ಜೀವನದ ನದಿಯಲ್ಲಿ ದೋಣಿಯಾತ್ರೆಯ ಮಾಡಿ
ಭಾವನೆಯ ಕಣಜವನು ತುಂಬಿ ನೀವೆಲ್ಲ |
ಕಾವದೇವನ ಭಜಿಸಿ ಹರಕೆಯನು ಪಡೆದಿರಲು
ಭಾವಿ ಜೀವನ ಸುಖವು - ಪುಟ್ಟಕಂದ || ೧ ||
ದೋಣಿಯೆಂದರೆ ಬದುಕು ಅಂಬಿಗನೆ ಭಗವಂತ
ಕಾಣಬೇಕವನ ಮಹತಿಯನು ನೀವೆಲ್ಲ |
ಬಾಣಿಯೊಳಗೂ ಇರುವ ಭಗವಂತ ಜಗದೊಡೆಯ
ಕೇಣವಿಲ್ಲದೆ ನೋಡೆ - ಪುಟ್ಟಕಂದ || ೨ ||
ಜೀವನವು ನೀರನೊರೆ ಶಾಶ್ವತಕೆ ಉಳಿಯುವುದೆ
ಭಾವಿಪೊಡೆ ನಶ್ವರವು ಜೀವಭಾವನೆಯು |
ದೇವರನು ನಂಬಿದರೆ ಮಾನವಗೆ ಕೈವಶವು
ಸಾವು ಬದುಕಿನ ದಾಳ - ಪುಟ್ಟಕಂದ || ೩ ||
ನಾವಿಕನು ದೋಣಿಯನು ಮುನ್ನಡೆಸೆ ಗುರಿಯೆಡೆಗೆ
ದೇವನೇ ತಲಪಿಸುವ ಇನ್ನೊಂದು ದಡಕೆ |
ಹಾವಿನೊಲು ಪೊರೆಕಳಚಿ ಕಳ್ಳಾಟವಾಡದರೆ
ಭಾವನಗೆ ಬಲವಿಹುದೆ - ಪುಟ್ಟಕಂದ || ೪ ||
ಹಾಲು ಮೊಸರಾಗಿ ಬೆಣ್ಣೆ ಘೃತ ಮಜ್ಜಿಗೆ ಸಿಗಲು
ಮೇಲೆ ಪರಿಶುದ್ಧ ಪರಿಮಳದ ಬಿಳಿಯಿಹುದು |
ಸಾಲುಕಷ್ಟವೆ ಬರಲು ಸೊರಗದಿಹ ಮನುಜನಿಗೆ
ಕಾಲವೊಳಿತೆಸಗುವುದು - ಪುಟ್ಟಕಂದ || ೫ ||
ಕಾಮಕ್ರೋಧವ ಮಣಿಸಿ ಧೇನುಗಳ ಸಲಹಿದರೆ
ಧಾಮದಲಿ ಬಲುಸುಖವು ಒಲಿದು ಬರಬಹುದು |
ರಾಮಚಂದ್ರನ ನೆನೆಯೆ ರಾಕ್ಷಸತೆ ಅಳಿಯುವುದು
ಸೋಮಶೇಖರ ಹರಸೆ - ಪುಟ್ಟಕಂದ || ೬ ||
( ಗಜಪ್ರಾಸವಿರುವ ಛಂದೋಬದ್ಧ ಆಶು ಮುಕ್ತಕಗಳು)
ರಚನೆ: ವಿ.ಬಿ.ಕುಳಮರ್ವ , ಕುಂಬ್ಳೆ
ರಾಗಸಂಯೋಜನೆ ಮಾಡಿ ಹಾಡಿದವರು ಕಲಾಶ್ರೀ ವಿದ್ಯಾಶಂಕರ್ ಮಂಡ್ಯ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ