ಅಪ್ಪನೆನ್ನಲು ನನಗೆ ನಿತ್ಯವೂ ಬಲುಸುಖವು
ಅಪ್ಪಟದ ವಾತ್ಸಲ್ಯಮೂರ್ತಿ ನಮಗವರು |
ಒಪ್ಪವಾಗಿಯೆ ಸಲಹಿ ನೀಡುವರು ಸುಜ್ಞಾನ
ತಪ್ಪಿದರೆ ತಿದ್ದುವರು - ಪುಟ್ಟಕಂದ ||
ಅಪ್ಪನೆಂದರೆ ಸಲುಗೆ ಅಪ್ಪನೆಂದರೆ ಭಯವು
ಅಪ್ಪನೆಂದರೆ ಬಹಳ ಗೌರವವು ನಮಗೆ|
ಅಪ್ಪನೇ ಸರ್ವಸ್ವ ಅಮ್ಮನಿಗು ಆಧಾರ
ಅಪ್ಪಮ್ಮ ಗುರು ನಮಗೆ - ಪುಟ್ಟಕಂದ ||
ಅಪ್ಪನೇ ಆದರ್ಶ ಮಕ್ಕಳಿಗೆ ಜೀವನದಿ
ಅಪ್ಪಿ ಮುದ್ದಾಡುತಿಹ ವಾತ್ಸಲ್ಯಮೂರ್ತಿ |
ಒಪ್ಪುವಂತಹ ಕೆಲಸ ಮಾಡಿದರೆ ಸಂತಸದಿ
ತುಪ್ಪಶನ ಉಣಿಸುವರು - ಪುಟ್ಟಕಂದ ||
ನನ್ನಪ್ಪ ನನಗಿಷ್ಟ ಅಮ್ಮನಿಗು ಬಲುಇಷ್ಟ
ಚಿನ್ನದೊಡವೆಗು ಮಿಗಿಲು ನನಗೆ ನನ್ನಪ್ಪ |
ಜೊನ್ನಮಾಮನ ತೋರಿ ಮುದ್ದಿಪರು ನನ್ನಪ್ಪ
ಮನ್ನಿಪೆನು ನಾನವರ - ಪುಟ್ಟಕಂದ ||
ಮಕ್ಕಳಿಗೆ ಜೀವನದಿ ಅಪ್ಪನೇ ಪಥದರ್ಶಿ
ಸಕ್ಕರೆಯ ಸಿಹಿಯಿತ್ತು ಮಮತೆ ಮಳೆಗರೆವ |
ಹೊಕ್ಕುಳದ ಬಂಧವನು ಮರೆಯಲಸದಳ ನಮಗೆ
ದಕ್ಕಿದರದು ಶ್ರೇಷ್ಠ - ಪುಟ್ಟಕಂದ ||
( ಛಂದೋಬದ್ಧ ಮುಕ್ತಕ)
-ವಿ.ಬಿ.ಕುಳಮರ್ವ , ಕುಂಬ್ಳೆ
ಹಾಡಿದವರು:- ಕಲಾಶ್ರೀ ವಿದ್ಯಾಶಂಕರ್ ಮಂಡ್ಯ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಕವನ ಉತ್ತಮವಾಗಿದೆ.
ردحذفإرسال تعليق