ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಇಂದಿನ ಐಕಾನ್: ಬೆಂಕಿಯಲ್ಲಿ ಅರಳಿದ ಹೂವು- ಶಗುಫ್ತಾ ರಫೀಕ್ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಕೆಲವರ ಬದುಕಿನ ಕಥೆಗಳೇ ಸಿನೆಮಾದ ಕಥೆಗಳಿಗಿಂತ ಹೆಚ್ಚು ರೋಚಕವಾಗಿರುತ್ತವೆ. ಇಂದು ಹಿಂದಿ ಸಿನಿಮಾ ರಂಗದಲ್ಲಿ ಸ್ಕ್ರಿಪ್ಟ್ ರೈಟರ್ ಆಗಿ ತನ್ನದೇ ಛಾಪನ್ನು ಮೂಡಿಸಿರುವ ಶಗುಫ್ತ ರಫೀಕ್ ಅವರ ನೋವಿನ ಬದುಕು, ಅವರು ಕ್ರಮಿಸಿದ ದುರ್ಗಮ ಹಾದಿ, ತುಂಬಾ ಅನೂಹ್ಯವಾದ ತಿರುವುಗಳು ನನಗೆ ನಿಜಕ್ಕೂ ಅಚ್ಚರಿಯನ್ನು ಮೂಡಿಸುತ್ತವೆ. ಹಾಗೆಯೇ ಮರುಕವನ್ನು ಕೂಡ! ಅವರು ನಿಜವಾದ ಅರ್ಥದಲ್ಲಿ ಬೆಂಕಿಯಲ್ಲಿ ಅರಳಿದ ಹೂವು ಎಂದು ನನ್ನ ಭಾವನೆ. 

"ನನ್ನ ಜೀವನ ತೆರೆದ ಪುಸ್ತಕದ ಹಾಗೆ. ಮುಚ್ಚಿಡಲು ಏನೂ ಇಲ್ಲ .ನನಗೆ ನನ್ನ ಪಾಸ್ಟ್ ಬಗ್ಗೆ ಯಾವುದೇ  ವಿಷಾದ ಇಲ್ಲ. ಯಾಕೆಂದರೆ ನಾನು ಮಾಡಿದ್ದು ನನ್ನ ಇಚ್ಛೆಗೆ ವಿರುದ್ದವಾದ ಕೆಲಸವನ್ನು!" ಎಂದು ಒಂದು ಟಿವಿಯ ಸಂದರ್ಶನದಲ್ಲಿ ಮಾತು ಆರಂಭಿಸಿದ ಆಕೆ ಹೇಳಿದ್ದನ್ನು ಅವರು ಹೇಳಿದ ಹಾಗೆಯೇ ಬರೆಯುತ್ತಾ ಹೋಗುತ್ತೇನೆ.  

ನನ್ನ ತಂದೆ ತಾಯಿ ಯಾರು? ನನಗೆ ಇದುವರೆಗೂ ಉತ್ತರ ಸಿಗದ ಪ್ರಶ್ನೆಯಿದು! ನನ್ನನ್ನು ಪ್ರೀತಿಯಿಂದ ಸಾಕಿದ್ದು ಅನ್ವರಿ ಬೇಗಂ ಎಂಬ ಮಾಜಿ ಸಿನೆಮಾ ನಟಿ. ನನ್ನ ಜನ್ಮ ಕೊಟ್ಟ ಅಮ್ಮನಿಗಿಂತ ನನಗೆ ಹೆಚ್ಚು ಪ್ರೀತಿ ಕೊಟ್ಟದ್ದು ಅವರೇ. ಅವರಿಗೆ ಕೋಲ್ಕತ್ತಾದ ಓರ್ವ ಉದ್ಯಮಿಯೊಂದಿಗೆ ಸಂಬಂಧವಿತ್ತು. ಆ ದಿನಗಳು ತುಂಬಾ ಚೆನ್ನಾಗಿದ್ದವು. ಶಾಲೆಯಲ್ಲಿ ನನ್ನ ಬೆನ್ನ ಹಿಂದೆ ನನ್ನನ್ನು ಎಲ್ಲರೂ 'ಅನೈತಿಕ ಸಂಬಂಧದ ಕೂಸು' ಎನ್ನುತ್ತಿದ್ದರು! ನನಗೆ ಅದೆಲ್ಲ ಅರ್ಥವಾಗದ ವಯಸ್ಸು ಅದು. ಆದರೆ ಕಲಿಕೆಯಲ್ಲಿ ನಂಗೆ ಆಸಕ್ತಿ ಚಿಗುರಲಿಲ್ಲ. 

ನಾನು ಸಿನಿಮಾಗಳಲ್ಲಿ ನಟಿಸಬೇಕು ಎಂದು ನನ್ನ ಅಮ್ಮನ ಆಸೆ. ಅದಕ್ಕಾಗಿ ನನಗೆ ಡ್ಯಾನ್ಸನ್ನು ಕಲಿಸಿದರು. ಆದರೆ ಒಂದು ದಿನ ನಮ್ಮ ಕುಟುಂಬಕ್ಕೆ ಆಧಾರವಾಗಿದ್ದ ಕೋಲ್ಕತ್ತಾದ ಉದ್ಯಮಿಯು ತೀರಿ ಹೋದರು. ನಮ್ಮ ಕುಟುಂಬಕ್ಕೆ ಅವರ ಆಸ್ತಿಯಲ್ಲಿ ಬಿಡಿ ಕಾಸು ಕೂಡ ದೊರೆಯಲಿಲ್ಲ. ನಮ್ಮ ಸಣ್ಣ ಕುಟುಂಬವು ಅಕ್ಷರಶಃ ಬೀದಿಗೆ ಬರುವ ಪ್ರಸಂಗ. ನನ್ನ ಮಲ ಅಣ್ಣ ಮತ್ತು ಅವನ ಹೆಂಡತಿ ಪದೇ ಪದೇ 'ನೀನು ನಮ್ಮವಳಲ್ಲ' ಎಂದು ಚುಚ್ಚಿ ಚುಚ್ಚಿ ಮಾತಾಡುತ್ತಿದ್ದರು.

ಆದರೆ ನನ್ನ ಅಕ್ಕ ಸಯೀದಾ  ನನ್ನನ್ನು ಬಹು ಪ್ರೀತಿಯಿಂದ ನನ್ನ ಅಮ್ಮನ ಹಾಗೆ ನೋಡಿಕೊಳ್ಳುತ್ತಿದ್ದಳು. ಆದರೆ ಅವಳಿಗೆ ಕುಡುಕ ಗಂಡನ ಕಾಟ. ನನ್ನ ಅಮ್ಮ ಮತ್ತು ಕುಟುಂಬಕ್ಕೆ ಆಧಾರ ಆಗಬೇಕು ಎನ್ನುವುದು ಮಾತ್ರ ನನಗೆ ಗೊತ್ತಿತ್ತು. ಆದರೆ ಹೇಗೆ? ಎಂದು ನನಗೆ  ಗೊತ್ತಿರಲಿಲ್ಲ. ಅದಕ್ಕೆ 12ನೆಯ ವಯಸ್ಸಲ್ಲಿ ಖಾಸಗಿ ಕಾರ್ಯಕ್ರಮಗಳಲ್ಲಿ ಡಾನ್ಸ್ ಮಾಡತೊಡಗಿದೆ. ಸ್ವಲ್ಪ ಹಣ ದೊರೆಯುತ್ತಿತ್ತು. 17ನೆಯ ವಯಸ್ಸಿಗೆ ಯಾರೋ ನನ್ನನ್ನು ಮದುವೆ ಆಗಲು ಮುಂದೆ ಬಂದ. ನನ್ನ ಮೇಲೆ ನನ್ನ ಇಚ್ಛೆಗೆ ವಿರುದ್ದವಾಗಿ ದೌರ್ಜನ್ಯವನ್ನು ನಡೆಸಿದ. ನನ್ನ ಸ್ವಾಭಿಮಾನ ಕೆಣಕಿದ. ಎರಡೇ ವರ್ಷಕ್ಕೆ ನಾನು ಅವನನ್ನು ಬಿಟ್ಟು ಹೊರಬಂದೆ.  

ಮುಂದೆ ನನ್ನ ಬದುಕು ನಿಜವಾಗಿ ಹಳಿ ತಪ್ಪಿತು. ಹಸಿವು, ಹತಾಶೆ ಮತ್ತು ಅಸಹಾಯಕತೆಗಳು ನನ್ನನ್ನು ಕತ್ತಲೆಯ ದಾರಿಗೆ ಕರೆದುಕೊಂಡು ಹೋದವು. ಮತ್ತೆ ಬಾರ್ ಡಾನ್ಸರ್, ಸಿಂಗರ್ ಆಗಿಬಿಟ್ಟೆ. ನನಗೆ ಸಂಬಂಧಗಳಲ್ಲಿ ನಂಬಿಕೆ ಹೊರಟುಹೋಗಿತ್ತು. ಕಾಣದ ಕೈಗಳು ನನ್ನನ್ನು ವೇಶ್ಯಾವೃತ್ತಿಗೆ ದೂಡಿದವು. ನನ್ನ ಇಚ್ಛೆಗೆ ವಿರುದ್ಧವಾಗಿ ನಾನು ವ್ಯವಸ್ಥೆಯ ಬಲಿಪಶು ಆಗಿಬಿಟ್ಟಿದ್ದೆ. ಕಣ್ಣಿಗೆ ಬಟ್ಟೆ ಕಟ್ಟಿ ಕತ್ತಲೆಯ ಕೋಣೆಯಲ್ಲಿ ಬಿಟ್ಟ ಹಾಗೆ ಆಗಿತ್ತು. ನನ್ನ ಕುಟುಂಬದ ಭದ್ರತೆಗಾಗಿ 10 ವರ್ಷ ರೌರವ ನರಕ ಅನುಭವಿಸಿದೆ! 

ಆತ್ಮಸಾಕ್ಷಿಗೆ ವಿರುದ್ಧವಾದ  ಕೆಲಸಗಳನ್ನು ಮಾಡಿದೆ. ದುಬಾಯಿಗೂ ಹೋದೆ. ಅಲ್ಲಿಯ ಡಾನ್ಸ್ ಬಾರಗಳು, ಸಂಜೆ ಆದ ಕೂಡಲೇ ಜಗಮಗಿಸುವ ವೇದಿಕೆಗಳು! ಹಾಡುತ್ತ, ಕುಣಿಯುತ್ತ ವರ್ಷಗಳು ಕಳೆದದ್ದು ಗೊತ್ತೇ ಆಗಲಿಲ್ಲ. ಆದರೆ ಒಳ ಮನಸ್ಸು ಚೀರಿ ಚೇರಿ ಹೇಳುತ್ತಿತ್ತು, ನೀನು ಬೇರೇನೋ ಮಾಡಲಿಕ್ಕೆ ಬಾಕಿ ಇದೆ ಎಂದು! ಇದರಿಂದ ಹೊರಗೆ ಬಾ ಎಂದು! ಆದ್ರೆ ಅದು ಹೇಗೆ ಎಂದು ನನಗೆ ಗೊತ್ತಿರಲಿಲ್ಲ. 

ನನ್ನನ್ನು ಭೇಟಿಯಾದ, ನನ್ನ ಜೊತೆ ಪ್ರೀತಿಯ ನಾಟಕ ಮಾಡಿ ಮೋಸ ಮಾಡಿದ, ನನ್ನ ಸಂಪರ್ಕಕ್ಕೆ ಬಂದ ಪ್ರತೀ ಒಬ್ಬ ವ್ಯಕ್ತಿಯ ಬದುಕಿನ ಕಥೆಗಳನ್ನು ದಿನವೂ ಬರೆದಿಡಲು ಆರಂಭ ಮಾಡಿದ್ದೆ. ಕ್ರಮೇಣ ನನ್ನೊಳಗೆ ಒಬ್ಬಳು ಸಂವೇದನಾಶೀಲ ಕಥೆಗಾರಳು ಇರುವುದು ನನಗೆ  ಅರ್ಥವಾಗಿತ್ತು! ನನ್ನ ನೂರಾರು ಕತೆಗಳು ಹುಟ್ಟಿದ್ದು ರೆಡ್ ಲೈಟ್ ಏರಿಯಾದ ಉಸಿರುಗಟ್ಟುವ ಹಾಸಿಗೆಯ ಮೇಲೆ! ಮುಜುರಾ ಹಾಡಿನ ಚಾದರ್ ಹಾಸಿದ ಮೋಹಲ್ಲಾದಲ್ಲಿ! ಡಾನ್ಸ್ ಬಾರಲ್ಲಿ! 

1999ರಲ್ಲಿ ಅಮ್ಮ ತೀರಿ ಹೋದಾಗ ಭಾರತಕ್ಕೆ ಬಂದೆ. ನನ್ನಲ್ಲಿ ಅದ್ಭುತವಾದ ಕಥೆಗಳು ಇದ್ದವು. ಸುಲಲಿತವಾಗಿ ಸಂಭಾಷಣೆ ಬರೆಯುವ ಕಲೆ ಸಿದ್ಧಿಸಿತ್ತು. ಸಿನೆಮಾದ,  ಧಾರಾವಾಹಿಯ ಮಂದಿಗೆ ನನ್ನ ಕಥೆಗಳನ್ನು ರಸವತ್ತಾಗಿ ಹೇಳಿದೆ. ನಾಲ್ಕು ವರ್ಷ ಮತ್ತೆ ಕಷ್ಟ ಪಟ್ಟೆ. ಯಾರೂ ನನಗೆ ಅವಕಾಶ ಕೊಡಲಿಲ್ಲ. ಕೊನೆಗೆ ಹಿಂದಿಯ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಮಹೇಶ್ ಭಟ್ ಅವರ ಪರಿಚಯವಾಯಿತು. ನಾನು ಬರೆದುಕೊಟ್ಟ ಕಥೆಯು ಅವರಿಗೆ ಇಷ್ಟವಾಯ್ತು. 2006ರಲ್ಲಿ ಬಿಡುಗಡೆಯಾದ ಹಿಂದೀ ಸಿನಿಮಾ ವೋ ಲಮ್ಹೆ  ನಾನು ಬರೆದ ಕತೆ ಹೊಂದಿತ್ತು. ಅದು ಸೂಪರ್ ಹಿಟ್ ಆಯಿತು. ಮತ್ತೆ ಅವರಿಗೆ 11 ಸಿನೆಮಾದ ಕಥೆಗಳನ್ನು ಬರೆದುಕೊಟ್ಟೆ. ಸಂಭಾಷಣೆ ಕೂಡ ಬರೆದೆ.  

ಆವಾರಪನ್, ದೋಖಾ, ಶೋಬೀಝ್, ಕಜರಾರೆ, ರಾಜ್ 2, ರಾಜ್ 3, ಜನ್ನತ್ 2, ಜಿಸ್ಮ 2, ಮರ್ಡರ್ 2, ಆಶಿಕಿ 2, ದುಷ್ಮನ್, ಜಶ್ನ್, ಹಮಾರಿ ಅಧೂರಿ ಕಹಾನಿ ಹೀಗೆ ನನ್ನ ಕಥೆಗಳು ಬಾಲಿವುಡ್ ಜಗತ್ತಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದವು. ನಾನಿಂದು ಹಿಂದಿಯ ಬಹಳ ಬೇಡಿಕೆಯ ರೈಟರ್ ಆಗಿದ್ದೇನೆ. ನನಗೆ ಫಿಲಂ ಫೇರ್ ಪ್ರಶಸ್ತಿಗಳು ದೊರೆತಿವೆ. ಮೊನ್ನೆ ಒಂದು ಬೆಂಗಾಲಿ ಸಿನೆಮಾ 'ಮೋನ್ ಜಾನೆನ ನಾ' ನಿರ್ದೇಶನ ಕೂಡ ಮಾಡಿದ್ದೇನೆ. ಭಾರೀ ದುರ್ಗಮವಾದ ಹಾದಿಯನ್ನು ಕ್ರಮಿಸಿ ತಲುಪಬೇಕಾದ ಮಂಜಿಲ್ ಈಗ ತಲುಪಿದ್ದೇನೆ ಅಂತ  ಅನ್ನಿಸುತ್ತಿದೆ! ಯಾರದೋ ಬದುಕಿನ ಕತೆಗಳನ್ನು ಕಲ್ಪನೆ ಮಾಡಿ ಬರೆಯೋದಕ್ಕಿಂತ ನನ್ನ ಬದುಕಿನ ಕತೆಗಳನ್ನು ಬರೆಯುವುದು ನನಗೆ ಖುಷಿ ಕೊಡುತ್ತದೆ. ಆಷಿಕಿ 2 ಅದು ಪೂರ್ತಿ ನನ್ನದೇ ಬದುಕಿನ ಕಥೆ! 

ನನ್ನ ಬದುಕಿನಿಂದ ನೀವು ಯಾವ ಸಂದೇಶ ಕೂಡ ಪಡೆಯುವುದು ಬೇಡ. ಆದರೆ ನನ್ನನ್ನು ಒಬ್ಬ ಉತ್ತಮ ಕಥೆಗಾರಳಾಗಿ ಒಪ್ಪಿಕೊಂಡರೆ ಸಾಕು! ಎಂದಾಕೆ ಮಾತು ಮುಗಿಸಿದರು. 

ಇಡೀ ಸಂದರ್ಶನದಲ್ಲಿ ಅವರು ಯಾರನ್ನೂ ದೂರಲಿಲ್ಲ.  ತನ್ನ ಅದೃಷ್ಟವನ್ನು ಹಳಿಯಲಿಲ್ಲ. ತನ್ನ ತಪ್ಪು ಹೆಜ್ಜೆಗಳ ಬಗ್ಗೆ ಮಾತನಾಡುವಾಗ ಮುಜುಗರ ಪಟ್ಟುಕೊಳ್ಳಲೆ ಇಲ್ಲ! ಅದಕ್ಕಾಗಿ ಶಗುಪ್ತಾ ನಮಗೆ ಇಷ್ಟ ಆಗದೇ ಇರುವುದಿಲ್ಲ.

-ರಾಜೇಂದ್ರ ಭಟ್ ಕೆ.

ಜೇಸಿಐ ರಾಷ್ಟ್ರ ಮಟ್ಟದ ತರಬೇತುದಾರ.


Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ



Post a Comment

أحدث أقدم