ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಮಹಿಳೆ ಮತ್ತು ಕೃಷಿ: ಒಂದು ಚಿಂತನೆ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ನಮ್ಮ ಭಾರತ ದೇಶವು ಒಂದು ಕೃಷಿ ಪ್ರಧಾನವಾದ ದೇಶವಾಗಿದೆ.  ಇಲ್ಲಿ ಅನೇಕ ಕುಟುಂಬಗಳು ಕೃಷಿಯನ್ನೇ ಅವಲಂಬಿಸಿಕೊಂಡು ಜೀವನವನ್ನು ಸಾಗಿಸುತ್ತಿದ್ದಾರೆ. 


ಇತ್ತೀಚಿನ ದಿನಗಳಲ್ಲಿ ಕೃಷಿಗೆ ತುಂಬಾ ಒತ್ತನ್ನು ನೀಡಲಾಗುತ್ತಿದ್ದು ಅನೇಕ ಯೋಚನೆ- ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಕಡಿಮೆ ಬಡ್ಡಿಯ ಸಾಲ, ಅಲ್ಪಾವಧಿ ಸಾಲ, ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಪರಿಕರಗಳ ಪೂರೈಕೆ, ಪಂಪು, ವಿದ್ಯುತ್  ಹೀಗೆ ಹತ್ತು ಹಲವು.  


ಇತ್ತೀಚಿನ ದಿನಗಳಲ್ಲಿ ನಮ್ಮ ಯುವಕ ಯುವತಿಯರು ಸರ್ಕಾರಿ-ಖಾಸಗಿ ವೃತ್ತಿಗಳನ್ನು ತೊರೆದು ಮಣ್ಣಿನ ಮೇಲಿನ ಪ್ರೀತಿಯಿಂದ ಕೃಷಿಯಲ್ಲಿ ತೊಡಗಿಕೊಂಡಿರುವುದನ್ನು ನಾವು  ಕಾಣಬಹುದಾಗಿದೆ.                                             

ನಾನು ಕೂಡಾ ಶಿಕ್ಷಣ -ಶಿಕ್ಷಕ ಬಿ.ಎಡ್ ತರಬೇತುದಾರಳಾಗಿದ್ದು, ಕೃಷಿಯಲ್ಲಿ ಬಹಳ ಆಸಕ್ತಿಯನ್ನು ಹೊಂದಿದವಳು. ಮಹಿಳೆಯರೂ ಮನಸ್ಸು ಮಾಡಿದರೆ ಕೃಷಿಯಲ್ಲಿ ಸಾಧನೆ ಮಾಡಬಹುದು ಎಂಬ ಆತ್ಮ ವಿಶ್ವಾಸವಿದೆ.  


ಅಡಿಕೆ, ತೆಂಗು, ರಬ್ಬರ್ ಕೃಷಿಯು ನಮ್ಮ ಮುಖ್ಯ ಕೃಷಿಯಾಗಿದೆ. ಈ ರಬ್ಬರ್ ಗಿಡಗಳು, ತೆಂಗು, ಕಂಗು,  ಮಾವು ಬಾಳೆ ಇತ್ಯಾದಿ ಹೂ ಬಿಡುವಾಗ ಇದರಿಂದ ಆಕರ್ಷಿತವಾದ ಜೇನು ನೊಣಗಳು  ಪರಾಗಸ್ಪರ್ಶದಿಂದ ಜೇನನ್ನು ಶೇಖರಿಸುತ್ತವೆ. ಜೇನು ಭೂಲೋಕದ ಅಮೃತ ಜೀವಿಗಳು. ಇವು ಹೂವಿನಿಂದ ಹೂವಿಗೆ ಹತ್ತು ಹದಿನೈದು ಮೈಲುಗಳ ದೂರ ಹಾರಿ ಮಧು ಸಂಗ್ರಹಿಸಿ ತಮ್ಮ ಗೂಡುಗಳಿಗೇ ಮರಳಿಬಂದು ಸುಂದರ ಎರಿಗಳನ್ನು ಕಟ್ಟುವುದು.  ಜೇನು ಹಂಗಾಮಿನ ಕಾಲದಲ್ಲಿ ಹತ್ತು- ಹದಿನೈದು ದಿನಗಳಿಗೊಮ್ಮೆ ಜೇನು ತುಂಬಿಸಿ ಸೀಲ್ ಮಾಡುವ ಈ ಅದ್ಭುತ ಕಾರ್ಯ ನಮ್ಮ ಯಾವ ಇಂಜಿನಿಯರಿಂದಲೂ ಅಸಾಧ್ಯವಾದುದು. ಜೇನು ಕುಟುಂಬ ಅವುಗಳ ಕೆಲಸ ಕಾರ್ಯ ಶಿಸ್ತು ಕುಟುಂಬ ವ್ಯವಸ್ಥೆ ನಮ್ಮ ಬದುಕಿಗೇ ಒಂದು ಸವಾಲು. ಒಂದು ರಾಣಿ ಜೇನು ಇಡೀ ಸಂಸಾರವನ್ನೇ ತನ್ನ ಹಿಡಿತದಲ್ಲಿಟ್ಟುಕೊಂಡು ನಡೆಸುವುದೆಂದರೆ ಪರಮಾಶ್ಚರ್ಯ.  


ಜೇನುನೊಣಗಳು ನಮಗಾಗಿ ಸಂಗ್ರಹಿಸುವ ಮಧು ಇಡೀ ಪ್ರಪಂಚಕೆ ಅಮೃತ ಸಮಾನ. ಇದು ಹಲವಾರು ರೋಗಗಳಿಗೆ ರಾಮಬಾಣವು ಹೌದು. ಆದರೆ ಇಂದು ಕೆಲವರು ಇದನ್ನು  ದುರುಪಯೋಗ ಮಾಡಿಕೊಂಡು ಕಲಬೆರೆಕೆಯೊಂದಿಗೆ ಜನರಿಗೆ ಮೋಸ ಮಾಡುವುದನ್ನು ಕೂಡಾ ಒಂದು ವೃತ್ತಿಯಾಗಿ ಮಾಡುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. 


ಈ ಜೇನು ಕೃಷಿಯಿಂದ ಕೋಟಿ ಜೀವರಾಶಿಗಳ ಬದುಕು ಇಂದು ಸುಸೂತ್ರವಾಗಿ ಸಾಗುತ್ತಿದೆ. ಜೇನು ನಮ್ಮ ಪರಿಸರದ  ದೇವರಿಗೆ ಸಮಾನವಾದ ಜೀವಿ.  


ಹೌದು ಜೇನಿನ ಸಂಸಾರ ಮತ್ತು ಬದುಕು ನಮ್ಮ ಬದುಕಿಗೆ ದೊಡ್ಡ ಒಗಟು. ಜೇನಿನ ಶಿಸ್ತು ಹಾಗೂ ತನಗಾಗಿ ಏನೂ ಮಾಡದೇ ಮಧುವನ್ನು ಸಂಗ್ರಹಿಸಿ, ಯಾವುದೇ  ಸ್ವಾರ್ಥವನ್ನು ಇಟ್ಟುಕೊಳ್ಳದೇ ನಮಗಾಗಿ ದುಡಿಯುವ ಜೇನಿನ  ಬದುಕು ನಮಗೆ ಆದರ್ಶವಾಗ ಬೇಕು. ಇಂದು  ನಮ್ಮ ಪರಿಸರದ ಸಮತೋಲನದಲ್ಲಿ ..ಆರೋಗ್ಯದಲ್ಲಿ ಹೀಗೆ ಎಲ್ಲಾ ಪರಿಸರದ ಕಾರ್ಯಗಳಲ್ಲಿ ಜೇನಿನ ಬದುಕಿದೆ. ಅದು ಹೂ ಬಿಡುವ ಮರದಿಂದ ಮರಕ್ಕೆ ಅಥವಾ ಗಿಡದಿಂದ ಗಿಡಕ್ಕೆ ಹಾರಿ ಹೂವುಗಳ ಪರಾಗಸ್ಪರ್ಶ ಮಾಡುತ್ತಾ ಮಕರಂದವನ್ನು ಹಿರುತ್ತಾ, ಜೇನುಗೂಡಿಗೆ ಮರಳಿ ಜೇನಿನ ಎರಿಗಳಲ್ಲಿ ಜೇನು ತುಂಬುವ ಕಾರ್ಯವನ್ನು ಮಾಡುತ್ತದೆ. ಇದರ ಜೊತೆಗೆ ಇವುಗಳಿಗೆ ಅರಿವಿಲ್ಲದೇ ಪರೋಕ್ಷವಾಗಿ ಕೃಷಿ ಉತ್ಪನ್ನಗಳ ಗಣನೀಯ ಹೆಚ್ಚಳಕ್ಕೂ ಪರಾಗಸ್ಪರ್ಶದ ಮೂಲಕ ಕಾರಣವಾಗುತ್ತದೆ. ಜೇನುಗೂಡಿನಲ್ಲಿ ಸೈನಿಕರು, ಶಿಸ್ತುಪಾಲಕರು ಇದನ್ನೆಲ್ಲಾ ನೋಡಿಕೊಳ್ಳುವ ಜಾಣ್ಮೆ ಒಂದೇ ಒಂದು ರಾಣಿ ಜೇನಿಗಿದೆ. ಈ ರಾಣಿಗೆ ಅಷ್ಟೊಂದು ಗೌರವ ಮತ್ತು ಶಕ್ತಿಗಿದೆ. ಇದರಿಂದಾಗಿ ಜೇನಿನ ಸಾಕಣೆಯನ್ನು ಅತೀ ಹೆಚ್ಚಿನ ಜನರು ತಮ್ಮ ಕೃಷಿಯಾನ್ನಾಗಿ ಅಳವಡಿಸಿಕೊಂಡಿದ್ದಾರೆ.


ಕೃಷಿಯು ಒಂದು ದೇವರ ಕೆಲಸವೆಂದೂ ಹೇಳಲಾಗುವುದು. ಕೃಷಿಗೆ ಹಾಕಿದ ಬಂಡವಾಳ ಆಗಲಿ, ಅದಕ್ಕೆ ನೀಡಿರುವ ಶ್ರಮವಾಗಲಿ ನಮ್ಮನ್ನು ಎಂದು ಕೂಡಾ ನಷ್ಟದ ದಾರಿಗೆ ಕೊಂಡೊಯ್ಯಲು ಸಾಧ್ಯವಾಗದು. ಕೃಷಿಕನ  ಬೆವರಿನ ದುಡಿಮೆಯಿಂದ ಅಮೂಲ್ಯವಾದ ಪ್ರತಿಫಲವಿದೆ. ಇಂದು ಮಹಿಳೆಯರೂ ಜೇನು ತರಬೇತು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಜೇನು ಸಾಕಣೆಯ ಅನುಭವ ಪಡೆದು ಕೊಳ್ಳುತ್ತಿದ್ದಾರೆ. ಸಬ್ಸಿಡಿ ಸಾಲ ಸೌಲಭ್ಯಗಳಲ್ಲಿ ಜೇನು ಪೆಟ್ಟಿಗೆಗಳ ವಿತರಣೆಯಾಗುತ್ತದೆ.ಮಾರುಕಟ್ಟೆಯಲ್ಲಿ ಉತ್ತಮ ಧಾರಣೆಯೂ ಇದೆ.


ಒಬ್ಬ ವ್ಯಕ್ತಿಯ ಅಸಮಾನತೆಯನ್ನು ಕಡಿಮೆ ಮಾಡಲು ಕೃಷಿ ಒಂದು ಮುಖ್ಯ ಕಾಯಕ. ಕೃಷಿಯ ಪ್ರಾಧಾನ್ಯತೆ ಹಾಗೂ  ಜನಸಂಖ್ಯಾ ಬಾಹುಳ್ಯವಿರುವ ದೇಶಗಳಲ್ಲಿ ಜನರ ನಡುವೆ ಆದಾಯದ ಅಸಮಾನತೆಗಳು ತೀವ್ರ ಸ್ವರೂಪದಲ್ಲಿ ಅಸ್ತಿತ್ವದಲ್ಲಿರುತ್ತವೆ. ಈ ಅಸಮಾನತೆಯನ್ನು ಕಡಿಮೆ ಮಾಡುವ ದೃಷ್ಠಿಯಿಂದ ಕೃಷಿಯ ಅಭಿವೃದ್ಧಿಗೆ ಸರಕಾರಗಳು  ಆದ್ಯತೆಯನ್ನು ನೀಡುವುದು ಅತ್ಯವಶ್ಯಕ. ಇದರಿಂದಾಗಿ ಕೃಷಿ ವಲಯದ ಪ್ರಗತಿಯು ಬಹುಸಂಖ್ಯೆಯ ಗ್ರಾಮೀಣ ಜನರ ಆದಾಯವನ್ನು ಹೆಚ್ಚಿಸುವ ಮೂಲಕ ಈ ಒಂದು ಆರ್ಥಿಕ ಅಸಮಾನತೆ ಕಡಿಮೆಯಾಗಲು ಸಾಧ್ಯ.


ಆದುದರಿಂದ, ನಾವು ಜೇನು ಕೃಷಿ ಹಾಗೂ ಇನ್ನಿತರ ಕೃಷಿಗೆ ನಮ್ಮಿಂದಾಗುವಷ್ಟು ಪ್ರೋತ್ಸಾಹವನ್ನು ನೀಡುತ್ತಾ ಕೃಷಿಯನ್ನು ಉನ್ನತ ಮಟ್ಟದಲ್ಲಿರಿಸಬೇಕೆಂಬುದೇ ನಮ್ಮ ಮಹದಾಶಯ.  ನಮಗೆ ಮಹಿಳೆಯರಿಗೆ ಜೇನು ಸಾಕಣೆ ಹೈನುಗಾರಿಕೆ ಮಲ್ಲಿಗೆ ಕೃಷಿ ಅಣಬೆ ಕೃಷಿ ತರಕಾರಿ ಬೆಳೆಯಲು ಅವಕಾಶ ಹಾಗೂ ನಿಬಡ್ಡಿ ಸಾಲ ಸೌಲಭ್ಯಗಳನ್ನು ನೀಡ ಬೇಕೆಂಬ  ಬೇಡಿಕೆಯನ್ನು ಸರಕಾರ ಮತ್ತು ಇಲಾಖೆಗಳ ಮುಂದಿಡಲು ಸಂತೋಷ ಪಡುತ್ತೇವೆ.


ನನ್ನ ಮಾವ.. ಮನೆಯವರು..ಬೇರೆ ಬೇರೆ ಕೃಷಿ ಕಾಯಕದಲ್ಲಿ ತೊಡಗಿರುವುದರಿಂದ ಈ ಜೇನು ಕೃಷಿಯನ್ನು ನಾನೂ ಯಾಕೆ ಮಾಡಬಾರದೆಂಬ ಬಯಕೆ ಮೂಡಿದೆ. ಇದನ್ನು ಉಪವೃತ್ತಿಯನ್ನಾಗಿ ಅವಲಂಬಿಸಿಕೊಳ್ಳುವ ಆಸಕ್ತಿ ನನ್ನಲ್ಲೂ ಹೆಚ್ಚಾಗಿದೆ. ಜೇನು ಕೃಷಿ ತರಬೇತಿ ಮಾರ್ಗ ದರ್ಶನವನ್ನು ಉತ್ತಮ ತಜ್ಞರಿಂದ,  ಮಾಹಿತಿಗಳನ್ನು ಪಡೆದು ಕೊಂಡು ಮುಂದೆ ಶಿಕ್ಷಕಿಯಾದಾಗ ವಿದ್ಯಾರ್ಥಿಗಳಿಗೂ ಹಾಗೂ ಸಮುದಾಯಕ್ಕೂ ಅರಿವು ಮೂಡಿಸುವ ಮಹದಾಸೆಯಿದೆ. ಇನ್ನಷ್ಟು ಹೆಚ್ಚಿನ ಮಟ್ಟದಲ್ಲಿ ಜೇನು ಕೃಷಿಯು ಎಲ್ಲೆಡೆ ಪಸರಿಸುವಂತಾಗಲಿ ಎಂಬುದೇ ನನ್ನ ಈ ಲೇಖನದ ಆಶಯ.   


-ಸುಪ್ರಿತಾ ಚರಣ್ ಪಾಲಪ್ಪೆ ಕಡಬ


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು