ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಅನಾವರಣಗೊಳ್ಳುತ್ತಿರುವ ವರ್ಚುವಲ್ ಶಿಕ್ಷಣ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

ಶಿಕ್ಷಣ ವ್ಯವಸ್ಥೆಯ ಭಾಗವಾಗುತ್ತಿರುವ ಆನ್‍ಲೈನ್ ಕಲಿಕೆ

ಪ್ರಗತಿಗಾಗಿ ಬದಲಾವಣೆಯ ಹರಿಕಾರರಾಗೋಣಪ್ರೀತಿಯ ವಿದ್ಯಾರ್ಥಿಗಳೇ,

ತರಗತಿಯಲ್ಲಿ, ಕಾಲೇಜಿನ ವೆರಾಂಡದಲ್ಲಿ, ಕ್ಯಾಂಟಿನ್ ನಲ್ಲಿ, ಲೈಬ್ರೆರಿಯಲ್ಲಿ, ಕಾಲೇಜು ಸಭಾಂಗಣದಲ್ಲಿ ಹೀಗೆ ಹತ್ತು ಹಲವು ಕಡೆ ಪ್ರತಿ ದಿನ ಎಲ್ಲೆಂದರಲ್ಲಿ ಪರಸ್ಪರ ವಂದನೆಗಳ, ಮುಗುಳ್ನಗೆಗಳ ವಿನಿಮಯ ಮರೆಗೆ ಸರಿದು ವರ್ಷವೇ ಸಂದಿತು.

ಶಾಲೆಯ ಎಲ್ಲ ಸಂಭ್ರಮದ ದಿನಗಳನ್ನು ಕೊರೊನಾ ಎಂಬ ಹೆಮ್ಮಾರಿಯು ಕಿತ್ತುಕೊಂಡು ಇದೀಗ ಮುಂದೆ ಯಾವಾಗ ಶಾಲೆ ಮತ್ತು ಅಂದಿನ ಸುಂದರ ಕಲಿಕೆಯ ಕ್ಷಣಗಳು ಬರುತ್ತವೆ ಎಂದು ಚಾತಕ ಪಕ್ಷಿಯ ಹಾಗೆ ಕಾಯುವ ಸರದಿ ನಮ್ಮದಾಗಿದೆ.

ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಶಾಲೆಗಳು ಅಚಾನಕ್ಕಾಗಿ ಮುಚ್ಚಿದಾಗ ಪ್ರಾಯಶಃ ಮೊದಲ ಕೆಲವು ದಿನಗಳು ರಜೆಯನ್ನು ನೀವೂ ನಿಮ್ಮ ಹೆತ್ತವರೂ ಆನಂದಿಸಿರಬಹುದು. ಪರೀಕ್ಷೆಗಳಿಲ್ಲದೆ ವಿದ್ಯಾರ್ಥಿಗಳು ತೇರ್ಗಡೆಯಾದಾಗ ಸಂತಸಗೊಂಡ ಮಕ್ಕಳು ಮುಂದೆ ತಾವು ಕಳೆದುಕೊಂಡ ಹಾಗೂ ಕಳೆದುಕೊಳ್ಳುವ ಶಾಲಾ ಚಟುವಟಿಕೆಗಳಿಗಾಗಿ ಪರಿತಪಿಸಿದ್ದಂತೂ ಸತ್ಯ.

ಮರೀಚಿಕೆಯಾದ ಶಾಲೆ: ಕೊರೊನಾದ ಕರಿನೆರಳು ಎಲ್ಲರನ್ನೂ ಬಂಧಿಯಾಗಿಸಿದೆ ಮಾತ್ರವಲ್ಲ ಮಂಕುಕವಿದ ವಾತಾವರಣವನ್ನು ಸೃಷ್ಟಿಸಿದೆ. ಶಾಲೆಯ ವಾತಾವರಣದಲ್ಲಿ ಕಲಿಯುವುದು ಕಲಿಕೆಯ ಒಂದು ಪ್ರಮುಖ ಮಾರ್ಗ. ತರಗತಿಯ ಒಳಗೆ ಹಾಗೂ ಹೊರಗೆ ಪಡೆಯುತ್ತಿದ್ದಂತಹ ಶಿಕ್ಷಣ ಸಹಜವಾಗಿ ತೊಡಗಿಸಿಕೊಳ್ಳುವಿಕೆಯನ್ನು ಪ್ರೇರೇಪಿಸಿ ಬೆಳವಣಿಗೆಗೆ ಸಹಕಾರಿಯಾಗಿತ್ತು. ಶಾಲಾ ಕಾಲೇಜುಗಳನ್ನು ಮುಚ್ಚಿದ ಅನಂತರ ಮಕ್ಕಳು ಸಹಜವಾಗಿ ತಮ್ಮ ಬೆಳವಣಿಗೆಗೆ ಇದ್ದಂತಹ ಅನೇಕ ಅವಕಾಶಗಳನ್ನು ಕಳೆದುಕೊಂಡಿದ್ದಾರೆ.

ಬದಲಾವಣೆಗಳಿಗೆ ಮುನ್ಸೂಚನೆ: ಕೋವಿಡ್ ಬಿಕ್ಕಟ್ಟು ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳಿಗೆ ಮುನ್ಸೂಚನೆಯಂತೆ ಕಾಣುತ್ತಿದೆ. ಕಳೆದ ವರ್ಷದಿಂದ ಮುಖಾಮುಖಿ ಭೋಧನೆ ಮತ್ತು ಕಲಿಕೆಯು ಮಾಯಾಜಾಲದಂತಾಗಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ ಹಾಗೂ ಕಲಿಕೆ ನಷ್ಟವನ್ನು ಸರಿತೂಗಿಸಲು ಹರಸಾಹಸ ಪಡಬೇಕಾಗಿದೆ.

ಈ ಸಾಂಕ್ರಾಮಿಕವು ಶೈಕ್ಷಣಿಕ ಸಮುದಾಯವನ್ನು ಸಾಂಪ್ರದಾಯಿಕ ಶಾಲಾ ಬೋಧನ ವ್ಯವಸ್ಥೆಯಿಂದ ದೂರ ಉಳಿಯುವಂತೆ ಮತ್ತು ಆನ್ಲೈನ್ ಬೋಧನಾ ವಿಧಾನಗಳತ್ತ ಗಮನ ಹರಿಸುವಂತೆ ಮಾಡಿದೆ. ಕೊರೊನಾದ ಭೀಕರತೆಯು ಈಗಾಗಲೇ ಚಾಲ್ತಿಯಲ್ಲಿರುವ ವರ್ಚುವಲ್ ಶಿಕ್ಷಣ ವ್ಯವಸ್ಥೆಯ ಬಗೆಗೆ ಹೆಚ್ಚಿನ ಒಲವನ್ನು ಮೂಡುವಂತೆ ಮಾಡಿದೆ. ಶಾಲೆ, ಕಾಲೇಜು ಪರಿಸರದಲ್ಲಿ ಅರಳಬೇಕಾದ ಮಕ್ಕಳ ವ್ಯಕ್ತಿತ್ವ ಈ ವರ್ಷವೂ ಕೂಡಾ ಬಹುತೇಕ ಆನ್ಲೈನ್ ಅಂಗಳದಲ್ಲಿ ಅರಳಬೇಕಾದ ಪರಿಸ್ಥಿತಿಯು ಗೋಚರಿಸುತ್ತಿದೆ.

ಸರಕಾರದ ಒಲವು: ಸರಕಾರ ಹಾಗೂ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಕಲಿಕೆಯಲ್ಲಿ ನಿರಂತರತೆಗಾಗಿ ವರ್ಚುವಲ್ ಬೋಧನಾ ಕ್ರಮಕ್ಕೆ ಒತ್ತು ನೀಡಿವೆ. ಮೇ 20ರಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ವು ಬೋಧನೆ ಮತ್ತು ಕಲಿಕೆಯ ಸಂಯೋಜಿತ ಮೋಡ್ ಬಗೆಗಿನ ಪರಿಕಲ್ಪನೆಯ ಟಿಪ್ಪಣಿಯನ್ನು ಬಿಡುಗಡೆ ಮಾಡಿ ಸಾರ್ವಜನಿಕರ ಅಭಿಪ್ರಾಯವನ್ನು ಅಹ್ವಾನಿಸಿದೆ. ಸಾಂಪ್ರದಾಯಿಕ ಹಾಗೂ ಡಿಜಿಟಲ್ ಕಲಿಕಾ ವಿಧಾನಗಳ ಸಂಯೋಜನೆಯು (ಬ್ಲೆಂಡೆಡ್ ಕಲಿಕಾ ಮಾದರಿ) ವಿದ್ಯಾರ್ಥಿ ಕೇಂದ್ರಿತ ಕಲಿಕೆಗೆ ಒತ್ತು ನೀಡುವುದರೊಂದಿಗೆ ಕಲಿಕೆಯನ್ನು ಅರ್ಥಪೂರ್ಣವಾಗಿಸುತ್ತದೆ.  

ಮೊಬೈಲ್ ಕಲಿಕೆಯ ಸಾಧನವಾಗಲಿ: ಲಾಕ್ಡೌನ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳು ಬೋಧನೆ ಮತ್ತು ಕಲಿಕೆಗೆ ಪರ್ಯಾಯವಾಗಿ ಕೆಲವೇ ಕೆಲವು ಸೀಮಿತ ಸಂಸ್ಥೆಗಳಲ್ಲಿ ಬೆಂಬಲವಾಗಿ ಇದ್ದ ಆನ್ಲೈನ್ ಬೋಧನೆ ಮತ್ತು ಕಲಿಕಾ ವಿಧಾನಗಳು ಸಹಜವಾಗಿ ಹೆಚ್ಚು ಪ್ರಚಾರಕ್ಕೆ ಬಂತು. ಮೊಬೈಲ್ ಆಕರ್ಷಣೆಗೆ ಒಳಗಾಗಿರುವ ಯುವ ಸಮುದಾಯಕ್ಕೆ ಸುಲಭವಾಗಿ ಅಳವಡಿಸಿಕೊಳ್ಳಬಹುದಾದ ವ್ಯವಸ್ಥೆಯಾಗಿ ಆನ್‍ಲೈನ್ ಬೋಧನೆ ಮತ್ತು ಕಲಿಕೆ ಅನಾವರಣಗೊಳ್ಳುತ್ತಿದೆ. ಅಂಗೈಗಲದ ಮೊಬೈಲ್ ಕಲಿಕೆಯ ಸಾಧನವಾಗಿ ಬೆಳೆದುನಿಂತರೆ ಮಾನವಸಂಪನ್ಮೂಲ ಅಭಿವೃದ್ಧಿಗೆ ದೊಡ್ಡ ಕೊಡುಗೆಯೇ ಸೈ.

ಬದಲಾವಣೆಯಲ್ಲಿ ಪುರೋಗಾಮಿ ಮನೋಭಾವ ಮುಖ್ಯ: ವಿದ್ಯಾರ್ಥಿಗಳು ಧನಾತ್ಮಕ ಚಿಂತನೆ ಬೆಳೆಸಿಕೊಂಡು ಆನ್ಲೈನ್ ಕಲಿಕೆಯಲ್ಲಿ ಆಸಕ್ತಿ ವಹಿಸಿದಾಗ ಮಾತ್ರ ಈ ವ್ಯವಸ್ಥೆ ಯಶಸ್ವಿಯಾಗಲು ಸಾಧ್ಯ. ಮಕ್ಕಳು ಆನ್ಲೈನ್ ಕಲಿಕೆಯ ಸಾಮಾನ್ಯ ಸವಾಲುಗಳನ್ನು ಗುರುತಿಸಿಕೊಂಡು ತಮ್ಮ ಮಟ್ಟದಲ್ಲಿ ಅಗತ್ಯ ಬದಲಾವಣೆಗಳನ್ನು ರೂಢಿಸಿಕೊಂಡಾಗ ಮಾತ್ರ ಬದಲಾದ ಪರಿಸ್ಥಿತಿಯಲ್ಲಿ ನವ ಪದ್ಧತಿ ಮುಂದಿನ ಕಲಿಕಾ ಪ್ರಗತಿಗೆ ನಾಂದಿಯಾಗಲಿದೆ. ನೆನಪಿಡಿ-ಅಡಚಣೆಗಳತ್ತ ಗಮನ ಹರಿಸಿದರೆ ಅದರ ಪಟ್ಟಿಯೇ ಉದ್ದವಾಗುತ್ತಾ ಹೋಗುತ್ತದೆ. ನಾವು ಸಮಸ್ಯೆಯ ಭಾಗವಾಗುವುದು ಬೇಡ, ಪರಿಹಾರದ ಭಾಗವಾಗೋಣ.

ಸ್ವಯಂಪ್ರೇರಣೆ ಮತ್ತು ದಿನಚರಿಗೆ ಗಮನವಿರಲಿ: ಸಾಂಪ್ರದಾಯಿಕ ತರಗತಿಯ ಕಲಿಕೆಗಿಂತ ಸ್ವಲ್ಪ ಭಿನ್ನವಾದ ವಾತಾವರಣದಲ್ಲಿ ಸ್ವಯಂಪ್ರೇರಣೆಯಿಂದ ಕಲಿಯುವಿಕೆಯನ್ನು ಮೈಗೂಡಿಸಿಕೊಳ್ಳ ಬೇಕಾಗುತ್ತದೆ. ನಿಗದಿತ ವೇಳಾಪಟ್ಟಿ ಅಥವಾ ದಿನಚರಿ ಇಲ್ಲದೆ ಮಕ್ಕಳು ಕಲಿಕೆಯನ್ನು ಮುಂದೂಡುವ ಪ್ರಲೋಭನೆಗೆ ಒಳಗಾಗುವ ಸಾಧ್ಯತೆಗಳಿವೆ. ಆನ್ಲೈನ್ ತರಗತಿಗೆ ಪ್ರತಿದಿನ ಲಾಗ್ ಇನ್ ಆಗಿ ಎಲ್ಲಾ ತರಗತಿಗಳಲ್ಲಿ ಭಾಗವಹಿಸಿ ಮತ್ತು ಚರ್ಚೆಗಳಲ್ಲಿ ಕಾಣಿಸಿಕೊಳ್ಳಿ. ಮಾಹಿತಿಯನ್ನು ಕೇಳಲು ಹಾಗೂ ಹಂಚಿಕೊಳ್ಳಲು ನಿಮ್ಮ ಸಹಪಾಠಿ ಹಾಗೂ ಶಿಕ್ಷಕರೊಂದಿಗೆ ಸಂಪರ್ಕ ಸಾಧಿಸಿ. ಕಲಿಕೆಗೆ ವೇಳಾಪಟ್ಟಿಯನ್ನು ಸಿದ್ಧಮಾಡಿಟ್ಟುಕೊಂಡು ಅದಕ್ಕೆ ಬದ್ದರಾಗಿರಿ.

ಏಕಲವ್ಯ ಕಲಿಕೆ: ಒಂದರ್ಥದಲ್ಲಿ ನೀವೆಲ್ಲಾ ಏಕಲವ್ಯನ ರೀತಿಯಲ್ಲಿ ಕಲಿಕೆಯಲ್ಲಿ ತೊಡಗಿಸಿಕೊಳ್ಳ ಬೇಕಾಗುತ್ತದೆ. ಪ್ರತಿದಿನವೂ ಚಟುವಟಿಕೆಯ ಪಟ್ಟಿಗೆ ಬದ್ಧರಾಗಿರಿ. ಕಲಿಕಾ ಸಮಯದ ನಿರ್ವಹಣೆಯಲ್ಲಿ ಪೆÇೀಷಕರ, ಸ್ನೇಹಿತರ ಸಹಾಯ ಪಡೆಯಿರಿ. ಸಂವಹನ, ಆಡಿಯೋ ತರಗತಿಗಳು, ದೃಶ್ಯ ಪ್ರಸ್ತುತಿಗಳು, ಲಿಖಿತ ಟಿಪ್ಪಣಿಗಳ ಮೂಲಕ ನೀವು ಕಲಿಯಬಹುದು. ಆನ್ಲೈನ್ ಕಲಿಕೆ ಸಂವಹನ ನಡೆಸಲು ಉತ್ತಮ ವೇದಿಕೆ ಎಂಬುದು ನೆನಪಿರಲಿ.

ಕಲಿಕೆಯೆಡೆಗೆ ಗಮನವಿರಲಿ: ಆನ್ಲೈನ್ ಕಲಿಕೆ ನಿಮಗೆ ಹೊಸತಾಗಿರುವುದರಿಂದ ಸಮಯ ನಿರ್ವಹಣೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನೀವು ನಿರೀಕ್ಷಿಸುವ ಶಾಲಾ ವಾತಾವರಣ ಮನೆಯಲ್ಲಿ ದೊರೆಯದು. ನಿಮ್ಮ ಪೋಷಕರ ಹಾಗೂ ಕುಟುಂಬದ ಇತರ ಸದಸ್ಯರ ಸಹಕಾರ ನಿಮ್ಮ ಕಲಿಕೆಗೆ ಪೂರಕ ಎಂಬುದು ನೆನೆಪಿರಲಿ.

ಸವಾಲೂ ಹೌದು, ಅವಕಾಶವೂ ಹೌದು:  ಸಾಂಪ್ರದಾಯಿಕ ಬೋಧನ ವಿಧಾನ ಈಗ ಪ್ರಯೋಜನಕ್ಕೆ ಬರುತ್ತಿಲ್ಲ. ಹೊಸತನಕ್ಕೆ ಒಗ್ಗಿಕೊಳ್ಳಲು ಇದೊಂದು ಅವಕಾಶ. ಈ ಹಿನ್ನೆಲೆಯಲ್ಲಿ ಆನ್ಲೈನ್ ಶಿಕ್ಷಣ ಕಾರ್ಯಕ್ರಮವನ್ನು ಹೇಗೆ ವಿನ್ಯಾಸಗೊಳಿಸಬೇಕು ಎಂಬ ಬಗ್ಗೆ ಚಿಂತನೆ ಮಂಥನೆ ನಡೆಯಲಿ ಹಾಗೂ ಮಕ್ಕಳ ಮನವು ಹೊಸ ಕಲಿಕೆಯತ್ತ ತೆರೆದುಕೊಳ್ಳುವಂತಾಗಲಿ ಎಂಬುದೇ ನಮ್ಮ ಹಾರೈಕೆ.

ಭವಿಷ್ಯದಲ್ಲಿ ಸಾಂಪ್ರದಾಯಿಕ ಶಾಲಾ ಶಿಕ್ಷಣದೊಂದಿಗೆ ಆನ್ಲೈನ್ ಶಿಕ್ಷಣವೂ ಸೇರಿಕೊಳ್ಳುವುದರಲ್ಲಿ ಸಂಶಯ ಇಲ್ಲ. ವಿದ್ಯಾರ್ಥಿಗಳು, ಶಿಕ್ಷಕರು, ಹೆತ್ತವರು ಹಾಗೂ ಸರಕಾರ ವಿವಿಧ ನೆಲೆಗಳಲ್ಲಿ ಸಕಾರಾತ್ಮಕವಾಗಿ ತೊಡಗಿಸಿಕೊಂಡು ಆನ್ಲೈನ್ ಕಲಿಕಾ ಅಂಗಳವನ್ನು ಬಲಪಡಿಸೋಣ ಹಾಗೂ ಆಮೂಲಕ ಬದಲಾವಣೆಯ ಹರಿಕಾರರಾಗೋಣ.

- ಡಾ.ಎ.ಜಯಕುಮಾರ ಶೆಟ್ಟಿ

ಶ್ರೀ. ಧ. ಮಂ.ಕಾಲೇಜು, ಉಜಿರೆ

9448154001

ajkshetty@sdmcujire.in
Visit: Upayuktha Advertisements- A Dedicated place for Your Ads

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು