ಹಾಲು ಮಾರಲು ಪೋದೇವಮ್ಮ
ಗೋಕುಲದೊಳಗ್ಹಾಲು ಮಾರಲು ಪೋದೆವಮ್ಮ||2||
ಹಾಲು ಮಾರುವ ಧ್ವನಿ ಆಲಿಸಿ ಕೇಳುತ
ಬಾಲಕೃಷ್ಣ ಬಹು ಲೀಲೆ ಮಾಡುತ ಬಂದ
||ಹಾಲು||
ಹಸಿರು ಜರದ ಸೀರೆಯನುಟ್ಟು ಕುಸುರಿಕಂಕಣ
ಎಸೆವೊ ಹವಳದ ಹಿಂಬಳೆ ಕಟ್ಟು ಮೊಸರಿನ ಕುಂಭ
ಕುಸುಮ ಮಲ್ಲಿಗೆಯ ಮುಡಿಯಲ್ಲಿಟ್ಟು
ಶಶಿವದನೆಯರೆಲ್ಲ ಚೆಂದದಿ ಬರುತಿರೆ
ಕುಸುಮನಾಭ ಮುಸುಗೆಳೆದು ಮೊಸರು ಸುರಿದ
||ಹಾಲು||
ಬಣ್ಣ ಬಣ್ಣದ ಸೀರೆಯನುಟ್ಟು ಮುತ್ತಿನ ಬಟ್ಟು
ಹೊಳೆವೊ ಕಸ್ತೂರಿ ತಿಲಕವನಿಟ್ಟು ಹಾಲಿನಕುಂಭ
ಸಣ್ಣಮಲ್ಲಿಗೆ ಮುಡಿಯಲಿಟ್ಟು
ಚೆನ್ನಾರ ಚೆಲುವೇರು ಚೆಂದದಿ ಬರುತಿರೆ
ಕಣ್ಣು ಸನ್ನೆಮಾಡಿ ಕರೆದು ಮುದ್ದಿಡುವ||ಹಾಲು||
ಮುಂದೆ ಮುಂದಾಗಿ ಹೋಗುತಲಿರಲು ಹಿಂದ್ಹಾಲಿನ್ಹರವಿ
ಒಂದೊಂದ್ಹರಳು ಮೀಟುತಿರಲು ಧಾರೆಗೆ ಬಾಯಾ
ಆನಂದದಿಂದೊಡ್ಡಿ ಕುಡಿಯುತಿರಲು
ಸಂದಣಿಯೊಳು ನಾವು ಒಂದರಿಯದಲೆ
ಬಂದಿಳುಹಲು ಬರೀ ಗಡಿಗೆ ಕಾಣಮ್ಮ ||ಹಾಲು||
ಕಡಗೋಲಿಂದೊಡೆದು ಗಡಿಗೆಯನು ಬಡವರ ಬೆಣ್ಣೆ
ಒಡಲಿಗೆ ಕದ್ದು ತಿಂಬುವುದೇನು ಕಂಡರೆನಗಂಡ
ಬಡಿದರಿನ್ನೇನು ಮಾಡುವೆ ನೀನು
ಗಡಿಬಿಡಿ ಮಾಡುತ ಕತ್ತಲ ಮನೆಯೊಳು
ತುಡುಗನಂತೆ ತಿರುಗಾಡುವ ತಾನು||ಹಾಲು||
ಸಿಟ್ಟು ಮಾಡುವುದ್ಯಾತಕಮ್ಮ ಶ್ರೀ ರಮಣನ
ಬಿಟ್ಟು ಬಾಹುವುದೆ ಲೇಸಮ್ಮ ಭೀಮೇಶಕೃಷ್ಣನ
ಕಟ್ಟಿ ಹಾಕುವುದೆ ಲೇಸಮ್ಮ
ಪಟ್ಟುಮಾಡಿ ಪರಹೆಂಗಳೇರೊಳು
ಕಣ್ಣಿಟ್ಟ ಮ್ಯಾಲೆ ಒಂದಿಷ್ಟಾದರು ಬಿಡ ||ಹಾಲು||
ಗಾಯನ: ಶ್ರೀ ವಿದ್ಯಾಭೂಷಣರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ