ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ವೈದ್ಯರು ದೇವರಲ್ಲ... ಅವರೂ ಮನುಷ್ಯರು; ಕುಂಟುನೆಪ ಒಡ್ಡಿ ಹಲ್ಲೆ ಮಾಡುವುದು ಸಲ್ಲದು ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

ವೈದ್ಯರ ಮೇಲೆ ದಾಳಿಗಳು ಮುಂದುವರಿದಲ್ಲಿ ಮುಂದೆ ವೈದ್ಯ ವೃತ್ತಿಗೆ ಬರುವವರೇ ಕಡಿಮೆಯಾಗಬಹುದು

ಸಮಾಜ ಈಗಲೇ ಎಚ್ಚರಗೊಳ್ಳದಿದ್ದರೆ ಮುಂದೆ ಕಾದಿದೆ ಅನಾಹುತ


ಇತ್ತೀಚಿನ ದಿನಗಳಲ್ಲಿ ವೈದ್ಯರ ಮೇಲೆ ಮಾರಣಾಂತಿಕ ದಾಳಿಗೊಳಗಾಗುವುದು ದಿನ ನಿತ್ಯ ಕಂಡು ಬರುತ್ತಿದೆ. ಏನಾದರೊಂದು ಕುಂಟು ನೆಪ ಇಟ್ಟುಕೊಂಡು, ಸಣ್ಣ ಪುಟ್ಟ ಕಾರಣಗಳಿಂದ ವೈದ್ಯರ ಮೇಲೆ, ರೋಗಿಗಳ ಸ್ನೇಹಿತರು ಮತ್ತು ಸಂಬಂಧಿಕರು ಗುಂಪು ಕಟ್ಟಿಕೊಂಡು ಹೋಗಿ ದಾಳಿ ಮಾಡಿ ಮನಸೋ ಇಚ್ಚೆ ಪ್ರಾಣಿಗಳಿಗೆ ಬಡಿದಂತೆ ಬಡಿದು ತಮ್ಮ ತೀಟೆಯನ್ನು ತೀರಿಸುವ ದೃಶ್ಯವನ್ನು ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿದೆ. ಹೆಚ್ಚಿನ ಎಲ್ಲಾ ಸಂದರ್ಭಗಳಲ್ಲಿ ರೋಗಿ ಸಾವನ್ನಪ್ಪಿದಾಗ, ವೈದ್ಯರೇ ಕಾರಣ ಎಂದು ದೂಷಿಸಿ ಕಾನೂನನ್ನು ಕೈಗೆತ್ತಿಕೊಂಡು ಕೈಗೆ ಸಿಕ್ಕಿದ ವಸ್ತುವಿನಿಂದ ವೈದ್ಯರ ಮೇಲೆ ಏರಿ ಹೋಗುವುದು ದಿನನಿತ್ಯದ ದೃಶ್ಯಗಳಾಗಿದೆ. ಕಳೆದ ಮೂರು ತಿಂಗಳಲ್ಲಂತೂ ಇದರ ಪ್ರಮಾಣ ಬಹಳ ಹೆಚ್ಚಾಗಿದೆ.

ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಈ ಸಂದರ್ಭದಲ್ಲಿ ಇದ್ದ ಬದ್ದ ಸ್ವಯಂ ಮದ್ದುಗಾರಿಕೆ ಹಳ್ಳಿ ಮದ್ದಗಾರಿಕೆ ಮಾಡಿಕೊಂಡು ಕೊನೆ ಹಂತದಲ್ಲಿ ಇನ್ನೇನು ರೋಗಿ ಸಾಯುತ್ತಾನೆ ಎಂಬ ಹಂತಕ್ಕೆ ತಲುಪಿದಾಗ ಆಸ್ಪತ್ರೆಗೆ ಸೇರಿಸಿ ರೋಗಿಯನ್ನು ಉಳಿಸಿಕೊಡಿ ಎಂದು ವೈದ್ಯರಲ್ಲಿ ಗೋಗರೆದು ರೋಗಿ ಮೃತಪಟ್ಟಾಗ ಅದೇ ವೈದ್ಯರ ಮೇಲೆ ದಾಳಿ ಮಾಡಿ ತಮ್ಮ ಹತಾಶೆ, ನೋವನ್ನು ವೈದ್ಯರ ಮೇಲೆ ತೋರಿಸುವುದು ಸರ್ವೇ ಸಾಮಾನ್ಯವಾಗಿದೆ. ನಾಯಿ, ಆನೆಗಳ ಮೇಲೆ ದೌರ್ಜನ್ಯವಾದಾಗ ಬೊಬ್ಬಿರಿಯುವ ಜನ, ಹಗಲಿರುಳು ರೋಗಿಯ ಸೇವೆಗಾಗಿ ತನ್ನ ಜೀವವನ್ನು ಪಣಕ್ಕಿಟ್ಟು ಸೇವೆ ಮಾಡುವ ವೈದ್ಯರ ಮೇಲೆ ದಾಳಿಗಳಾದಾಗ  ಜಾಣಮೌನ ವಹಿಸಿರುವುದು ಬಹಳ ಸೋಜಿಗವಾಗಿದೆ.  

ನಟರು ಮಾನವಹಕ್ಕು ಹೋರಾಟಗಾರರು, ಸಾಮಾಜಿಕ ಹೋರಾಟಗಾರರು, ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು, ಯಾರೊಬ್ಬರು ತುಟಿ ಬಿಚ್ಚುವುದೇ ಇಲ್ಲ. ನಮಗ್ಯಾಕೆ ಇವರ ಉಸಾಬರಿ ಎಂದು ಮೌನಕ್ಕೆ ಶರಣಾಗಿದ್ದಾರೆ. ಎಲ್ಲೋ ಒಂದೆಡೆ 'ಜೊಮ್ಯಾಟೋ' ವಿಲೇವಾರಿ ಮಾಡುವ ವ್ಯಕ್ತಿ ಮೇಲೆ ಹಲ್ಲೆಯಾದಾಗ ದಿನವಿಡೀ ತೋರಿಸಿ ಚಿತ್ರ ಹಿಂಸೆ ಮಾಡುವ ಟಿವಿ ಮಾಧ್ಯಮ ಕೂಡಾ ವೈದ್ಯರ ಮೇಲಿನ ದಾಳಿಯನ್ನು ಮಾಮೂಲಿ ಘಟನೆಯಂತೆ ಚಿತ್ರಿಸುವುದು ಎಷ್ಟು ಸರಿ? ತನಗೆ ಎಷ್ಟೇ ಕೆಲಸದ ಒತ್ತಡವಿದ್ದರೂ, ತನಗೆ ಬೇಕಾದ ಯಾವುದೇ ಸೌಲಭ್ಯ ನೀಡದಿದ್ದರೂ ಇದ್ದ ಸಲಕರಣೆ ಮತ್ತು ಸಮಯದ ಮಿತಿಯಲ್ಲಿ ರೋಗಿಗಳನ್ನು ರಕ್ಷಿಸಲು ತನ್ನ ಜೀವವನ್ನು ಪಣಕ್ಕಿಟ್ಟು ಹಗಲಿರುಳು ರೋಗಿಯ ಸೇವೆಯಲ್ಲಿ ಸಾರ್ಥಕತೆ ಕಾಣುವ ವೈದ್ಯರನ್ನು ಮನುಷ್ಯರಂತೆ ಕಾಣದಿರುವುದು ಕುಚೋದ್ಯವೇ ಸರಿ.

ಯಾವುದೇ ಒಂದು ಸಂಘಟನೆಯೂ ವೈದ್ಯರ ಬೆನ್ನಿಗೆ ನಿಲ್ಲದಿರುವುದು ಬಹುದೊಡ್ಡ ದುರಂತ. ವೈದ್ಯರು ಚಿಕಿತ್ಸೆ ನೀಡುವಾಗ  ಅವರದು ಸೇವೆಯೆಂದು  ಎಲ್ಲರೂ ಬುದ್ದಿ ಮಾತು ಹೇಳುತ್ತಾರೆ. ಆದರೆ ವೈದ್ಯರು ತಾನು ಮಾಡಿದ ಸೇವೆಗೆ ಕಿಂಚಿತ್ತೂ  ಮೌಲ್ಯ ಕೇಳಿದಾಗ ಅದನ್ನು ಒಪ್ಪಲು ಜನರು ಸಿದ್ದರಿಲ್ಲ. ಹಣದ ವಿಚಾರ ಬಂದಾಗ ವೈದ್ಯರನ್ನು ಬಳಕೆದಾರರ ಗುಂಪಿಗೆ ಸೇರಿಸಿ ವೈದ್ಯಕೀಯವನ್ನು ವ್ಯಾಪಾರೀವೃತ್ತಿಗೆ ಹೋಲಿಸಿ, ವೈದ್ಯರನ್ನು ವ್ಯಾಪಾರಿಗಳಂತೆ ಕಾಣುವುದು ಎಷ್ಟರ ಮಟ್ಟಿಗೆ ಸರಿ? ಈ ಎಲ್ಲಾ ಕಾರಣಗಳಿಂದ ವೈದ್ಯರ ಮತ್ತು ರೋಗಿಗಳ ನಡುವಿನ ಪವಿತ್ರವಾದ ವೈದ್ಯ ರೋಗಿ ಸಂಬಂಧ ಹಳಸಿ ಹೋಗಿ ಕಲುಷಿತ ವಾತಾವರಣ ಉಂಟಾಗಿರುವುದು ಈ ಸಂಘರ್ಷಕ್ಕೆ ಕಾರಣವಾಗಿರಬಹುದೇ?


ಘಟನೆ 1: ದಿನಾಂಕ 2/06/2021ನೇ ಮಂಗಳವಾರ ಅಸ್ಸಾಂನ ಉಡರಿ ಎಂಬಲ್ಲಿನ ಕೋವಿಡ್ ಕೇರ್ ಸೆಂಟರ್‍ನಲ್ಲಿ ಡಾ|| ಸೇಜು ಕುಮಾರ್ ಸೇನಾಪತಿ ಎಂಬ ಯುವ ವೈದ್ಯನ ಮೇಲೆ 24 ಮಂದಿ ಮಾರಣಾಂತಿಕ ಹಲ್ಲೆ ನಡೆಸುತ್ತಾರೆ. ಆ ವೈದ್ಯ ಅದೇ ಆಸ್ಪತ್ರೆಯಲ್ಲಿ ಕೋವಿಡ್ ಕರ್ತವ್ಯವನ್ನು ಹಗಲು ರಾತ್ರಿ ಮಾಡಿ ರೋಗಿಗಳ ಜೀವ ಉಳಿಸಲು ತನ್ನ ಪ್ರಾಣವನ್ನು ಒತ್ತೆಯಿಟ್ಟು ನಿಷ್ಠೆಯಿಂದ ಕೆಲಸ ಮಾಡುತ್ತಿದ್ದರು. ಆ ಯುವ ವೈದ್ಯನನ್ನು  ಕಿತ್ತಾಡಿ, ಎಳೆದು ನೆಲದಲ್ಲಿ ಜಗ್ಗಾಡಿ, ಬೂಟುಕಾಲಿನಿಂದ ಒದ್ದು, ನೆಲದಲ್ಲಿ ದರದರದನೆ ಎಳೆದುಕೊಂಡು ಸ್ಟೀಲ್ ಪಾತ್ರೆಗಳಿಂದ, ಪೊರಕೆಗಳಿಂದ ತಲೆ, ಬೆನ್ನು, ಭುಜ ಮತ್ತು ದೇಹದೆಲ್ಲೆಡೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಯಿತು.

ಹಿನ್ನಲೆ: ಮೇ 31 ರಂದು ಅಸ್ಸಾಂನ ಹೊಜೈ ಜಿಲ್ಲೆಯ ಉಡರಿ ಕೋವಿಡ್ ಕೇರ್ ಸೆಂಟರಿಗೆ ಮೊಹಮ್ಮದ್ ಜಿಯಾಜುದ್ದೀನ್ ಎಂಬ ವ್ಯಕ್ತಿ ಕೋವಿಡ್-19 ರೋಗದ ಚಿಕಿತ್ಸೆಗಾಗಿ ದಾಖಲಾಗುತ್ತಾನೆ. ಆಸ್ಪತ್ರೆ ಸೇರುವಾಗ ಆತನ ದೇಹ ಸ್ಥಿತಿ ಬಿಗಡಾಯಿಸಿತ್ತು. ಜೂನ್ 2 ರಂದು ಆತ ಕೋವಿಡ್‍ನಿಂದಾಗಿ ಮೃತಪಟ್ಟಿದ್ದು ತಕ್ಷಣನೇ ಮೃತ ರೋಗಿಯ ಸಂಬಂಧಿಕರು ವೈದ್ಯ ಮತ್ತು ದಾದಿಯ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದರು.


ಘಟನೆ 2: ದಿನಾಂಕ 31/05/2021 ರಂದು ಮಧ್ಯಾಹ್ನದ ಸಮಯದಲ್ಲಿ ತರೀಕೆರೆ ಪಟ್ಟಣದಲ್ಲಿರುವ ಬಸವೇಶ್ವರ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ|| ದೀಪಕ್‍ರವರು ತಮ್ಮ ಸೈಕಲ್‍ನಲ್ಲಿ ಆಸ್ಪತ್ರೆಯಿಂದ ತಮ್ಮ ಮನೆಗೆ ತೆರಳುವಾಗ 4 ಜನರು ಬೈಕ್‍ನಲ್ಲಿ ಬಂದು ಮಾರಣಾಂತಿಕ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾದರು.

ಹಿನ್ನಲೆ: 25/05/2021ರಂದು ಹಲ್ಲೆ ಆರೋಪಿ ವೇಣುಗೋಪಾಲ ರವರ 6-7 ವರ್ಷದ ಅಕ್ಕನ ಮಗನಿಗೆ ಆರೋಗ್ಯ ಸರಿ ಇಲ್ಲದ ಕಾರಣ ತರೀಕೆರೆ ಬಸವೇಶ್ವರ ಆಸ್ಪತ್ರೆಯಲ್ಲಿ ಡಾ|| ದೀಪಕ್ ರವರಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದು, ನಂತರ ಬಾಲಕನ ಸ್ಥಿತಿ ಗಂಭೀರವಾಗಿದ್ದರಿಂದ ದಿನಾಂಕ 27/05/2021 ರಂದು ಹೆಚ್ಚು ಚಿಕಿತ್ಸೆಗಾಗಿ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 29/05/2021 ರಂದು ಬಾಲಕ ಮೃತಪಟ್ಟಿರುತ್ತಾನೆ. ಬಾಲಕನ ಸಾವಿಗೆ ಡಾ|| ದೀಪಕ್‍ರವರನ್ನು ಹೊಣೆಗಾರ ಎಂದು ಆರೋಪಿಸಿ, ಆಕ್ರೋಷಿತ ಆರೋಪಿ ವೇಣುಗೋಪಾಲ ತನ್ನ ಮೂವರು ಸ್ನೇಹಿತರನ್ನು ಸೇರಿಸಿಕೊಂಡು ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುತ್ತಾರೆ.


ಘಟನೆ 3: ದಿನಾಂಕ 29/05/2021 ರಂದು ಉತ್ತರ ಪ್ರದೇಶದ ದಾಡ್ರಿ ಎಂಬಲ್ಲಿ ಎಂದಿನಂತೆ ಡಾ|| ಅಜಯ್ ಘೋಷ್ (52 ವರ್ಷ) ತಮ್ಮ ಕನ್ಸಾಲ್ ದಂತ ಚಿಕಿತ್ಸಾಲಯದಲ್ಲಿ ರೋಗಿಗಳಿಗೆ ಸರದಿಯಲ್ಲಿ ಚಿಕಿತ್ಸೆ ನೀಡುತ್ತಿದ್ದರು. ವಿಪರೀತ ಹಲ್ಲು ನೋವಿನಿಂದ ಬಳಲುತ್ತಿದ್ದ 24 ವರ್ಷದ ಜುಬೈರ್ ತನ್ನನ್ನು ವೈದ್ಯರು ಬೇಗನೆ ನೋಡಲಿಲ್ಲ ಎಮಬ ಕೋಪದಿಂದ ವೈದ್ಯರ ಮೇಲೆ ದಾಳಿ ಮಾಡಿ ಹತ್ತಾರು ಬಾರಿ ವೈದ್ಯರಿಗೆ ಚಾಕುವಿನಿಂದ ತಿವಿದು, ಮಾರಣಾಂತಿಕ ಗಾಯ ಮಾಡಿರುತ್ತಾನೆ.

ಹಿನ್ನಲೆ: ವಿಪರೀತ ಹಲ್ಲು ನೋವಿನಿಂದ ಬಳಲುತ್ತಿದ್ದು ಜುಬೈರ್ ನೇರವಾಗಿ ಇತರ ರೋಗಿಗಳನ್ನು ಕಡೆಗಣಿಸಿ ವೈದ್ಯರ ಇತರ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವಾಗಲೇ ಒಳಗೆ ಬಂದು ವೈದ್ಯರ ಮೇಲೆ ಅನಾಗರೀಕವಾಗಿ ಬೆದರಿಕೆ ಹಾಕಿ ತನ್ನನ್ನು ಮೊದಲು ನೋಡ ಬೇಕು ಎಂದು ಆವಾಜ್ ಹಾಕಿದ್ದ. ವೈದ್ಯರು ಎಲ್ಲರೂ ಸರದಿಸಾಲಿನಲ್ಲಿ ಬರಬೇಕು ಎಂದಾಗ ಮೃಗೀಯ ರೀತಿಯಲ್ಲಿ ವರ್ತಿಸಿ ವೈದ್ಯರ ಮೇಲೆ ಅಮಾನವೀಯ ದಾಳಿ ನಡೆಸಿ ಪರಾರಿಯಾಗಿದ್ದ.


ಘಟನೆ 4: ದಿನಾಂಕ: 25-05-2021 ರಂದು ಲಕ್ನೋದಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯ ಡಾ|| ಸಂದೀಪ್ ಜೆಸ್ವಾಲ್ ಎಂಬಾತನ ಮೇಲೆ ಅಮೀರ್ ಚೌದರಿ ಮತ್ತು ಮಹಮ್ಮದ್ ಶÀಹೀದ್ ಎಂಬಿಬ್ಬರು ಗುಂಡಿನಿಂದ ದಾಳಿ ಮಾಡಿ ಮಾರಣಾಂತಿಕವಾಗಿ ಗಾಯಗೊಳಿಸಿದ್ದರು. ವೈದ್ಯರು ಕಾರಿನಲ್ಲಿ ಚಲಿಸುತ್ತಿದ್ದಾಗ ಆತನ ಕಾರನ್ನು ಹಿಂಬಾಲಿಸಿ ಅಡ್ಡ ಹಾಕಿ ಗುಂಡಿನ ಮಳೆಗೆರೆದಿದ್ದರು.

ಹಿನ್ನಲೆ: ಶಂಕಿತ ಆರೋಪಿ ಅಮೀರ್ ಚೌದರಿಯ ತಮ್ಮ ಖಾಲಿದ್ ಚೌದರಿ ಮೇ ತಿಂಗಳ ಮೊದಲ ವಾರದಲ್ಲಿ ಡಾ|| ಸಂದೀಪ್ ಜೆಸ್ವಾಲ್ ಅವರ ಬಳಿ ಕೋವಿಡ್ ಚಿಕಿತ್ಸೆಗಾಗಿ ಬಂದಿದ್ದು, ಆತ ಆಸ್ಪತ್ರೆಗೆ ಬರುವಾಗ ಸಮಯ ಮಿಂಚಿ ಹೋಗಿದ್ದ ಕಾರಣ ವೈದ್ಯರಿಗೆ ಆತನ ಜೀವ ಉಳಿಸಲು ಸಾಧ್ಯವಾಗಿರಲಿಲ್ಲ. ಇದರ ಮೇಲಿನ ಕೋಪದಿಂದ ಆತನ ಸಹೋದರ ಅಮೀರ್ ಚೌದರಿ ತನ್ನ ಸ್ನೇಹಿತರೊಂದಿಗೆ ಬಂದು ವೈದ್ಯರ ಮೇಲೆ ದಾಳಿ ನಡೆಸಿದ್ದ.

ಕವಲುದಾರಿಯಲ್ಲಿರುವ ವೈದ್ಯಕೀಯ ಕ್ಷೇತ್ರ

ಪುಟ್ಟ ನಾಯಿಮರಿಯೊಂದು ಬೀದಿಯಲ್ಲಿ ತನ್ನ ಪಾಡಿಗೆ ತಾನು ಆಟವಾಡುತ್ತಿತ್ತು. ಬಾಲ ಅಲ್ಲಾಡಿಸುತ್ತಾ ಸಿಕ್ಕಿಸಿಕ್ಕಿದ ವಸ್ತುಗಳನ್ನು ಮೂಸುತ್ತಾ ತನ್ನದೇ ಲೋಕದಲ್ಲಿ ವಿಹರಿಸುತ್ತಿತ್ತು. ಅದೇ ಹೊತ್ತಲ್ಲಿ ನಾಲ್ಕಾರು ಹದಿಹರೆಯದ ಹುಡುಗರು ಅದೇ ದಾರಿಯಾಗಿ ಬರುತ್ತಿದ್ದರು. ನಾಯಿಮರಿ ತನ್ನ  ಮಾಮೂಲು ಸ್ವಭಾವದಂತೆ ಮನುಷ್ಯರನ್ನು ಕಂಡಾಗ ಬಾಲ ಅಲ್ಲಾಡಿಸಿ, ಆ ಹುಡುಗರಿಗೆ ತನ್ನ ಅಸ್ಥಿತ್ವವನ್ನು ತೋರಿಸಲೆಂದು ಮೆತ್ತಗೆ ಬೌಬೌ ಎಂದು ಮೆದುವಾಗಿ ಬೊಗಳಿತು. ಆ ಹುಡುಗರು ತನ್ನ ಬಳಿ ಬರಬಹುದು, ತನ್ನ ಬೆನ್ನಿನ ಮೇಲೆ ಕೈಯಾಡಿಸಬಹುದು, ತನ್ನ ಜೊತೆ ಆಟವಾಡಬಹುದು, ಇಲ್ಲವಾದಲ್ಲಿ ಏನಾದರೂ ತಿನ್ನಲು ಸಿಗಬಹುದೆಂಬ ಆಸೆ, ಕುತೂಹಲ ಮತ್ತು ನಿರೀಕ್ಷೆಯಲ್ಲದೆ ಮತ್ತೇನೂ ಆ ಪುಟ್ಟ ನಾಯಿ ಮರಿಯ ಮನಸ್ಸಿನಲ್ಲಿರಲಿಲ್ಲ. ಅದರೆ ಆ ಕ್ಷಣದಲ್ಲಿ ಆ ಗುಂಪಿನ ಒಬ್ಬಾತ ಒಂದು ಕಲ್ಲನ್ನೆತ್ತಿ ನಾಯಿ ಮರಿಗೆ ಎಸೆದೇ ಬಿಟ್ಟ.

ಕೆಲವು ವಾರಗಳ ಹಿಂದೆ ಆತನ ಸ್ನೇಹಿತನಿಗೆ ನಾಯಿ ಕಚ್ಚಿದೆ ಎಂದು ತನ್ನ ಕಲ್ಲೆಸತಕ್ಕೆ ಸಮಜಾಯಿಸಿಕೊಟ್ಟ. ಅದಾಗಲೇ ಮತ್ತೊಬ್ಬ ಹುಡುಗ ತನ್ನ ಬೀದಿಯಲ್ಲಿಯೂ ನಾಯಿಗಳು ರಾತ್ರಿಯಿಡೀ ಬೊಗಳುತ್ತದೆ ಮತ್ತು ನಿದ್ರಾಭಂಗ ಮಾಡುತ್ತದೆ ಎಂದು ಕಾರಣ ನೀಡಿ ತನ್ನ ಪೌರುಷವನ್ನು ಪುಟ್ಟ ನಾಯಿಮರಿಯ ಮೇಲೆ ತೋರಿಸಿಯೇ ಬಿಟ್ಟ. ಮೂರನೇ ಹುಡುಗನು ತಾನೂ ಕೂಡಾ ಇತರರಿಗಿಂತ  ಕಡಿಮೆ ಇಲ್ಲ ಎಂದು ಬೀಗುತ್ತಾ ಧಾರ್ಮಿಕ ಕಾರಣವನ್ನು ನೀಡಿ ತನ್ನ ತೀಟೆಯನ್ನು ಕಲ್ಲೆಸೆದು ತೀರಿಸಿಕೊಂಡ. ಹೀಗೆ ಗುಂಪಿನಲ್ಲಿದ್ದ ಎಲ್ಲರೂ ತಮ್ಮಿಷ್ಟಕ್ಕೊಂದರಂತೆ ಸಬೂಬು ನೀಡಿ, ಪುಟ್ಟ ನಾಯಿಮರಿಯ ಮೇಲೆ ಎರಗಿಬಿದ್ದರು. ಒಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ನಾಯಿಗಳನ್ನು ನಂಬಲೇ ಬಾರದು ಎಂಬ ನಿರ್ಧಾರಕ್ಕೆ ಬಂದಾಗಿತ್ತು. ಪಾಪ ನಾಯಿ ಮರಿ ಮಾತ್ರ ಬೆದರುಗಣ್ಣಿನಿಂದ ನೋಡುತ್ತಲೇ ಇತ್ತು.

ತಾನು ಪ್ರೀತಿಗಾಗಿ ಹಾತೊರೆದು ನಿಂತರೂ ವಿನಾಕಾರಣ ಎರಗಿಬಿದ್ದ ಮಕ್ಕಳ ಮನೋಸ್ಥಿತಿ ಬಗ್ಗೆ ಜಿಗುಪ್ಸೆಯೂ ಉಂಟಾಗಿತ್ತು ಮತ್ತು ಗೊಂದಲವೂ ಮೂಡಿ ಭಯದಿಂದ ಕಂಪಿಸುತ್ತಿತ್ತು ಆ ಪುಟ್ಟ ನಾಯಿಮರಿ. ಮಕ್ಕಳು ತಮ್ಮ ಪೌರುಷವನ್ನು ತೋರಿಸಿದ ಸಂತೃಪ್ತಿಯೊಂದಿಗೆ, ಯುದ್ಧಗೆದ್ದ ಸೇನಾನಿಗಳಂತೆ ಮೀಸೆ ತಿರುವುತ್ತಾ ಮನೆ ಸೇರಿದರು.

ಇತ್ತ ದೇಹವಿಡೀ ಗಾಯವಾಗಿ ರಕ್ತ ಒಸರುತ್ತಿತ್ತು ಮತ್ತು ಪುಟ್ಟ ನಾಯಿಮರಿ ಚಳಿಯಿಂದ ನಡುಗುತ್ತಿತ್ತು. ಜಿಟಿಪಿಟಿ ಮಳೆಗೆ ಗಾಯ ಮತ್ತಷ್ಟು ಉರಿಯುತ್ತಿತ್ತು. ಯಾವ ಪ್ರೀತಿಗಾಗಿ ಹಂಬಲಿಸಿ ಬಾಲ ಅಲ್ಲಾಡಿಸಿತ್ತೋ ಅದು ಸಿಗದೆ, ನೋವಿನಿಂದ ಚಿರಾಡುತ್ತಾ ನೋವು ಉಪಶಮನ ಮಾಡಲು ತನ್ನದೇ ದೇಹದ ಗಾಯವನ್ನು ನಕ್ಕುತ್ತಿತ್ತು. ಜಿಟಿಜಿಟಿ ಮಳೆ ಮತ್ತು ಚಳಿ ಗಾಳಿಯಲ್ಲೂ ಬೆವರುತ್ತಿತ್ತು ಪುಟ್ಟ ನಾಯಿಮರಿ. ಆದರೆ ಒಂದಂತೂ ಸತ್ಯ, ವಯಸ್ಸಿನಲ್ಲಿ ಎಷ್ಟೇ ಚಿಕ್ಕದಾಗಿದ್ದರೂ, ನಿರ್ಮಲ ಮನಸ್ಸಿನ ಪುಟ್ಟ ನಾಯಿಯ ಮನಸ್ಸಿಗೆ ಅಗಾಧವಾದ ಗಾಯವಾಗಿತ್ತು. ದೇಹಕ್ಕಾದ ಗಾಯವೇನೋ ಒಣಗಬಹುದು ಆದರೆ ಮನಸ್ಸಿಗಾದ ನೋವು ಅಷ್ಟು ಸುಲಭವಾಗಿ ವಾಸಿಯಾಗುವುದಿಲ್ಲ. ತನಗರಿವಿಲ್ಲದೆ ಮನುಷ್ಯ ಪ್ರಾಣಿಯನ್ನು ಆ ಪುಟ್ಟ ನಾಯಿ ಮರಿ ದ್ವೇಷಿಸಲು ಆರಂಭಿಸಿತ್ತು. ತನ್ನದಲ್ಲದ ತಪ್ಪಿಗೆ, ಯಾರೋ ಒಬ್ಬರು ಮಾಡಿದ ತಪ್ಪಿಗೆ, ಆ ನಾಯಿ ಮರಿಯ ದೇಹ ಮತ್ತು ಮನಸ್ಸು ಎರಡಕ್ಕೂ ಘಾಸಿಯಾಗಿ ಗಲಿಬಿಲಿಗೊಂಡು, ಯಾಕಾಗಿ ನಾಯಿಯಾಗಿ ಹುಟ್ಟಿದೆನೋ ಎಂದು ಪರಿತಪಿಸುವ ಮಟ್ಟಕ್ಕೂ ಬಂದು ತಲುಪಿತ್ತು.

ಇಂದಿನ ಕಾಲಘಟ್ಟದಲ್ಲಿ ವೈದ್ಯವೃತ್ತಿಯೂ ಇದೇ ರೀತಿಯ ಗೊಂದಲದಲ್ಲಿ ಮತ್ತು  ದ್ವಂದ್ವದಲ್ಲಿ ಬಂದು ನಿಂತಿದೆ. ಪ್ರಸ್ತುತ ನಮ್ಮ ಸುತ್ತಮುತ್ತಲೂ ವೈದ್ಯರ ಮೇಲೆ ನಡೆಯುವ ದಾಳಿ, ಅಸ್ಪತ್ರೆಯ ಮೇಲೆ ನಡೆಯುವ ಗೂಂಡಾಗಿರಿ ಇತ್ಯಾದಿ ಕಂಡಾಗ ಪ್ರತಿಯೊಬ್ಬ ಹೆತ್ತವರೂ ನನ್ನ ಮಗ ಯಾಕಾಗಿ ವೈದ್ಯನಾಗÀಬೇಕು? ಎಂದು ತಮ್ಮನ್ನೇ ಕೇಳಿಕೊಳ್ಳುವ ಪರಿಸ್ಥಿತಿ ಬಂದಿದೆ. ವಾಸ್ತವಕ್ಕೆ ಬರೋಣ ನಮ್ಮ ದೇಶದ ವೈದ್ಯ ಮತ್ತು ಜನ ಸಂಖ್ಯೆಯ ಅನುಪಾತ 0.7/1000 ಅಂದರೆ ಪ್ರತಿ ಸಾವಿರಕ್ಕೆ ಒಂದಕ್ಕಿಂತಲೂ ಕಡಿಮೆ ವೈದ್ಯರು ಇದ್ದಾರೆ. ಬೇರೆ ಮುಂದುವರಿದ ದೇಶಗಳಿಗೆ ಹೋಲಿಸಿದಲ್ಲಿ ಚೈನಾ (1.9), ಬ್ರಿಟನ್ (2.8) ಅಮೇರಿಕಾ (2.5), ಸ್ಪೇನ್ (4.9) ನಮ್ಮ ದೇಶದಲ್ಲಿ ವೈದ್ಯರ ಸಂಖ್ಯೆ ಬಹಳ ಕಡಿಮೆ. ಒಟ್ಟಾರೆಯಾಗಿ ಹೇಳುವುದಾದಲ್ಲಿ ವೈದ್ಯರ ಕೊರತೆ ನಮ್ಮಲ್ಲಿದೆ ಮತ್ತು ಪ್ರತಿ ವೈದ್ಯರಿಗೂ ತನ್ನ ಇತಿ ಮಿತಿಗಿಂತ ಮಿಗಿಲಾದ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆಯೂ ಇದೆ. ಈ ನಿಟ್ಟಿನಲ್ಲಿ ಒಬ್ಬ ವೈದ್ಯನನ್ನು ದೇವರಾಗಿ ಕಾಣುವುದು ಬಿಡಿ, ಕೇವಲ ಮನುಷ್ಯನಾಗಿ ನೋಡಿದರೂ ಸಾಕಾಗಬಹುದು. ತನ್ನ ಇತಿ ಮಿತಿಯೊಳಗೆ ನೋಡಿದರೂ ಮುಗಿಯದಷ್ಟು ರೋಗಿಗಳನ್ನು ನೋಡಬೇಕು ಮತ್ತು ಚಿಕಿತ್ಸೆ ನೀಡಬೇಕಾದ ಕಠಿಣ ಪರಿಸ್ಥಿತಿ ಇದೆ. ಹೀಗಿರುವಲ್ಲಿ ವೈದ್ಯರ ಮೇಲೆ ಆಕ್ರಮಣ ಆಸ್ಪತ್ರೆಯ ಮೇಲೆ ದಾಳಿ, ದೌರ್ಜನ್ಯ ಮಾಡುವುದು ಎಷ್ಟು ಸರಿ? ರೋಗಿಗಳು ಮತ್ತು ಸಂಬಂಧಿಗಳು ನಿಜವಾಗಿಯೂ ವಾಸ್ತವವನ್ನು ಅರಿತು ತಾಳ್ಮೆಯಿಂದ ಸಹನೆಯಿಂದ ವರ್ತಿಸಿ ವೈದ್ಯರೂ ಮನುಷ್ಯರು ಎಂದು ವರ್ತಿಸಿದಲ್ಲಿ ಮಾತ್ರ ಸಮಾಜದಲ್ಲಿ ವೈದ್ಯರು ತಮ್ಮ ವೃತ್ತಿಗೆ ನ್ಯಾಯ ನೀಡಲು ಸಾಧ್ಯವಾಗಬಹುದು.

ವೈದ್ಯಕೀಯ ಕ್ಷೇತ್ರದ ವಾಸ್ತವ:

ಹೆಚ್ಚಿನ ಕಾರ್ಪೋರೇಟ್ ಅಸ್ಪತ್ರೆಗಳು ವೈದ್ಯರನ್ನು ನೇಮಿಸಿಕೊಂಡು ದಿನದಲ್ಲಿ 12ರಿಂದ 14ಗಂಟೆವರೆಗೆ ದುಡಿಸಿಕೊಳ್ಳುತ್ತದೆ. ದಿನದಲ್ಲಿ ಕನಿಷ್ಠ 10 ಗಂಟೆಗಳ ಕೆಲಸವೆಂದರೆ ವಾರದಲ್ಲಿ 70 ಗಂಟೆಗಳ ಕೆಲಸ ವಾರದಲ್ಲಿ. ಹೆಚ್ಚಿನ ಕೆಲಸದ ಬಗ್ಗೆ ಪ್ರಶ್ನೆ ಮಾಡಿದಲ್ಲಿ 'ವೈದ್ಯವೃತ್ತಿ ಎಂದರೆ ಸೇವಾ ಕ್ಷೇತ್ರ ವ್ಯವಹಾರವಲ್ಲ' ಎಂಬ ಸಮಜಾಯಿಸಿ ನೀಡಿ ದುಡಿಸಿ ಕೊಳ್ಳುವುದಂತೂ ಸತ್ಯ ಒಬ್ಬ ಟ್ಯಾಕ್ಸಿ ಚಾಲಕನೂ ಕೂಡ ದಿನದಲ್ಲಿ ಎಂಟು ಗಂಟೆಗಿಂತ ಜಾಸ್ತಿ ಕೆಲಸ ಮಾಡುವುದಿಲ್ಲ. ಆದರೆ ವೈದ್ಯ ಮಾತ್ರ ವಾರದಲ್ಲಿ ಎಲ್ಲಾ ದಿನವೂ ಹಗಲು ರಾತ್ರಿ ದುಡಿಯಬೇಕಾದ ಅನಿವಾರ್ಯತೆ ಇದೆ. ಯಾಕೆಂದರೆ ವೈದ್ಯ ವೃತ್ತಿ ಎನ್ನುವುದು ಸೇವಾ ಕ್ಷೇತ್ರವಾಗಿದ್ದು ಜನರ ಜೀವದ ಮುಂದೆ ಉಳಿದೆಲ್ಲವೂ ಗಣ್ಯ ಎಂಬ ಸಮಾಜಾಯಿಸಿ. ಆದರೆ ಅದಕ್ಕೆ ಸರಿಯಾದ ಸಂಭಾವನೆ ಮಾತ್ರ ನೀಡಲು ಹಿಂದೇಟು ಹಾಕುವುದಂತೂ ಸತ್ಯ.

ಜಾಸ್ತಿ ಕೆಲಸದ ಬಗ್ಗೆ ಪ್ರಶ್ನೆ ಮಾಡಿದಲ್ಲಿ ವೃತ್ತಿಧರ್ಮದ ಬಗ್ಗೆ ಭಾಷಣ ಕೇಳಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ. ಬೆಳಗ್ಗೆ 7.00ರಿಂದ ರಾತ್ರಿ 7.00ರವರೆಗೆ ಕೆಲಸ ಮಾಡಿ ರಾತ್ರಿ 10.00ಕ್ಕೆ ಮನೆ ಸೇರುವ ಹೆಸರು ಹೇಳಲಿಚ್ಚಿಸದ ಮುಂಬೈಯ ಯುವ ವೈದ್ಯರೊಬ್ಬರು ತನ್ನ ವೃತ್ತಿಯ ಬಗ್ಗೆ ಬಹಳಷ್ಟು ನಿರಾಶನಾಗಿದ್ದ. ಮನೆ ಸೇರಿದ ಕೂಡಲೇ ಮಲಗಬೇಕಾದ ಅನಿವಾರ್ಯತೆ ಯಾಕೆಂದರೆ ಬೆಳಗ್ಗೆ 7.00ಕ್ಕೆ ಆಸ್ಪತ್ರೆ ತಲುಪಲು 5.00ಕ್ಕೆ ಏಳಲೇಬೇಕು. ಹಲವಾರು ಬಾರಿ ಹೆಂಡತಿ ಮಕ್ಕಳ ಜೊತೆ ಮಾತನಾಡುವುದು ಬಿಡಿ, ಮುಖ ನೋಡಲೂ ಸಿಗದಂತಹ ಸ್ಥಿತಿ. ವಾರಂತ್ಯದಲ್ಲೂ ಕೆಲವೊಮ್ಮೆ ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ. ಇಲ್ಲವಾದಲ್ಲಿ ಆಸ್ಪತ್ರೆಯಲ್ಲಿನ ರಾಜಕೀಯದಿಂದಾಗಿ ಕೆಲಸ ಕಳೆದುಕೊಳ್ಳಬೇಕು. ಇಷ್ಟೆಲ್ಲಾ ರಾದ್ಯಾಂತ ಕೇವಲ 50,000 ತಿಂಗಳ ಸಂಬಳಕ್ಕಾಗಿ ನಡೆಯುವ ದೊಂಬರಾಟ. ವಿಪರ್ಯಾಸವೆಂದರೆ ಅದೇ ಆಸ್ಪತ್ರೆಯ ಐ.ಸಿ.ಯುನಲ್ಲಿ ಎರಡು ದಿನ ಇರಬೇಕಾದರೂ 50,000 ತೆರಬೇಕಾದ ಅನಿವಾರ್ಯತೆ. ಇನ್ನು ಅದೇ ವೈದ್ಯರ ಸಹಪಾಠಿ ಇಂಜಿನಿಯರ್ ದೇಶ ವಿದೇಶ ಸುತ್ತುತ್ತಾ ವಾರದಲ್ಲಿ 5 ದಿನ ಕೆಲಸ ಮಾಡಿ ಅದೇ ಮೊತ್ತ ಡಾಲರ್‌ಗಳಲ್ಲಿ ಗಳಿಸುವುದು ಈ ವೈದ್ಯರಿಗೆ ಜೀರ್ಣಿಸಿಕೊಳ್ಳಲಾಗದಂತ ಸತ್ಯ.

ಇನ್ನು ಸರಕಾರಿ ವೈದ್ಯರ ಕತೆಯಂತೂ ಬಿಡಿ. ಮೊನ್ನೆ ಒಬ್ಬ ಸರಕಾರ ವೈದ್ಯ 5 ವರ್ಷಗಳ ಸೇವೆ ಮಾಡಿ ರಾಜೀನಾಮೆ ನೀಡಿದಾಗ ಬ್ಯಾಂಕ್‍ನಲ್ಲಿದ್ದ ಹಣ 15,000 ಮಾತ್ರ. ಸ್ವಂತವಾದ  ಮನೆ, ಕಾರು ವಿದೇಶ ಪ್ರವಾಸ ಬಿಡಿ, ಸ್ಯಾಮ್‍ಸಂಗ್, ಆಂಡ್ರಾಯ್ಡ್‌ ಪೋನ್ ಕೂಡಾ ತಿಂಗಳ ಕಂತಿನಿಂದ ಪಡೆಯಬೇಕಾಗಿತ್ತು. ಆತ ತನ್ನ ಮೊಬೈಲ್ ಕರೆನ್ಸಿ ರಿಚಾರ್ಜ್    ಮಾಡಿ ಪರ್ಸ್‍ನಲ್ಲಿ ಹಣಕ್ಕಾಗಿ ತಡಕಾಡುತ್ತಿದ್ದಾಗ, ಅಂಗಡಿಯಾತ ಮರುಕದಿಂದ ವೈದ್ಯರ ಬಳಿ ಹೇಳಿಕೊಂಡಿದ್ದ “ನನ್ನ ತಿಂಗಳ ಕಮಿಷನ್ ಎಲ್ಲಾ ಖರ್ಚು ಕಳೆದು 25,000 ಉಳಿಸುತ್ತೇನೆ” ಎಂದಾಗ ವೈದ್ಯರು ಕೂಡಾ ಸಣ್ಣಗೆ ಬೆವರಿದ್ದರು. ಆತನ ಮಾತಿನಲ್ಲಿ ಸತ್ಯವಿದೆ ಎಂದು ವೈದ್ಯರಿಗೆ ಅರಿವಾಗಿತ್ತು. ತನ್ನ ಸೇವೆ ಸಾರ್ಥಕತೆ ವೃತ್ತಿಧರ್ಮ ಮುಂತಾದವುಗಳಿಂದ ಹೊಟ್ಟೆ ತುಂಬಲ್ಲ ಎಂಬ ಕಟುಸತ್ಯ ಅರಿವಾಗಿತ್ತು. ಮತ್ಯಾಕೆ ತನ್ನ ಮಕ್ಕಳು ಈ ವೃತ್ತಿಯನ್ನು ತೆಗೆದುಕೊಳ್ಳಬೇಕು ತನ್ನ ಜೀವನವಂತೂ ಮುಗಿಯಿತು, ಮಕ್ಕಳಾದರೂ ಸುಖವಾಗಿರಲಿ ಎಂದು ಬಯಸುವುದು ತಪ್ಪೇ?

ನಮ್ಮ ವೈದ್ಯಕೀಯ ಕ್ಷೇತ್ರ ಬಹಳ ಬದಲಾಗಿದೆ. ಭಾರತದಂತಹ ಬೃಹತ್ ಜನಸಂಖ್ಯೆ ಇರುವ ರಾಷ್ಟ್ರದಲ್ಲಿ ಹೆಚ್ಚಿನವರು ಬಡತನ ರೇಖೆಗಿಂತ ಕೆಳಗಿನವರೇ. ಸರಕಾರದ ನೆರವಿಲ್ಲದೆ ವೈದ್ಯಕೀಯ ಸೌಲಭ್ಯ ಅವರಿಗೆ ಸಿಗುವುದು ಸುಲಭದ ಮಾತಲ್ಲ. ಕೊನೆ ಪಕ್ಷ ಬಡವರಿಗೆ ಉಚಿತ ವೈದ್ಯಕೀಯ ಸೌಲಭ್ಯ ಔಷಧಿಯನ್ನು ದೊರಕಿಸುವುದು ಅತೀ ಅಗತ್ಯ. ಆದರ ವಿಪರ್ಯಾಸವೆಂದರೆ ಪ್ರತಿ ವರ್ಷ ಬಜೆಟಿನಲ್ಲಿ 20% ಕಡಿತ ವೈದ್ಯಕೀಯ ಕೇತ್ರಕ್ಕೆ ನೀಡುವುದು ಯಾವ ನ್ಯಾಯ? ಅಮೇರಿಕಾದಲ್ಲಿ 8%  ಚೈನಾ ದೇಶದಲ್ಲಿ 3% ಆರೋಗ್ಯ ಕ್ಷೇತ್ರಕ್ಕೆ ನೀಡಿದಲ್ಲಿ ಭಾರತದಲ್ಲಿ ಕೇವಲ 1% ನೀಡುವುದು ಯಾವ ನ್ಯಾಯ? ಈ ರೀತಿಯ ವ್ಯವಸ್ಥೆಯಲ್ಲಿ ನಮ್ಮ ಮಕ್ಕಳು ವೈದ್ಯರಾದÀರೆ ಬದುಕುವುದಾದರೂ ಹೇಗೆ? ವೈದ್ಯಕೀಯ ಕ್ಷೇತ್ರವನ್ನು ಸೇವಾ ಕ್ಷೇತ್ರವೆಂದು ಪರಿಗಣಿಸಿ ಹೆಚ್ಚಿನ ಸೌಲಭ್ಯ ಜನರಿಗೆ ದೊರೆತಲ್ಲಿ, ವೈದ್ಯರ ಮೇಲಿನ ಹೊರೆ ಕಡಿಮೆಯಾಗಿ ನೆಮ್ಮದಿಯಿಂದ ಉಸಿರಾಡಬಹುದೇನೋ? ಇಲ್ಲವಾದÀಲ್ಲಿ ಈಗ ಆಮೇರಿಕಾದಲ್ಲಿರುವ 38% ಭಾರತೀಯ ವೈದ್ಯರ ಅನುಪಾತ ಮುಂದಿನ ದಿನಗಳಲ್ಲಿ ಇದು 50% ತಲುಪಿದರೂ ಆಶ್ಚರ್ಯವೇನಲ್ಲ.

ನಾನ್ಯಾಕೆ ನನ್ನ ಮಕ್ಕಳನ್ನು ವೈದ್ಯರಾಗಲು ಬಿಡುವುದಿಲ್ಲ:

ಮೊನ್ನೆ ತಾನೇ ಕೊಚ್ಚಿಯ ಹಿರಿಯ ಅರಿವಳಿಕೆ ತಜ್ಞರೊಬ್ಬರಾದ ಡಾ| ರೋಶನ್ ರಾಧಾಕೃಷ್ಣನ್ ತನ್ನ ಬ್ಲಾಗ್‍ನಲ್ಲಿ ಹೀಗೆ ಬರೆಯುತ್ತಾರೆ. “ನನ್ನ ಮಕ್ಕಳು ಪೋಲ್ ಡ್ಯಾನ್ಸರ್ ಆದರೂ ಪರವಾಗಿಲ್ಲ, ವೈದ್ಯರಾಗುವುದು ಬೇಡ”. ಅವರು ನೀಡುವ ಕಾರಣ ಇಷ್ಟೆ. ವೈದ್ಯರೊಬ್ಬ ತನ್ನ ವೃತ್ತಿ ಜೀವನಕ್ಕಾಗಿ ತನ್ನ ವೈಯಕ್ತಿಕ ಕೌಟುಂಬಿಕ ಬದುಕನ್ನು ಬಲಿಗೊಟ್ಟು, ನಿಗದಿಪಡಿಸಿದ್ದಕ್ಕಿಂತ ಎರಡು ಪಟ್ಟು ಜಾಸ್ತಿ ಘಂಟೆಗಳ ಕಾಲ ದುಡಿದು ತಿಂಗಳ ಕೊನೆಗೆ ಮನೆಗೆ ತೆಗೆದುಕೊಂಡೊಯ್ಯುವ ಸಂಬಳ ಮುಜುಗರ ಪಡುವಷ್ಟು ಕಡಿಮೆ.  ಇಷ್ಟು ಮಾತ್ರವಲ್ಲ. ಇದೆಲ್ಲವನ್ನು ಸಹಿಸಿಕೊಂಡು ವೈದ್ಯವೃತ್ತಿಯ ರಾಜಧರ್ಮವನ್ನೂ ಪಾಲಿಸಿದರೂ ಕೊನೆಗೊಮ್ಮೆ ಏನಾದರೂ ಅನಾಹುತವಾದಲ್ಲಿ ವೈದ್ಯರ ಜೀವಕ್ಕೇ ಕುತ್ತು ಬರುವ ಹಿಂಸಾತ್ಮಕ ಘಟನೆಗಳನ್ನು ನೆನೆದು, ಜೀವ ಉಳಿಸಿ ಕೊಳ್ಳುವ ಪರಿಸ್ಥಿತಿ ವೈದ್ಯರಿಗೆ ಬಂದಿದೆ.

ವೈದ್ಯರಿಗೆ ರೋಗಿಯ ಜೀವ ಉಳಿಸುವುದರ ಜೊತೆಗೆ ತನ್ನ ಜೀವವನ್ನು ಜೋಪಾನವಾಗಿಸಿ ಕೊಳ್ಳುವ ದೊಡ್ಡ ಹೊಣೆಗಾರಿಕೆ ಇದೆ. ಯಾವ ವೈದ್ಯರೂ ತನ್ನ ರೋಗಿ ಸಾಯಬೇಕೆಂದು ಕನಸಲ್ಲೂ ನೆನೆಯುವುದಿಲ್ಲ. ವೈದ್ಯರ ನಿಯಂತ್ರಣದಲ್ಲಿರದ ಕಾರಣದಿಂದಾಗಿ, ಏನಾದರೂ ಅನಾಹುತ ಸಂಭವಿಸಿದಲ್ಲಿ ರೋಗಿಯ ಸಂಬಂಧಿಕರು ಮತ್ತು ಹಿತೈಷಿಗಳು ವೈದ್ಯರ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸುವ ಪ್ರವೃತಿ ಹೆಚ್ಚಾಗುತ್ತಿರುವ ಈ ಕಾಲ ಘಟ್ಟದಲ್ಲಿ, ವೈದ್ಯರನ್ನು ರಕ್ಷಿಸುವ ಮತ್ತು ರೋಗಿಗಳ ಹಿಂಸಾ ಪ್ರವೃತ್ತಿಯನ್ನೂ ಕಡಿಮೆ ಮಾಡುವ ಕಟುನಿಟ್ಟಿನ ಕ್ರಮ ಖಂಡಿತವಾಗಿಯೂ ಅನಿವಾರ್ಯ. ಇತ್ತೀಚೆಗೆ ಭಾರತೀಯ   ವೈದ್ಯರ ಸಂಘ ನಡೆಸಿದ ಚರ್ಚೆಗಳ ಮತ್ತು ಅಂಕಿ ಅಂಶಗಳ ಪ್ರಕಾರ ಏನಿಲ್ಲವೆಂದರೂ ಭಾರತದಲ್ಲಿ 75% ಮಂದಿ ವೈದ್ಯರು, ಒಂದಲ್ಲ ಒಂದು ರೀತಿಯ ವೈದ್ಯಕೀಯ ವೃತ್ತಿ ಸಂಬಂಧಿ ಶೋಷಣೆ ಮತ್ತು ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ ಎಂಬುದು ಬಹಳ ಸತ್ಯ.

ಕೊನೆಗೆ ಡಾ| ರಾಧಾಕೃಷ್ಣನ್ ಹೀಗೆ ಬರೆಯುತ್ತಾರೆ. ಮಗನೇ, ನಿನಗಿಷ್ಟವಾದ ಧರ್ಮವನ್ನು ನಿರ್ಧರಿಸುವ ಸ್ವಾತಂತ್ರವನ್ನು ನೀನು ಹೊಂದಿರುವೆ. ಬೇಡವಾದಲ್ಲಿ ಬೇರೆ ಧರ್ಮವನ್ನು ಸೇರಲು ನನ್ನ ಅಭ್ಯಂತರವಿಲ್ಲ. ನಿನ್ನ ಜೀವನ ಸಂಗಾತಿಯನ್ನು ಹುಡುಕಿಕೊಳ್ಳಲು ಮತ್ತು ಆರಿಸಿಕೊಳ್ಳುವ ಸರ್ವ ಸ್ವಾತಂತ್ರವನ್ನು ನೀನು ಹೊಂದಿರುವೆ. ಯಾವುದೇ ಜಾತಿ, ಧರ್ಮ ಮತ್ತು ಲಿಂಗದ ವ್ಯಕ್ತಿಯನ್ನು ಜೀವನ ಸಂಗಾತಿಯಾಗಿ ಆರಿಸಿಕೊಳ್ಳುವ ಸ್ವಾತಂತ್ರ್ಯ ನಿನಗಿದೆ. ಒಂದು ವೇಳೆ ನೀನು ವೃತ್ತಿಪರ ಛಾಯಾಗ್ರಾಹಕನಾಗಿ ಅಮೆಜಾನ್ ಅರಣ್ಯಗಳಲ್ಲಿ ಒಬ್ಬಂಟಿಯಾಗಿ ಕ್ರೂರಮೃಗಗಳ ಛಾಯಾಚಿತ್ರ ತೆಗೆಯುವ ವೃತ್ತಿಯನ್ನು ಆರಿಸಿಕೊಂಡರೂ ಸೈ ಅಥವಾ ಲಾಸ್ ವೆಗಾಸ್‍ನ ಡ್ಯಾನ್ಸ್ ಬಾರ್‍ಗಳಲ್ಲಿ ಪೋಲ್ ಡ್ಯಾನ್ಸರ್ ಆಗಿ ಕುಣಿದರೂ ನನ್ನ ಅಭ್ಯಂತರವಿಲ್ಲ. ಆದರೆ ನನ್ನ ಮಗ ಭಾರತದಲ್ಲಿ ವೈದ್ಯನಾಗುವುದಕ್ಕೆ ನನ್ನ ಸಮ್ಮತಿ ಇಲ್ಲ, ಯಾಕೆಂದರೆ ಎರಡು ದಶಕಗಳ ಕಾಲ ಪ್ರೀತಿಯಿಂದ ಆಡಿಸಿ ಬೆಳೆಸಿದ ನನ್ನ ಮಗ/ಮಗಳು ವೈದ್ಯರಾಗಿ ಜೀವಂತವಾಗಿ ಮಾನಸಿಕ ತುಮುಲಗಳಿಂದ ರೋಸಿಹೋಗಿ, ಯಾವುದು ಮಿಥ್ಯ ಯಾವುದು ಸತ್ಯ ಎಂಬುದರ ಗೊಂದಲದಿಂದಾಗಿ ಬದುಕಿದ್ದೂ ಸತ್ತಂತೆ ಬದುಕುವ ಮತ್ತು ಮಾನವೀಯತೆಯ ಇಲ್ಲದ ಮನುಷ್ಯರ ಸೇವೆಗಾಗಿ ತನ್ನ ಜೀವನವನ್ನು ವ್ಯರ್ಥಗೊಳಿಸುವ ಅಥವಾ ಬಲವಂತವಾಗಿ ಜೀವ ತೆಗೆಸಿಕೊಳ್ಳುವ (ರೋಗಿಯ ಸಂಬಂಧಿಕರು/ ಹಿತೈಷಿಗಳಿಂದ) ಪರಿಸ್ಥಿತಿಯನ್ನು ಎದುರುಹಾಕಿಕೊಳ್ಳುವ ಅನಿವಾರ್ಯತೆ ನನ್ನ ಮಕ್ಕಳಿಗೆ ಬರುವುದೇ ಬೇಡ.

ಇದು ಒಬ್ಬ ರೋಗಿಯಿಂದಾಗಿ ಶೋಷಣೆಗೊಳಗಾದ ಪ್ರಾಮಾಣಿಕ ವೈದ್ಯ, ಇದಕ್ಕಿಂತಲೂ ಹೆಚ್ಚಾಗಿ ಒಬ್ಬ ತಂದೆಯ ನೋವಿನ ನುಡಿ. ಇತ್ತೀಚಿನ ದಿನಗಳಲ್ಲಿ ವೈದ್ಯರ ಮೇಲೆ ನಡೆಯುತ್ತಿರುವ ಹಿಂಸಾಚಾರದ ಪ್ರವೃತ್ತಿ ಜಾಸ್ತಿ ಆದಾಗ, ವೈದ್ಯರೊಬ್ಬರ ಮನಸ್ಸಿನಲ್ಲಿ ಉಂಟಾದ ತಳಮಳ ಮತ್ತು ಮಾನಸಿಕ ತುಮುಲ. ಒಬ್ಬ ಹೆತ್ತ ಕರುಳಿನ ಕೂಗನ್ನು,  ಇನ್ನಾದರೂ ಜನ ಕೇಳಿಸಿಕೊಂಡು, ಎಚ್ಚೆತ್ತುಕೊಳ್ಳದಿದ್ದಲ್ಲಿ ವೈದ್ಯ ವೃತ್ತಿಯನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಹಿಂದೇಟು ಹಾಕುವ ದಿನಗಳು ಮುಂದೆ ಬಂದರೂ ಬರಬಹುದು.    

ವೈದ್ಯರ ರಕ್ಷಣೆಗೆ ಏನು ಮಾಡಬೇಕು?

1. ಕೇಂದ್ರ ಸರಕಾರ ದೇಶದೆಲ್ಲಡೆ ಅನ್ವಯವಾಗುವಂತೆ ವೈದ್ಯರ ಮೇಲೆ ದಾಳಿ ನಡೆದಾಗ ಆರೋಪಿಗಳನ್ನು ತಕ್ಷಣವೇ ಬಂದಿಸಿ ಕಠಿಣವಾದ ಟೆರರಿಸ್ಟ್ ಕಾಯಿದೆ ಅವರ ಮೇಲೆ ಮಾಡುವಂತೆ ಕಾನೂನು ರೂಪಿಸಬೇಕು. ಈ ಕಾನೂನು ಸಾಂಕ್ರಾಮಿಕ ರೋಗ ಹರಡುವ ಸಮಯ ಅಲ್ಲದೆ ಉಳಿದ ವರ್ಷದ ಎಲ್ಲಾ 365 ದಿನವೂ ಜಾರಿಯಲ್ಲಿಡಬೇಕು. ಕರ್ತವ್ಯದಲ್ಲಿರುವ ವೈದ್ಯರ ಮೇಲೆ ದಾಳಿ ಮಾಡಿದಾಗ ತಕ್ಷಣವೇ “ಜಾಮೀನು ರಹಿತ ಜೈಲು ಶಿಕ್ಷೆ” ಕೇಸು ಬಡಿದು ಆರೋಪಿಗಳನ್ನು ಜೈಲಿಗಟ್ಟಬೇಕು.

2. ಇಂತಹ ಆರೋಪಿಗಳಿಗೆ ಕನಿಷ್ಠ 5 ರಿಂದ 10 ವರ್ಷಗಳ ಜೈಲು ಶಿಕ್ಷೆ ನೀಡಿದಲ್ಲಿ ಮುಂದೆ ಯಾರೂ ಕರ್ತವ್ಯನಿರತ ವೈದ್ಯರು ಮತ್ತು ದಾದಿಯರ ಮೇಲೆ ದಾಳಿ ಮಾಡಲು ಮುಂದಾಗುವುದಿಲ್ಲ.

3. ಬರೀ ವೈದ್ಯರ ಮೇಲೆ ಮಾತ್ರವಲ್ಲ, ಕರ್ತವ್ಯನಿರತ ದಾದಿಯರು, ಆಯಾಗಳು, ವಾರ್ಡ್‍ಬಾಯ್‍ಗಳ ಮೇಲೆ ದಾಳಿ ಮಾಡಿದರೂ ಇದೇ ರೀತಿ ಶಿಕ್ಷೆ ನೀಡಬೇಕು.

4. ಆಸ್ಪತ್ರೆಗೆ ದಾಳಿ, ಆಸ್ಪತ್ರೆ ಪೀಠೋಪಕರಣಗಳ ಮೇಲೆ ದಾಳಿ ಮಾಡುವುದು ಇವೆಲ್ಲವೂ ಅಕ್ಷಮ್ಯ ಅಪರಾಧ, ಇವೆಲ್ಲಕ್ಕೂ ಜಾಮೀನು ರಹಿತ ಬಂಧನ ಕಾಯಿದೆ ಅನ್ವಯವಾಗಬೇಕು.

5. ವೈದ್ಯರು, ದಾದಿಯರು ಮತ್ತು ಆಸ್ಪತ್ರೆಯ ಮೇಲೆ ದಾಳಿ ಪ್ರಕರಣಗಳಿಗೆ ವಿಶೇಷ ಕೋರ್ಟಿನ ನೇಮಕ ಮಾಡಿ ಪ್ರಕರಣಗಳು ತಕ್ಷಣವೇ ಇತ್ಯಾರ್ಥವಾಗ ಬೇಕು ಎಂಬ ಆದೇಶ ಸರಕಾರ ಮಾಡಬೇಕು.

6. ಸರಕಾರಿ ಆಸ್ಪತ್ರೆಗಳಿಗೆ ಬೇಕಾದ ಎಲ್ಲಾ ಉಪಕರಣ, ಸಲಕರಣ, ಆಕ್ಸಿಜನ್, ಔಷಧಿಗಳು ಎಲ್ಲವನ್ನು ಸರಕಾರ ನೀಡಬೇಕು. ಇವೆಲ್ಲದರ ಸೌಲಭ್ಯ ನೀಡದೆ, ರೋಗಿ ಸತ್ತಾಗ ವೈದ್ಯರನ್ನು ಹೊಣೆಗಾರ ಮಡುವುದು ಸರ್ವತಾ ಸಹ್ಯವಲ್ಲ. ಕನಿಷ್ಠ ಜೀವ ರಕ್ಷಕ ಸಲಕರಣೆ, ಜೀವ ರಕ್ಷಕ ಔಷಧಿ ನೀಡಿದಲ್ಲಿ ವೈದ್ಯರು ರೋಗಿಯ ಜೀವ ಉಳಿಸಲು ಪ್ರಯತ್ನ ಮಾಡಬಹುದು. ಆಸ್ಪತ್ರೆಗೆ ಬಂದ ಎಲ್ಲಾ ರೋಗಿಗಳನ್ನು ಉಳಿಸಬೇಕು ಎಂದಾದಲ್ಲಿ ಅದು ಸಾಧ್ಯವಿಲ್ಲದ ಮಾತು. ವೆಂಟಿಲೇಟರ್ ಇಲ್ಲದ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸೌಲಭ್ಯ ಬೇಕಾಗಿರುವ ರೋಗಿಗಳನ್ನು ವೈದ್ಯ ಹೇಗೆ ಚಿಕಿತ್ಸೆ ನೀಡಲು ಸಾಧ್ಯ ಎಂಬುದನ್ನು ಜನರು ಅರಿತುಕೊಳ್ಳಬೇಕು. ಆಕ್ಸಿಜನ್, ಜೀವರಕ್ಷಕ ಔಷಧಿ ಇಲ್ಲದೆ ರೋಗಿಗಳ ಜೀವ ಉಳಿಸಲು ವೈದ್ಯರೇನು ದೇವರಲ್ಲ ಎಂಬುದನ್ನು ಜನರು ತಿಳಿದುಕೊಳ್ಳಬೇಕು. ಎಲ್ಲಾ ಸೌಲಭ್ಯ, ಸಲಕರಣೆ ಔಷಧಿ ನೀಡಿದ ಬಳಿಕ ವೈದ್ಯರು ಕರ್ತವ್ಯ ಲೋಪ ಎಸಗಿದಲ್ಲಿ ವೈದ್ಯರನ್ನು ಹೊಣೆಗಾರ ಮಾಡಿದರೆ ಒಪ್ಪಿಕೊಳ್ಳಬಹುದು. ಏನೂ ಸೌಲಭ್ಯ ನೀಡದೆ, ರೋಗಿಯ ಜೀವ ಉಳಿಸಿ ಎಂದು ವೈದ್ಯರಿಗೆ ಧಮಕಿ ಹಾಕುವುದು ವಿಪರ್ಯಾಸದ ಪರಮಾವಧಿ.

7. ಎಲ್ಲಾ ಸಲಕರಣೆ, ಸೌಲಭ್ಯ ನೀಡಿದ ಬಳಿಕ ಪರಿಣಿತ ಕೌಶಲ್ಯಭರಿತ ವೈದ್ಯರನ್ನು ಸರಕಾರ ನೇಮಿಸಬೇಕು. ಸಾಕಷ್ಟು ಸಂಖ್ಯೆಯ ನುರಿತ ವೈದ್ಯರನ್ನು ನೇಮಕ ಮಾಡದೆ ರೋಗಿಯ ಸಾವಿಗೆ ಅಲ್ಲಿರುವ ವೈದ್ಯರನ್ನು ಹೊಣೆಗಾರ ಮಡುವುದು ಸರ್ವತಾ ಸಹ್ಯವಲ್ಲ. ಕಾಲಕಾಲಕ್ಕೆ ಅಂತಹ ವೈದ್ಯರಿಗೆ ಸೂಕ್ತ ತರಬೇತಿ ಮಾರ್ಗದರ್ಶನ ಮತ್ತು ಮಾಹಿತಿ ನೀಡುವುದು ಸರಕಾರದ ಆದ್ಯತೆ ಆಗಿರಬೇಕು.

8. ರೋಗಿಗಳ ಸಂಖ್ಯೆಗೆ ಪೂರಕವಾಗಿ, ಅನುಪಾತಕ್ಕೆ ಅನುಗುಣವಾಗಿ ವೈದ್ಯರನ್ನು ಸರಕಾರಿ ಆಸ್ಪತ್ರೆಗಳಿಗೆ ನೇಮಕ ಮಾಡಬೇಕು. 100 ಜನ ರೋಗಿಗಳು ಇರುವ ಆಸ್ಪತ್ರೆಯಲ್ಲಿ ಒಬ್ಬ ವೈದ್ಯರನ್ನು ನೇಮಕ ಮಾಡಿ, ಎಲ್ಲರಿಗೂ ಗುಣಮಟ್ಟದ ಚಿಕಿತ್ಸೆ ನೀಡುವುದು ಹೇಗೆ ಸಾಧ್ಯ? ಬರೀ ವೈದ್ಯ ಮಾತ್ರವಲ್ಲ, ದಾದಿಯರು ಮತ್ತು ಇತರ ಮಾನವ ಸಂಪನ್ಮೂಲಗಳನ್ನು ನೀಡತಕ್ಕದ್ದು. ಹೀಗೆ ಮಾಡಿದರೆ ರೋಗಿಗಳು ಗುಣಮಟ್ಟ ಚಿಕಿತ್ಸೆ ದೊರಕಬಹುದು ಮತ್ತು ಸಾವಿನ ಪ್ರಮಾಣವನ್ನು ಕುಂದಿಸಿಕೊಳ್ಳಬಹುದು.

9. ವೈದ್ಯರಿಗೆ ದಿನಕ್ಕೆ 8 ರಿಂದ 10 ಘಂಟೆ ಕೆಲಸ ನೀಡಬಹುದು. ದಿನದ 24 ಘÀಂಟೆಯೂ ಕೆಲಸ ಮಾಡಬೇಕು ಎಂದರೆ ಅದು ಖಂಡಿತಾ ಚಿಕಿತ್ಸೆ ಮೇಲೆ ಪರಿಣಾಮ ಬೀರಬಹುದು. ವಾರದಲ್ಲಿ 48 ರಿಂದ 50 ಘಂಟೆ ಮಾತ್ರ ಕರ್ತವ್ಯ ನೀಡಬೇಕು.

10. ವೈದ್ಯರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಮಾತ್ರ ಬಳಸಿಕೊಳ್ಳಬೇಕು. ಇತರ ಆಫೀಸ್ ಕೆಲಸ, ಮೀಟಿಂಗ್ ಮತ್ತು ಆಡಳಿತಾತ್ಮಕ ಕೆಲಸಗಳಿಗೆ IAS, MBA ಅಥವಾ ಇತರ ಅಧಿಕಾರಿಗಳನ್ನು ಬಳಸಿಕೊಳ್ಳಬೇಕು.

11. ರೋಗಿ ಚಿಕಿತ್ಸೆಗೆ ಬರುವಾಗ ಜೊತೆಗೆ ಬರುವ ಸಂಬಂಧಿಕರ ಸಂಖ್ಯೆ ಮತ್ತು ಸ್ನೇಹಿತರ ಸಂಖ್ಯೆ ನಿರ್ಬಂಧಿಸಬೇಕು. ಅತಿ ಹೆಚ್ಚು ಜನಸಾಂದ್ರತೆ ಮತ್ತು ರೋಗಿಗಳ ಸಾಂದ್ರತೆ ಜಾಸ್ತಿ ಇರುವ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಪೊಲೀಸ್ ರಕ್ಷಣೆ ನೀಡುವುದಿಲ್ಲ.

12. ಸಮುದಾಯದಲ್ಲಿ ಅಥವಾ ಸಮಾಜದಲ್ಲಿ ಇರುವ ನಕಲಿ ವೈದ್ಯರನ್ನು ಗುರುತಿಸಿ, ಜೈಲಿಗಟ್ಟಬೇಕು ಅವರು ಮಾಡುವ ಹಲ್ಕಾ ಕೆಲಸ ಮತ್ತು ನಕಲಿ ಮದ್ದುಗಾರಿಕೆಯಿಂದ ರೋಗಿಗಳ ರೋಗ ಎಲ್ಲಾ ನಶಿಸಿ, ಅಮೂಲ್ಯ ಸಮಯ ವ್ಯಯವಾಗಿ ರೋಗಿಗಳು ನಿಜವಾದ ವೈದ್ಯರ ಬಳಿ ಬರುವಾಗ ಕಾಲ ಮಿಂಚಿ ಹೋಗಿರುತ್ತದೆ, ನಕಲಿ ವೈದ್ಯ ಮಾಡಿದ ತಪ್ಪಿಗೆ ಅಸಲಿ ವೈದ್ಯ ಯಾಕೆ ಹೊಣೆಗಾರನಾಗಬೇಕು? ಯಾಕೆ ಪೆಟ್ಟು ತಿನ್ನಬೇಕು?

13. ಫಾರ್ಮಸಿಗಳಲ್ಲಿ ಬೇಕಾಬಿಟ್ಟಿ ಜೀವರಕ್ಷಕ ಔಷಧಿ ಆಂಟಿ ಬಯೋಟಿಕ್‍ಗಳ ಸ್ಟಿರಾಯಿಡ್‍ಗಳ ಮಾರಟ್ಟಕ್ಕೆ ಕಡಿವಾಣ ಹಾಕಬೇಕು. ಈ ಸ್ವಯಂ ಮದ್ದುಗಾರಿಕೆ ಮತ್ತು ಕಠಿಣ ಕಾನೂನು ಇಲ್ಲದ ಕಾರಣದಿಂದ ರೋಗ ಉಲ್ಬಣಿಸಿ ರೋಗಿ ವೈದ್ಯರ ಬಳಿ ಬಂದಾಗ ಕಾಲ ಮಿಂಚಿರುತ್ತದೆ ಇದಕ್ಕೆ ವೈದ್ಯ ಯಾಕೆ ಹೊಣೆಗಾರನಾಗಬೇಕು?

14. ಸರಕಾರ ಜನರ ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಮುಂದುವರೆದ ದೇಶಗಳಲ್ಲಿ ನೀಡಿದಂತೆ, ಆರೋಗ್ಯ ಕ್ಷೇತ್ರಕ್ಕೆ ಕನಿಷ್ಠ 20 ಶೇಕಡಾ ಬಜೆಟ್ ಅನುದಾನ ನೀಡಬೇಕು. ಮೂಲಭೂತ ಸೌಕರ್ಯಗಳಾದ ಶುದ್ಧ ಗಾಳಿ. ನೀರು ಮತ್ತು ಸಕಲ ಸೌಲಭ್ಯ ಇರುವ ಆಸ್ಪತ್ರೆ ಮತ್ತು ವೈದ್ಯರನ್ನು ಒದಗಿಸುವುದು ಸರಕಾರದ ಆದ್ಯತೆ ಆಗಬೇಕು. ಇವೆಲ್ಲವೂ ನೀಡಿದ ಬಳಿಕ ವೈದ್ಯರು ತಪ್ಪು ಮಾಡಿದರೆ ಕಠಿಣ ಶಿಕ್ಷೆ ನೀಡುವ ನೈತಿಕ ಹಕ್ಕು ಸರಕಾರಕ್ಕೆ ಇರುತ್ತದೆ ಮತ್ತು ವೈದ್ಯರನ್ನು ಪ್ರಶ್ನಿಸುವ ಹಕ್ಕು ತೆರಿಗೆ ನೀಡುವ ಜನರಿಗೂ ಇರುತ್ತದೆ. ಅದು ಬಿಟ್ಟು ಕಾನೂನು ಕೈಗೆತ್ತಿಕೊಂಡು ಅಮಾಯಕ ವೈದ್ಯರ ಮೇಲೆ ದಾಳಿ ಮಾಡುವುದು ವಿಪರ್ಯಾಸದ ಪರಮಾವಧಿ.

15. ವೈದ್ಯರನ್ನು ತಮ್ಮ ಬಳಕೆದಾರರ ಕಾಯ್ದೆಯಲ್ಲಿ ಸೇರಿಸುವುದು ಸರ್ವಥಾ ಸಹ್ಯವಲ್ಲ. ವೈದ್ಯ ಮತ್ತು ರೋಗಿಯ ಸಂಬಂಧ ಅತ್ಯಂತ ಪವಿತ್ರವಾಗಿರುವುದು. ವೈದ್ಯರನ್ನು ಈ ಕಾಯ್ದೆಯಿಂದ ಹೊರಗಿಟ್ಟು ವೈದ್ಯರಿಗೆ ಸಂಪೂರ್ಣ ಸ್ವಾತಂತ್ರ ನೀಡಿದಲ್ಲಿ ವೈದ್ಯರಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಾಧ್ಯವಿದೆ. ಈ ರೀತಿಯ ಮಾನಸಿಕ ಸ್ವಾತಂತ್ರ ಮತ್ತು ಪರಿಸರ ನಿರ್ಮಾಣ ಮಾಡಿದಲ್ಲಿ ವೈದ್ಯ ರೋಗಿಯ ಸಂಬಂಧ ಮತ್ತೊಮ್ಮೆ ಪುನರ್ ನಿರ್ಮಾಣವಾಗಿ ರೋಗಿ ವೈದ್ಯರ ನಡುವಿನ ಸಂಘರ್ಷ ತಪ್ಪಲು ಸಾಧ್ಯವಿದೆ. 

ಕೊನೆ ಮಾತು:

ವೈದ್ಯಕೀಯ ವೃತ್ತಿ ಎನ್ನುವುದು ಸೇವಾ ಕ್ಷೇತ್ರದ ಪರಿಧಿಯೊಳಗೆ ಬರುವ ಪವಿತ್ರವಾದ ವೃತ್ತಿ. ವೈದ್ಯರು ನೀಡುವ ಸೇವೆಗೆ ಬೆಲೆಕಟ್ಟುವುದು ಖಂಡಿತಾ ಸಾಧ್ಯವಿಲ್ಲ. ರಕ್ತನಾಳಗಳು ತುಂಡಾಗಿ ತೀವ್ರ ರಕ್ತಸ್ರಾವವಾದಾಗ, ಹೃದಯ ಸ್ತಂಬನವಾಗಿ ಎದೆ ಬಡಿತ ನಿಂತುಹೋದಾಗ, ವೈದ್ಯರು ಸಾಕ್ಷಾತ್ ದೇವರಾಗಿ ಕಾಣುತ್ತಾರೆ. ಆದರೆ ಕೆಲವೊಮ್ಮೆ ವೈದ್ಯರ ತೀವ್ರ ಪ್ರಯತ್ನದ ಬಳಿಕವೂ ಸಾವು ಸಂಭವಿಸಿದಲ್ಲಿ, ವೈದ್ಯರನ್ನೇ ಸಾವಿಗೆ ಹೊಣೆಮಾಡಿ ಆಕ್ರಮಣ ಮಾಡುವುದು, ಹಿಂಸಾಚಾರ ಮಾಡುವುದು, ಆಸ್ಪತ್ರೆಗೆ ದಾಳಿ ಮಾಡುವುದು ಮಾನವೀಯತೆಯ ಲಕ್ಷಣವಲ್ಲ. ಯಾವೊಬ್ಬ ವೈದ್ಯರೂ ತನ್ನ ರೋಗಿ ಸಾಯಬೇಕೆಂದು ಇಚ್ಛಿಸುವುದಿಲ್ಲ.

ಹಾಗೆಂದ ಮಾತ್ರಕ್ಕೆ ಎಲ್ಲಾ ವೈದ್ಯರು ಪ್ರಾಮಾಣಿಕವೆಂದು ತಿಳಿಯಬೇಕಿಲ್ಲ. ನೂರರಲ್ಲಿ ಒಬ್ಬರು ಅಪ್ರಾಮಾಣಿಕರು ಇರಲೂಬಹುದು. ಎಲ್ಲವೂ ವ್ಯಾಪಾರೀಕರಣಗೊಳ್ಳುತ್ತರುವ ಈ ಕಾಲಘಟ್ಟದಲ್ಲಿ ವೈದ್ಯ-ರೋಗಿಯ ಸಂಬಂಧವೂ ಹಳಸಿದೆ ಎಂದರೂ ತಪ್ಪಲ್ಲ.

ರೋಗಗಳನ್ನು ಪರಿಣಾಮಕಾರಿಯಾಗಿ ಗುಣಪಡಿಸಲು ವೈದ್ಯರು ನಿಡುವ ಔಷಧಿಗಳು ಎಷ್ಟು ಮುಖ್ಯವೋ ಅದೇ ರೀತಿ ವೈದ್ಯರ ಮೇಲಿನ ವಿಶ್ವಾಸ, ನಂಬಿಕೆಗಳು ಅತೀ ಅವಶ್ಯಕ. ವೈದ್ಯರು ಕೂಡಾ ನಿಮ್ಮಂತೆಯೇ ಒಬ್ಬ ಮನುಷ್ಯರು ಅವರಿಗೂ ತಮ್ಮದೇ ಆದ ಇತಿ ಮಿತಿಗಳಿವೆ, ಅವರದ್ದೇ ಆದ ವೈಯಕ್ತಿಕ ಬದುಕು ಇದೆ ಎಂಬುದನ್ನು ರೋಗಿಗಳು ಮನಗಾಣಬೇಕು. ಅಭಿವ್ಯಕ್ತಿ ಸ್ವಾತಂತ್ರ, ವೃತ್ತಿ ಗೌರವ ಮತ್ತು ರಾಜ ಧರ್ಮ ಎಲ್ಲಾ ವೃತ್ತಿಗಳಿಗೂ ಸಮಾನವಾಗಿ ಅನ್ವಯಿಸುತ್ತದೆ. ಈ ನಿಟ್ಟಿನಲ್ಲಿ ವೈದ್ಯರು ಮತ್ತು ರೋಗಿಗಳು ತಮ್ಮ ಹೊಣೆಗಾರಿಕೆಯನ್ನು ಅರಿತು ನಿಭಾಯಿಸಿದಲ್ಲಿ ಸಮಾಜದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಬಹುದು. ಮತ್ತು ವೈದ್ಯರೋಗಿಗಳ ನಡುವಿನ ಅನಾವಶ್ಯಕ ಸಂಘರ್ಷವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಬಲ್ಲದು. ಅದರಲ್ಲಿಯೇ ನಮ್ಮೆಲ್ಲರ ಒಳಿತು ಅಡಗಿದೆ.

-ಡಾ|| ಮುರಲೀ ಮೋಹನ್ ಚೂಂತಾರು 

ಸುರಕ್ಷಾದಂತ ಚಿಕಿತ್ಸಾಲಯ

ಹೊಸಂಗಡಿ – 671 323

ಮೊ : 09845135787

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು