ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಹಿಡಿ- ನುಡಿ (ದಶ ಮುಕ್ತಕಗಳು) ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Adಸಾಧಕರನನುಕರಿಸವರ ಚಿಂತನೆಯ ತಿಳಿದು  

ಬೋಧಕರ ಗೌರವಿಸು ಪಾಂಡಿತ್ಯವರಿತು |  

ಭೇದತೋರುವ ಜನರ ದೂರವಿರಿಸಲು ಬೇಕು  

ವೇದವೋದುತ ನೀನು - ಪುಟ್ಟಕಂದ || ೧ ||  

       

ನಾವು ಬದುಕಲು ಬೇಕು ಇತರರನು ಬದುಕಿಸುತ  

ಭಾವನೆಯ ಸಾಗರದ ವಾತ್ಸಲ್ಯ ತೋರಿ |  

ನೋವ ಮರೆಸಲು ಬೇಕು ಕಷ್ಟದಲಿ ಭುಜಕೊಟ್ಟು  

ಓವಿ ಸಲಹುತಲವರ - ಪುಟ್ಟಕಂದ || ೨ || 


ಅಳುನುಂಗಿ ನಗಬೇಕು ಅನಿವಾರ್ಯವೆಂದೆನಿಸೆ  

ತಳತನಕ ಶೋಧಿಸುತ ನಿಜವ ತಿಳಿಯಲಿಕೆ | 

ಒಳಮನದಿ ಚಿಂತಿಸುತ ಸತ್ಯವನು ಹುಡುಕಿದರೆ  

ಗೆಳೆತನವು ವೃದ್ಧಿಸುಗು - ಪುಟ್ಟಕಂದ || ೩ ||  


ಕಲೆಗಿರದು ಜಾತಿಮತ ಭಾಷೆಗಳ ತಡೆಬೇಲಿ  

ಬಲೆಯನೇ ಹರಿದೊಗೆವ ಸಾಮರ್ಥ್ಯವದಕೆ |  

ನೆಲಜಲವನೊಂದೆಡೆಗೆ ತರುವ ಕಸುವದಕಿರಲು  

ನೆಲೆಯನೆಂತರಿಯುವೆಯೊ - ಪುಟ್ಟಕಂದ || ೪ || 


ಮಾನಸಿಕ ದೈಹಿಕದ ಜೀವಗಳು ಜತೆಯಿರಲು  

ಮಾನವನ ಬದುಕಿನಲಿ ಸಾರ್ಥಕ್ಯವಿಹುದು | 

ಸಾನುರಾಗದಿ ಬಾಳಹಾದಿಯಲಿ ಸಾಗಿದರೆ  

ಧೇನುಸಖ ಹರಸುವನು - ಪುಟ್ಟಕಂದ || ೫ ||  


ಮನುಜರಿಗೆ ಬಲುಸುಲಭ ಸಂಬಂಧ ಕಳಚಲಿಕೆ  

ದನುಜತನವನು ತೋರಿ ವೈರ ಬೆಳೆಸಲಿಕೆ |  

ಮನದೊಳಗೆ ಕುತ್ಸಿತವ ತೋರಿ ಹೋರಾಡಿದರೆ 

ಶುನಕದಿಂ ಕಡೆಯಕ್ಕು - ಪುಟ್ಟಕಂದ || ೬ ||  


ಕಷ್ಟಗಳ ಮೆಟ್ಟದವ ಸುಪ್ಪತ್ತಿಗೇರುವನೆ  

ಇಷ್ಟಾರ್ಥ ಸಾಧಿಸಲು ಯೋಗ್ಯನೆನಿಸುವನೆ | 

ನಷ್ಟಗಳ ಸಾಲಿನಲಿ ಮೃಷ್ಟಾನ್ನ ಉಣ್ಣುವನೆ   

ನಿಷ್ಠೆಯನು ಮರೆತಿರಲು - ಪುಟ್ಟಕಂದ || ೭ || 


ಧರ್ಮವನು ಮೀರಿ ಧನಗಳಿಸೆ ನೆಮ್ಮದಿಯಿರದು  

ಕರ್ಮಸಾಧನೆಯ ಮಾರ್ಗದೊಳು ಸುಖವಿರದು |  

ನಿರ್ಮಲದ ಹೃನ್ಮನದಿ ಕಾಯಕವನೆಸಗಿದರೆ  

ಕರ್ಮಡುವ ಜಲಸೊದೆಯು - ಪುಟ್ಟಕಂದ || ೮ ||  


ಭಾವಶುದ್ಧದಲಿ ಮನದನುಭಾವ ಹೊರಸೂಸೆ  

ಯಾವಮಾತಿಗು ಸಮವಿರದ ಮಮತೆಯಿಹುದು |  

ಬೋವ ಭಾವರ ಮಾತು ಸಂಬಂಧ ಮೀರಿದುದು 

ಸಾವಕಾಶದಿ ನೋಡು - ಪುಟ್ಟಕಂದ || ೯ ||   


ಭವಿತವ್ಯವನು ಊಹಿಸಲಸದಳವೆಂದೆನಿಸೆ  

ಬುವಿಯೊಳಗೆ ಭವಿತವ್ಯ ಸೃಷ್ಟಿಸಲು ಸಾಧ್ಯ | 

ಸವಿಸೊಗದ ಬಾಳು ಮನುಜನಿಗೊಲಿದು ಬರುವುದೆನೆ  

ಭವಿಗಳಿಗೆ ಸಂತಸವು - ಪುಟ್ಟಕಂದ || ೧೦ || 


( ಗಜ , ಗಜ , ಸಿಂಹ , ಸಿಂಹ , ಗಜ , ಸಿಂಹ , ಶರಭ , ಶರಭ , ಗಜ , ಸಿಂಹಪ್ರಾಸಂಗಳಿಂದ ಕೂಡಿದ ಛಂದೋಬದ್ಧ ಆಶು ದಶಮುಕ್ತಕಗಳು) 

ರಚನೆ: ವಿ.ಬಿ.ಕುಳಮರ್ವ, ಕುಂಬ್ಳೆ.

ಗಾಯನ: ಬಾಲಕೃಷ್ಣ ಆಚಾರ್ಯ ಪುತ್ತಿಗೆ


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

ನವೀನ ಹಳೆಯದು