ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ರಂಗಮಂಚದ ಯಕ್ಷ 'ಸ್ಪೂರ್ತಿ'ಯ ಚಿಲುಮೆ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ಅನೇಕ ಯುವ ಹಾಗೂ ಹವ್ಯಾಸಿ ಕಲಾವಿದರು ನಮಗೆ ನೋಡಲು ಸಿಗುತ್ತಾರೆ.  ಆದರೆ ಪುರುಷ ಹಾಗೂ ಸ್ತ್ರೀ ವೇಷ ಎರಡೂ ವೇಷಗಳನ್ನು ಮಾಡುವ ಕೆಲವು ಕಲಾವಿದರ ಸಾಲಿನಲ್ಲಿ ಕಾಣುವ ಹೆಸರು ಶ್ರೀಯುತ ಟಿ.ವಿ. ಸ್ಫೂರ್ತಿ.

ಉಡುಪಿ‌ ಜಿಲ್ಲೆ ಬ್ರಹ್ಮಾವರ ತಾಲ್ಲೂಕು ಮಂದಾರ್ತಿ ಸಮೀಪ ಕಾಡೂರು‌ ಗ್ರಾಮದ ಮಹಾಲಕ್ಷ್ಮೀ ಹಾಗೂ ದಿ.ವಿಷ್ಣುಮೂರ್ತಿ ಶ್ಯಾನುಭೋಗ್ ಇವರ ಮಗನಾಗಿ ದಿನಾಂಕ 09-03-1996 ರಂದು ಇವರ ಜನನ. ಎಂಸಿಎ ಇವರ ವಿದ್ಯಾಭ್ಯಾಸ.

ಬಾಲ್ಯದಿಂದಲೂ ಯಕ್ಷಗಾನ ಕಲೆಯೆಂದರೆ ಒಂದು ರೀತಿಯ ಆಕರ್ಷಣೆ.  ಬಣ್ಣದ ವೇಷದ ಅಬ್ಬರ, ಪುಂಡು ವೇಷದ ಕುಣಿತ, ಸ್ತ್ರೀ ವೇಷದ ಅಭಿನಯಗಳು ಮನಸ್ಸಿನಲ್ಲಿ ಅಚ್ಚೊತ್ತಿದ್ದವು. ಚಿಕ್ಕವನಿದ್ದಾಗ ತಂದೆಯ ಜೊತೆ ಆಟ ನೋಡಲು ಹೋಗುತ್ತಿದ್ದೆ, ತೀರ್ಥಹಳ್ಳಿ ಗೋಪಾಲ ಆಚಾರ್ಯರು ಮತ್ತು ಕಣ್ಣಿಮನೆ ಗಣಪತಿ ಭಟ್ಟರ ವೇಷಗಳು ತುಂಬಾ ಇಷ್ಟವಾಗುತ್ತಿತ್ತು. ಅವರು ಹಿಡಿದು ಕೊಳ್ಳುತ್ತಿದ್ದ ಆಯುಧಗಳೆಲ್ಲ ನನಗೆ ಬೇಕು ಎಂದು ಹಟ ಹಿಡಿಯುತ್ತಿದ್ದೆ. ಪ್ರಥಮವಾಗಿ ಗೆಜ್ಜೆ ಕಟ್ಟಿದ್ದು ಶೀರೂರು ಅಣ್ಣಪ್ಪನವರು, ನಮ್ಮ ಸಂಬಂಧಿಕರ ಮನೆಯ ಆಟದ ದಿನ ಮಂದಾರ್ತಿ ಮೇಳದಲ್ಲಿ ಹರಿಕೆ ಇದ್ದ ಕಾರಣ. ನಂತರದಲ್ಲಿ ಮನೆಯ ಪಕ್ಕದಲ್ಲಿ ಕ್ರಿಕೇಟ್ ಆಡುತ್ತಿದ್ದಾಗ ತಂದೆಯವರು ಕ್ರಿಕೆಟ್ ಆಡುವ ಬದಲು ಯಕ್ಷಗಾನ ಕಲಿ ಅಂತ ಹೇಳಿದರು. ಯಕ್ಷಗಾನ ಕಲಾರಂಗ ಮಕ್ಕಳ‌ ಮೇಳ ತಂತ್ರಾಡಿ ಯಲ್ಲಿ  ಸೇರಿಕೊಂಡು, 6ನೇ ತರಗತಿಯಿಂದ (2006-07) ಶಾಲಾ ದಿನಗಳಲ್ಲಿ, ರಜೆಯ ಸಮಯದಲ್ಲಿ, ಪ್ರಾಥಮಿಕವಾಗಿ ಯಕ್ಷಗಾನದ ಹೆಜ್ಜೆ ಕಲಿತಿದ್ದು, ಟಿ.ಹಿರಿಯಣ್ಣ ಶೆಟ್ಟಿಗಾರ್ ಅವರಲ್ಲಿ. ಅಲ್ಲೇ ಕಲಿತು ಕೆಲ ವೇಷಗಳನ್ನು‌ ಮಾಡಿದೆ.

ತಂದೆ ಮತ್ತು ದೊಡ್ಡಪ್ಪನವರು ಯಾವಾಗಲೋ ಹವ್ಯಾಸಕ್ಕೆ ಕೆಲ ವೇಷಗಳನ್ನೂ ಮಾಡಿದ್ದಾರಾದರೂ, ಯಾವುದೇ ಬಲವಾದ ಯಕ್ಷಗಾನದ ಹಿನ್ನೆಲೆಯಿಂದ ಯಕ್ಷಗಾನಕ್ಕೆ ಬಂದವನಲ್ಲ. ತಂದೆ-ತಾಯಿಯನ್ನು ಪ್ರೀತಿಸುವ ನನಗೆ ಯಕ್ಷಗಾನ ಕ್ಷೇತ್ರಕ್ಕೆ ಬರಲು ತಂದೆಯವರೇ ಪ್ರೇರಣೆ. ಪ್ರಾಥಮಿಕ ಹೆಜ್ಜೆ ಕಲಿತಿದ್ದೆನಾದರೂ, ಮುಂದೆ ಹೆಚ್ಚಿನದನ್ನು ಕಲಿತಿದ್ದೂ ಬೇರೆಯವರನ್ನೂ ನೋಡಿಯೇ. ಅನೇಕ ಹಿರಿಯ ಕಲಾವಿದರನ್ನು ನೋಡಿ ಅವರಿಂದ ನನಗೆ ಏನು ವಿಷಯ ಬೇಕೋ ಅದನ್ನು ಗ್ರಹಿಸುತ್ತಿದ್ದೆ‌. ಪ್ರಥಮ ಪಿಯುಸಿಯಲ್ಲಿರುವಾಗ ಅಚಾನಕ್ ಆಗಿ ತಂದೆಯವರು ಅಪಘಾತದಲ್ಲಿ ತೀರಿಕೊಂಡರು. ಅನಿವಾರ್ಯ ಕಾರಣಕ್ಕೆ ದ್ವಿತೀಯ ಪಿಯುಸಿ ಅಲ್ಲಿ ಮಕ್ಕಳ ಮೇಳದಿಂದ ಹೊರಬರಬೇಕಾಯಿತು‌. ಅದೇ ಸಮಯದಲ್ಲಿ ಮನಸ್ಸು ವಿಚಲಿತವಾಗ ತೊಡಗುತ್ತಿತ್ತು, ರಾತ್ರಿ ನಿದ್ದೆ ಬರುತ್ತಿರಲಿಲ್ಲ. ಆ ಸಮಯದಲ್ಲಿ ಬಯಲಾಟ ನೋಡುವುದು ರೂಢಿಯಾಯಿತು.

ಬಿಸಿಎ ಪದವಿ ಸೇರಿಕೊಂಡೆ. ಕಾಲೇಜು ಫೀಸ್ ಗೆ, ಮನೆಯ ಜವಾಬ್ದಾರಿಯಿಂದ ಹಣ ಅನಿವಾರ್ಯವಾಯಿತು. ಆಗ ಕೆಲವರ ಮೂಲಕ ಶ್ರೀ ಗಣೇಶ್ ಬಳೆಗಾರ ಜನ್ನಾಡಿಯವರ ಪ್ರಸಾಧನ ತಂಡದಲ್ಲಿ ವೇಷಭೂಷಣ ಸಹಾಯಕ್ಕೆ ಹೋಗ ತೊಡಗಿದೆ. ಅಲ್ಲಿ ಒಂದು ತಿರುವು ಸಿಕ್ಕ ಹಾಗಾಯಿತು. ದುಡಿಮೆಯ ದಾರಿ ಸಿಕ್ಕಿತು. ‌ನಂತರ ಆತ್ಮೀಯ ಮಿತ್ರ ಪ್ರಶಾಂತ ಗಾಣಿಗ ನೈಲಾಡಿ (ಪ್ರಸ್ತುತ ಅಮೃತೇಶ್ವರೀ ಮೇಳದ ಕಲಾವಿದರು) ಅನೇಕ ಅವಕಾಶಗಳನ್ನು ಕೊಟ್ಟು ಯಕ್ಷರಂಗದಲ್ಲಿ ಉಳಿದು ಬೆಳೆಯಲು ದಾರಿ ಮಾಡಿ ಕೊಟ್ಟರು. ಅವರಿಂದಲೇ ಹಟ್ಟಿಯಂಗಡಿ ಮೇಳದಲ್ಲಿ ಅವಕಾಶ ಸಿಕ್ಕಿತು. 

ಅಲ್ಲಿ ನನ್ನ ಜೀವನಕ್ಕೆ ತಿರುವು ತಂದುಕೊಟ್ಟ ಅನೇಕ ವ್ಯಕ್ತಿಗಳು ಸಿಕ್ಕಿದರು. ಅವರಲ್ಲಿ‌ ಪ್ರಮುಖರು ಶಶಾಂಕ ಪಟೇಲ್ ಕೆಳಮನೆ ಮತ್ತು ಪ್ರಸಾದ್ ಭಟ್ಕಳ. ಅನೇಕ‌ ಅವಕಾಶಗಳನ್ನು ಕೊಟ್ಟಿದ್ದಲ್ಲದೇ, ಸಹೋದರ ಪ್ರೀತಿ ತೋರಿದವರು, ಅನೇಕ ಮಾರ್ಗದರ್ಶನವಿತ್ತು, ನನ್ನನ್ನು ಮತ್ತಷ್ಟು ಚಿತ್ರಿಸಿದರು.‌ ವಿದ್ಯಾಭ್ಯಾಸದ ಜೊತೆಗೆ ಯಕ್ಷಗಾನವನ್ನು ಹವ್ಯಾಸಕ್ಕಾಗಿಯೇ ಇರಿಸಿಕೊಂಡೆ. ಅನೇಕ ಸಂಘಗಳಲ್ಲಿ ಅವಕಾಶಗಳು ದೊರೆಯಲಾರಂಭಿಸಿದವು. ಆ ಸಮಯದಲದಲ್ಲಿ ಸಂಘಗಳಲ್ಲಿ ಸ್ತ್ರೀ ವೇಷದ ಕೊರತೆಯಿತ್ತು. ನನಗೂ ಯಕ್ಷಗಾನ ದುಡಿಮೆಯ ಒಂದು ಮಾರ್ಗವಾಗಿದ್ದರಿಂದ, ಸ್ತ್ರೀ ವೇಷ ಮಾಡುವುದು ಅನಿವಾರ್ಯವಾಯಿತು. ಆಗ ಪ್ರಸಿದ್ಧ ಸ್ತ್ರೀ ವೇಷದವರ ವೇಷಗಳನ್ನು ನೋಡಿ ಅದನ್ನು ಅಳವಡಿಸಿಕೊಂಡೆ. ಹೀಗೆ ಎಲ್ಲರಿಂದಲೂ ಕೆಲವೊಂದನ್ನು ಕಲಿಯುತ್ತಾ, ನನ್ನನ್ನು ನಾನು ತಿದ್ದಿಕೊಳ್ಳುತ್ತಿದ್ದೇನೆ ಎಂದು ಸ್ಪೂರ್ತಿಯವರು ಹೇಳುತ್ತಾರೆ.

ಕುಶ-ಲವ, ದೇವೀ ಮಹಾತ್ಮೆ, ಮಾರುತೀ ಪ್ರತಾಪ, ಗಧಾಯುಧ್ದ, ಕೃಷ್ಣಾರ್ಜುನ, ಕರ್ಣಾರ್ಜುನ, ಮಾಯಾಪುರಿ, ವೀರಮಣಿಕಾಳಗ, ಚೂಡಾಮಣಿ ಇತ್ಯಾದಿ‌ ಇವರ ನೆಚ್ಚಿನ ಪ್ರಸಂಗಗಳು.

ಕೃಷ್ಣ, ಮಾಲಿನಿ, ಶ್ರೀ ದೇವಿ, ವಿಷ್ಣು, ಶತ್ರುಘ್ನ, ಸತ್ಯಭಾಮೆ, ನಾರದ, ಕಾರ್ತವೀರ್ಯ, ಕೌರವ, ಮದನಾಕ್ಷಿ, ಹನುಮಂತ, ಶಲ್ಯ, ಸೀತೆ, ಸುಧನ್ವ, ಪ್ರಭಾವತಿ‌ ಇತ್ಯಾದಿ ಇವರ ನೆಚ್ಚಿನ ವೇಷಗಳು.

ಹಟ್ಟಿಯಂಗಡಿ, ಮಡಾಮಕ್ಕಿ, ನೀಲಾವರ, ಮಂದಾರ್ತಿ, ಮೇಗರವಳ್ಳಿ, ಸಿಗಂದೂರು ಮೇಳಗಳಲ್ಲಿ ಹಾಗೂ ಹವ್ಯಾಸಿ ಕಲಾವಿದನಾಗಿ ತಿರುಗಾಟ ಮಾಡಿದ ಅನುಭವ ಇವರಿಗೆ ಇದೆ.

ಪುಸ್ತಕಗಳನ್ನು ಓದುವುದು, ತಾಳಮದ್ದಳೆಗಳನ್ನು ಕೇಳುವುದು, ತೋಚಿದ್ದನ್ನು ಬರೆಯುವುದು, ಹೊಸ ರುಚಿಯ ಅಡುಗೆ ಮಾಡುವುದು ಇವರ ಹವ್ಯಾಸಗಳು.

ರಂಗಕ್ಕೆ ಹೋಗುವ ಮೊದಲು ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತಿರ ಎಂದು ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಪೂರ್ವ ಮತ್ತು ಉತ್ತರದ ಕತೆಗಳ ಅಧ್ಯಯನ ಮತ್ತು ನಾನು‌ ಆ ಪಾತ್ರದಲ್ಲಿ ಏನು ಹೊಸತನ್ನು ಕೊಡಬಹುದೆನ್ನುವ ಆಲೋಚನೆ ಮಾಡುತ್ತೇನೆ ಮತ್ತು ಚೌಕಿಮನೆಯಲ್ಲಿ ಹಿರಿಯ ಕಲಾವಿದರು ಮತ್ತು ಜೊತೆ ವೇಷಗಳ ಕಲಾವಿದರ ಜೊತೆ ಮಾತುಕತೆ ನಡೆಸಿ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಸ್ಫೂರ್ತಿ ಅವರು ಹೇಳುತ್ತಾರೆ.

ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಕೇಳಿದಾಗ ಇವರು ಹೀಗೆ ಹೇಳುತ್ತಾರೆ:-

ಅನೇಕ ಯುವಕರು ಯಕ್ಷಗಾನಕ್ಕೆ ಮಾರುಹೋಗಿ, ಅಭಿಮಾನಿಗಳಾಗುತ್ತಿರುವುದು ಸಂತಸದ ವಿಷಯ.  ಕೇವಲ‌ ಮನರಂಜನೆಗೆ ಇಟ್ಟುಕೊಳ್ಳದೇ, ಇಲ್ಲಿ ಸಿಗುವ ಅನೇಕ ವಿಚಾರಾನುಭವಗಳಿಂದ ಸ್ವಾಸ್ತ್ಯ ಪ್ರಪಂಚದಲ್ಲಿ ಶಿಷ್ಟ ಕಲೆಯ ಮಹತ್ವ ಹೆಚ್ಚುವಂತೆ ಮಾಡಿದರೆ ಒಳ್ಳೆದು ಎಂದು ಸ್ಫೂರ್ತಿ ಅವರು ಹೇಳುತ್ತಾರೆ.

ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಯಕ್ಷಗಾನ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ.‌ ಬದಲಾವಣೆ ಜಗದ ನಿಯಮ‌, ಆದರೆ ಬದಲಾವಣೆಯ ಬಿರುಸಿನಲ್ಲಿ‌ ಚೌಕಟ್ಟು ಮೀರದಿರಲಿ ಎನ್ನುವ ಕಾಳಜಿ ಮತ್ತು ಕರಾವಳಿ ಭಾಗಕ್ಕೆ ಸೀಮಿತವಾಗಿರುವ ಕಲೆ‌ ದೇಶವ್ಯಾಪಿ ಬೆಳೆಯಲಿ ಎನ್ನುವ ಆಶಯ ಎಂದು ಸ್ಫೂರ್ತಿ ಅವರು ಹೇಳುತ್ತಾರೆ.

ಯಕ್ಷರಂಗದಲ್ಲಿ ಮುಂದಿನ ಯೋಜನೆಗಳ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ತಾಳಮದ್ದಳೆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕೆಂಬ ಹಂಬಲ ಇದೆ ಎಂದು ಸ್ಫೂರ್ತಿ ಅವರು ಹೇಳುತ್ತಾರೆ.

ಹವ್ಯಾಸಿಯಾಗಿ ಪೋಷಕ ಪಾತ್ರಗಳನ್ನು ಮಾಡುವ ಕಾರಣ ನಮ್ಮನ್ನು ಗುರುತಿಸುವುದು ಕಡಿಮೆಯೇ,‌ ಆದರೂ ಒಂದೆರಡು ಕಡೆ ಸನ್ಮಾನಗಳು ಮತ್ತು ಜ್ಞಾನ ಮಂದಾರ ಅಕಾಡೆಮಿ ಬೆಂಗಳೂರು(ರಿ) ಅವರಿಂದ "ಕರ್ನಾಟಕ ಚೇತನ" ಎನ್ನುವ ರಾಜ್ಯ ಪ್ರಶಸ್ತಿ ಇವರಿಗೆ ದೊರೆತಿದೆ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

#Photo_Click:-Sudarshan Mandarthi,Prashanth Malyadi.

-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

+91 8971275651

Post a Comment

ನವೀನ ಹಳೆಯದು