ? ಅದು ಅಷ್ಟು ಸುವಾಸನೆಯುಳ್ಳದ್ದಾ?  ಎಂದು ಕೇಳುವವರಿದ್ದಾರೆ. ಆದರೆ ಬೇಸಾಯವೇ ಜೀವನಾಧಾರವಾಗಿದ್ದ ಕಾಲದಲ್ಲಿ ಮಣ್ಣಿನ ಪರಿಮಳ ಗ್ರಹಿಸುತ್ತಿದ್ದ ಮಾನವ.‌ ಆಗ ಅದೇ ಸುಗಂಧವಾಗಿತ್ತು, ಏಕೆಂದರೆ ಭೂಮಿ ತಾಯಿಯಾಗಿದ್ದಳು. ಜಡವಾದ ಭೂಮಿಯೊಂದಿಗೆ ಎಂತಹ ಭಾವನಾತ್ಮಕ ಸಂಬಂಧ.‌ ಹಾಗೆ ಬಂದಿರಬೇಕು "ಮಣ್ಣ್ ಡ್ ಪೊಂರ್ಬಿನಾಯೆ ನುಪ್ಪು ತಿನುವೆ, ನರಮಾನಿಡ ಪೊಂರ್ಬಿನಾಯೆ ಮಣ್ಣ್ ತಿನುವೆ" ಎಂಬ ಗಾದೆ.

ಪತ್ತನಾಜೆ ಮುಗಿಸಿ ಬೇಸಾಯಕ್ಕೆ ಹೊರಡುವ ಸಂದರ್ಭ ಭೂಮಿ, ಬೇಸಾಯ, ನಮ್ಮ- ಮಣ್ಣಿನ ಸಂಬಂಧ ಮಣ್ಣಿನ ಸತ್ಯದ ದರ್ಶನವಾಗಲು ಅಥವಾ 'ಸತ್ಯ ನೆಗತ್ತ್ ದ್' ತೋಜೊಡ್ಡ 'ಪತ್ತನಾಜೆ ಪರ್ವಕಾಲ, ಸುಸಂದರ್ಭ. ಇನ್ನು ನಮಗೆ "ಬೆನ್ನಿದ ಮಗೆ"- ಬೇಸಾಯಗಾರ ಸಿಗುವುದು ಆಟಿ ತಿಂಗಳಲ್ಲಿ. ಬಳಿಕ ಅಷ್ಟಮಿ, ಚೌತಿ  ಆಚರಣೆಗಳಲ್ಲಿ. ಅನಂತರ ತೆನೆಕಟ್ಟುವ ಸಂಭ್ರಮದಲ್ಲಿ, ನವರಾತ್ರಿಯ ವೇಳೆ. ಆದರೆ ನಗುಮೊಗದಿಂದ ಬೇಸಾಯಗಾರ‌ನ  ಮುಖಾಮುಖಿಯಾಗುವುದು ದೀಪಾವಳಿಯ ಗೌಜಿ ಗದ್ದಲದಲ್ಲಿ ಬೆಳಗುವ ಸೊಡರಿನಲ್ಲಿ, ಆಗ ಧಾನ್ಯಲಕ್ಷ್ಮೀ ಮನೆ ತುಂಬಿರುತ್ತಾಳೆ. ಆತ ಸಂತೃಪ್ತನಾಗಿರುತ್ತಾನೆ.

ಕೃಷಿಯಿದ್ದಲ್ಲಿ ದುರ್ಭಿಕ್ಷೆ ಇಲ್ಲವಂತೆ:  

ಪತ್ತನಾಜೆ ಎಂದು ಆರಂಭಿಸಿ ದೀಪಾವಳಿ ವರೆಗೆ ಹೋಗಬೇಕಾಯಿತು. "ಭೂಮಿ -ಕೃಷಿ' ಈ ಸಂಬಂಧ ಮತ್ತೆ ಗಾಢವಾಗಬೇಕೆಂಬುದೇ ಆಶಯ. ಹಾಗೆ ಎಲ್ಲಿಂದಲೋ ಹೊರಟು ಬೇಸಾಯಗಾರನಲ್ಲಿ ಮಾತನಾಡಿ, ನಿಸರ್ಗದ ವಿಸ್ಮಯಗಳನ್ನು ಅವಲೋಕಿಸುತ್ತಾ, ಮಳೆಯ ಅನಿವಾರ್ಯತೆಯನ್ನು ಹೇಳುತ್ತಾ 'ಕೃಷಿ ಸಂಸ್ಕೃತಿ"ಯನ್ನು ಪರಿಚಯಿಸುವ ಪ್ರಯತ್ನಮಾಡಿದೆ.

- ಕೆ.ಎಲ್. ಕುಂಡಂತಾಯ

(ಲೇಖಕರು: ತುಳು ಜಾನಪದ ವಿದ್ವಾಂಸರು)

Tags: Patthanaje, Tulunadu, Tulu traditions, ಪತ್ತನಾಜೆ, ತುಳುನಾಡು, ತುಳು ಸಂಸ್ಕೃತಿ


Visit: Upayuktha Advertisements- A Dedicated place for Your Ads

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು