ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ನಂಬಿಕೆಯೇ ಶಕ್ತಿ: ಅಭಯದ ನೆರಳು ಕೊರಗತನಿಯ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 

"ನಂಬಿಕೆ" ಎಂಬ ಮೂರಕ್ಷರ ಜಗತ್ತಿನ ಪ್ರತೀ ಸಜೀವಿಗಳ ಜೀವನದ ನರನಾಡಿ. ಪ್ರತಿಯೊಬ್ಬ ಮನುಷ್ಯ ತನ್ನನ್ನು ತಾನು ನಂಬಿಕೊಳ್ಳದಿದ್ದರೂ ಯಾವುದಾದರೂ ಒಂದು ದೇವರನ್ನು ನಂಬಿ ಮೊರೆ ಹೋಗಿರುತ್ತಾನೆ. ಆದರೆ ಭಾರತೀಯ ಸಂಸ್ಕೃತಿಯಲ್ಲಿ ಜನರಿಗಿರುವ  ಧಾರ್ಮಿಕ ನಂಬಿಕೆ, ಆಚಾರ ವಿಚಾರಗಳ ಬಗ್ಗೆ ಅಕ್ಷರಗಳಲ್ಲಿ ಹಿಡಿದಿಡುವುದು ಕಠಿಣ.

ಅದರಲ್ಲೂ ತುಳುನಾಡಿನ ಜನತೆ ದೈವಾರಾಧನೆಗೆ ಹೆಚ್ಚು ಒತ್ತು ಕೊಡುತ್ತಾರೆ‌. ಅನೇಕ ಜನರಿಗೆ "ಕೊರಗಜ್ಜ" ದೈವ ಎಂದರೆ ಅದೇನೊ ಒಂದು ತೆರನಾದ ವಿಶೇಷ ಭಕ್ತಿ. ತಾಯಿ ಕೊರಪೊಲು ಹಾಗೂ ತಂದೆ ಉರವೊಲ ವೋಡೆ ದಂಪತಿಗಳಿಗೆ ಜನಿಸಿದ ಪುತ್ರ ಕೊರಗತನಿಯ. ತನ್ನ ಹೆತ್ತವರನ್ನು ಕಳೆದುಕೊಂಡು ಅನಾಥನಾಗಿ ಸಂಕಷ್ಟದಲ್ಲಿದ್ದಾಗ ಮಮತಾಮಯಿಯಾಗಿ ಇವನಿಗೆ ಆಸರೆಯಾದದ್ದು ಉಮ್ಮಕ್ಕ ಬೈದೆತ್ತಿ ಎಂಬ ಶೇಂದಿ ಮಾರುವ ಹೆಂಗಳೆ. ತಾನು ಬಿಲ್ಲವ ಸಮುದಾಯದವಳಾಗಿದ್ದರೂ ಸಣ್ಣ ಪ್ರಾಯದ ಬಾಲಕನನ್ನು ತನ್ನ ಮಗನಂತೆ ಉಪಚರಿಸುತ್ತಾಳೆ.

ತನಿಯ ತನಗೆ "ಮಾಡಲು ಏನಾದರೊಂದು ಕೆಲಸ ಕೊಡಿ" ಎಂಬ ಬೇಡಿಕೆ ಎದುರಿಡುತ್ತಾನೆ. ಆಗ ತನ್ನ ಶೇಂದಿಯ ಕಸುಬಲ್ಲೇ ಅದನ್ನು ಮಂಡೆಗೆ ತುಂಬಿಸುವ ಕೆಲಸವನ್ನು ಬಾಲಕನಿಗೆ ನೀಡುತ್ತಾಳೆ. ಆದರೆ ಆತ ಅದೆಷ್ಟೇ ತುಂಬಿಸಿದರೂ ಅಕ್ಷಯ ಪಾತ್ರೆಯಂತೆ ತುಂಬಿ ಹೋಗುತ್ತಿದ್ದ ಶೇಂದಿ ನೋಡಿ ದಿಗ್ಭ್ರಮೆಗೊಳ್ಳುತ್ತಾಳೆ. ಅದೆಷ್ಟೇ ತುಂಬಿಸಿದರೂ ಶೇಂದಿ ಖಾಲಿಯಾಗದೆ ಇದ್ದಾಗ ಅವಳು ಕದ್ರಿ ಮಂಜುನಾಥ ದೇವರಿಗೆ ಹರಕೆ ಹೇಳುತ್ತಾಳೆ. ನಂತರ ಅದು ಖಾಲಿಯಾಗುತ್ತದೆ.

ಹೀಗೆ ತನ್ನ ವಿಶಿಷ್ಟ ವರ್ತನೆ, ಹಾಗೂ ಅಸಾಮಾನ್ಯ ವ್ಯಕ್ತಿತ್ವದಿಂದ ಜನರ ಪ್ರೀತಿಗೆ ಪಾತ್ರನಾದ ತನಿಯ ದೈವೀ ಶಕ್ತಿಯಿಂದ ಈಗ ಜನರಿಂದ ಪೂಜಿಸಲ್ಪಡುತ್ತಿದ್ದಾರೆ. ಇದರ ಹಿನ್ನೆಲೆಯನ್ನು ಮೆಲುಕು ಹಾಕುತ್ತಾ ಹೋದರೆ ಬಹುಶಃ ಅನೇಕ ಮಾಹಿತಿಗಳು ದೊರೆಯಬಹುದು. ಎಲ್ಲವೂ ವಿವಿಧ ಪಾಡ್ದನದ ಮುಖೇನ ತಿಳಿಯಬಹುದಾದ ವಿಷಯಗಳಷ್ಟೆ. ಆದರೆ ತುಳುನಾಡಿನ ಯಾವುದೇ ದೈವ ದೇವರುಗಳ ಬಗ್ಗೆ ನಿಖರವಾದ ಮಾಹಿತಿಗೆ ಲಿಖಿತ ಆಧಾರಗಳಿಲ್ಲ. 

"ಸರ್ವ ಜನಾಂಗದ ಶಾಂತಿಯ ತೋಟ" ಎಂದು ನಮ್ಮ ನಾಡಗೀತೆಯಲ್ಲಿ ನಾವುಗಳು ಶುಶ್ರಾವ್ಯವಾಗಿ ಹಾಡುತ್ತೇವೆ ಹೊರತು ವಾಸ್ತವಿಕತೆಯಲ್ಲಿ ಆ ಶಾಂತಿ ಎಲ್ಲಿದೆ ಈಗ..? ಜಾತಿ ಧರ್ಮ ಎಂದು ಕಚ್ಚಾಡುತ್ತಾ ಅಮಾನವೀಯರಂತೆ ಮನುಷ್ಯ ಮನುಷ್ಯನನ್ನೇ ಕೊಲ್ಲುತ್ತಾ ಅಂಧರಂತೆ ಬದುಕುತ್ತಿದ್ದೇವೆ. ವ್ಯವಹಾರ, ಆಸ್ಪತ್ರೆ, ಹೋಟೆಲ್ ಗಳಲ್ಲಿ ನೋಡದ ಧರ್ಮ, ಜಾತಿಯನ್ನು ನಾವು ಧಾರ್ಮಿಕ ಕೇಂದ್ರಗಳಲ್ಲಿ ಮಾತ್ರ ಅಳೆಯುತ್ತೇವೆ. ಆದರೆ ಇತ್ತೀಚೆಗಷ್ಟೆ ಮುಸ್ಲಿಂ ಸಮುದಾಯದ ಮಹಿಳೆಯ ಹಸಿ ಕೂಸಿಗೆ ಕೊರಗಜ್ಜ ಕೋಲದಲ್ಲಿ ಅಭಯದ ನುಡಿಯಿತ್ತು ಆಶೀರ್ವದಿಸುವುದನ್ನು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಾ ಕಣ್ತುಂಬಿಕೊಂಡೆವು. ಅಷ್ಟೇ ಏಕೆ ಕವತ್ತಾರು ಎಂಬ ಸಣ್ಣ ಗ್ರಾಮದಲ್ಲಿ ಅದೇ ಮುಸ್ಲಿಂ ಸಮುದಾಯದ ಕೇರಳದ ನಿವಾಸಿ ಖಾಸಿಂ ಅಜ್ಜನಿಂದ ಕೊರಗಜ್ಜ ಆರಾಧಿಸಲ್ಪಡುತ್ತಿರುವ ವಿಷಯ ಮತ್ತೆ ಮಾಧ್ಯಮಗಳಲ್ಲಿ ರಾರಾಜಿಸಿತ್ತಲ್ಲ, ಹಾಗಾದರೆ ದೈವೀ ಶಕ್ತಿಗಿದೆಯೇ ಆ ಜಾತಿ ಈ ಧರ್ಮವೆಂಬ ಭೇಧ? ಇಲ್ಲಿ ಎಲ್ಲವನ್ನೂ ಕಲಿತು ಅರ್ಥೈಸಿ ಒಪ್ಪಿಕೊಳ್ಳಬೇಕಾದವರು ನಾವು ತಾನೇ?

ಕುತ್ತಾರುವಿನ ಜಾಗದಲ್ಲಿ ಆದಿಸ್ಥಳವಾಗಿ ಪೂಜಿಸಲ್ಪಡುವ ಕೊರಗಜ್ಜ ಇಂದು ಎಲ್ಲರ ಮನದಲ್ಲಿ ಆರಾಧಿಸಲ್ಪಡುತ್ತಿದ್ದಾರೆ. ಏನಾದರೂ ವಸ್ತುವನ್ನು ಕಳೆದುಕೊಂಡರೂ ಕೂಡ ಅವರ ನೆನೆಸಿಕೊಂಡರೆ ಸಾಕು ಮತ್ತೆ ಸಿಗುತ್ತದೆ ಎಂಬ ನಂಬಿಕೆ ಅದು ವಾಸ್ತವ ಕೂಡ. "ಅಜ್ಜಾ ಪಂದು ಲೆಪ್ಪುಲ ಬೆರಿ ಪಿರಾವು ಬತ್ತುದು ಅಭಯದ ನಿರೆಲಾಪೆ" ಎನ್ನುವ ಅಜ್ಜನ ಅಭಯದ ನುಡಿಯೇ ನಮ್ಮ ಬಾಳಿಗೊಂದು ಬೆಳಕು. ಕೋಲ, ಅಗೇಲು ಸೇವೆ, ಬೀಡ, ಚಕ್ಕುಲಿ ಮುಂತಾದ ಹರಕೆಯನ್ನು ಸ್ವೀಕರಿಸುವ ಕೊರಗಜ್ಜನಿಗೆ ಇಂದು ವಿದೇಶದಲ್ಲೂ ಭಕ್ತ ಸಮೂಹ ಕೈ ಮುಗಿಯುತ್ತದೆ.

ತನ್ನ ಕಾರ್ಣಿಕ ಶಕ್ತಿಯಿಂದ ಅನ್ಯಾಯದ ನಡೆಗೆ ಬೆತ್ತದಲ್ಲೇ ಶಿಕ್ಷೆಯಿತ್ತು, ಕಷ್ಟ ಎಂದು ಬಂದಾಗ ಕಣ್ಣೊರೆಸುತ್ತಾ ಬಾಳಿಗೆ ದೀಪವಾಗಿ ಆರಾಧಿಸಲ್ಪಡುತ್ತಿರುವ ಈ ಶಕ್ತಿ ಕೊರಗತನಿಯ ದೈವದ ಬಗ್ಗೆ ಅದೆಷ್ಟೇ ಬರೆದರೂ ಅಕ್ಷರದಲ್ಲಿ ಹಿಡಿದಿಡುವುದು ಕಷ್ಟವೇ.

ಸ್ವಾಮಿ ಕೊರಗಜ್ಜ

-ಅರ್ಪಿತಾ ಕುಂದರ್

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು