॥ ಶ್ರೀರಾಮಭುಜಂಗಪ್ರಯಾತಸ್ತೋತ್ರಮ್ ॥
ವಿಶುದ್ಧಂ ಪರಂ ಸಚ್ಚಿದಾನಂದರೂಪಂ
ಗುಣಾಧಾರಮಾಧಾರಹೀನಂ ವರೇಣ್ಯಮ್ ।
ಮಹಾಂತಂ ವಿಭಾಂತಂ ಗುಹಾಂತಂ ಗುಣಾಂತಂ
ಸುಖಾಂತಂ ಸ್ವಯಂ ಧಾಮ ರಾಮಂ ಪ್ರಪದ್ಯೇ ॥1॥
ಪರಮಶುದ್ಧ, ಸತ್ ಚಿತ್ ಆನಂದ ಸ್ವರೂಪ, ತ್ರಿಗುಣಗಳಿಗೆ ಆಧಾರ, ಆಧಾರವಿಲ್ಲದೆಯೇ ಇರುವವ, ಸರ್ವಶ್ರೇಷ್ಠ, ಮಹಾತ್ಮ, ಬೆಳಗುವವ, ರಹಸ್ಯಮಯ, ತ್ರಿಗುಣಾತೀತ, ಸುಖಮಯ, ತಾನೇ ನೆಲೆಯಾದವ - ರಾಮ. ಅವನಿಗೆ ಶರಣು.
ಶಿವಂ ನಿತ್ಯಮೇಕಂ ವಿಭುಂ ತಾರಕಾಖ್ಯಂ
ಸುಖಾಕಾರಮಾಕಾರಶೂನ್ಯಂ ಸುಮಾನ್ಯಮ್।
ಮಹೇಶಂ ಕಲೇಶಂ ಸುರೇಶಂ ಪರೇಶಂ
ನರೇಶಂ ನಿರೀಶಂ ಮಹೀಶಂ ಪ್ರಪದ್ಯೇ ॥2॥
ಮಂಗಲಮಯ, ಶಾಶ್ವತ, ವಿಭು, ತಾರಕನೆನಿಸಿಕೊಂಡವ, ಸುಖದ ಸ್ವರೂಪ, ನಿರಾಕಾರ, ಮಾನನೀಯ, ಮಹಾಧಿಪತಿ, ಕಲಾಧಿಪತಿ, ಸುರಾಧಿಪತಿ, ಮನುಜರ ಅಧಿಪತಿ, ಭೂಮಂಡಲದ ಅಧಿಪತಿ, ಅಧಿಪತಿಗಳ ಅಧಿಪತಿ, ತನಗೆ ಅಧಿಪತಿಯಿಲ್ಲದವ - ಅವನಿಗೆ ಶರಣು.
ಯದಾವರ್ಣಯತ್ಕರ್ಣಮೂಲೇಽಂತಕಾಲೇ
ಶಿವೋ ರಾಮ ರಾಮೇತಿ ರಾಮೇತಿ ಕಾಶ್ಯಾಮ್ ।
ತದೇಕಂ ಪರಂ ತಾರಕಬ್ರಹ್ಮರೂಪಂ
ಭಜೇಽಹಂ ಭಜೇಽಹಂ ಭಜೇಽಹಂ ಭಜೇಽಹಮ್ ॥ 3 ॥
ಶಿವನು ಅಂತ್ಯಕಾಲದಲ್ಲಿ - ಕಾಶಿಯಲ್ಲಿ - ಕಿವಿಯಲ್ಲಿ ‘ರಾಮ ರಾಮ’ ಎಂದು ಗುನುಗುನಿಸುತ್ತಾನೆ. ಆ ತಾರಕಬ್ರಹ್ಮರೂಪನಾದ, ಏಕೈಕನಾದ, ಪರಮಾತ್ಮನನ್ನು ಭಜಿಸುತ್ತೇನೆ, ಭಜಿಸುತ್ತೇನೆ, ಭಜಿಸುತ್ತೇನೆ.
ಮಹಾರತ್ನಪೀಠೇ ಶುಭೇ ಕಲ್ಪಮೂಲೇ
ಸುಖಾಸೀನಮಾದಿತ್ಯಕೋಟಿಪ್ರಕಾಶಮ್ ।
ಸದಾ ಜಾನಕೀಲಕ್ಷ್ಮಣೋಪೇತಮೇಕಂ
ಸದಾ ರಾಮಚಂದ್ರಂ ಭಜೇಽಹಂ ಭಜೇಽಹಮ್ ॥ 4 ॥
ರಾಮಚಂದ್ರನು ಶುಭವಾದ ಕಲ್ಪವೃಕ್ಷದ ಅಡಿಯಲ್ಲಿರುವ ಮಹಾರತ್ನದ ಪೀಠದಲ್ಲಿ ಸುಖವಾಗಿ ಆಸೀನನಾಗಿದ್ದಾನೆ. ಸದಾಕಾಲವೂ ಜಾನಕಿ ಮತ್ತು ಲಕ್ಷ್ಮಣರೊಂದಿಗಿರುತ್ತಾನೆ. ಏಕೈಕನವನು, ಕೋಟಿ ಸೂರ್ಯರ ಪ್ರಕಾಶವುಳ್ಳವನು. ಅಂತಹವನನ್ನು ನಾನು ಸದಾಕಾಲವೂ ಭಜಿಸುತ್ತೇನೆ, ಭಜಿಸುತ್ತೇನೆ.
ಕ್ವಣದ್ರತ್ನಮಂಜೀರಪಾದಾರವಿಂದಂ
ಲಸನ್ಮೇಖಲಾಚಾರುಪೀತಾಂಬರಾಢ್ಯಮ್ ।
ಮಹಾರತ್ನಹಾರೋಲ್ಲಸತ್ಕೌಸ್ತುಭಾಂಗಂ
ನದಚ್ಚಂಚರೀಮಂಜರೀಲೋಲಮಾಲಮ್ ॥ 5 ॥
ಕಾಲಲ್ಲಿ ಗಲ್ ಎನ್ನುವ ಕಾಲೊಂದಿಗೆ, ಎದೆಯಲ್ಲಿ ಮಹಾರತ್ನಗಳ ಹಾರದಿಂದ ಸೊಗಯಿಸುವ ಕೌಸ್ತುಭ,
ಕೊರಳಲ್ಲಿ ಅತ್ತಿತ್ತ ಅಲ್ಲಾಡುತ್ತಾ ದುಂಬಿಗಳನ್ನು ಸೆಳೆಯುವ ಹೂಮಾಲೆ, ಹೊಳೆಯುವ ಸೊಂಟದ ಡಾಬಿನಿಂದಾಗಿ ಮತ್ತಷ್ಟು ಚೆಲುವಾದ ಪೀತಾಂಬರ - ಇದನ್ನೆಲ್ಲ ಧರಿಸಿದ ರಾಮಚಂದ್ರನನ್ನು ನಾನು ಸದಾಕಾಲವೂ ಭಜಿಸುತ್ತೇನೆ, ಭಜಿಸುತ್ತೇನೆ.
ಲಸಚ್ಚಂದ್ರಿಕಾಸ್ಮೇರಶೋಣಾಧರಾಭಂ
ಸಮುದ್ಯತ್ಪತಂಗೇಂದುಕೋಟಿಪ್ರಕಾಶಮ್ ।
ನಮದ್ಬ್ರಹ್ಮರುದ್ರಾದಿಕೋಟೀರರತ್ನ-
ಸ್ಫುರತ್ಕಾಂತಿನೀರಾಜನಾರಾಧಿತಾಂಘ್ರಿಮ್ ॥ 6 ॥
ಕೆಂಪು ತುಟಿಗಳು ಬೆಳದಿಂಗಳಿನಂತೆ ಹೊಳೆಯುತ್ತಿವೆ. ಕೋಟಿ ಸೂರ್ಯ-ಚಂದ್ರರ ಹೊಳಪಿನಿಂದವನು ಬೆಳಗುತ್ತಿದ್ದಾನೆ. ನಮಸ್ಕರಿಸಿದ ಬ್ರಹ್ಮ-ರುದ್ರ ಮೊದಲಾದವರ ಕಿರೀಟಗಳ ಕೋಟಿ ರತ್ನಗಳ ಹೊಳೆವ ಕಾಂತಿಯಿಂದ ಅವನ ಪಾದಕ್ಕೆ ನೀರಾಜನದ ಆರಾಧನೆಯೇ ಆಗಿದೆ. ಅಂತಹ ರಾಮಚಂದ್ರನನ್ನು ನಾನು ಸದಾಕಾಲವೂ ಭಜಿಸುತ್ತೇನೆ, ಭಜಿಸುತ್ತೇನೆ.
ಪುರಃ ಪ್ರಾಂಜಲೀನಾಂಜನೇಯಾದಿಭಕ್ತಾನ್
ಸ್ವಚಿನ್ಮುದ್ರಯಾ ಭದ್ರಯಾ ಬೋಧಯಂತಮ್ ।
ಭಜೇಽಹಂ ಭಜೇಽಹಂ ಸದಾ ರಾಮಚಂದ್ರಂ
ತ್ವದನ್ಯಂ ನ ಮನ್ಯೇ ನ ಮನ್ಯೇ ನ ಮನ್ಯೇ ॥ 7 ॥
ಎದುರಿನಲ್ಲಿ ಆಂಜನೇಯ ಮೊದಲಾದ ಭಕ್ತರು ಅಂಜಲಿಬದ್ಧರಾಗಿ ಕುಳಿತಿದ್ದಾರೆ. ಅವರಿಗೆ ರಾಮಚಂದ್ರನು ಮಂಗಲಮಯವಾದ ತನ್ನ ಚಿನ್ಮುದ್ರೆಯಿಂದ ಉಪದೇಶವನ್ನು ಮಾಡುತ್ತಿದ್ದಾನೆ. ಅವನನ್ನು ನಾನು ಸದಾಕಾಲವೂ ಭಜಿಸುತ್ತೇನೆ, ಭಜಿಸುತ್ತೇನೆ.
ನಿನ್ನನ್ನಲ್ಲದೆ ಇನ್ನಾರನ್ನೂ ನಾನರಿಯೆ ನಾನರಿಯೆ ನಾನರಿಯೆ.
ಯದಾ ಮತ್ಸಮೀಪಂ ಕೃತಾಂತಃ ಸಮೇತ್ಯ
ಪ್ರಚಂಡಪ್ರತಾಪೈರ್ಭಟೈರ್ಭೀಷಯೇನ್ಮಾಮ್ ।
ತದಾವಿಷ್ಕರೋಷಿ ತ್ವದೀಯಂ ಸ್ವರೂಪಂ
ತದಾಪತ್ಪ್ರಣಾಶಂ ಸಕೋದಂಡಬಾಣಮ್ ॥ 8 ॥
ಯಮನು ನನ್ನ ಬಳಿಗೆ ಬಂದು, ಪ್ರಚಂಡ ಪ್ರತಾಪದ ತನ್ನ ದೂತರಿಂದ ನನ್ನನ್ನು ಹೆದರಿಸಿಯಾನು. ಆಗ ನೀನು ಕೋದಂಡ ಧನುಸ್ಸು ಮತ್ತು ಬಾಣಗಳನ್ನು ಹಿಡಿದ, ಆಪತ್ತನ್ನು ನಿವಾರಿಸುವ ನಿನ್ನ ಸ್ವರೂಪವನ್ನು ಪ್ರಕಟಿಸು.
ನಿಜೇ ಮಾನಸೇ ಮಂದಿರೇ ಸನ್ನಿಧೇಹಿ
ಪ್ರಸೀದ ಪ್ರಸೀದ ಪ್ರಭೋ ರಾಮಚಂದ್ರ ।
ಸಸೌಮಿತ್ರಿಣಾ ಕೈಕೇಯೀನಂದನೇನ
ಸ್ವಶಕ್ತ್ಯಾನುಭಕ್ತ್ಯಾ ಚ ಸಂಸೇವ್ಯಮಾನ ॥9॥
ಭರತ ಮತ್ತು ಶತ್ರುಘ್ನರಿಂದ ಭಕ್ತಿಪೂರ್ವಕವಾಗಿ ಯಥಾಶಕ್ತಿ ಸೇವಿಸಲ್ಪಡುವ ರಾಮಚಂದ್ರ ಪ್ರಭುವೇ, ಪ್ರಸನ್ನನಾಗು - ಪ್ರಸನ್ನನಾಗು. ನನ್ನ ಮಾನಸ ಮಂದಿರದಲ್ಲಿ ಸಾನ್ನಿಧ್ಯವನ್ನು ಕರುಣಿಸು.
ಸ್ವಭಕ್ತಾಗ್ರಗಣ್ಯೈಃ ಕಪೀಶೈರ್ಮಹೀಶೈ-
ರನೀಕೈರನೇಕೈಶ್ಚ ರಾಮ ಪ್ರಸೀದ ।
ನಮಸ್ತೇ ನಮೋಽಸ್ತ್ವೀಶ ರಾಮ ಪ್ರಸೀದ
ಪ್ರಶಾಧಿ ಪ್ರಶಾಧಿ ಪ್ರಕಾಶಂ ಪ್ರಭೋ ಮಾಮ್ ॥ 10 ॥
ಪ್ರಭು ರಾಮ, ನಿನ್ನ ಅಗ್ರಗಣ್ಯ ಭಕ್ತರಾದ ಕಪಿನಾಯಕರು, ರಾಜರು ಮತ್ತು ಅನೇಕ ಸೈನ್ಯದೊಂದಿಗೆ ಮೈದೋರು; ನನ್ನನ್ನು ಪಾಲಿಸು; ಬೆಳಕನ್ನು ಅನುಗ್ರಹಿಸು. ನಿನಗೆ ನಮಸ್ಕಾರ, ನಮಸ್ಕಾರ.
ತ್ವಮೇವಾಸಿ ದೈವಂ ಪರಂ ಮೇ ಯದೇಕಂ
ಸುಚೈತನ್ಯಮೇತತ್ತ್ವದನ್ಯಂ ನ ಮನ್ಯೇ ।
ಯತೋಽಭೂದಮೇಯಂ ವಿಯದ್ವಾಯುತೇಜೋ-
ಜಲೋರ್ವ್ಯಾದಿಕಾರ್ಯಂ ಚರಂ ಚಾಚರಂ ಚ ॥11॥
ನನಗೆ ನೀನೊಬ್ಬನೇ ಪರದೈವ. ನೀನೇ ಚೈತನ್ಯ. ನೀನಲ್ಲದೇ ಬೇರಾರನ್ನೂ ನಾನರಿಯೆ. ಅಮೇಯವಾದ ಆಕಾಶ, ವಾಯು, ತೇಜಸ್ಸು, ಜಲ, ಭೂಮಿಯೆನ್ನುವ ಚರಾಚರವಾದ ಸೃಷ್ಟಿಯೆಲ್ಲವೂ ನಿನ್ನಿಂದಲೇ.
ನಮಃ ಸಚ್ಚಿದಾನಂದರೂಪಾಯ ತಸ್ಮೈ
ನಮೋ ದೇವದೇವಾಯ ರಾಮಾಯ ತುಭ್ಯಮ್ ।
ನಮೋ ಜಾನಕೀಜೀವಿತೇಶಾಯ ತುಭ್ಯಂ
ನಮಃ ಪುಂಡರೀಕಾಯತಾಕ್ಷಾಯ ತುಭ್ಯಮ್ ॥ 12 ॥
ಸತ್ ಚಿತ್ ಆನಂದ ಸ್ವರೂಪನಾದ ಅವನಿಗೆ ನಮಸ್ಕಾರ. ದೇವದೇವನಾದ ರಾಮ, ನಿನಗೆ ನಮಸ್ಕಾರ. ಜಾನಕಿಯ ಬದುಕಿನೊಡೆಯ, ನಿನಗೆ ನಮಸ್ಕಾರ. ಕಮಲದಂತೆ ವಿಶಾಲವಾದ ಕಣ್ಣುಳ್ಳವನೇ, ನಿನಗೆ ನಮಸ್ಕಾರ.
ನಮೋ ಭಕ್ತಿಯುಕ್ತಾನುರಕ್ತಾಯ ತುಭ್ಯಂ
ನಮಃ ಪುಣ್ಯಪುಂಜೈಕಲಭ್ಯಾಯ ತುಭ್ಯಮ್ ।
ನಮೋ ವೇದವೇದ್ಯಾಯ ಚಾದ್ಯಾಯ ಪುಂಸೇ
ನಮಃ ಸುಂದರಾಯೇಂದಿರಾವಲ್ಲಭಾಯ ॥ 13 ॥
ಭಕ್ತಿಯಿರುವವರಲ್ಲಿ ಅನುರಕ್ತಿಯಿರುವ ನಿನಗೆ ನಮಸ್ಕಾರ. ಅಸಂಖ್ಯ ಪುಣ್ಯಗಳಿಂದ ಮಾತ್ರ ಸಿಗುವ ನಿನಗೆ ನಮಸ್ಕಾರ. ವೇದವೇದ್ಯನಾದ ಆದಿಪುರುಷನಿಗೆ ನಮಸ್ಕಾರ. ಸುಂದರನಾದ ಇಂದಿರೆಯ ವಲ್ಲಭನಿಗೆ ನಮಸ್ಕಾರ.
ನಮೋ ವಿಶ್ವಕರ್ತ್ರೇ ನಮೋ ವಿಶ್ವಹರ್ತ್ರೇ
ನಮೋ ವಿಶ್ವಭೋಕ್ತ್ರೇ ನಮೋ ವಿಶ್ವಭರ್ತ್ರೇ ।
ನಮೋ ವಿಶ್ವನೇತ್ರೇ ನಮೋ ವಿಶ್ವಜೇತ್ರೇ
ನಮೋ ವಿಶ್ವಪಿತ್ರೇ ನಮೋ ವಿಶ್ವಮಾತ್ರೇ ॥14॥
ವಿಶ್ವವನ್ನು ಸೃಷ್ಟಿಸುವವನಿಗೆ ನಮಸ್ಕಾರ; ವಿಶ್ವವನ್ನು ಸಂಹರಿಸುವವನಿಗೆ ನಮಸ್ಕಾರ; ವಿಶ್ವವನ್ನು ಭೋಗಿಸುವವನಿಗೆ ನಮಸ್ಕಾರ; ವಿಶ್ವವನ್ನು ಪಾಲಿಸುವವನಿಗೆ ನಮಸ್ಕಾರ; ವಿಶ್ವದ ಕಣ್ಣಾದವನಿಗೆ ನಮಸ್ಕಾರ; ವಿಶ್ವವನ್ನು ಗೆದ್ದವನಿಗೆ ನಮಸ್ಕಾರ; ವಿಶ್ವದ ತಂದೆಗೆ ನಮಸ್ಕಾರ; ವಿಶ್ವದ ತಾಯಿಗೆ ನಮಸ್ಕಾರ.
ನಮಸ್ತೇ ನಮಸ್ತೇ ಸಮಸ್ತಪ್ರಪಂಚ-
ಪ್ರಭೋಗಪ್ರಯೋಗಪ್ರಮಾಣಪ್ರವೀಣ ।
ಮದೀಯಂ ಮನಸ್ತ್ವತ್ಪದದ್ವಂದ್ವಸೇವಾಂ
ವಿಧಾತುಂ ಪ್ರವೃತ್ತಂ ಸುಚೈತನ್ಯಸಿದ್ಧ್ಯೈ ॥15॥
ಸಮಸ್ತ ಪ್ರಪಂಚದ ಭೋಗ ಮತ್ತು ಯೋಗಗಳ ಪ್ರಮಾಣದ ವಿಷಯದಲ್ಲಿ ಪ್ರವೀಣನಾದವನೇ, ನಿನಗೆ ನಮಸ್ಕಾರ, ನಮಸ್ಕಾರ. ಚೈತನ್ಯದ ಸಿದ್ಧಿಗಾಗಿ ನನ್ನ ಮನಸ್ಸು ನಿನ್ನ ಪಾದವೆರಡರ ಸೇವೆ ಮಾಡಲು ತೊಡಗಿದೆ.
ಶಿಲಾಪಿ ತ್ವದಂಘ್ರಿಕ್ಷಮಾಸಂಗಿರೇಣು-
ಪ್ರಸಾದಾದ್ಧಿ ಚೈತನ್ಯಮಾಧತ್ತ ರಾಮ।
ನರಸ್ತ್ವತ್ಪದದ್ವಂದ್ವಸೇವಾವಿಧಾನಾ-
ತ್ಸುಚೈತನ್ಯಮೇತೇತಿ ಕಿಂ ಚಿತ್ರಮದ್ಯ ॥16॥
ರಾಮ, ಕಲ್ಲು ಕೂಡಾ ನಿನ್ನ ಪಾದಧೂಳಿಯ ಸ್ಪರ್ಶದ ಅನುಗ್ರಹದಿಂದ ಚೈತನ್ಯ ಪಡೆಯಿತಂತೆ. ಹಾಗಿರುವಾಗ ಮನುಷ್ಯನು ನಿನ್ನ ಪಾದವೆರಡರ ಸೇವೆಯಿಂದ ಚೈತನ್ಯವನ್ನು ಪಡೆದುಕೊಳ್ಳುವುದರಲ್ಲಿ ವಿಸ್ಮಯವೇನಿದೆ?
ಪವಿತ್ರಂ ಚರಿತ್ರಂ ವಿಚಿತ್ರಂ ತ್ವದೀಯಂ
ನರಾ ಯೇ ಸ್ಮರಂತ್ಯನ್ವಹಂ ರಾಮಚಂದ್ರ ।
ಭವಂತಂ ಭವಾಂತಂ ಭರಂತಂ ಭಜಂತೋ
ಲಭಂತೇ ಕೃತಾಂತಂ ನ ಪಶ್ಯಂತ್ಯತೋಽಂತೇ ॥ 17 ॥
ರಾಮಚಂದ್ರ, ಪವಿತ್ರವೂ ಅದ್ಭುತವೂ ಆದ ನಿನ್ನ ಚರಿತ್ರೆಯನ್ನು ನಿತ್ಯವೂ ನೆನಪಿಸಿಕೊಳ್ಳುವ ಹಾಗೂ ಪರಿಪಾಲಕನಾದ ನಿನ್ನನ್ನು ಭಜಿಸುವ ಮನುಷ್ಯರು ಭವದಿಂದ ಪಾರಾಗುತ್ತಾರೆ. ಹಾಗಾಗಿ ಕೊನೆಯಲ್ಲಿ ಯಮನನ್ನು ನೋಡದಂತವರಾಗುತ್ತಾರೆ.
ಸ ಪುಣ್ಯಃ ಸ ಗಣ್ಯಃ ಶರಣ್ಯೋ ಮಮಾಯಂ
ನರೋ ವೇದ ಯೋ ದೇವಚೂಡಾಮಣಿಂ ತ್ವಾಮ್ ।
ಸದಾಕಾರಮೇಕಂ ಚಿದಾನಂದರೂಪಂ
ಮನೋವಾಗಗಮ್ಯಂ ಪರಂಧಾಮ ರಾಮ ॥ 18 ॥
ಸತ್ ಸ್ವರೂಪನಾದ, ಏಕೈಕನಾದ, ಚಿದಾನಂದರೂಪನಾದ, ಮನಸ್ಸು ಮತ್ತು ಮಾತುಗಳಿಗೆ ಮೀರಿದ, ಪರಂಧಾಮನಾದ, ದೇವಚೂಡಾಮಣಿಯಾದ ನಿನ್ನನ್ನು ಅರಿತ ಮನುಷ್ಯನು ಪುಣ್ಯ; ಅವನೇ ಗಣ್ಯ; ಅವನು ನನಗೆ ಶರಣ್ಯ.
ಪ್ರಚಂಡಪ್ರತಾಪಪ್ರಭಾವಾಭಿಭೂತ-
ಪ್ರಭೂತಾರಿವೀರ ಪ್ರಭೋ ರಾಮಚಂದ್ರ ।
ಬಲಂ ತೇ ಕಥಂ ವರ್ಣ್ಯತೇಽತೀವ ಬಾಲ್ಯೇ
ಯತೋಽಖಂಡಿ ಚಂಡೀಶಕೋದಂಡದಂಡಃ ॥ 19 ॥
ಪ್ರಚಂಡವಾದ ಪ್ರತಾಪದ ಪ್ರಭಾವದಿಂದ ಅಸಂಖ್ಯ ಶತ್ರುವೀರರನ್ನು ಸೋಲಿಸಿದ ರಾಮಚಂದ್ರ ಪ್ರಭುವೆ, ಅತ್ಯಂತ ಬಾಲ್ಯದಲ್ಲಿಯೇ ಶಿವಧನುಸ್ಸನ್ನು ಮುರಿದ ನಿನ್ನ ಬಲವನ್ನು ಏನೆಂದು ವರ್ಣಿಸಲಿ?
ದಶಗ್ರೀವಮುಗ್ರಂ ಸಪುತ್ರಂ ಸಮಿತ್ರಂ
ಸರಿದ್ದುರ್ಗಮಧ್ಯಸ್ಥರಕ್ಷೋಗಣೇಶಮ್ ।
ಭವಂತಂ ವಿನಾ ರಾಮ ವೀರೋ ನರೋ ವಾ-
ಽಸುರೋ ವಾಽಮರೋ ವಾ ಜಯೇತ್ಕಸ್ತ್ರಿಲೋಕ್ಯಾಮ್ ॥ 20 ॥
ಸಮುದ್ರವನ್ನೇ ಕೋಟೆಯಾಗಿಸಿಕೊಂಡಿದ್ದ ರಾಕ್ಷಸರ ಒಡೆಯ ದಶಮುಖನನ್ನು ಮಕ್ಕಳು - ಮಿತ್ರರು ಸಹಿತವಾಗಿ ಗೆಲ್ಲಲು ನೀನಲ್ಲದೇ ಮೂರು ಲೋಕದ ವೀರರಲ್ಲಿ ನರರಿಗೋ ಅಸುರರಿಗೋ ಸುರರಿಗೋ ಯಾರಿಗೆ ಸಾಧ್ಯವಾದೀತು?
ಸದಾ ರಾಮ ರಾಮೇತಿ ರಾಮಾಮೃತಂ ತೇ
ಸದಾರಾಮಮಾನಂದನಿಷ್ಯಂದಕಂದಮ್ ।
ಪಿಬಂತಂ ನಮಂತಂ ಸುದಂತಂ ಹಸಂತಂ
ಹನೂಮಂತಮಂತರ್ಭಜೇ ತಂ ನಿತಾಂತಮ್ ॥ 21 ॥
ಸದಾಕಾಲವೂ ‘ರಾಮ ರಾಮ’ ಎನ್ನುವ ಆನಂದವೇ ತುಂಬಿದ ರಾಮಾಮೃತವನ್ನು ಕುಡಿಯುವ, ನಮಿಸುವ, ಪ್ರಸನ್ನವಾಗಿ ನಗುವ ಆ ಹನುಮಂತನನ್ನು ಸದಾಕಾಲವೂ ಹೃದಯದಲ್ಲಿ ಭಜಿಸುತ್ತೇನೆ.
ಯತ್ರ ಯತ್ರ ರಘುನಾಥಕೀರ್ತನಂ
ತತ್ರ ತತ್ರ ಕೃತಮಸ್ತಕಾಂಜಲಿಮ್
ಬಾಷ್ಪವಾರಿಪರಿಪೂರ್ಣಲೋಚನಂ
ಮಾರುತಿಮ್ ನಮತ ರಾಕ್ಷಸಾಂತಕಮ್ ||22||
ಸದಾ ರಾಮ ರಾಮೇತಿ ರಾಮಾಮೃತಂ ತೇ
ಸದಾರಾಮಮಾನಂದನಿಷ್ಯಂದಕಂದಮ್ ।
ಪಿಬನ್ನನ್ವಹಂ ನನ್ವಹಂ ನೈವ ಮೃತ್ಯೋ-
ರ್ಬಿಭೇಮಿ ಪ್ರಸಾದಾದಸಾದಾತ್ತವೈವ ॥23॥
ಸದಾಕಾಲವೂ ‘ರಾಮ ರಾಮ’ ಎನ್ನುವ ಆನಂದವೇ ತುಂಬಿದ ರಾಮಾಮೃತವನ್ನು ಕುಡಿಯುವ ನಾನು, ನಿನ್ನ ಅನುಗ್ರಹದಿಂದ ಸಾವಿಗೂ ಹೆದರಲಾರೆ.
ಅಸೀತಾಸಮೇತೈರಕೋದಂಡಭೂಶೈ-
ರಸೌಮಿತ್ರಿವಂದ್ಯೈರಚಂಡಪ್ರತಾಪೈಃ ।
ಅಲಂಕೇಶಕಾಲೈರಸುಗ್ರೀವಮಿತ್ರೈ-
ರರಾಮಾಭಿಧೇಯೈರಲಂ ದೇವತೈರ್ನಃ ॥ 24॥
ಸೀತೆಯೊಂದಿಗೆ ಇರದ, ಕೋದಂಡವನ್ನು ಹಿಡಿಯದ, ಲಕ್ಷ್ಮಣನ ವಂದನೆಗೆ ಪಾತ್ರನಾಗದ, ಪ್ರಚಂಡವಾದ ಪ್ರತಾಪವಿರದ, ಲಂಕೇಶನನ್ನು ಸಂಹರಿಸದ, ಸುಗ್ರೀವನ ಮಿತ್ರನಲ್ಲದ, ರಾಮ ಎಂಬ ಹೆಸರಿಲ್ಲದ ಬೇರೆ ದೇವತೆಗಳು ನಮಗೇಕೆ ಬೇಕು?
ಅವೀರಾಸನಸ್ಥೈರಚಿನ್ಮುದ್ರಿಕಾಢ್ಯೈ-
ರಭಕ್ತಾಂಜನೇಯಾದಿತತ್ತ್ವಪ್ರಕಾಶೈಃ ।
ಅಮಂದಾರಮೂಲೈರಮಂದಾರಮಾಲೈ-
ರರಾಮಾಭಿಧೇಯೈರಲಮ್ ದೇವತೈರ್ನಃ ॥ 25॥
ವೀರಾಸನದಲ್ಲಿ ಕುಳಿತಿರದ, ಚಿನ್ಮುದ್ರೆಯನ್ನು ಧರಿಸದ, ಭಕ್ತರಾದ ಆಂಜನೇಯ ಮೊದಲಾದವರಿಗೆ ತತ್ತ್ವದರ್ಶನ ಮಾಡಿಸದ, ಮಂದಾರ ವೃಕ್ಷದ ಬುಡದಲ್ಲಿ ಕುಳಿತಿರದ, ಮಂದಾರ ಪುಷ್ಪ ಮಾಲೆಯನ್ನು ಧರಿಸಿರದ, ರಾಮನೆನ್ನುವ ಹೆಸರಿರದ ದೇವತೆಗಳು ನಮಗೇಕೆ ಬೇಕು?
ಅಸಿಂಧುಪ್ರಕೋಪೈರವಂದ್ಯಪ್ರತಾಪೈ-
ರಬಂಧುಪ್ರಯಾಣೈರಮಂದಸ್ಮಿತಾಢ್ಯೈಃ।
ಅದಂಡಪ್ರವಾಸೈರಖಂಡಪ್ರಬೋಧೈ-
ರರಾಮಭಿಧೇಯೈರಲಂ ದೇವತೈರ್ನಃ ॥26॥
ಸಮುದ್ರದ ಮೇಲೆ ಸಿಟ್ಟಾಗದ, ವಂದನೀಯವಾದ ಪ್ರತಾಪವಿಲ್ಲದ, ಬಂಧುವಿನೊಂದಿಗೆ ಪ್ರಯಾಣಿಸದ, ಮಂದಹಾಸವಿರದ, ದಂಡಕಾವನಕ್ಕೆ ತೆರಳದ, ಪರಿಪೂರ್ಣ ಜ್ಞಾನಿಯಲ್ಲದ, ರಾಮನೆನ್ನುವ ಹೆಸರಿರದ ದೇವತೆಗಳು ನಮಗೇಕೆ ಬೇಕು?
ಹರೇ ರಾಮ ಸೀತಾಪತೇ ರಾವಣಾರೇ
ಖರಾರೇ ಮುರಾರೇಽಸುರಾರೇ ಪರೇತಿ ।
ಲಪಂತಂ ನಯಂತಂ ಸದಾಕಾಲಮೇವ
ಸಮಾಲೋಕಯಾಲೋಕಯಾಶೇಷಬಂಧೋ ॥ 27 ॥
“ಹರಿ, ರಾಮ, ಸೀತಾಪತಿ, ರಾವಣ ವೈರಿ, ಖರ ವೈರಿ, ಮುರ ವೈರಿ, ಅಸುರ ವೈರಿ, ಪರಮಾತ್ಮ, ಸರ್ವರ ಬಂಧು” ಎಂದು ಸದಾಕಾಲವೂ ಹೇಳುತ್ತಿರುವ ನನ್ನನ್ನು ಅವಲೋಕಿಸು, ಚೆನ್ನಾಗಿ ಅವಲೋಕಿಸು.
ನಮಸ್ತೇ ಸುಮಿತ್ರಾಸುಪುತ್ರಾಭಿವಂದ್ಯ
ನಮಸ್ತೇ ಸದಾ ಕೈಕಯೀನಂದನೇಡ್ಯ ।
ನಮಸ್ತೇ ಸದಾ ವಾನರಾಧೀಶವಂದ್ಯ
ನಮಸ್ತೇ ನಮಸ್ತೇ ಸದಾ ರಾಮಚಂದ್ರ ॥28॥
ಲಕ್ಷ್ಮಣವಂದಿತನಿಗೆ ನಮಸ್ಕಾರ. ಭರತಪೂಜಿತನಿಗೆ ನಮಸ್ಕಾರ. ಸುಗ್ರೀವವಂದಿತನಿಗೆ ನಮಸ್ಕಾರ.ರಾಮಚಂದ್ರನಿಗೆ ನಿತ್ಯವೂ ನಮಸ್ಕಾರ, ನಮಸ್ಕಾರ.
ಪ್ರಸೀದ ಪ್ರಸೀದ ಪ್ರಚಂಡಪ್ರತಾಪ
ಪ್ರಸೀದ ಪ್ರಸೀದ ಪ್ರಚಂಡಾರಿಕಾಲ ।
ಪ್ರಸೀದ ಪ್ರಸೀದ ಪ್ರಪನ್ನಾನುಕಂಪಿನ್
ಪ್ರಸೀದ ಪ್ರಸೀದ ಪ್ರಭೋ ರಾಮಚಂದ್ರ ॥29॥
ಪ್ರಚಂಡ ಪ್ರತಾಪನೇ, ಪ್ರಸನ್ನನಾಗು, ಪ್ರಸನ್ನನಾಗು. ಪ್ರಚಂಡರಾದ ಶತ್ರುಗಳಿಗೆ ಮೃತ್ಯುವಾದವನೇ ಪ್ರಸನ್ನನಾಗು, ಪ್ರಸನ್ನನಾಗು. ಶರಣಾದವರನ್ನು ಅನುಕಂಪದಿಂದ ನೋಡುವವನೇ ಪ್ರಸನ್ನನಾಗು, ಪ್ರಸನ್ನನಾಗು. ಪ್ರಭು ರಾಮಚಂದ್ರನೇ, ಪ್ರಸನ್ನನಾಗು, ಪ್ರಸನ್ನನಾಗು.
ಭುಜಂಗಪ್ರಯಾತಂ ಪರಂ ವೇದಸಾರಂ
ಮುದಾ ರಾಮಚಂದ್ರಸ್ಯ ಭಕ್ತ್ಯಾ ಚ ನಿತ್ಯಮ್।
ಪಠನ್ ಸಂತತಂ ಚಿಂತಯನ್ ಸ್ವಾಂತರಂಗೇ
ಸ ಏವ ಸ್ವಯಂ ರಾಮಚಂದ್ರಃ ಸ ಧನ್ಯಃ ॥30॥
ವೇದದ ಸಾರವೇ ಆದ ಈ ಶ್ರೇಷ್ಠವಾದ ಭುಜಂಗಪ್ರಯಾತವನ್ನು ಸಂತಸದಿಂದ, ರಾಮಚಂದ್ರನ ಮೇಲಿನ ಭಕ್ತಿಯಿಂದ ನಿತ್ಯ ಪಠಿಸುವವನೇ; ತನ್ನ ಅಂತರಂಗದಲ್ಲಿ ಸತತವಾಗಿ ಧ್ಯಾನಿಸುವವನೇ ಸ್ವಯಂ ರಾಮಚಂದ್ರ; ಅವನೇ ಧನ್ಯ.
ಇತಿ ಶ್ರೀಶಂಕರಾಚಾರ್ಯವಿರಚಿತಂ ಶ್ರೀರಾಮಭುಜಂಗಪ್ರಯಾತಸ್ತೋತ್ರಂ ಸಂಪೂರ್ಣಮ್॥
ಗಾಯನ: ವಿದುಷಿ ಶ್ರೀಮತಿ ವಸುಧಾ ಶರ್ಮ
ಭಾವಾನುವಾದ: ವಿದ್ವಾನ್ ಜಗದೀಶ ಶರ್ಮಾ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق