ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಪರಿಚಯ: ಮೈಕ್ರೋ ಆರ್ಟ್‌ನ ಅದ್ಭುತ ಪ್ರತಿಭೆ ಅಮೃತಾ ಆರ್ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad




ಚಿರನೂತನ ಪ್ರಕೃತಿ ಹೊಸದೇನಾದರೂ ಮಾಡಲು ನಮಗೆ ಪ್ರತಿದಿನವೂ ಪ್ರೇರಣೆ ನೀಡುತ್ತದೆ. ಈ ಪ್ರೇರಣೆ ಸಾಧನೆಗೆ ದಾರಿ ತೋರುತ್ತದೆ. ಕಲಾಜಗತ್ತಿನಲ್ಲಿ ಅಪಾರ ಸಾಧನೆ ಮಾಡಬೇಕೆಂಬ ಹಂಬಲ ಹೊತ್ತು ಛಲದಿಂದ ವಿಶ್ವ ದಾಖಲೆ ಸ್ಥಾಪಿಸಿದ ಅಮೃತಾ ಆರ್ ಇಂದು ದೇಶದ ಹೆಮ್ಮೆಯೆನಿಸಿದ್ದಾಳೆ.

ದೇವರೇ ರಚಿಸಿರುವ ಕಲಾಕೃತಿ ಕೇರಳದ ಕೊಲ್ಲಂ ಸಮೀಪ 1996ರಲ್ಲಿ ಜನಿಸಿದ ಅಮೃತಾ ತಂದೆ ಅರುಣ್ ಕುಮಾರ್ ತಾಯಿ ರಮಾದೇವಿ. ಕುಮಾರಂಚಿರ ಸರ್ಕಾರಿ ಶಾಲೆ ಮತ್ತು ಶಾಂತಿನಿಕೇತನ ಮಾಡೆಲ್ ಶಾಲೆಯಲ್ಲಿ ಓದುತ್ತಿರುವಾಗಲೆ ಸುತ್ತಲಿನ ಪ್ರಕೃತಿಯೇ ಅಮೃತಾ ಕುಂಚ ಹಿಡಿಯಲು ಪ್ರೇರೇಪಿಸಿತು. ಕಲೆಯ ಹೊಸ ವಿದಾನಗಳಲ್ಲಿ ಆಸಕ್ತಿ ಬೆಳೆಸಿಕೊಂಡ ಆಕೆಗೆ ಕಲರ್ಸ್, ಬ್ರಶ್, ಪೇಪರ್, ಕ್ರೇಯಾನ್ ಗಳೇ ಸಂಗಾತಿಗಳಾದವು. ಕಲಾವಿದಳಾಗುವ ಜೊತೆಗೆ ವಿನೂತನ ರೀತಿಯಲ್ಲಿ ಕಲಾಕೃತಿ ರಚಿಸಬೇಕೆಂಬ ಮಹದಾಸೆ ಆಗ ಅವಳದಾಗಿತ್ತು.

11 ನೇ ತರಗತಿಯಲ್ಲಿ ಕಲಿಯುತ್ತಿರುವಾಗ "ಈಚಾ" ಚಲನಚಿತ್ರ ಬಿಡುಗಡೆಯಾಯಿತು. ಮೈಕ್ರೋ ಆರ್ಟಿಸ್ಟ್ ನ ಜೀವನ ಕಥೆ ಆಧರಿಸಿದ ಚಲನಚಿತ್ರವಾಗಿತ್ತು ಅದು. ಚಿತ್ರದ ದೃಶ್ಯವೊಂದರಲ್ಲಿ ಆರ್ಟಿಸ್ಟ್ ರಚಿಸಿದ ಹಾರ್ಟ್ ಲಾಕೆಟ್ ಅಮೃತಾ ಗಮನ ಸೆಳೆಯುತ್ತದೆ. ಈ ಘಟನೆ ಅಮೃತಾ ವರ್ಣಜಗತ್ತಿನ ಹಾದಿಯನ್ನು ನಿರ್ಧರಿಸುತ್ತದೆ. ತಾನು ಕೂಡ ಮೈಕ್ರೋ ಆರ್ಟಿಸ್ಟ್ ಆಗಬೇಕೆಂದು ನಿರ್ಧರಿಸುವ ಅಮೃತಾ ಆ ಹಾರ್ಟ್ ಲಾಕೆಟನ್ನು ತಾನು ರಚಿಸಲು ನಿರ್ಧರಿಸಿ ಅನೇಕ ಗಂಟೆಗಳ ಕಾಲ ಕೆಲಸ ಮಾಡಿ ಅದನ್ನು ರಚಿಸುತ್ತಾಳೆ. ಇದನ್ನು ಗಮನಿಸಿದ ಅಮೃತಾ ಆತ್ಮೀಯ ಬಳಗ ಇದನ್ನು ಬಹುವಾಗಿ ಮೆಚ್ಚುತ್ತದೆ ಮತ್ತು ಇದೇ ಅಮೃತಾಗೇ ದೊಡ್ಡ ಪ್ರೇರಣೆಯಾಗುತ್ತದೆ.

ವಿಭಿನ್ನ ಕಲಾಕೃತಿಗಳು ಹಾಗೂ ಯೋಜನೆಯೊಂದಿಗೆ ಮುನ್ನಡೆಯುವ ಆಕೆ TKM ಕಲೆ ಮತ್ತು ವಿಜ್ಞಾನ ಕಾಲೇಜಿಗೆ ಪದವಿಗೆ ಸೇರುತ್ತಾಳೆ. ತನ್ನ ಕಲಾ ಚಟುವಟಿಕೆಗಳನ್ನು ಮತ್ತಷ್ಟು  ವಿಸ್ತರಿಸುತ್ತಾಳೆ. ಮೈಕ್ರೋ ಆರ್ಟ್ ಬಗ್ಗೆ ಸೋಷಿಯಲ್ ಮಿಡಿಯಾ ಮೂಲಕ ಮತ್ತಷ್ಟು ತಿಳಿದುಕೊಂಡು ಕಲರ್ ಪೆನ್ಸಿಲ್, ಕ್ಯಾಂಡಲ್, ಚಾಕ್ ಪೀಸ್ ಗಳಲ್ಲಿ ಕಲಾಕೃತಿ ರಚಿಸಲು ಆರಂಭಿಸುತ್ತಾಳೆ. ಸೋಪ್ ಬಾರ್ ಗಳನ್ನು ತನ್ನ ಕೆಲಸಕ್ಕೆ ಬಳಸಿಕೊಳ್ಳುತ್ತಾಳೆ. ನಿಧಾನವಾಗಿ ಫಲಿತಾಂಶ ಸಿಗತೊಡಗಿತು. ಅಮೃತಾ ತಾನು ಬಯಸಿದ ಹಾದಿಯಲ್ಲಿ ಮುನ್ನಡೆಯತೊಡಗಿದ್ದಳು. ಇಷ್ಟಕ್ಕೆ ಸಂತೃಪ್ತಳಾಗದೆ ಮೈಕ್ರೋ ಆರ್ಟ್ ನಲ್ಲಿ ಮಾಸ್ಟರ್ ಆಗುವುದು ಅವಳ ಗುರಿಯಾಗಿತ್ತು.

ಆದರೆ ಈಗ ಪ್ರಥಮ ಅಡಚಣೆ ಅವಳಿಗೆದುರಾಗುತ್ತದೆ. ಇವಳ ಕಲಾಭಿರುಚಿ ಶಿಕ್ಷಣಕ್ಕೆ ತೊಂದರೆ ನೀಡುತ್ತದೆ ಎನ್ನುವುದು ಹೆತ್ತವರ ಅಭಿಪ್ರಾಯವಾಗಿತ್ತು. ಪದವಿ ಮುಗಿಸಿ ಸರ್ಕಾರಿ ಕೆಲಸಕ್ಕೆ ಸೇರಿ ಜೀವನದಲ್ಲಿ ಸೆಟ್ಲ್ ಆಗಬೇಕೆನ್ನವುದು ಅವರ ಆಸೆಯಾಗಿತ್ತು. ಅವರ ಅಶಯದಂತೆ ಶಿಕ್ಷಣ ಮುಂದುವರಿಸಲು ನಿರ್ಧರಿಸುವ ಅಮೃತಾ ತನ್ನ ಕಲಾ ಜಗತ್ತಿನಿಂದ ಮಾತ್ರ ವಿಮುಖಳಾಗುವುದಿಲ್ಲ. ಅಕ್ಕ ಅಂಜುವಿನ ಸಹಾಯ ಶಿಕ್ಷಣ ಮತ್ತು ಕಲೆ ಎರಡನ್ನೂ ಸರಿದೂಗಿಸಲು ನೆರವಾಯಿತು. ಹೆತ್ತವರಿಗೆ ತಿಳಿಯದಂತೆ ದಿನದ ಕೆಲವು ಗಂಟೆ ಕಲೆಗಾಗಿಯೇ ವಿನಿಯೋಗಿಸಿದಳು. ತನ್ನ ಕನಸು ಬೆಂಬತ್ತುವುದನ್ನು ಮಾತ್ರ ನಿಲ್ಲಿಸಲಿಲ್ಲ. ಪದವಿ ನಂತರ ಸರ್ಕಾರಿ ಕೆಲಸಕ್ಕಾಗಿ ಅನೇಕ ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಾಳೆ ಜೊತೆಗೆ ತನ್ನಿಷ್ಟದ ಕಾರ್ಯ ಮುಂದುವರಿಸುತ್ತಾಳೆ.



ಇದೇ ಸಮಯ ಅವಳಿಗೆ ಖ್ಯಾತ ಕಲಾವಿದ ಮನೋಜ್ ವಾಯೋಲಿನ್ ಬಗ್ಗೆ ತಿಳಿಯುತ್ತದೆ. ಅನೇಕ ದಿನಗಳ ಶ್ರಮದ ನಂತರ ಅವರನ್ನು ಭೇಟಿ ಕೂಡ ಮಾಡುತ್ತಾಳೆ. ಮೈಕ್ರೋ ಆರ್ಟ್ ನ ಕೌಶಲ್ಯದ ಬಗ್ಗೆ ಅವರಿಂದ ತಿಳಿದುಕೊಂಡ ಆಕೆ ತನ್ನ ರಚನೆಗಳನ್ನು ಅವರಿಗೆ ತೋರಿಸುತ್ತಾಳೆ.ಅಮೃತಾ ಆಸಕ್ತಿ ಗಮನಿಸಿದ ಮನೋಜ್ ಅವಳನ್ನು ಕೇರಳದ ಒಂದು ಕ್ರಿಯೇಟಿವ್ ಗ್ರೂಪ್ ಗೆ ಪರಿಚಯಿಸುತ್ತಾರೆ. ಮತ್ತಷ್ಟು ಹೊಸ ಕಲಾವಿದರ ಪರಿಚಯವಾಗುತ್ತದೆ. ಇನ್ನಷ್ಟು ಯೋಜನೆಗಳು ಸಿದ್ಧಗೊಳ್ಳುತ್ತವೆ. ಅಮೃತಾ ಮತ್ತಷ್ಟು ಪ್ರಖರಗೊಳ್ಳುತ್ತಾಳೆ.

ಕೇರಳ ಪೆನ್ಸಿಲ್ ಕಲಾವಿದರ ಒಕ್ಕೂಟ ಸೇರುವ ಅಮೃತಾ ತನ್ನ ಕಲಾಕೃತಿಗಳನ್ನು ಎಲ್ಲರಿಗೂ ಪರಿಚಯಿಸುತ್ತಾಳೆ. ಅಮೃತಾ ರಚನೆಗಳನ್ನು ಶ್ಲಾಘಿಸುವ ಅವರೆಲ್ಲರೂ ಮತ್ತಷ್ಟು ವಿಭಿನ್ನವಾಗಿ ರಚಿಸಲು ನೆರವಾಗುತ್ತಾರೆ. ಇದು ಸವಾಲಿನ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಮತ್ತು ನೂತನ ಕೌಶಲಗಳನ್ನು ಅಳವಡಿಸಲು ನೆರವಾಯಿತು. ಆತ್ಮವಿಶ್ವಾಸ ಹೆಚ್ಚಿತು.

ಮತ್ತೊಂದು ಮಗ್ಗುಲಿಗೆ ಹೊರಳುವ ಅಮೃತಾ ಈಗ ಮೈಕ್ರೋ ಆರ್ಟ್ಸ್ ನಲ್ಲಿ ವಿಶ್ವ ದಾಖಲೆ ನಿರ್ಮಿಸುವತ್ತ ತನ್ನನ್ನು ತೊಡಗಿಸಿಕೊಳ್ಳುತ್ತಾಳೆ. ಇದೇ ಸಮಯ ಮೈಕ್ರೋ ಆರ್ಟ್ಸ್ ನಲ್ಲಿ ಗಿನ್ನೆಸ್ ದಾಖಲೆ ನಿರ್ಮಿಸಿದ ಆಂದ್ರಪ್ರದೇಶದ ಡಾ.ವೆಂಕಟೇಶ್ ಗೆಟ್ಟಂ ಬಗ್ಗೆ ತಿಳಿದ ಅಮೃತಾ  ಅವರನ್ನು ಭೇಟಿಯಾಗುತ್ತಾಳೆ. ಅವರೂ ಸಹ ಅವಳನ್ನು ಪ್ರೋತ್ಸಾಹಿಸುತ್ತಾರೆ. ಪೆನ್ಸಿಲ್ ಆರ್ಟ್ ನಲ್ಲಿ ವಿಶ್ವದಾಖಲೆ ನಿರ್ಮಿಸಲು ನಿರ್ಧರಿಸಿದ ಅಮೃತಾ ತನ್ನ ಕನಸನ್ನು ಬೆಂಬತ್ತುತ್ತಾಳೆ. ತನ್ನ ಕನಸು ನನಸು ಮಾಡಲು ಈಗ ಅವಳು ಯಾವುದಕ್ಕೂ ಸಿದ್ಧಳಿರುತ್ತಾಳೆ. ಇದೇ ಸಮಯ ಕೇರಳ ಪೊಲೀಸ್ ಇಲಾಖೆಯಲ್ಲಿ ಕೆಲಸಕ್ಕೆ ಸೇರಲು ನಿರ್ಧರಿಸುತ್ತಾಳೆ. ಇದು ಹೆತ್ತವರ ಚಿಂತೆಯನ್ನು ದೂರ ಮಾಡಲು ಮತ್ತು ತನ್ನ ಮಹದಾಸೆ ಈಡೇರಲು ಬೇಕಾದ ಹಣಕಾಸಿನ ನೆರವಿಗಾಗಿ ಅನಿವಾರ್ಯವಾಗಿತ್ತು. ಪೆನ್ಸಿಲ್ ಆರ್ಟ್ಸ್ ನಲ್ಲಿ ವಿಭಿನ್ನ ರೀತಿಯ ಕಲಾಕೃತಿಗಳನ್ನು ರಚಿಸುತ್ತಾ ಹೋದ ಅಮೃತಾಳನ್ನು ಈಗ ಕೇರಳ ಗುರುತಿಸುತ್ತದೆ.

2020ರ ಸೆಪ್ಟಂಬರ್ ನಲ್ಲಿ ತನ್ನ ಕಲಾಕೃತಿಗಳಿಗಾಗಿ ಚಾಂಪಿಯನ್ಸ್ ಬುಕ್ ಆಫ್ ರೆಕಾರ್ಡ್ಸ್ ಮತ್ತು ಸುಪ್ರೀಂ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆಯುತ್ತಾಳೆ ಅಮೃತಾ. ತನ್ನ ಜೀವಮಾನದ ಕನಸನ್ನು ನನಸು ಮಾಡಿಕೊಂಡ ಸಂಭ್ರಮ ಅವಳ ಪಾಲಿಗಾಗುತ್ತದೆ. ಕೇವಲ 24ರ ಹರೆಯದಲ್ಲೆ ದೇಶದ ಅಗ್ರಗಣ್ಯ ಮೈಕ್ರೋ ಆರ್ಟಿಸ್ಟ್ ಗಳ ಸಾಲಿಗೆ ಸೇರುತ್ತಾಳೆ ಅವಳು. ಇಷ್ಟಕ್ಕೆ ಸುಮ್ಮನಿರದ ಅಮೃತಾ ಈಗ ಯುವ ಪ್ರತಿಭೆಗಳಿಗೆ ತರಬೇತಿ ನೀಡುತ್ತಾಳೆ. ಯೂ ಟ್ಯೂಬ್ ಚಾನಲ್ ಆರಂಭಿಸಿ ಪೆನ್ಸಿಲ್ ಆರ್ಟ್ ನ ಬಗ್ಗೆ ಪ್ರಚಾರ ಕೈಗೊಳ್ಳುತ್ತಿದ್ದಾಳೆ.

ನಿಮ್ಮ ಗುರಿಯನ್ನು ಸಾಧಿಸುವುದು ನಿಮಗಷ್ಟೆ ಖುಷಿ ನೀಡಬಹುದು. ಆದರೆ ನಿಮ್ಮ ಸಾಧನೆಯ ಪಥದಲ್ಲಿ ಉಳಿದವರಿಗೂ ಹಾದಿ ನಿರ್ಮಿಸುವುದು ಆ ದಾರಿಯುದ್ದಕ್ಕೂ ಎಲ್ಲರಿಗೂ ಸಂತಸ ಹರಡುತ್ತದೆ ಎನ್ನುವ ಅಮೃತಾ, ದಿಟ್ಟ ನಿರ್ಧಾರ ಹೇಗೆ ನಮ್ಮ ಕನಸನ್ನು ನನಸು ಮಾಡುವಲ್ಲಿ ಸಹಕಾರಿಯಾಗಬಹುದು ಎಂಬುದಕ್ಕೆ ಉದಾಹರಣೆಯಾಗಿ ನಿಲ್ಲುತ್ತಾರೆ.

  -ತೇಜಸ್ವಿ.ಕೆ, ಪೈಲಾರು, ಸುಳ್ಯ

Visit: Upayuktha Advertisements


Post a Comment

ನವೀನ ಹಳೆಯದು