ಆಲಿಸಿ: ಕನಕ-ನಮನ-ಗಾಯನ
ಸಾಹಿತ್ಯ: ಲಕ್ಷ್ಮೀ ವಿ. ಭಟ್, ಮಂಜೇಶ್ವರ
ಸಂಗೀತ: ಅನುಪಮಾ ಮಂಜುನಾಥ
ಕನಕ- ನಮನ-ಗಾಯನ
ಬೀರಪ್ಪ ಬಚ್ಚಮ್ಮ ವೀರಸುತ ತಿಮ್ಮಪ್ಪ
ಸಾರಿಹರು ಹರಿದಾಸ ಸಾಹಿತ್ಯವ|
ದಾರಿಯನು ತೋರುತ್ತ ಮೇರುತನ ನಿಷ್ಠೆಯಲಿ
ಸೇರಿಹನು ಕೃಷ್ಣನಾ ಹೃದಯದಲ್ಲಿ||೧||
ಕ್ರಾಂತಿಯನು ಮಾಡುತ್ತ ಶಾಂತಿಯನು ಸಾರುತ್ತ
ಕಾಂತಿಯನು ನೀಡಿಹರು ಕಣ್ಣು ತೆರೆಸಿ|
ಭ್ರಾಂತಿಯನು ಕಿತ್ತೊಗೆದು ಕಾಂತನನು ನೆನೆಯುತ್ತ
ಕಾಂತೆಯನು ಮರೆತಿಹನು ವೈರಾಗ್ಯದಿ||೨||
ಉಪ್ಪರಿಗೆ ಮನೆಮೋಹ ಕೊಪ್ಪರಿಗೆ ಹೊನ್ನಿರಲು
ಕುಪ್ಪಳಿಸಿ ನೆಗೆಯದೆಯೆ ದಾನನೀಡಿ |
ಅಪ್ಪಿರುವ ಬಡತನಕೆ ಕಪ್ಪುರದ ತೆರದಲ್ಲಿ
ಬಪ್ಪ ದುರಿತವನಾಶ ಮಾಡುತ್ತಲಿ||೩||
ಜಾತಿಯಲಿ ಕೀಳೆಂದು ಸೋತಿರುವ ಹೃದಯಗಳ
ಭೀತಿಯನು ಕಳೆದಿಹನು ಕನಕದಾಸ|
ಪ್ರೀತಿಯನು ತೋರುತ್ತ ಮಾತಿನಲಿ ನಯವಾಗಿ
ಹೂತಿರುವ ಕುಲಧರ್ಮ ನಾಶಗೈದು||೪||
ಮೇರು ಭಕ್ತಿಯ ತೋರಿ ನೇರ ನಡೆಯಲಿ ಸಾಗಿ
ಸಾರಿಹನು ಹರಿದಾಸ ಸಾಹಿತ್ಯವ|
ಕೇರಿಕೇರಿಯ ತಿರುಗಿ ಸಾರಸತ್ವವನುಣಿಸಿ
ಪಾರುಮಾಡಲು ಬೇಡಿ ತಾನ್ ಹರಿಯನು ||೫||
ಕಾಂತ - ಒಡೆಯ (ಶ್ರೀಹರಿ)
ಕಾಂತೆ - ಮಡದಿ, ಸಂಪತ್ತು.
-ಲಕ್ಷ್ಮೀ ವಿ ಭಟ್, ಮಂಜೇಶ್ವರ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ