ಪ್ರಥಮ ಬಾರಿಗೆ ಕೊರೋನಾ ಜಗತ್ತಿಗೆ ಕಾಲಿಟ್ಟಾಗ ಪರಿಸ್ಥಿತಿ ತತ್ತರಿಸಿ ಹೋಗಿತ್ತು. ಸುತ್ತಲು ಸೂತಕದ ವಾತಾವರಣ. ಪ್ರತಿದಿನವು ಭಾನುವಾರ ಆಗಿ ಬಿಟ್ಟಿತ್ತು. ಆರ್ಥಿಕ ಪರಿಸ್ಥಿತಿಯ ಬಗ್ಗೆಯಂತೂ ಮಾತಾಡಿ ಪ್ರಯೋಜನವಿಲ್ಲ ಬಿಡಿ. ಶಾಲಾ ಕಾಲೇಜುಗಳು ಅದೆಷ್ಟೋ ತಿಂಗಳು ಮುಚ್ಚಿ ಹೋದದ್ದು ಬಹುಶಃ ನನ್ನ ವಿದ್ಯಾರ್ಥಿ ಜೀವನದಲ್ಲಿ ಇದೇ ಮೊದಲ ಬಾರಿಯೇನೋ...ಒಟ್ಟಾರೆಯಾಗಿ ಹೇಳಬೇಕೆಂದರೆ ಅದೊಂದು ಹೇಳತೀರದ ಬವಣೆ...
ಎಲ್ಲವು ಸುಧಾರಿಸಿಕೊಂಡು ಮತ್ತೆ ಮೊದಲಿನಂತಾಗಲು ಕ್ರಮೇಣ ಚೇತರಿಸುತ್ತಾ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಲು ಮತ್ತೆ ಒಕ್ಕರಿಸಿತು ನೋಡಿ ಕಣ್ಣಿಗೆ ಕಾಣದ ಅದೇ ಮಹಾಮಾರಿ...!!! ಪರಿಸ್ಥಿತಿ ಕೈ ಮೀರಿ ಹೋದಾಗ ಸರ್ಕಾರ ಲಾಕ್ಡೌನ್ ಘೋಷಿಸಿತ್ತು. ಪರೀಕ್ಷೆ ಇಲ್ಲವೆಂದು ಅರೆಕ್ಷಣ ವಿದ್ಯಾರ್ಥಿಗಳು ಸಂಭ್ರಮಿಸಿದ್ದು ಹೌದು. ಆದರೆ ಪ್ರತಿದಿನ ಸುದ್ದಿ ವಾಹಿನಿಗಳಲ್ಲಿ ತಮ್ಮವರನ್ನು ಕಳೆದುಕೊಂಡು ರೋದಿಸುತ್ತಿರುವ ಭಾವುಕ ನಿರ್ಲಿಪ್ತ ಭಾವಗಳು, ಕಣ್ಣೀರಿನ ದೃಶ್ಯಗಳು ಅತ್ಯಂತ ಬೇಸರ ಎನಿಸುತ್ತದೆ. ಬಸ್ಸು ಇಲ್ಲದಿದ್ದರೇನು ನಮ್ಮ ಸ್ವಂತ ವಾಹನ ಇಲ್ಲವೇ ಎಂದು ಅದೇನೂ ಆಗಿಯೇ ಇಲ್ಲದಂತೆ ವರ್ತಿಸುತ್ತಿರುವ ಅನಾಗರಿಕ ಜನರು ಒಂದೆಡೆಯಾದರೆ ಜೀವವನ್ನು ಕೈಯ್ಯಲ್ಲಿ ಹಿಡಿದುಕೊಂಡು ಪ್ರತಿದಿನ ನೋವು , ಭಯದಲ್ಲೇ ಬದುಕುತ್ತಿರುವ ಮುಗ್ಧ ಜನರು ಇನ್ನೊಂದೆಡೆ. ಸಾಲು ಸಾಲು ಹೆಣಗಳ ರಾಶಿ ಬಹುಶಃ ಕೊರೋನಾದ ಮೊದಲ ಅಲೆಯಲ್ಲೂ ನೋಡಲಿಲ್ಲವೇನೊ ಎಂಬ ಭಾಸ.....
ಜಾತಿ , ಧರ್ಮ, ಶ್ರೀಮಂತಿಕೆ, ಸಂಪತ್ತು ಎಂದು ಹಪಹಪಿಸುವ, ಜಿಪುಣ ಮನಸ್ಥಿತಿಯ ಮಾನವ ಒಮ್ಮೆ ಈ ರೋಗದಿಂದ ತುಚ್ಛವಾಗಿ ಪ್ರಾಣಬಿಟ್ಟ ವಿದ್ರಾವಕ ಫಟನೆಯನ್ನೂ ನೋಡಿಯಾದರೂ ಪರಿವರ್ತನೆ ಯಾಗಬೇಕು.
ಮಿತ್ರರೇ.... ಇದಕ್ಕೆ ಇನ್ನು ಯಾವಾಗ ಪೂರ್ಣವಿರಾಮವೋ ಎಂದು ರೋದಿಸುವ ಮನಸ್ಸುಗಳು ನಮ್ಮೆಲ್ಲರದ್ದು. ಆದರೆ ಇತ್ತೀಚಿನ ದುಸ್ಥಿತಿಯ ನೋಡುವಾಗ ಅದೇನು ಮಾತಾಡಬೇಕೆಂದೇ ತಿಳಿಯುತ್ತಿಲ್ಲ. ಮಾನವನ ಜೀವದಲ್ಲೂ ಹಣ ಮಾಡ ಹೊರಟ ರಾಕ್ಷಸ ಪ್ರವೃತ್ತಿಯ ಮನುಜನಿಗೆ ಪ್ರಕೃತಿಗಿಂತ ಮೇಲಾಗಿ ಇನ್ನ್ಯಾರು ಬುದ್ಧಿ ಕಲಿಸಿಯಾರು ಹೇಳಿ. ಅಸಂಬದ್ಧ , ಅಮಾನವೀಯ ನಡತೆಯಿಂದಾಗಿ ಇಂದು ಸಾಲು ಸಾಲು ಸಾವುಗಳ ನೋಡುವಾಗ ಅದ್ಯಾವ ಕಲ್ಲು ಮನಸ್ಸಾದರೂ ಕರಗುವುದಿಲ್ಲವೇ...? ಪ್ರಾಣಿಗಳು ಮನುಷ್ಯನನ್ನು, ಮನುಷ್ಯ ಬೇಟೆಯಾಡಿ ಪ್ರಾಣಿಯನ್ನು ಕೊಲ್ಲುವ ದಿನವಿತ್ತು ಅಂದು.... ಇಂದೆಲ್ಲ ವಿಚಿತ್ರ ಮನುಷ್ಯ ಮನುಷ್ಯನನ್ನೇ ಕೊಂದು ತನ್ನ ಹೊಟ್ಟೆ ತುಂಬಿಸುತ್ತಿದ್ದಾನೆ. ಲಾಕ್ಡೌನ್ ದಿನದ ಅನುಭವ ಹೇಗಿದೆ ಎಂದರೆ ನಾಳೆ ಇನ್ನೇನೊ ಎನ್ನುವಂತ ಯೋಚನೆ, ನಮ್ಮವರ ನೆನಪಿಸಿಕೊಂಡರೆ ಅದೇನೋ ಒಂದು ತೆರನಾದ ಭಯ, ಜಗತ್ತು ಇನ್ನೇನಾಗುತ್ತೋ ಎಂಬ ದ್ವಂದ್ವ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಇದು ನೀಡೋ ಪೆಟ್ಟೇನು ಎಂಬ ಚಿಂತೆ....ಎಲ್ಲವು ಬರೀ ಪ್ರಶ್ನೋತ್ತರ....
ಅದ್ಯಾಕೋ ಮಿತ್ರರೇ..... ಒಮ್ಮೆ ಮನದ ಭಾವನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂಬ ಮನಸ್ಸಾಯಿತು. ಅದಕ್ಕಾಗಿ ಗೀಚಿದೆ.
-ಅರ್ಪಿತಾ ಕುಂದರ್
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق