ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಕೆಚ್ಚೆದೆಯ ಆದಿವಾಸಿ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad





ಭಾರತ ಸ್ವಾತಂತ್ರ್ಯ ಸಂಗ್ರಾಮ ಅನೇಕ ಕೆಚ್ಚೆದೆಯ ಸ್ವಾತಂತ್ರ್ಯ ವೀರರ ಹೋರಾಟಕ್ಕೆ ಸಾಕ್ಷಿಯಾಗಿದೆ. ಜೀವ ಹಂಗು ತೊರೆದು ಹೋರಾಡಿದ ಅನೇಕ ವೀರರು ತಾವು ಪ್ರಾಣ ತ್ಯಾಗ ಮಾಡುವ ಮೊದಲು ತಮ್ಮ ಅನುಯಾಯಿಗಳಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹೊಮ್ಮಿಸಿಯೇ ಮರೆಯಾದರು. ಇದು ಸ್ವಾತಂತ್ರ್ಯ ಹೋರಾಟದ ಕಾವು ಕೊನೆಯವರೆಗೂ ಮುಂದುವರಿಯುವಂತೆ ಮಾಡಿತು. ಇಂಥ ವೀರರಲ್ಲಿ ಒಬ್ಬ ಆದಿವಾಸಿ ಹೋರಾಟಗಾರ ಭಗವಾನ್ ಬಿರ್ಸಾ ಮುಂಡಾ. ಮುಂಡಾ ಆದಿವಾಸಿ ಜನಾಂಗದ ಮಹಾನ್ ಸ್ವಾತಂತ್ರ್ಯ ಹೋರಾಟಗಾರ. ಬದುಕಿದ 25 ವರ್ಷದಲ್ಲಿ ಎಂದೂ ಮರೆಯದ ಹೋರಾಟ ಈತನ ಹೆಗ್ಗಳಿಕೆ.

ಜಾರ್ಖಂಡ್ ನ ಖೂಂಟಿ ಜಿಲ್ಲೆಯ ಉಲಿಹಾತು ಎಂಬ ವನವಾಸಿ ಗ್ರಾಮದಲ್ಲಿ ನವಂಬರ್ 15, 1975ರಲ್ಲಿ ಜನಿಸಿದ ಈತನ ತಂದೆ ಸುಗನಾ ಮುಂಡಾ, ತಾಯಿ ಕರ್ಮಿಹಾತಿ. ಗುರುವಾರ ಜನಿಸಿದ ಕಾರಣ ಸಮುದಾಯದ ಸಂಪ್ರದಾಯದಂತೆ ಬಿರ್ಸಾ ಎಂದೇ ಹೆಸರಿಡಲಾಯಿತು. ಬಿರ್ಸಾ ಹುಟ್ಟುವ ಸಮಯದಲ್ಲಿ "ಮುಂಡಾ ಜನಾಂಗದಲ್ಲಿ ಒಬ್ಬ ದೇವತೆಯ ಜನನವಾಗುವುದು. ಅವನು ಕಪ್ಪಗಿದ್ದು ಕೊಳಲಿನ ಮೂಲಕ ಜನರನ್ನು ಹೋರಾಟಕ್ಕೆ ಸಿದ್ಧ ಮಾಡುತ್ತೇನೆಂದು" ಮಾತು ಪ್ರತೀತಿಯಲ್ಲಿತ್ತು. ಈ ಮಾತು ಬಿರ್ಸಾ ಮೂಲಕ ನಿಜವಾದ್ದು ಈಗ ಇತಿಹಾಸ.

ಕಡು ಬಡ ಕುಟುಂಬದಲ್ಲಿ ಹುಟ್ಟಿದ ಬಿರ್ಸಾನಿಗೆ 2 ಜನ ಅಕ್ಕಂದಿರು,ಒಬ್ಬ ಅಣ್ಣ, ಒಬ್ಬ ತಮ್ಮ. ಬಾಲ್ಯದಿಂದಲೇ ಬುದ್ಧಿವಂತ ಬಿರ್ಸಾ ತಂದೆ ಕೂಲಿ ಕೆಲಸಕ್ಕೆ ಹೋದಾಗ ತಾನು ಕಾಡಿಗೆ ಕುರಿ ಮೇಯಿಸಲು ಹೋಗುತ್ತಿದ್ದ. ಇದೇ ಸಮಯ ಬಿರ್ಸಾ ತಾನೇ ಕೊಳಲು ತಯಾರಿಸಿ ಸೊಗಸಾಗಿ ನುಡಿಸಲು ಕಲಿಯುತ್ತಾನೆ. ನಂತರ ಬಿರ್ಸಾ ಅಯುಬಾಹಾತಿನಲ್ಲಿ ಜರ್ಮನಿ ಮಿಷನರಿ ಶಾಲೆಗೆ ಸೇರುತ್ತಾನೆ. ಆ ಶಾಲೆಯಲ್ಲಿ ಓದಲು ಕ್ರಿಶ್ಚಿಯನ್ ಮತಕ್ಕೆ ಸೇರಬೇಕಾದ್ದು ಅನಿವಾರ್ಯವಾಗಿದ್ದರಿಂದ ಬಿರ್ಸಾ ಕುಟುಂಬ ಕ್ರಿಶ್ಚಿಯನ್ ಆಗಿ ಮತಾಂತರಗೊಳ್ಳುತ್ತದೆ. ಬಿರ್ಸಾ "ಬಿರ್ಸಾ ಡೇವಿಡ್" ಆಗುತ್ತಾನೆ. ಆದರೆ ಬಿರ್ಸಾ ಪೂರ್ಣವಾಗಿ ಅವರ ವಶಕ್ಕೆ ಬೀಳಲಿಲ್ಲ. ಕಲಿಕೆ ಅನಿವಾರ್ಯವಾಗಿದ್ದರಿಂದ ಹೆಸರು ಬದಲಾಯಿಸಿದ್ದ ಅಷ್ಟೆ.

ಒಮ್ಮೆ ಅಲ್ಲಿನ ಚರ್ಚಿನ ಪಾದ್ರಿ ಸುತ್ತಲಿನ ಕಾಡನ್ನು ಮಿಷನ್ನಿಗೆ ಒಪ್ಪಿಸಬೇಕೆಂದು ಆಗ್ರಹಿಸುತ್ತಾನೆ. ವಿರೋಧಿಸಿದ ಬಿರ್ಸಾನನ್ನು ಶಾಲೆಯಿಂದ ಹೊರ ಹಾಕಲಾಗುತ್ತದೆ. ಅನೇಕ ಜನ ಮಿಷನರಿಗಾಗಿ ಕಾಡು ಕಳೆದುಕೊಂಡದ್ದು ಆತನಲ್ಲಿ ರೋಷ ಉಕ್ಕಿಸುತ್ತದೆ.ಮರಳಿ ತನ್ನ ಧರ್ಮಕ್ಕೆ ಮರಳಿದ ಬಿರ್ಸಾ ರಾಂಚಿಯ  ಆನಂದ ಪಾಂಡೆಯವರ ಸಂಪರ್ಕಕ್ಕೆ ಬರುತ್ತಾನೆ. ರಾಮಾಯಣ, ಮಹಾಭಾರತ, ಗೀತೋಪದೇಶಗಳನ್ನು ಅಧ್ಯಯನ ಮಾಡುತ್ತಾನೆ. ಅಪಾರ ಜ್ಞಾನವಂತ ಯುವಕ ಕ್ರಿಶ್ಚಿಯನ್ ಮಿಷನರಿಗಳಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಯುವಕರನ್ನು ಸಂಘಟಿಸಿ ತಿಳಿ ಹೇಳುತ್ತಿದ್ದ. ತಲೆಯ ಮೇಲೆ ಹಳದಿ ರುಮಾಲು ಧರಿಸಲು ಆರಂಭಿಸಿದ. ಸಂಘಟನೆಯನ್ನು ವಿಸ್ತರಿಸುತ್ತಾ ಸಾಗಿದ ಬಿರ್ಸಾನನ್ನು ಜನ ಈಗ ಬಿರ್ಸಾ ಭಗವಾನ್ ಎಂದು ಕರೆಯುತ್ತಾರೆ.

ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಬ್ರಿಟಿಷರು ವನವಾಸಿಗಳು ಮತ್ತು ಗ್ರಾಮವಾಸಿಗಳ ನಡುವೆ ಜಗಳ ತಂದಿತ್ತರು. ಮುಂಡಾ ಜನರನ್ನು ಅಸ್ಸಾಂನ ಚಹಾ ತೋಟಗಳಿಗೆ ಕೂಲಿ ಕೆಲಸಗಳಿಗೆ ಕಳಿಸಲಾಗುತ್ತದೆ. 1865ರಲ್ಲಿ "ಭಾರತೀಯ ವನ ಅಧಿನಿಯಮ" ತರಲಾಗುತ್ತದೆ. ಇದರ ಪರಿಣಾಮ ಅರಣ್ಯ ವಸ್ತು ಸಂಗ್ರಹಿಸುವುದು ಕಷ್ಟವಾಯಿತು. ಕ್ರೋಧಗೊಂಡ ಬಿರ್ಸಾ ಬ್ರಿಟಿಷರ ಕುತಂತ್ರವನ್ನು ಜನರಿಗೆ ವಿವರಿಸುತ್ತಾ ಸಾಗಿದ. ಇದು ಮತಾಂತರಕ್ಕೂ ಅಡ್ಡಿಯಾಯಿತು ಅವರು ಬಿರ್ಸಾನನ್ನು ನಿವಾಳಿಸಲು ಕಾರ್ಯಪ್ರವೃತ್ತರಾದರು. ಮತಾಂತರದ ವಿರುದ್ಧ ಹಾಗೂ ಬ್ರಿಟಿಷರ ವಿರುದ್ಧ ಬಿರ್ಸಾ ಮುಂಡಾ ಜನರನ್ನು ಒಗ್ಗೂಡಿಸುತ್ತಲೇ ಸಾಗಿದ. ಬಿರ್ಸಾ ಅನುಯಾಯಿಗಳ ಸಂಖ್ಯೆ ಹೆಚ್ಚತೊಡಗಿತು. ಅವನ ಸಂಘಟನೆಯನ್ನು "ಬಿರಸಾಯಿಯತ್" ಎಂದು ಕರೆಯಲಾಗುತ್ತಿತ್ತು.



ಇನ್ನಷ್ಟು ಕಠಿಣ ಕಾನೂನುಗಳನ್ನು ತಂದ ಬ್ರಿಟಿಷರು ಎಲ್ಲ ಅರಣ್ಯ ಗಳನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸುತ್ತಾರೆ. ವನವಾಸಿಗಳ ಎಲ್ಲ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಸಿದ ಬ್ರಿಟಿಷರ ವಿರುದ್ಧ ಬಿರ್ಸಾ ಸ್ವಾತಂತ್ರ್ಯ ಸಂಗ್ರಾಮ ಆರಂಭಿಸಿದ. 1894ರಲ್ಲಿ ಚೋಟಾ ನಾಗ್ಪುರದಲ್ಲಿ ಬೃಹತ್ ಮೆರವಣಿಗೆ ಆಯೋಜಿಸಿ "ಉಳುವವನೇ ಒಡೆಯನಾಗಬೇಕು, ಬ್ರಿಟಿಷ್ ಆಡಳಿತ ಕೊನೆಯಾಗಬೇಕು" ಎಂದು ಆಗ್ರಹಿಸಿದ. ಬಿರ್ಸಾನನ್ನು ಬಂಧಿಸಿ 2 ವರ್ಷಗಳ ಕಾಲ ಜೈಲಿಗೆ ಹಾಕಲಾಗುತ್ತದೆ.ಜೈಲಿನಲ್ಲೆ ಮುಂದಿನ ಹೋರಾಟದ ಸ್ವರೂಪ ನಿಶ್ಚಯಿಸಿದ ಬಿರ್ಸಾ ಜೈಲಿನಿಂದ ಹೊರ ಬಂದು ಭೂಗತನಾಗಿ ಹೋರಾಟ ಮುಂದುವರಿಸುತ್ತಾನೆ. ಪೊಲೀಸರ ಮೇಲೆ ಬಿರ್ಸಾನ ಆದಿವಾಸಿ ಗೆರಿಲ್ಲಾ ಪಡೆ ದಾಳಿ ಮಾಡುತ್ತದೆ. ಸರ್ಕಾರ ಬಿರ್ಸಾನನ್ನು ಹುಡುಕಿ ಕೊಟ್ಟವರಿಗೆ 500 ರೂಪಾಯಿಗಳ ಬಹುಮಾನ ಘೋಷಿಸುತ್ತದೆ. ಜನಬೆಂಬಲದ ಕಾರಣ ಸುಲಭದಲ್ಲಿ ಬಿರ್ಸಾ ಬಂಧನ ಸಾಧ್ಯವಾಗುವುದಿಲ್ಲ.

8 ಜನವರಿ 1900ರಂದು ಬಿರ್ಸಾನ ಆಹ್ವಾನದ ಮೇರೆಗೆ ಡೊಂಬಾರಿ ಬೆಟ್ಟ ಎಂಬಲ್ಲಿ 4,000ಕ್ಕೂ ಹೆಚ್ಚಿನ ಸಶಸ್ತ್ರ ಆದಿವಾಸಿ ಪುರುಷರು, ಮಹಿಳೆಯರು ಸೇರುತ್ತಾರೆ. ವಿಷಯ ತಿಳಿದ ಬ್ರಿಟಿಷ್ ಸೈನ್ಯ ದಾಳಿ ಮಾಡುತ್ತದೆ. ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ದಾಳಿ ಮಾಡಿದ ಸೈನದ ಕೈ ಮೇಲಾಗುತ್ತದೆ. ಆದರೆ ಪ್ರಾಣದ ಹಂಗು ತೊರೆದು ಆದಿವಾಸಿಗಳು ಹೋರಾಡುತ್ತಾರೆ. ಬಿರ್ಸಾ ಪರಾರಿಯಾಗುತ್ತಾನೆ, ಆದರೆ ಆತನ ಸೈನ್ಯ ಹೋರಾಟ ಮುಂದುವರಿಸುತ್ತದೆ. ಜಮಕೋಪಾಯ ಎಂಬಲ್ಲಿ  ಮಲಗಿ ನಿದ್ರಿಸುತ್ತಿದ್ದ ಬಿರ್ಸಾ ಮುಂಡಾನನ್ನು ಕೊನೆಗೂ ಬ್ರಿಟಿಷರು ಬಂಧಿಸುತ್ತಾರೆ. ಜನ ದಂಗೆಯೇಳುತ್ತಾರೆ, ವಿನಾಕಾರಣ ಅವರನ್ನು ಬಂಧಿಸಲಾಗುತ್ತದೆ. 25 ವರ್ಷದ ಬಿರ್ಸಾನನ್ನು ಸರಪಳಿಯಿಂದ ಬಂಧಿಸಿ ಏಕಾಂತದಲ್ಲಿಟ್ಟು ಚಿತ್ರಹಿಂಸೆ ನೀಡಲಾಗುತ್ತದೆ. 9 ಜೂನ್ 1900ರಂದು ರಕ್ತವಾಂತಿ ಮಾಡಿಕೊಂಡ ಬಿರ್ಸಾ ಮುಂಡಾ ಕೊನೆಯುಸಿರೆಳೆಯುತ್ತಾನೆ. ಆದಿವಾಸಿಗಳ ಮಹಾನ್ ನಾಯಕನ ಯುಗಾಂತ್ಯವಾಗುತ್ತದೆ. ಆದರೆ ಬಿರ್ಸಾನ ಪ್ರೇರಣೆ ಮುಂದುವರಿಯುತ್ತದೆ ಸಹಸ್ರಾರು ಯುವಕರ ಸ್ವಾತಂತ್ರ್ಯ ಹೋರಾಟ ಮುಂದುವರಿಯುತ್ತದೆ.

ಬಿರ್ಸಾನನ್ನು ಜನ ಬಿರ್ಸಾ ಭಗವಾನ್ ಎಂದು ಹಾಡಿ ಹೊಗಳುತ್ತಾರೆ. ಬಿರ್ಸಾ ಜನ್ಮದಿನವನ್ನು "ವನವಾಸಿ ಸ್ವಾಭಿಮಾನಿ ದಿನ" ವಾಗಿ ಆಚರಿಸಲಾಗುತ್ತದೆ.

ಬಿರ್ಸಾನಂಥ ವೀರ ಯುವಕರ ಕೆಚ್ಚೆದೆಯ ಹೋರಾಟಗಳು ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ಆಯಮವನ್ನು ನೀಡಿದವು.ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು ಮತ್ತಷ್ಟು ಜ್ವಲಿಸಿತು. ಅದಕ್ಕಾಗಿಯೇ ಬಿರ್ಸಾ ಮುಂಡಾನಂಥ ಅಪ್ರತಿಮ ದೇಶಭಕ್ತರು ಇಂದಿಗೂ ಪ್ರಾತಸ್ಮರಣೀಯರು.

-ತೇಜಸ್ವಿ ಕೆ,ಪೈಲಾರು, ಸುಳ್ಯ


Post a Comment

ನವೀನ ಹಳೆಯದು