ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ವಿಚಾರವಾದ, ಸರಳತೆಗೆ ಮತ್ತೊಂದು ಹೆಸರು ಎಚ್.ನರಸಿಂಹಯ್ಯ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ನಾಡು ಕಂಡ ಮಹಾನ್ ವಿಚಾರವಾದಿ, ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣ ತಜ್ಞ, ಸರಳ ಜೀವಿ ಡಾ.ಎಚ್.ನರಸಿಂಹಯ್ಯ. ಕಡುಬಡತನದ ಬಾಲ್ಯದಿಂದ ಬಂದು ಅದನ್ನೇ ಮಾದರಿಯಾಗಿಟ್ಟು ಬದುಕಿದ ಸರಳಜೀವಿ. ತನ್ನ ಜೀವನದುದ್ದಕ್ಕೂ ಮೂಡನಂಬಿಕೆ, ಅಂಧ ಶ್ರದ್ಧೆಗಳ ವಿರುದ್ಧ, ನಕಲಿ ಬಾಬಾಗಳ ವಿರುದ್ಧ ಹೋರಾಡಿದ ಕ್ರಾಂತಿಕಾರಿ. ಅವರ ಹೋರಾಟಗಳು ರಾಜ್ಯದ ಜನರ ವೈಜ್ಞಾನಿಕ ಮನೋಭಾವನೆಯನ್ನು ಮತ್ತಷ್ಟು ಹೆಚ್ಚಿಸಿತು. ವಿದೇಶದಲ್ಲಿ ಶಿಕ್ಷಣ ಪಡೆದರೂ ಅಲ್ಲಿರದೆ ತಾಯ್ನಾಡಿಗೆ ಮರಳಿ ದೇಶಸೇವೆ ಮಾಡಿದ ದೇಶಭಕ್ತನ ಜೀವನ ಯಾರಿಂದಲೂ ಊಹಿಸಲು ಸಾಧ್ಯವಾಗದಷ್ಟು ಸರಳವಾಗಿತ್ತು.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹೊಸೂರಿನ ಹನುಮಂತಪ್ಪ, ವೆಂಕಟಮ್ಮ ದಂಪತಿಗಳ ಪುತ್ರ ನರಸಿಂಹಯ್ಯನ ಬಾಲ್ಯವಿಡೀ ದಟ್ಟ ದಾರಿದ್ರ್ಯದಲ್ಲಿ  ಕಳೆಯಿತು. ಮಾತೃ ಭಾಷೆ ತೆಲುಗಾಗಿದ್ದರೂ ಕನ್ನಡದ ಬಗ್ಗೆ ಆಗಲೇ ಪ್ರೀತಿ. 6 ಜೂನ್, 1920ರಲ್ಲಿ ಜನಿಸಿದ ನರಸಿಂಹಯ್ಯರ ಪ್ರಾಥಮಿಕ, ಮಾಧ್ಯಮಿಕ  ಶಿಕ್ಷಣ ಹೊಸೂರಿನಲ್ಲೆ ಆಗುತ್ತದೆ. ನಂತರದ ಪಯಣ ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್ ಗೆ. ಸೆಂಟ್ರಲ್ ಕಾಲೇಜಲ್ಲಿ BSc ಮತ್ತು MSc  ವ್ಯಾಸಂಗ. 3ನೇ ವರ್ಷದ BSc ಓದುತ್ತಿರುವಾಗ ಸಮಯ ಗಾಂಧೀಜಿ ಕ್ವಿಟ್ ಇಂಡಿಯಾ ಚಳವಳಿಗೆ ಕರೆ ಕೊಟ್ಟಿದ್ದರು. ನೇರವಾಗಿ ಹೋರಾಟಕ್ಕೆ ಧುಮುಕಿದ ನರಸಿಂಹಯ್ಯ2 ವರ್ಷದ ನಂತರ ಪದವಿ ಪೂರ್ತಿಗೊಳಿಸಿದ್ದರು. 1947 ರಲ್ಲಿ ಕೂಡ ಮೈಸೂರು ಚಲೋ ಹೋರಾಟ ನಡೆದಾಗ ಅದ್ಯಾಪಕ ವೃತ್ತಿ ತ್ಯಜಿಸಿ ಹೋರಾಟಕ್ಕಿಳಿದ ಅಪ್ರತಿಮ ದೇಶಭಕ್ತ. 1946ರಲ್ಲಿ ಬಸವನಗುಡಿ ಕಾಲೇಜಿನಲ್ಲಿ ಪ್ರಾದ್ಯಾಪಕರಾಗಿ ಸೇರಿ 12 ವರ್ಷ ಕಾಲೇಜಿನ ಪ್ರಾಂಶುಪಾಲರಾದ ಸಾಧನೆ.ಅಮೆರಿಕಾದ ಓಹಿಯೋ ವಿಶ್ವ ವಿದ್ಯಾಲಯದಲ್ಲಿ ಪರಮಾಣು ಶಾಸ್ತ್ರ ದಲ್ಲಿ PhD ಮಾಡಿದ ಮಹಾನ್ ಪ್ರತಿಭಾವಂತ.

ತನ್ನ ಜೀವಮಾನವನ್ನು 4 ನ್ಯಾಷನಲ್ ಕಾಲೇಜು, 5 ನ್ಯಾಷನಲ್ ಹೈಸ್ಕೂಲ್, 2 ನ್ಯಾಷನಲ್ ಪ್ರಾಥಮಿಕ ಶಾಲೆಗಳಿದ್ದ ನ್ಯಾಷನಲ್ ಎಜ್ಯುಕೇಶನ್ ಸೊಸೈಟಿಗೆ ಮೀಸಲಾಗಿಟ್ಟಿದ್ದರು ನರಸಿಂಹಯ್ಯ. ಜಯನಗರ ನ್ಯಾಷನಲ್ ಕಾಲೇಜಿನ ಬೆಂಗಳೂರು ಲಲಿತಕಲಾ ಪರಿಷತ್ತಿನ ಅಧ್ಯಕ್ಷರಾಗಿ ಅವರ ಕೆಲಸ ಗಮನಾರ್ಹ.ವಿವಿಧ ಕಲೆಗಳಿಗೆ ಪ್ರೋತ್ಸಾಹ ನೀಡಿ ಬೆಳೆಸಿದ ಹೆಗ್ಗಳಿಕೆ ಅವರದು. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾದ ಸಂದರ್ಭವಂತೂ ಮಹತ್ವದ ಶೈಕ್ಷಣಿಕ ಸುಧಾರಣೆಗಳ ಮೂಲಕ ಗಮನ ಸೆಳೆದರು. ಸ್ವಾತಂತ್ರ್ಯ ಹೋರಾಟ, ಮೈಸೂರು ರಾಜ್ಯ ಸ್ಥಾಪನೆಯ ಹೋರಾಟ,ನ್ಯಾಷನಲ್ ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ಶ್ರಮ ಹೀಗೆ ಅವರ  ಆರಂಭದ ದಿನಗಳು ಹೋರಾಟದ ಬದುಕಾಗಿತ್ತು.

ಡಾ.ಎಚ್. ನರಸಿಂಹಯ್ಯರ ಮೂಡನಂಬಿಕೆ, ಅಂಧಶ್ರದ್ಧೆಗಳ ವಿರುದ್ಧದ ಹೋರಾಟ ಅವರನ್ನು ದೇಶಾದ್ಯಂತ ಪ್ರಸಿದ್ಧರನ್ನಾಗಿಸಿತು ಜೊತೆಗೆ ಅವರಿಗೆ ವೈರಿಗಳನ್ನು ಕೂಡ ಸೃಷ್ಟಿಸಿತು. ದೇವಮಾನವ ಸತ್ಯಸಾಯಿ ಬಾಬಾರ ಪವಾಡಗಳನ್ನು ನೇರವಾಗಿ ಪ್ರಶ್ನಿಸಿದ ಅವರು ಚರ್ಚೆಗೆ ಬರುವಂತೆ ಆಹ್ವಾನಿಸಿದರು. ತಮ್ಮ ಪ್ರಶ್ನೆಗಳಿಗೆ ಉತ್ತರಿಸುವಂತೆ ಆಗ್ರಹಿಸಿದರು.

"ನಮ್ಮ ದೇಶವು ಸಾವಿರಾರು ದೇವರುಗಳು, ಬಾಬಾಗಳು, ಮಿನಿ ಬಾಬಾಗಳ ಸಂತೆಯಾಗಿದೆ. ಪರಿಶೀಲನ ಮಾರ್ಗದಿಂದ, ಪ್ರಶ್ನಿಸುವ ರೀತಿಯಿಂದ, ಅಸಲು-ನಕಲುಗಳನ್ನು ಬೇರ್ಪಡಿಸುವ ಅವಶ್ಯಕತೆಯಿದೆ. ನಮ್ಮ ತಿಳುವಳಿಕೆಗಳಲ್ಲಿ ಎಷ್ಟೆ ಕಂದರಗಳಿದ್ದರೂ ವಿಜ್ಞಾನಕ್ಕೆ ತನ್ನದೇ ಆದ ಮಿತಿಗಳಿದ್ದರೂ ಸಮಸ್ಯೆಗಳ ಪರಿಹಾರಕ್ಕೆ ವಿಜ್ಞಾನವೇ ಹೆಚ್ಚು ಸಮರ್ಪಕ" ಎಂಬುದು ಅವರ ಅಭಿಪ್ರಾಯವಾಗಿತ್ತು.

ಬೆಂಗಳೂರು ವಿಜ್ಞಾನ ವೇದಿಕೆ ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಮೂಢನಂಬಿಕೆ-ಪವಾಡ-ಅಂಧಶ್ರದ್ಧೆಗಳ ವಿರುದ್ದ ನಿರಂತರ ಹೋರಾಟ ನಡೆಸಿದರು. ಅನುಭವಿಸಿದ ಬಡತನ, ತಂದೆಯ ಅಕಾಲ ಮರಣ, ಕಿತ್ತು ತಿನ್ನುವ ಬಡತನ, ಬರಿಗಾಲಲ್ಲಿ ಊರೂರು ಅಲೆದದ್ದು, ಹೈಸ್ಕೂಲ್ ಶಿಕ್ಷಣಕ್ಕಾಗಿ ಬರಿಗಾಲಲ್ಲಿ ನಡೆದೇ ಹೊಸೂರಿನಿಂದ ಬೆಂಗಳೂರು ಬಂದದ್ದು, ನೀರು ಮಾತ್ರ ಕುಡಿದ ದಿನಗಳು, ಫೇಲಾದರೆ ಮತ್ತೆ ಓದಬೇಕೆಂಬ ಭೀತಿಯಿಂದ ಓದಿ ಪಾಸಾದದ್ದು ಇವುಗಳೆಲ್ಲ ಎಚ್.ಎನ್ ಜೀವನದ ಗಮನಾರ್ಹ ಅಂಶಗಳು. ಬಾಲ್ಯದ ಬಡತನ, ಶೈಕ್ಷಣಿಕ ಸಾಧನೆಗಾಗಿನ ಹೋರಾಟ ಅವರ ಮುಂದಿನ ಸರಳ ಜೀವನಕ್ಕೆ ಕಾರಣವಾಯಿತು.

ಎಷ್ಟು ಸರಳ ಜೀವನ ಅವರದಾಗಿತ್ತೆಂದರೆ ಅಮೆರಿಕಾ ಹೋದರೂ ಉಪ್ಪಿಟ್ಟೇ ಅವರ ಬೆಳಗಿನ ತಿಂಡಿಯಾಗಿತ್ತು. 57 ವರ್ಷಗಳ ಕಾಲ ವಿದ್ಯಾರ್ಥಿ ನಿಲಯದಲ್ಲೇ ಜೀವನ ಸಾಗಿಸಿದ ಸರಳ ಜೀವಿ. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾದರೂ ನ್ಯಾಷನಲ್ ಕಾಲೇಜು ವಿದ್ಯಾರ್ಥಿ ನಿಲಯದ  2 ಹಾಸಿಗೆ, ಬರೆಯಲು ಸಣ್ಣ ಮೇಜು, 2 ಚಯರ್‌ಗಳಿದ್ದ ರೂಮೇ ಅವರ ಅರಮನೆಯಾಗಿತ್ತು. ಖಾದಿ ಬಟ್ಟೆ, ಗಾಂಧಿ ಟೋಪಿ ವಿದೇಶದಲ್ಲು ಕೂಡ ಅವರ ಸಂಗಾತಿಯಾಗಿತ್ತು.

ತನ್ನ ಜೀವನದ ಮೂಲಕವೇ ಸಹಸ್ರಾರು ಜನರನ್ನು ಪ್ರೇರೇಪಿಸಿದ ಮಹಾನುಭಾವನ ಸಾಧನೆ ಗುರುತಿಸಿ ಕೇಂದ್ರ ಸರ್ಕಾರ ಪದ್ಮವಿಭೂಷಣ ನೀಡಿ ಗೌರವಿಸಿತು. ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತದೆ. ವಿಧಾನ ಪರಿಷತ್ತಿನ ಸದಸ್ಯತ್ವ ನೀಡುತ್ತದೆ. ಕನ್ನಡ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಕೂಡ ಲಭಿಸುತ್ತದೆ. ವಿವಿಧ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಕೂಡ ದೊರೆಯುತ್ತದೆ.

2005, ಜನವರಿ 31 ರಂದು ನಿಧನರಾದ ನರಸಿಂಹಯ್ಯ ಕಡೆಯವರೆಗೂ ಬ್ರಹ್ಮಚಾರಿಯಾಗಿಯೇ ಉಳಿಯುತ್ತಾರೆ. ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿನ ಸಾಧನೆಗಾಗಿ, ವೈಜ್ಞಾನಿಕ ಮನೋಭಾವದ ಪ್ರೇರೇಪಣೆಗಾಗಿ ಮಾಡಿದ ಕಾರ್ಯಗಳಿಗಾಗಿ ನಮಗೆ ಮಾದರಿಯಾಗಿ ನಿಲ್ಲುತ್ತಾರೆ. ತಾನು ಶಿಕ್ಷಣ ಪಡೆದ ಶಿಕ್ಷಣ ಸಂಸ್ಥೆಯ ಅಧ್ಯಕ್ಷನಾಗುವ ಹಂತಕ್ಕೆ  ಬೆಳೆದ ಮಹತ್ಸಾಧನೆ ಅವರದು. ಕಡು ಕಡುಬಡತನದಲ್ಲಿ  ಬೆಳೆದ ಬಾಲಕ ತನ್ನ ಸರಳ ಜೀವನ ಶೈಲಿ, ಅಪರಿಮಿತ ದೇಶಭಕ್ತಿ, ಪರಿಶ್ರಮಗಳಿಂದ ಊಹಿಸಲೂ ಸಾಧ್ಯವಾಗದ ಎತ್ತರಕ್ಕೆ ಏರುತ್ತಾರೆ. ಕಠಿಣ ಪರಿಶ್ರಮ, ಪ್ರತಿಭೆಗಳು ನಮ್ಮ ಕೈ ಹಿಡಿದಾಗ ಜೀವನದ ಅಡೆತಡೆಗಳು ಬಾಧಿಸುವುದಿಲ್ಲ ಎಂಬುದಕ್ಕೆ ಡಾ.ಎಚ್ ನರಸಿಂಹಯ್ಯ ಜೀವನವೇ ಸಾಕ್ಷಿ.

-ತೇಜಸ್ವಿ ಕೆ, ಪೈಲಾರು, ಸುಳ್ಯ


isit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು