ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಇಂದಿನ ಐಕಾನ್- ವೀರನಾರಿ ಸೈನಿಕನ ಪತ್ನಿ ಶಕುಂತಳಾ ಭಂಡಾರ್ಕರ್ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಈ ಹಿಂದಿನ ಯಾವ ಕಥೆಯೂ ನನ್ನನ್ನು ಇಷ್ಟೊಂದು ತೀವ್ರವಾಗಿ ಕಾಡಿರಲಿಲ್ಲ! ಅವರ ಇಡೀ ಬದುಕು ಅದ್ಭುತವಾದ ರಾಷ್ಟ್ರ ಪ್ರೇಮದ ಒಂದು ಮಹಾಗಾಥೆ! ಅದನ್ನು ಅವರದ್ದೇ ಮಾತಲ್ಲಿ ಕೇಳುತ್ತಾ ಹೋಗೋಣ. 

ನಾನು ಶಕುಂತಳಾ. ನನ್ನ ಪೋಷಕರಿಗೆ ನಾನು ಒಬ್ಬಳೇ ಮಗಳು. ನಾನು ಪ್ರೀತಿಸಿ ಮದುವೆ ಆದದ್ದು ಲೆಫ್ಟಿನೆಂಟ್ ಕರ್ನಲ್ ಅಜಿತ್ ಭಂಡಾರ್ಕರ್ ಅವರನ್ನು. ಅಪ್ಪನಿಗೆ ಸೈನಿಕರ ಬಗ್ಗೆ ತುಂಬಾ ಗೌರವ ಇತ್ತು. ನಾನು ನನ್ನ ಮತ್ತು ಅಜಿತ್ ಪ್ರೀತಿಯ ಬಗ್ಗೆ ಅವರಲ್ಲಿ ಹೇಳಿದಾಗ ಎರಡನೇ ಮಾತನ್ನು ಹೇಳದೇ ನಮ್ಮ ಮದುವೆ ಮಾಡಿ ಕೊಟ್ಟರು (1990).  

ಲೆಫ್ಟಿನೆಂಟ್ ಕರ್ನಲ್ ಅಜೀತ್ ಭಂಡಾರ್ಕರ್ ಒಬ್ಬ ಭಾರತೀಯ ಯೋಧ. ಮೂಲತಃ ಬೆಂಗಳೂರಿನವರು. ನಾನು ಸೈನಿಕನ ಪತ್ನಿ ಎನ್ನುವ ಹೆಮ್ಮೆ ನನಗೆ. ಅವರಿಗೆ ರಾಷ್ಟ್ರವೇ ಒಂದು ಕುಟುಂಬ. ಮಹಾನ್ ದೇಶಪ್ರೇಮಿ. ಆದರೆ ನನಗೆ ತುಂಬಾ ಪ್ರೀತಿ ಕೊಟ್ಟರು. ನನ್ನನ್ನು ಒತ್ತಾಯ ಮಾಡಿ ಸ್ವಾವಲಂಬಿಯನ್ನಾಗಿ ಮಾಡಿದರು. ನಾನು ಬಿ.ಎಡ್ ಮುಗಿಸಿ ಶಿಕ್ಷಕಿ ಆಗಲು ಅವರೇ ಸ್ಫೂರ್ತಿ. ನಿರ್ಭಯ್ ಮತ್ತು ಅಕ್ಷಯ್ ನನ್ನ ಮತ್ತು ಅಜಿತ್ ಅವರ ಪ್ರೀತಿಯ ಬಳ್ಳಿಯ ಎರಡು ಮೊಗ್ಗುಗಳು. ಇಬ್ಬರು ಮಕ್ಕಳೂ ಅಪ್ಪನ ಹಾಗೆ ಬುದ್ಧಿವಂತರು.

ಪೂನಾ, ಇಂದೋರ್, ಸಿಕ್ಕಿಂ, ದೆಹಲಿ, ಜಮ್ಮು ಕಾಶ್ಮೀರಗಳಲ್ಲಿ ಸೇವೆ ಸಲ್ಲಿಸುತ್ತಾ ಇದ್ದರೂ  ಅಜಿತ್ ರಜೆ ದೊರೆತ ಕೂಡಲೇ ಮನೆಗೆ ಓಡಿ ಬರುತ್ತಿದ್ದರು. ಮಕ್ಕಳನ್ನು ಹೆಗಲ ಮೇಲೆ ಕೂರಿಸಿ ಕೊಂಡು ಮೆರವಣಿಗೆ ಮಾಡೋರು. ನನ್ನನ್ನು, ಮಕ್ಕಳನ್ನು ಎದುರು ಕೂರಿಸಿ ಯುದ್ದ ಭೂಮಿಯ ಕಥೆಗಳನ್ನು ವೀರೋಚಿತ ಆಗಿ ಹೇಳೋರು. ಆಗೆಲ್ಲ ನನಗೆ ಅವರ ಬಗ್ಗೆ ಹೆಮ್ಮೆ ಮತ್ತು ಗೌರವ ಇಮ್ಮಡಿ ಆಗುತ್ತಿತ್ತು.  

1999ರ ಕಾರ್ಗಿಲ್ ಯುದ್ಧವು ಆರಂಭ ಆದಾಗ ಅಜಿತ್ ಆಪರೇಶನ್ ರಕ್ಷಕ್ ಮತ್ತು ಆಪರೇಶನ್ ವಿಜಯ್ ತಂಡದ ಸದಸ್ಯರಾಗಿ ಯುದ್ಧಕ್ಕೆ ಕರೆ ಪಡೆದರು. ಭಾರವಾದ ಹೃದಯದಲ್ಲಿ ನಾನು ಅವರನ್ನು ಯುದ್ಧಕ್ಕೆ ಕಳುಹಿಸಿದ್ದೆ. ಕಾರ್ಗಿಲ್ ಯುದ್ಧವು ತೀವ್ರವಾಗಿ ಮುಂದುವರೆದಾಗ ನಾನು ಅವರ ಕ್ಷೇಮ ಮತ್ತು ಯಶಸ್ಸಿನ ಬಗ್ಗೆ ದೇವರಲ್ಲಿ ದಿನವೂ ಪ್ರಾರ್ಥನೆ ಮಾಡುತ್ತಿದ್ದೆ. ಅಕ್ಟೋಬರ್ 29ರಂದು ಸಂಜೆ ನನಗೆ ಕರೆ ಮಾಡಿ ಐದು ನಿಮಿಷ  ತುಂಬಾ ಪ್ರೀತಿಯಿಂದ ಮಾತನಾಡಿದ್ದರು. ಮಕ್ಕಳ ಜೊತೆಗೂ ಅಷ್ಟೇ ಪ್ರೀತಿಯಿಂದ  ಮಾತಾಡಿದ್ದರು. ಮಾತು ಮುಗಿಸುವಾಗ ಯಾವಾಗಲೂ ಜೈ ಹಿಂದ್ ಅಂತಾನೆ ಮುಗಿಸೋರು. ಅಂದು ಕೂಡ ಜೈ ಹಿಂದ್ ಅಂದರು. ಆದರೆ ಎರಡು ದಿನ ಕಳೆದು ಒಂದು ಬೆಳಗ್ಗೆ ನಾವು ಕಣ್ಣು ತೆರೆಯುವ ಮೊದಲೇ ಶಾಕಿಂಗ್ ನ್ಯೂಸ್ ಹೊತ್ತುಕೊಂಡು ಒಬ್ಬ ಸೈನಿಕ ಮನೆಬಾಗಿಲಿಗೆ ಬಂದಿದ್ದ! 

"ಲೆಫ್ಟಿನೆಂಟ್ ಕರ್ನಲ್ ಅಜಿತ್ ಭಂಡಾರ್ಕರ್ ಪಾಕಿಸ್ತಾನದ ಸೈನಿಕರೊಂದಿಗೆ ಹೋರಾಡುತ್ತ ಹುತಾತ್ಮರಾದರು!" ನಾನು ಕುಸಿದು ಕುಳಿತೆ. ಎರಡು ದಿನ ಮೊದಲು ಕರೆ ಮಾಡಿ ತುಂಬಾ ಪ್ರೀತಿಯಿಂದ ಮಾತಾಡಿದ್ದ ಗಂಡ ಇನ್ನು ಮರಳಿ ಬರುವುದೇ ಇಲ್ಲ ಅಂದರೆ ನಂಬೋದು ಹೇಗೆ? ಮಕ್ಕಳು ಇನ್ನೂ ತುಂಬಾ ಚಿಕ್ಕವರು. ಒಂದೆರಡು ದಿನಗಳಲ್ಲಿ ಅವರ ಪಾರ್ಥಿವ ಶರೀರ ಅವರ ಹುಟ್ಟೂರಾದ ಬೆಂಗಳೂರಿಗೆ ಬಂದಾಗ ನಾನು ಇನ್ನೂ ಆಘಾತದಿಂದ ಹೊರ ಬಂದಿರಲಿಲ್ಲ. ತ್ರಿವರ್ಣ ಧ್ವಜ ಹೊದ್ದು ಮಲಗಿದ್ದ ನನ್ನ ಅಜಿತ್ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದರು. ಅವರು ನನ್ನನ್ನು ಪದೇ ಪದೇ  ಸ್ವಾವಲಂಬಿಯಾಗು ಅಂತ ಯಾವಾಗಲೂ ಹೇಳುತ್ತಿದ್ದದ್ದು ಯಾಕೆ ಎಂದು ನನಗೆ ಅರ್ಥ ಆಗತೊಡಗಿತು.


 

ಶಿಕ್ಷಕಿಯಾಗಿ ಶಾಲೆಯಲ್ಲಿ ಹೆಚ್ಚು ಹೊತ್ತು ಕಳೆಯುತ್ತಿದ್ದೆ. ನನ್ನ ಇಬ್ಬರು ಮಕ್ಕಳು ತುಂಬಾ  ಸಣ್ಣವರು. ಅವರಿಗೆ ತುಂಬಾ ವರ್ಷ ಅಪ್ಪ ಹುತಾತ್ಮರಾದ ವಿಷಯ ಹೇಳಲೇ ಇಲ್ಲ. ಅಜಿತ್ ನನ್ನ ಹೃದಯದ ಒಳಗೆ ಇದ್ದು ನನ್ನನ್ನು ಮುನ್ನಡೆಸುತ್ತಿದ್ದರು. 2000ರಲ್ಲಿ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರ ಪ್ರಶಸ್ತಿ ಬಂದಾಗ ಹೆಮ್ಮೆಯಿಂದ ಹೋಗಿ ಸ್ವೀಕರಿಸಿದೆ. ನಾನು ಕಣ್ಣೀರು ಹಾಕಬಾರದು ಎಂದು ನಿರ್ಧರಿಸಿದ್ದೆ. ಹುತಾತ್ಮರಾದ ವೀರ ಯೋಧರ ಕುಟುಂಬಗಳ ಬಗ್ಗೆ ಸೇವೆ ಸಲ್ಲಿಸುತ್ತಾ ಬಂದಿರುವ "ವಸಂತ ರತ್ನ" ಎಂಬ ಫೌಂಡೇಶನ್ ಜೊತೆಗೆ ಆಗಲೇ ಕೈಜೋಡಿಸಿದೆ. ನನ್ನ ಶಾಲೆಯ ಮಕ್ಕಳಿಗೆ ರಾಷ್ಟ್ರಪ್ರೇಮದ ಕಥೆಗಳನ್ನು ರಸವತ್ತಾಗಿ ಹೇಳುತ್ತಿದ್ದೆ. ರಾಷ್ಟ್ರ ಭಕ್ತಿಯ ಗೀತೆಗಳನ್ನು ಮಕ್ಕಳಿಗೆ ಕಲಿಸುತ್ತಿದ್ದಾಗ ನನ್ನ ಅಜಿತ್ ಹೃದಯದಲ್ಲಿ ಬೆಚ್ಚಗೆ ಭಾವ ಉಂಟು ಮಾಡುತ್ತಿದ್ದರು.

ಒಂದು ದಿನ ಬೆಳಿಗ್ಗೆ ನನ್ನ ದೊಡ್ಡ ಮಗ ನಿರ್ಭಯ್ (ಆಗಲೇ ಪದವಿ ಮುಗಿಸಿದ್ದ) ನನ್ನ ಹತ್ತಿರ ಕೂತು "ಅಮ್ಮಾ, ನಾನು ಸೈನ್ಯಕ್ಕೆ ಸೇರಲೇ?" ಅಂದಾಗ ಮನಸ್ಸು ಒಂದು ಕ್ಷಣ ಅಧೀರವಾಯ್ತು! ಏನು ಉತ್ತರ ಕೊಡಬೇಕು ಎಂದು ಗೊತ್ತಾಗಲಿಲ್ಲ. ರಾತ್ರಿ ಕನಸಲ್ಲಿ ಅಜಿತ್ ಬಂದು "ಜೈ ಹಿಂದ್" ಹೇಳಿದಾಗ ಮನಸ್ಸು ಗಟ್ಟಿ ನಿರ್ಧಾರಕ್ಕೆ ಬಂದಿತು. ಮಗನನ್ನು ಪ್ರೀತಿಯಿಂದ ಸೇನಾ ತರಬೇತಿಗೆ ಕಳುಹಿಸಿಕೊಟ್ಟೆ. ಅವನು ತರಬೇತಿ ಮುಗಿಸಿ ಕ್ಯಾಪ್ಟನ್ ನಿರ್ಭಯ್ ಭಂಡಾರ್ಕರ್ ಆಗಿ ಮನೆಗೆ ಬಂದಾಗ ಸೆಲ್ಯೂಟ್ ಹೊಡೆದು "ಜೈ ಹಿಂದ್" ಹೇಳಿದೆ. 

ಕೆಲವೇ ದಿನಗಳ ನಂತರ ಎಂಜಿನಿಯರಿಂಗ್ ಓದುತ್ತಿದ್ದ ನನ್ನ ಎರಡನೇ ಮಗ ಅಕ್ಷಯ್ ಕೂಡ ನನ್ನ ಮುಂದೆ ಕೂತು ಅಣ್ಣನ ನಿರ್ಧಾರವನ್ನೇ ಪ್ರಕಟ ಮಾಡಿದ. ನನ್ನ ಹೃದಯದಲ್ಲಿ ಅಜಿತ್ ಜೀವಂತವಾಗಿ ಇರುವಾಗ ನಾನು ಹೇಗೆ ಬೇಡ ಮಗ ಅನ್ನಲಿ?  ಅವನು ನೇವಿ ತರಬೇತಿ ಮುಗಿಸಿ ಸಬ್ ಲೆಫ್ಟಿನೆಂಟ್ ಅಕ್ಷಯ್ ಭಂಡಾರ್ಕರ್ ಆಗಿ ಮನೆಗೆ ಬಂದ. ನಾವು ಮೂರೂ ಜನ ಅಜಿತ್ ಅವರ ಫೋಟೋದ ಮುಂದೆ ನಿಂತು ಸೆಲ್ಫಿಯನ್ನು ತೆಗೆದುಕೊಂಡಾಗ ನನಗೆ ರೋಮಾಂಚನ!

ನನ್ನ ಇಬ್ಬರು ಮಕ್ಕಳನ್ನು ಕೂಡ ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ ಹೆಮ್ಮೆ! ಅಜಿತ್ ಬಿಟ್ಟು ಹೋಗಿದ್ದ ಅಪೂರ್ಣವಾದ ಕನಸನ್ನು ನನಸು ಮಾಡಿದ ಧನ್ಯತೆ! 

ಜೈ ಹಿಂದ್! 

-ರಾಜೇಂದ್ರ ಭಟ್ ಕೆ,

ಜೇಸಿಐ ರಾಷ್ಟ್ರ ಮಟ್ಟದ ತರಬೇತುದಾರರು.


Visit: Upayuktha Advertisements- A Dedicated place for Your Ads

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

أحدث أقدم