ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಮಳೆಗಾಲ ಆಗಮನಕ್ಕೆ ಮುನ್ನ ಜೇನು ಕೃಷಿಕರಿಗೊಂದು ಕಿವಿಮಾತು ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ರಾಜ್ಯದಲ್ಲಿ ಜೂನ್‌ನಿಂದ ಸೆಪ್ಟೆಂಬರ್ ಮುಂಗಾರು ಮಳೆಯನ್ನು ತರುತ್ತದೆ. ಈ ಅವಧಿಯಲ್ಲಿ ವಾತಾವರಣವು ಹೆಚ್ಚು ಆರ್ದ್ರತೆಯಿಂದ ಕೂಡಿದ್ದು ಜೇನುಹುಳುಗಳು ಅತಿಯಾದ ಆರ್ದ್ರತೆ ಹಾಗೂ ಹಸಿವಿನ ಸಮಸ್ಯೆಯನ್ನು ಎದುರಿಸುತ್ತವೆ. ಕೆಲವೊಮ್ಮೆ ಸತತ ಮಳೆಯಿಂದಾಗಿ, ಜೇನುಹುಳುಗಳು ಗೂಡನ್ನು ಬಿಟ್ಟು ಹೊರಹೋಗುವುದಿಲ್ಲ. ಈ ಅವಧಿ ಕೆಲವೊಮ್ಮೆ ಅತೀ ದೀರ್ಘವಾಗಿರುತ್ತದೆ. ಇಂತಹ ಸಮಯದಲ್ಲಿ ಜೇನುಹುಳುಗಳು ಆಲಸ್ಯ ಮತ್ತು ಭೇದಿಯಿಂದ ಬಳಲಬಹುದು. ಹಾಗಾಗಿ ಕುಟುಂಬಗಳನ್ನು ಸದೃಢವಾಗಿಡಲು ಕೆಲವೊಂದು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

1. ರಾಣಿಯಿಲ್ಲದ ದುರ್ಬಲ ಕುಟುಂಬಗಳನ್ನು ಬಲಶಾಲಿ ಕುಟುಂಬದೊಂದಿಗೆ ಒಂದುಗೂಡಿಸಬೇಕು. ಇಲ್ಲದಿದ್ದರೆ ಈ ಸಮಯದಲ್ಲಿ ಗಂಡುನೊಣಗಳಿಲ್ಲದೆ ರಾಣಿಗೆ ಸಂಗಾತಿ ಸಿಗುವುದಿಲ್ಲ. ಹಾಗಾಗಿ ಕುಟುಂಬ ಪರಾರಿಯಾಗಬಹುದು.

2. ಆಹಾರ ಕೊರತೆಯಿಂದ ಕುಟುಂಬ ಪರಾರಿ ಆಗುವುದನ್ನು ತಪ್ಪಿಸಲು ಪರಾಗ ಅಥವಾ ಪರಾಗ ಪೂರಕ ಆಹಾರ ನೀಡಬೇಕು.

3. ಮೇಣದ ಚಿಟ್ಟೆ, ಇರುವೆ ಮತ್ತು ಕಣಜಗಳಂತಹ ಶತೃಗಳ ಧಾಳಿಯನ್ನು ಗಮನಿಸುತ್ತಿರಬೇಕು.

4. ಹೊಸ ಅಥವಾ ಹಳೇ ಖಾಲಿ ಪೆಟ್ಟಿಗೆ ಬಿಸಿ ನೀರಿನಲ್ಲಿ ತೊಳೆದು ಬಿಸಿಲಿನಲ್ಲಿ ಒಣಗಿಸಿ, ಅದಕ್ಕೆ ಜೇನು ಮೇಣ ಮತ್ತು ದಾಲ್ಚಿನ್ನಿ ಪುಡಿ ಸವರಿ ತೋಟದಲ್ಲಿ ಅಥವ ಜೇನು ಸಂಚಾರ ಹೆಚ್ಚು ಇರುವ ತಂಪು ಜಾಗದಲ್ಲಿ ಇಡಿ. ಸ್ವಾಭಾವಿಕವಾಗಿ ಪಾಲಾದ ಕುಟುಂಬಗಳು ಬಂದು ಸೇರಿಕೊಳ್ಳುತ್ತವೆ. ಕೆಲವು ಕೃಷಿಕರು ಮಡಕೆ ಇಡುವುದನ್ನು ಸಹ ಕಾಣಬಹುದು.

5. ಹೊಸದಾಗಿ ಬಂದು ಕುಳಿತಿರುವ ಕುಟುಂಬಗಳನ್ನು ಹಿಡಿಯುವ ಸಾಹಸ ಬೇಡ. ಕೆಲವು ಕಾಲ ಹಾಗೆಯೇ ಬಿಟ್ಟಲ್ಲಿ ಗಟ್ಟಿಯಾದ ಎರಿಗಳು ಕಟ್ಟಿಕೊಳ್ಳುತ್ತವೆ. ನಂತರ ಸುಲಭವಾಗಿ ಪೆಟ್ಟಿಗೆಗೆ ಹಾಕಬಹುದು. ಅವಸರ ಮಾಡಿದರೆ ಮೃದು ಎರಿಗಳು ಹಾಳಾಗಿ ಹೊಸ ಎರಿ ತಯಾರಾಗುವವರೆಗೆ ಪರಿಸರದಲ್ಲಿ ಆಹಾರ ಕೊರತೆಯಾಗಬಹುದು. ಇದರಿಂದ ಕುಟುಂಬಗಳು ಪರಾರಿಯಾಗುತ್ತವೆ.

6. ಪಾಲಾಗಿ ಬಂದು ಪೆಟ್ಟಿಗೆ ಸೇರಿದ ಕುಟುಂಬಗಳು ಅಡ್ಡಲಾಗಿ ಎರಿ ಕಟ್ಟಿದರೂ ಸರಿ ಪಡಿಸದೆ ಮಳೆಗಾಲದ ವರೆಗೆ ಕಾಯಿರಿ. ಸೆಪ್ಟೆಂಬರ್ ತಿಂಗಳಲ್ಲಿ ಆ ಎರಿಗಳನ್ನು ತೆಗೆದು ಸರಿಯಾಗಿ ಚೌಕಟ್ಟುಗಳಿಗೆ ಕಟ್ಟಿ

7. ಮಳೆಗಾಲದಲ್ಲಿ ಕುಟುಂಬದಲ್ಲಿ ಹುಳುಗಳ ಸಂಖ್ಯೆ ಕಡಿಮೆಯಾದರೆ ಬಿಸಿಲು ಬೀಳುವ ಸಮಯದಲ್ಲಿ ಹೊರಗಿಡಿ. ಉಷ್ಣಾಂಶ ಹೆಚ್ಚಾಗಿ ಕುಟುಂಬ ಅಭಿವೃದ್ದಿ ಆಗಲು ಸಹಕಾರಿಯಾಗುತ್ತದೆ.

8. ಬಲಿಷ್ಟ ಕುಟುಂಬಗಳಿಗೆ ಸಕ್ಕರೆ ಪಾಕ ಕೊಡಬೇಡಿ. ಇವುಗಳಿಗೆ ಸಕ್ಕರೆ ಪಾಕ ಕೊಟ್ಟರೆ ಕಡ್ಡಿ ಮೊಟ್ಟೆ ಹೊರಗೆಸೆದು ಕಣಗಳಲ್ಲಿ ಸಕ್ಕರೆ ಪಾಕ ತುಂಬಿಸಿ ಕುಟುಂಬದ ಅಭಿವೃದ್ದಿ ತಡೆಯುತ್ತವೆ.

9. ಮಳೆನೀರು ಗೂಡಿನ ಒಳಗೆ ಹೋಗದಂತೆ ಎಚ್ಚರಿಕೆ ವಹಿಸಿ. ಜೇನುಗೂಡಿನ ಒಳಗೆ ನೀರು ನಿಲ್ಲದೆ ಹೊರಹೋಗುವಂತೆ ಪ್ರವೇಶದ್ವಾರ ಸ್ವಲ್ಪ ಇಳಿಜಾರಾಗುವಂತೆ ಸ್ಟಾಂಡನ್ನು ಇಡಿ.

10. ಮುಂಗಾರು ಮಳೆಯು ಅರಬ್ಬೀ ಸಮುದ್ರದಿಂದ ಬರುವ ಕಾರಣ ಪೆಟ್ಟಿಗೆಯ ಮುಖದ್ವಾರ ಪೂರ್ವ ದಿಕ್ಕಿನ ಕಡೆಗೆ ಇರುವಂತೆ ನೋಡಿಕೊಳ್ಳಿ.

-ಡಾ. ಪಿ. ಆರ್ ಬದರಿಪ್ರಸಾದ್

ಸಹಾಯಕ ಪ್ರಾಧ್ಯಾಪಕರು (ಕೀಟಶಾಸ್ತ್ರ)

ಕೃಷಿ ಮಹಾವಿದ್ಯಾಲಯ, ಗಂಗಾವತಿ


Tags: Honeybee, Bee keping, Monsoon, ಜೇನು ಸಾಕಣೆ, ಮಳೆಗಾಲದಲ್ಲಿ ಜೇನು ಸಾಕಣೆ


Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು