ಆಲಿಸಿ: ಮುಕ್ತಕ- ಗಾಯನ
ಧೀರತಮ್ಮನ ಕಬ್ಬ
ಧೀರತಮ್ಮನ ಕಬ್ಬ ಓದುತ್ತ ಕುಳಿತಿರಲು
ಮಾರುಹೋದೆನದರಾ ಸತ್ತ್ವಸಂಪದಕೆ
ಚಾರುಮತಿಗಾಹಾರವಿರುವಂಥ ಹೊತ್ತಗೆಯು
ದಾರಿತೋರಲು ಜನಕೆ - ಲಕುಮಿರಮಣ ||
ವರಗುರುವು ಕುಳಮರ್ವ ಬರೆದಿರುವ ಮುನ್ನುಡಿಯು
ಅರವಿಂದ ಚೊಕ್ಕಾಡಿಯವರ ಬೆನ್ನುಡಿಯು
ಹಿರಿಕವಿಗಳಿತ್ತಿಹರು ಹಾರೈಕೆ ನುಡಿಗಡಣ
ಮೆರುಗಿತ್ತ ಕಬ್ಬವಿದು - ಲಕುಮಿರಮಣ||
ಒಳ್ನುಡಿಯನೊರೆದಿರುವ ಮುಕ್ತಕವು ಹಲವಿಹುದು
ನಲ್ನುಡಿಯ ಬರಹಗಳು ಮುದವಹುದು ನಮಗೆ
ಬೆಳ್ನುಡಿಯ ನವಿರಾದ ನೀತಿಯಿದೆ ಲೋಗರಿಗೆ
ಸೂಳ್ನುಡಿಯನರ್ಥೈಸೆ - ಲಕುಮಿರಮಣ ||
ಗುರುಭಕ್ತಿ ನಂಬಿಕೆಯು ಬೆಳಕಿನೆಡೆ ಪಯಣವನು
ನೆರವೀವ ಹೃದಯದಲಿ ಸನ್ನಡತೆ ಕಂಡು
ಹಿರಿದಾದ ಕಾಯಿಲೆಗೆ ಔಷಧಿಯ ಪೇಳ್ವಂತೆ
ಬರೆದಿಹರು ಮುಕ್ತಕವ - ಲಕುಮಿರಮಣ||
ಗೌರವದಿ ಮುಕ್ತಕದ ಪುಸ್ತಕವನಿತ್ತಿಹರು
ಸಾರವಡಗಿದೆಯಲ್ಲಿ ಬರಹಗಳ ಮಾಲೆ
ಹಾರವಾಗಿದೆ ತಾಯಿ ಸರಸತಿಯ ಕಂಠಕ್ಕೆ
ಭಾರವಾಗದು ಹಾರ - ಲಕುಮಿರಮಣ ||
ಲಕ್ಷ್ಮೀ ವಿ ಭಟ್, ಮಂಜೇಶ್ವರ
ಕಾಮೆಂಟ್ ಪೋಸ್ಟ್ ಮಾಡಿ