ಬಬ್ರುವಾಹನ ಸಿನಿಮಾದಲ್ಲಿ ಅರ್ಜುನ ಪಾತ್ರದ 'ಆರಾಧಿಸುವೆ ಮದನಾರಿ..' ಹಾಡಿನ ದೃಶ್ಯ ನೋಡಿದವರಿಗೆ, ಸಂಗೀತದ ಗಾಯನ ಮತ್ತು ನಾಲ್ಕು ಪಕ್ಕವಾದ್ಯ- ಮೃದಂಗ, ವೀಣೆ, ಕೊಳಲು ಹಾಗೂ ಘಟಂ- ನುಡಿಸುವ ವಿಭಿನ್ನ ಕಾಸ್ಟೂಮ್ಸ್, ವಿಭಿನ್ನ ಆಂಗಿಕ ಅಭಿನಯದ ಒಂದು ವಿಶಿಷ್ಟ ದೃಶ್ಯ ಕಾವ್ಯದ ಡಾ.ರಾಜ್‌ಕುಮಾರ್ ಕಣ್ಣು ಮುಂದೆ ಬರುತ್ತಾರೆ. ಡಾ.ರಾಜ್‌ಕುಮಾರ್ ಅವರನ್ನು ಐದು ವಿವಿಧ ಭಂಗಿಗಳಲ್ಲಿ ತೋರಿಸಿರುವ ಅಪರೂಪದ ದೃಶ್ಯವನ್ನು ಯಾರೂ ಮರೆಯುವುದಕ್ಕೆ ಸಾಧ್ಯವಿಲ್ಲ. ಒಬ್ಬ ರಾಜ್‌ಕುಮಾರ್ ಹಾಡುತ್ತಾ ಸ್ವರಗಳ ತಾಳ ಹಾಕುತ್ತಾ ಹೋದಂತೆಲ್ಲ ಉಳಿದ ರಾಜ್‌ಕುಮಾರ್ ಪಾತ್ರಗಳು ವಾದ್ಯ ಮೇಳದ ಸಾಥ್ ಕೊಡುವಂತೆ ಚಿತ್ರಿಸಿದ ಆ ದೃಶ್ಯವನ್ನು ಶಬ್ದಗಳಲ್ಲಿ ಬರ್ಣಿಸಲು ಸಾಧ್ಯವಿಲ್ಲ.
ಎವರ್ ಗ್ರೀನ್ ಹಾಡದು. ಬಬ್ರುವಾಹನ ಚಿತ್ರ ತಯಾರಾಗಿದ್ದು 1974ರಲ್ಲಿ.
**
ಯಕ್ಷಗಾನ ತಾಳಮದ್ದಳೆಯಲ್ಲಿ ಬಬ್ರುವಾಹನ ದೃಶ್ಯ ವೈಭವ ರೀತಿಯಲ್ಲಿ ಒಂದು ಪ್ರಯೋಗ ನಡೆದಿದೆ!!
ಒಂದು ಗಂಟೆ ಇಪ್ಪತ್ನಾಲ್ಕು ನಿಮಿಷಗಳಲ್ಲಿ 'ಕೃಷ್ಣ ಸಂಧಾನ ಪೀಠಿಕೆ' ಎಂಬ ಇಡೀ ಒಂದು ತಾಳ ಮದ್ದಳೆ ಪ್ರಸಂಗವನ್ನು ಒಬ್ಬ ವ್ಯಕ್ತಿಯ ಭಾಗವತಿಕೆ, ಅವರೇ ಮದ್ದಳೆ ನುಡಿಸುವಿಕೆ, ಅವರೇ ಮುಮ್ಮೇಳ ಪಾತ್ರದ ಕೃಷ್ಣ, ದ್ರೌಪದಿ, ಭೀಮನ ಪಾತ್ರಗಳನ್ನು ನಿರ್ವಹಿಸುವುದನ್ನು ಚಿತ್ರೀಕರಿಸಿ, ತಾಂತ್ರಿಕ ಅವಕಾಶಗಳನ್ನು ಬಳಸಿಕೊಂಡು ದೃಶ್ಯ ವೈಭವಗಳನ್ನು ಕಟ್ಟಿ ಪ್ರಸ್ತುತ ಪಡಿಸಿರುವುದು ಶ್ರೀಯುತ ಭಾರ್ಗವ ಹೆಗ್ಗೋಡು.
ತಾಳಮದ್ದಳೆ ಕಲಾ ಪ್ರ'ಪಂಚ'ದಲ್ಲಿ ಮೊದಲ ವೇಷಧಾರಿಯಾದ ಭಾಗವತರು, 'ಪಂಚ'ಮಸ್ವರದ ಶ್ರುತಿಯಲ್ಲಿ ಮದ್ದಳೆಯನ್ನು ಮಾತನಾಡಿಸುವ ಮದ್ದಳೆವಾಕರು, 'ಪಂಚ' ಪಾಂಡವರಲ್ಲಿ ಒಬ್ಬನಾದ ಭೀಮ, 'ಪಂಚ'ಪುರುಷರ ವಲ್ಲಭೆ ಪಾಂಚಾಲಿ, ಪ್ರ'ಪಂಚ'ದ ದುಷ್ಟರ ಹರಣಕ್ಕಾಗಿಯೇ ಪಾಂಚಾಲಿಯ ಸೋದರನಾಗಿ ಅವತಾರ ಎತ್ತಿದ ಕೃಷ್ಣ ಹೀಗೆ ಪಂಚ ಪಾತ್ರಗಳನ್ನು ಶ್ರೀಯುತ ಭಾರ್ಗವ ಹೆಗ್ಗೋಡು ನಿರ್ವಹಿಸಿದ್ದಾರೆ. ಕತೆ 'ಪಂಚ'ಮ ವೇದದ್ದು!!
ಈ ಎಲ್ಲ 'ಪಂಚ' ಪಾತ್ರಗಳನ್ನು ಒಬ್ಬರೇ ನಿರ್ವಹಿಸಿ ತಾಳಮದ್ದಳೆ ಎಂಬ 'ಪಂಚಾ'ಮೃತ ಮಾಡಿ ಯೂಟೂಬ್ ಎಂಬ 'ಪಂಚ'ಪಾತ್ರೆಯಲ್ಲಿ ತುಂಬಿಸಿ ಇರಿಸಿದ್ದಾರೆ!!
ಏಕ ವ್ಯಕ್ತಿಯೇ ಏಕ ಕಾಲದಲ್ಲಿ ಒಂದೇ ವೇದಿಕೆಯಲ್ಲಿ ಎರಡು, ಮೂರು, ನಾಲ್ಕು ವಿಭಿನ್ನ ಭಂಗಿಗಳಲ್ಲಿ, ಪಾತ್ರಗಳಲ್ಲಿ ವರ್ಚುಯಲ್ ಆಗಿ ಕಾಣಿಸಿಕೊಳ್ಳುವಂತೆ ಸಂಯೋಜಿಸಿರುವ ಪ್ರಯೋಗ ನಿಜವಾಗಿಯೂ ಅದ್ಭುತ.
ತಾಳಮದ್ದಳೆಯಲ್ಲಿ ಅರ್ಥಧಾರಿಗಳಿಗೆ ಪಂಚೆ, ಷರಟು, ಶಲ್ಯ ಮತ್ತು ಹಿಮ್ಮೇಳ ಕಲಾವಿದರಿಗೆ ಇವುಗಳ ಜೊತೆಗೆ ತಲೆಗೆ ಮುಂಡಾಸು- ಇದು ಸಾಮಾನ್ಯ ಕಾಸ್ಟೂಮ್ಸ್. ಇವುಗಳಲ್ಲೇ ಒಂದಿಷ್ಟು ವೈವಿಧ್ಯತೆ ಮಾಡಿ, ಪಾತ್ರಗಳಲ್ಲಿ ವಿಭಿನ್ನತೆ ಕಾಣುವಂತೆ ಮಾಡಿರುವುದು ಸೊಗಸಾಗಿದೆ. ಮಾತು, ಪದ್ಯಗಳನ್ನು ಹೇಳುವಾಗ, ಮದ್ದಳೆ ನುಡಿಸುವಾಗ ಎಲ್ಲ ಕಡೆಯಲ್ಲೂ ಸಹಜವಾಗಿ ಮೂಡುವಂತೆ ಸಂಯೋಜಿಸಿರುವುದು ಚಂದವಾಗಿದೆ.
ಆಡಿಯೋ ಮತ್ತು ವಿಡಿಯೋ ಕ್ಲಾರಿಟಿಯೂ ಉತ್ತಮವಾಗಿದೆ. ತಂತ್ರಜ್ಞಾನ ಬಳಸಿಕೊಂಡು ಪ್ರಸ್ತುತಪಡಿಸಿದ, ನೋಡಬೇಕಾದ ಒಂದು ಉತ್ತಮ ತಾಳ ಮದ್ದಳೆ ಪ್ರಸಂಗ. ನೋಡಿ. ನೋಡಿ ಸವಿಯಿರಿ.
ಈ 'ಪಂಚಾ'ಮೃತ ತಾಳಮದ್ದಳೆಯನ್ನು ಹಸ್ತದ ಜಂಗಮವಾಣಿಗೆ ಇಳಿಸಿಕೊಳ್ಳಲು ಉದ್ದರಣೆ (ಯೂಟೂಬ್ ಕೊಂಡಿ) ಕೆಳಗಿದೆ!!
ತೀರ್ಥವನ್ನು ಕಣ್ಣು ಕಿವಿಗಳು ಕುಡಿಯಲಿ!! ಕುಡಿಯುತ್ತ.. ಕುಡಿಯುತ್ತ...'ಚಿನ್ಮಯ ಭಾವ ತುಂಬುತ ಜೀವ ಆನಂದ ಆನಂದ ಆನಂದವಾಗಲಿ..!!
ಅರವಿಂದ ಸಿಗದಾಳ್, ಮೇಲುಕೊಪ್ಪ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق