ಜಗತ್ತು ಎಷ್ಟು ವಿಶಾಲವಾಗಿದೆ. ಹೇಗೆ ಬೇಕಾದರೂ ಬದುಕಬಹುದು ಅಂತ ಅಂದುಕೊಳ್ಳುತ್ತೇವೆ. ನಾನೇನು ಮಾಡಿದ್ರೂ ನಡೆಯುತ್ತೆ ಅಂತಾನೂ ಯೋಚಿಸ್ತೇವೆ. ಅದಕ್ಕಾಗಿ ನಾವು ಏನು ಮಾಡಲೂ ಸಿದ್ಧ. ಆದ್ರೆ ಒಮ್ಮೊಮ್ಮೆ ನಾವಂದುಕೊಂಡಂತೆ ಏನೂ ಆಗೋದಿಲ್ಲ. ಭ್ರಮೆ ಅತಿಯಾಗಿಯೋ, ವಾಸ್ತವದ ಅರಿವು ಕಡಿಮೆಯಾಗಿಯೋ ಪರಿಸ್ಥಿತಿಯನ್ನೇ ಅವಲೋಕಿಸದ ಮುಟ್ಠಾಳರಾಗುತ್ತೇವೆ. ಈಗ ಆಗಿರೋದು ಅದೇ ನೋಡಿ. /p>
ಹಿಂದಿನ ವರ್ಷ ನಮ್ಮೆಲ್ಲರನ್ನು ಬೆಚ್ಚಿ ಬೀಳಿಸಿದ ಕೊರೋನಾ ಸ್ವಲ್ಪ ದೂರವಾಗಿ ಮನಸ್ಸು ಪ್ರಶಾಂತವಾಗಿತ್ತು. ಮದುವೆ ಸಮಾರಂಭಗಳು ಜನರ ಲೆಕ್ಕವಿಲ್ಲದೆಯೇ ಅದ್ಧೂರಿಯಾಗಿ ಸಾಗಿತ್ತು. ರಾಜಕೀಯ, ಚುನಾವಣೆ ಕೆಲಸಗಳೂ ಭರದಿಂದ ಸಾಗಿತ್ತು. ವಿದ್ಯಾರ್ಥಿಗಳು ಮತ್ತೆ ಶಾಲಾ ಕಾಲೇಜಿನತ್ತ ಮುಖ ಮಾಡಿದ್ದರು. ಎಲ್ಲವು ಸಮಸ್ಥಿತಿಯಲ್ಲಿರಲು ಮತ್ತೆ ಬೀಸಿತು ನೋಡಿ ಕೊರೋನಾ ಎರಡನೇ ಅಲೆಯೆಂಬ ಬಿರುಗಾಳಿ...
ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗುತ್ತಿದ್ದರೆ ಇನ್ನೂ ಕೆಲವರು ತಮ್ಮ ತಮ್ಮ ಮದುವೆ ಮುಂಜಿ ಮುಂತಾದ ಸಮಾರಂಭಗಳ ಬ್ಯುಸಿಯಲ್ಲಿದ್ದರು. ಅದರ ನಡುವಿನಲ್ಲಿ ಸರ್ಕಾರಿ ಬಸ್ ನೌಕರರ ಪ್ರತಿಭಟನೆ ಕಾಲೇಜು ಮಕ್ಕಳಿಗಂತೂ ಸ್ವಲ್ಪ ಖುಷಿ ಕೊಟ್ಟಿತ್ತು. ಕಾರಣ ಎಕ್ಸಾಂ postpone ಆಗಿತ್ತು. ಆದರೆ ಇದೀಗ ಮತ್ತೆ ರಾಜ್ಯ ಸರ್ಕಾರ ಲಾಕ್ಡೌನ್ ಘೋಷಿಸಿರುವುದು ಅತ್ಯಂತ ನಿರಾಶದಾಯಕವಾಗಿದೆ. ಪ್ರಪಂಚ ಈಗ ನಾವಂದುಕೊಂಡಂತಿಲ್ಲ. ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ. ದುಡ್ಡೇ ಬೇಕು ಅನ್ನುತ್ತಿದ್ದವ ಉಸಿರಾಡಲು ಆಕ್ಸಿಜನ್ ಕೊಡಿ ಸಾಕು ಅನ್ನುವ ಮಟ್ಟಿಗೆ ಬಂದು ನಿಂತಿದ್ದಾನೆ. ಕೋಟ್ಯಾಧಿಪತಿ ಅನ್ನಿಸಿಕೊಂಡವನು ಕೊರೋನಾದಿಂದ ಒಂದು ಸರಳ ರೀತಿಯಲ್ಲಿ ಅಂತ್ಯಕ್ರಿಯೆ ಮಾಡಿಸಿಕೊಳ್ಳದೆಯೇ ಮೃತಪಡುತ್ತಿದ್ದಾನೆ. ಅಲ್ಲಾ ಏನಿದು ಬದುಕು... ಏನಿದು ದೇಶಕ್ಕೆ ಸಂಕಟಗಳ ಕರಿಛಾಯೆ...
ಕೊರೋನಾದ ನಂತರ ಮತ್ತೆ ಜನರನ್ನು ಕಾಡುತ್ತಿರುವುದು ಬ್ಲ್ಯಾಕ್ ಫಂಗಸ್ ಎನ್ನುವಂತಹ ಕಣ್ಣಿನ ರೋಗ. ಕೊರೋನಾಕ್ಕೆ ಆದರೂ ಮಾಸ್ಕ್ ಹಾಕಿಕೊಳ್ಳಬಹುದು. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಡೆದಾಡಲು ಸಾಧ್ಯವೇ...? ಈ ಮಹಾಮಾರಿ ರೋಗಗಳು ಯಾವಾಗ ವಿಶ್ವ ಬಿಟ್ಟು ತೊಲಗುತ್ತದೆಯೋ ನಾ ಕಾಣೆ. ಈ ವಯಸ್ಸಿನಲ್ಲಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡು, ಕಾಲೇಜು ಜೀವನ ಅನುಭವಿಸುತ್ತಾ ಹೇಗೋ ಇರಬೇಕಾದ ನಾವುಗಳು ಜಡಜೀವಿಗಳಾಗಿದ್ದೇವೆ. ಮನುಷ್ಯರ ಕಾರುಬಾರಿನ ಎದುರು ಬೇರೇನೂ ಇಲ್ಲವೆಂದು ಬೀಗುತ್ತಿದ್ದೆವು. ಇದೀಗ ಈ ರೋಗಗಳ ಎದುರು ಬಾಗುವ ಗತಿ ಬಂದಿದೆ. ಇದರ ಕಾರುಬಾರಿಗೆ ಬ್ರೇಕು ಬೀಳುವುದು ಯಾವಾಗಲೋ..?
-ಅರ್ಪಿತಾ ಕುಂದರ್
ವಿವೇಕಾನಂದ ಕಾಲೇಜು
ಪುತ್ತೂರು
إرسال تعليق