ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಯಕ್ಷಗಾನ ರಂಗದ ಧ್ರುವ ತಾರೆ ಗಾನ ಕೋಗಿಲೆ ಶ್ರೀಯುತ ದಿ. ಕಾಳಿಂಗ ನಾವಡ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ‌ಅಜರಾಮರ ಕೀರ್ತಿ ಪಡೆದ ಮೇರು ಭಾಗವತರು ಗುಂಡ್ಮಿ‌ ಕಾಳಿಂಗ ನಾವಡರು. ತನ್ನ ಅದ್ಭುತ ಕಂಠಸಿರಿಯ ಭಾಗವತಿಕೆಯ ಮೂಲಕ ಭಾಗವತಿಕೆಗೆ ಸ್ಟಾರ್ ವ್ಯಾಲ್ಯೂ ತಂದಿತ್ತ ಮಹಾನ್ ಗಾನ ಸಾಮ್ರಾಟ ಶ್ರೀಯುತ ದಿ. ಕಾಳಿಂಗ ನಾವಡ.

ಗಾನ ಕೋಗಿಲೆ" ಕಾಳಿಂಗ ನಾವಡರು ಹುಟ್ಟಿದ್ದು ಜೂನ್ 6, 1958ನೇ ಇಸವಿಯಲ್ಲಿ. ಸಾಲಿಗ್ರಾಮ ಸಮೀಪದ ಗುಂಡ್ಮಿ ಅನ್ನುವ ಪುಟ್ಟ ಹಳ್ಳಿಯಲ್ಲಿ, ರಾಮಚಂದ್ರ ನಾವುಡ ಪದ್ಮಾವತಿ ದಂಪತಿಗಳ ಐದನೇ ಕೂಸು. ತಂದೆ ರಾಮಚಂದ್ರ ನಾವಡರು ಕೂಡಾ ಆ ಕಾಲದ ಹೆಸರಾಂತ ಭಾಗವತರು. ಹಾಗಾಗಿ ಸಹಜವಾಗಿಯೇ ನಾವುಡರಿಗೆ ಬಾಲ್ಯದಲ್ಲಿಯೇ ಯಕ್ಷಗಾನದ ಕುರಿತು ಆಸಕ್ತಿ ಮೂಡಿಸುವ ಪೂರಕ ರಂಗಸ್ಥಳವು ಅವರ ಮನೆಯಲ್ಲಿಯೇ ಸಿದ್ಧಿಸಿತ್ತು. ತಂದೆ ರಾಮಚಂದ್ರ ನಾವಡರಿಂದ ಎಳೆಯ ವಯಸ್ಸಿನಲ್ಲಿಯೇ ಭಾಗವತಿಕೆಯ ಪಟ್ಟುಗಳನ್ನು ಕರತಲಾಮಲಕ ಮಾಡಿಕೊಂಡ ನಾವುಡರಿಗೆ ಮನೆಯೇ ಮೊದಲ ಪಾಠಶಾಲೆ ತಂದೆಯೇ ಮೊದಲ ಗುರು. ನಾವಡರ ತಂದೆ ಕುಂಜಾಲು ಶೈಲಿ ಭಾಗವತರು.

ಜನ್ಮಜಾತವಾಗಿ ಬಂದ ಪ್ರತಿಭೆಗೆ ಹಾಗು ಅವರಲ್ಲಿದ್ದ ಆಸಕ್ತಿಗೆ ನೀರೆರೆದ ಪೋಷಕರು ಅವರನ್ನು ಆ ಕಾಲದ ಸುಪ್ರಸಿದ್ಧ ಭಾಗವತರಾದ ನಾರ್ಣಪ್ಪ ಉಪ್ಪೂರರ ಗರಡಿಯಲ್ಲಿ ಬಿಟ್ಟರು. ನಾರ್ಣಪ್ಪ ಉಪ್ಪೂರ ಮಾರ್ವಿ‌ ಶೈಲಿಯ ಭಾಗವತರು ಹಾಗೂ ಕಾಳಿಂಗ ನಾವಡರಿಗೆ ಕೋಟ ಹಿರೇಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಕ್ಷಗಾನದ ಪಾಠವನ್ನು ಗುರು  ಹೇಳಿಕೊಡುತ್ತಿದ್ದರು. ನಾರ್ಣಪ್ಪ ಉಪ್ಪೂರ ಈ ಎಳೆಯ ತರುಣ ತಮ್ಮ ಪರಂಪರಾಗತ ಭಾಗವತಿಕೆಯನ್ನು ಮುಂದುವರಿಸಲು ಸಮರ್ಥನೆಂದು ಬಹುಬೇಗನೆ ಮನಗಂಡ ಉಪ್ಪೂರರು ತಮ್ಮ ಅನುಭವವನ್ನೆಲ್ಲ ತಮ್ಮ ಸಾಲಿಗ್ರಾಮದ ಹಂಗಾರಕಟ್ಟೆಯ 'ಯಕ್ಷ ಕಲಾ ಕೇಂದ್ರ-ಭಾಗವತ ತರಬೇತಿ ಕೇಂದ್ರ'ದಲ್ಲಿ ಕಾಳಿಂಗ ನಾವಡರಿಗೆ ಶಿಕ್ಷಣ ನೀಡಿದರು. ಶ್ರೀ ನಾರ್ಣಪ್ಪ ಉಪ್ಪೂರರ ಜೊತೆಗೂಡಿ, 1972 ರಲ್ಲಿ, ಅಂದರೆ ಕೇವಲ 14ನೇ ವಯಸ್ಸಿನಲ್ಲಿ ಶ್ರೀಯುತ ಪಾರಂಪಳ್ಳಿ ಶ್ರೀಧರ ಹಂದೆಯವರ ಯಜಮಾನಿಕೆಯ ಕೋಟ ಶ್ರೀ ಅಮೃತೇಶ್ವರಿ ಮೇಳದಲ್ಲಿ ಮುಖ್ಯ ಭಾಗವತರಾಗಿ ತಮ್ಮ ಯಕ್ಷಕಲಾ ಸೇವೆ ಆರಂಭಿಸಿದರು. ಉಪ್ಪೂರರ ಜತೆ ಸೇರಿದ ನಾವಡರು ಸರಿಸುಮಾರು 5-6 ವರ್ಷಗಳ ಕಾಲ ಅವರ ಜೊತೆಯಲ್ಲಿಯೇ ತಿರುಗಾಟವನ್ನು ಮುಂದುವರೆಸಿದರು. ತಂದೆಯಿಂದ ಕುಂಜಾಲು ಶೈಲಿ ಭಾಗವತಿಗೆಯನ್ನು ಕಲಿತ ನಾವಡರು ಗುರು ನಾರ್ಣಪ್ಪ ಉಪ್ಪೂರ ಮಾರ್ವಿ‌ ಶೈಲಿಯ ಭಾಗವತರು ಇವೆರಡನ್ನೂ ಒಟ್ಟಿಗೆ ಸೇರಿಸಿ ಒಂದು ಹೊಸ ರೀತಿಯಲ್ಲಿ ಭಾಗವತಿಕೆಯಲ್ಲಿ ಸಂಚಲನವನ್ನು ಮುಡಿಸಿದವರು ನಾವಡರು.

1977ರಲ್ಲಿ ಪೆರ್ಡೂರು ಮೇಳಕ್ಕೆ ಭಾಗವತರಾಗಿ ಸೇರ್ಪಡೆಗೊಂಡ ನಾವುಡರು ಬಹುಬೇಗನೆ ಜನಮನವನ್ನು ಸೂರೆಗೊಂಡರು, ನಾವಡರ ಭಾಗವತಿಕೆ ಜನಜನಿತವಾಯ್ತು. ಪೆರ್ಡೂರು ಮೇಳದಲ್ಲಿ "ಲೋಲಾಕ್ಷಿ‌" ಎಂಬ ಪ್ರಸಂಗ ಬರೆದು‌ ಆಡಿಸಿದ್ದರು‌ ಎಂಬ ಅಭಿಪ್ರಾಯವೂ ಇದೆ. ಅಲ್ಲಿಂದ ಮುಂದೆ ಸಾಲಿಗ್ರಾಮ ಮೇಳಕ್ಕೆ ಪದಾರ್ಪಣೆ ಮಾಡಿದ ನಾವುಡರು ಆ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. ಹೋದಹೋದೆಡೆಯೆಲ್ಲ ಅಭಿಮಾನಿಗಳು ಸೃಷ್ಟಿಯಾದರು, ಯಕ್ಷಪ್ರೇಮಿಗಳು ಹುಚ್ಚೆದ್ದುಹೋದರು, ನೋಡನೋಡುತ್ತಿರುವಂತೆಯೇ ಕಾಳಿಂಗ ನಾವುಡರ ಕೀರ್ತಿ ಪತಾಕೆ ಎಲ್ಲೆಡೆಯೂ ರಾರಾಜಿಸತೊಡಗಿತು, ಕರಾವಳಿ ಕರ್ನಾಟಕದ ತುಂಬೆಲ್ಲಾ ಕಾಳಿಂಗ ನಾವಡರ ಕಂಚಿನ ಕಂಠದ ಘಂಟಾನಿನಾದವು ಕೇಳಿಬರತೊಡಗಿತು. ತಮ್ಮ ಮೂವತ್ತೆರಡನೆಯ ವಯಸ್ಸಿಗೇ ಸಮಕಾಲೀನ ಭಾಗವತರ್ಯಾರೂ ತಲುಪಲಾಗದ ಎತ್ತರದ ಪೀಠದಲ್ಲಿ ನಾವಡರು ವಿರಾಜಮಾನರಾದರು.

ಯಕ್ಷಗಾನ ರಂಗದ ತುಂಬೆಲ್ಲಾ ಅತಿರಥ-ಮಹಾರಥರಂತಹ ಘಟಾನುಘಟಿಗಳು ವಿಜೃಂಭಿಸುತ್ತಿದ್ದ ಉತ್ತುಂಗದ ಕಾಲದಲ್ಲಿ, ಎಳೆಯ ವಯಸ್ಸಿನಲ್ಲಿಯೇ ತನ್ನ ಜನ್ಮಜಾತ ಪ್ರತಿಭೆಯ ಬಲದಿಂದ ಬಹುಬೇಗನೆ ಕೀರ್ತಿಯ ಉತ್ತುಂಗ ಶಿಖರವನ್ನೇರುವ ಸೌಭಾಗ್ಯ ಪಡೆದು ಬಂದವರು ಕಾಳಿಂಗ ನಾವುಡರು. ಯಕ್ಷಗಾನದ ಬಗ್ಗೆ ಆಸಕ್ತಿ ಕಳೆದುಕೊಂಡು ದೂರ ಸರಿಯುತ್ತಿದ್ದ ಜನಮಾನಸದ ಚಿತ್ತವನ್ನಾಕರ್ಷಿಸಿ ಮತ್ತೆ ಯಕ್ಷಗಾನದತ್ತ ಎಳೆದು ತರುವ ಶಕ್ತಿ ಇತ್ತು ಆ ಮಾಂತ್ರಿಕ ಕಂಠಕ್ಕೆ. ಒಮ್ಮೆ ಇವರ ಗಾನ ವೈಭವದ ಸವಿಯನ್ನುಂಡವರು ಶಾಶ್ವತವಾಗಿ ಇವರ ಅಭಿಮಾನಿಗಳೇ ಆದರು. ಅವರಿದ್ದ ಮೇಳದ ಆಟ ನಡೆಯುತ್ತಿರುವಲ್ಲಿ ಸೇರುತ್ತಿದ್ದ ಜನರ ಸಮೂಹದಲ್ಲಿ ಅರ್ಧಕ್ಕೂ ಮಿಕ್ಕಿದಷ್ಟು ಮಂದಿ ಅವರ ಗಾನಸುಧೆಯನ್ನು ಸವಿಯಲೆಂದೇ ಬಂದಿರುವರಾಗಿರುತ್ತಿದ್ದರು ಅನ್ನುವುದು ಅತಿಶಯೋಕ್ತಿಯೇನಲ್ಲ. ತಮ್ಮ ವಿಶಿಷ್ಟ ಧ್ವನಿಯ ಛಾಪಿನಿಂದ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದ ಬಲು ಅಪರೂಪದ ಕಂಠಸಿರಿಯಿಂದಾಗಿ ಕಾಳಿಂಗ ನಾವಡರು ತಮ್ಮದೇ ಆದ ಹೊಸತೊಂದು ಪರಂಪರೆಯನ್ನು ಹುಟ್ಟುಹಾಕಿದರು. ಒಂದರ್ಥದಲ್ಲಿ ಭಾಗವತಿಕೆ ಅನ್ನುವ ಪದಕ್ಕೆ ಪರ್ಯಾಯ ಅನ್ನುವಂತೆ ಇದ್ದವರು ನಾವಡರು.

ನವೆಂಬರ್ 1988 ರಲ್ಲಿ ಬಹ್ರೈನ್ ನಲ್ಲಿ ನಡೆದ ಕನ್ನಡ ಕೂಟದ ಸಮಾರಂಭದ ಯಕ್ಷಗಾನದಲ್ಲಿ ಶ್ರೀ ಕಾಳಿಂಗ ನಾವಡರ ಭಾಗವತಿಕೆ ಎಲ್ಲರ ಮನ ಸೂರೆಗೊಂಡಿತ್ತು. ಯಕ್ಷಗಾನಕ್ಕೆ ಅಷ್ಟೇನೂ ಆಸಕ್ತಿಯಿಲ್ಲದಿದ್ದ ಮುಂಬಯಿಯಲ್ಲಿ ಯಕ್ಷಗಾನಕ್ಕೊಂದು ಸ್ಪಷ್ಟ ನೆಲೆ ಕಲ್ಪಿಸಿದ ಕೀರ್ತಿ ನಾವಡರು. ನಾವಡರ "ಎಲ್ಲೆಲ್ಲೂ ಸೊಬಗಿದೆ, ಎಲ್ಲೆಲ್ಲೂ ಸೊಗಸಿದೆ....", "ನೀಲ ಗಗನದೊಳು ಮೇಘಗಳ ಕಂಡಾಗಲೇ ನವಿಲು ಕುಣಿಯುತಿದೆ... "ಮುಂತಾದ ಪದ್ಯಗಳನ್ನು ಕೇಳಿದಾಗ ಇಂದಿಗೂ ಮೈ ನವಿರೇಳುತ್ತದೆ.

ರೇವತಿ, ಕಲಾವತಿ, ಚಾಂದ್, ಬಿಹಾಗ್ ಮುಂತಾದ ರಾಗಗಳನ್ನು ಯಕ್ಷಗಾನಕ್ಕೆ ಅಳವಡಿಸಿ, ತಮ್ಮ ಕಂಠಸಿರಿಯಿಂದ ಯಕ್ಷಗಾನಕ್ಕೆ ಹೊಸ ಭಾಷ್ಯ ಬರೆದ ನಾವುಡರು ಶ್ರೀಯುತ ರಮೇಶ್ ಬೇಗಾರ್ ಇವರ ಸಂಯೋಜನೆಯ ಆಡಿಯೋ cassette ಗೋಸ್ಕರ ಸಿದ್ಧಪಡಿಸಿದ ಕಥಾನಕ "ಅಮೃತಮತಿ" ಹಾಗೂ ಸ್ವತಃ ನಾವುಡರೆ ರಚಿಸಿದ "ಭಾಗ್ಯಶ್ರೀ", "ರೂಪಶ್ರೀ", "ನಾಗಶ್ರೀ", "ವಿಜಯಶ್ರೀ", "ಕಾಂಚನಶ್ರೀ" ಯಶೋಗಾಥೆ ಬರೆದ ಅಮರ ಪ್ರಸಂಗಗಳು.

ಕಾಳಿಂಗನಾವಡರು ಯಕ್ಷಗಾನದ ಪೌರಾಣಿಕ ಪ್ರಸಂಗಗಳ ಎಲ್ಲಾ ಸಂಪ್ರದಾಯ ಬದ್ದ‌ರಂಗನಡೆಯನ್ನು ಬಲ್ಲರು. ಹೊಸ ಪ್ರಸಂಗಗಳನ್ನು ಯಕ್ಷಗಾನದ ಚೌಕಟ್ಟಿನಲ್ಲಿ ನಾವೀನ್ಯದ ರಂಗಿನಲ್ಲಿ ರಸಾತ್ಮಕವಾಗಿ ನಿರ್ದೇಶಿಸಿ ಹಾಡಿ ಆಡಿಸಿದರು. ಹಗಲಿನಲ್ಲಿ ಸ್ನೇಹಮಯಿಯಾಗಿ ಕಾಣುತ್ತಿದ್ದ ನಾವಡರು ರಂಗಸ್ಥಳದ ಕಲಾಕಾಯಕದಲ್ಲಿ ಯಾವುದೇ ರಾಜಿಯಿಲ್ಲದೆ ರಂಗಸ್ಥಳದಲ್ಲಿ ವ್ಯವಹರಿಸುತ್ತಿದ್ದರು. ಕಾಳಿಂಗ ನಾವಡರು ರಂಗ- ಪ್ರಸಂಗದ ಪರಿಪೂರ್ಣ ಹಿಡಿತ ಸಾಧಿಸಿದ ಭಾಗವತರಾಗಿದ್ದರು. ಭಾಗವತನೇ ರಂಗದ‌ ಸರ್ವ‌ ಸ್ವತಂತ್ರ ‌ನಿರ್ದೇಶಕನೆಂಬುದನ್ನು ಪರಿಣಾಮಕಾರಿಯಾದ ರಂಗ ಪ್ರಬುದ್ದತೆಯಿಂದ ತೋರಿಸಿಕೊಟ್ಟವರು.

ಜೀವಮಾನವಿಡೀ ಪ್ರಯತ್ನಿಸಿದರೂ ಸಾಧಿಸಲು ಅಸಾಧ್ಯವಾದುದನ್ನು ಕೆಲವೇ ಕೆಲವು ವರ್ಷಗಳಲ್ಲಿ ಸಾಧಿಸಿದವರು. 1990ರಲ್ಲಿ ಕರ್ನಾಟಕ ಸರಕಾರ ಮರಣೋತ್ತರವಾಗಿ 'ರಾಜ್ಯೋತ್ಸವ ಪ್ರಶಸ್ತಿ'ಯನ್ನು ನೀಡಿ ಗೌರವಿಸಿದೆ. ಹಾಗೆಯೇ ಯಕ್ಷಕಲಾರಸಿಕರಿಂದ 'ಕರಾವಳಿ ಕೋಗಿಲೆ', 'ರಸರಾಗ ಚಕ್ರವರ್ತಿ' ಮುಂತಾದ ಬಿರುದುಗಳು, ಸನ್ಮಾನಗಳು, ಪ್ರಶಸ್ತಿಗಳು ನಾವಡರಿಗೆ ಸಂದಿವೆ.ನಾವಡರು ತನ್ನ ಸದ್ಗುಣಗಳಿಂದ ಗುರುಗಳ ನೆಚ್ಚಿನ ‌ಶಿಷ್ಯರಾಗಿದ್ದರು. ಗುರುಗಳನ್ನು ಅಪಾರ ಗೌರವಿಸುತ್ತಿದ್ದರು‌. ಹಿರಿಯ ಕಲಾವಿದರನ್ನು ಆದರದಿಂದ ಕಾಣುತ್ತಿದ್ದರು. ಮೇಳನಿಷ್ಠ ಭಾಗವತರಾಗಿ ದುಡಿಯುತ್ತಿದ್ದರು.

1983ರಲ್ಲಿ ಶ್ರೀಮತಿ ವಿಜಯಶ್ರೀಯವರನ್ನು ಮದುವೆಯಾದ ಕಾಳಿಂಗ ನಾವಡರಿಗೆ "ಆಗ್ನೇಯ ನಾವಡ" ಎಂಬ ಮಗನಿದ್ದಾರೆ.

ಮೇ 27, 1990 ನೇ ಇಸವಿಯಲ್ಲಿ 32ರ ಹರೆಯದ ತರುಣ ಗಾನ ಕೋಗಿಲೆಯ ಹಾಡು ಸ್ತಬ್ಧವಾಯಿತು. ರಸ್ತೆ ಅಪಘಾತವೊಂದರಲ್ಲಿ ನಾವಡರು ವಿಧಿವಶರಾದಾಗ ಯಕ್ಷಗಾನಲೋಕದ ಸುವರ್ಣಯುಗವೊಂದು ಅಂತ್ಯವಾಯಿತು. ಯಕ್ಷರಸಿಕರ ಪಾಲಿಗೆ ಬರಸಿಡಿಲೆರಗಿದಂತೆ ಬಂದಪ್ಪಳಿಸಿದ ಈ ದುರಂತ ವಾರ್ತೆಯನ್ನು ಕೇಳಿ ಕ್ಷಣಾರ್ಧದಲ್ಲಿ ಇಡೀ ಕರಾವಳಿಯ ಕಡಲತೀರವು ಶೋಕಸಾಗರದಲ್ಲಿ ಮುಳುಗಿತು. ಜೀವಮಾನವಿಡೀ ಪ್ರಯತ್ನಿಸಿದರೂ ಸಾಧಿಸಲು ಅಸಾಧ್ಯವಾದುದನ್ನು ಕೆಲವೇ ಕೆಲವು ವರ್ಷಗಳಲ್ಲಿ ಸಾಧಿಸಿ ತೆರಳಿದ "ಕರಾವಳಿಯ ಗಾನಕೋಗಿಲೆ" ಗುಂಡ್ಮಿ ಕಾಳಿಂಗ ನಾವಡರಿಗೆ "ನಮನ".

#Pencil_Art :-Subrahmanya Vattelsu.

- ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

+91 8971275651

Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

أحدث أقدم