ಉಪಯುಕ್ತ ಪಾಡ್‌ಕಾಸ್ಟ್‌ಗೆ ಸ್ವಾಗತ. ಆಲಿಸಿ, ದೇವರನಾಮ- ಮಧುಕರ ವೃತ್ತಿ ಎನ್ನದು.
ರಚನೆ: ಪುರಂದರ ದಾಸರು
ಸಂಗೀತ, ಗಾಯನ: ಕಲಾಶ್ರೀ ವಿದ್ಯಾಶಂಕರ್, ಮಂಡ್ಯ
ಮಧುಕರ ವೃತ್ತಿ ಎನ್ನದು
ರಾಗ ಭೈರವಿ /ಆದಿ ತಾಳ
ಮಧುಕರ ವೃತ್ತಿ ಎನ್ನದು ಅದು ಬಲು ಚೆನ್ನದು || ಪಲ್ಲವಿ ||
ಪದುಮನಾಭನ ಪಾದಪದುಮ ಮಧುಪವೆಂಬ || ಅನು ಪಲ್ಲವಿ ||
ಕಾಲಿಗೆ ಗೆಜ್ಜೆ ಕಟ್ಟಿ ನೀಲ ವರ್ಣನ ಗುಣ ಆಲಾಪಿಸುತ್ತ ಬಲು ಓಲಗ ಮಾಡುವಂಥ ||೧||
ರಂಗನಾಥನ ಗುಣ ಹಿಂಗದೆ ಪಾಡುತ್ತ ಶೃಂಗಾರ ನೋಡುತ್ತಾ ಕಂಗಳಾನಂದವೆಂಬ ||೨||
ಇಂದಿರಾಪತಿ ಪುರಂದರವಿಠಲನಲ್ಲಿ ಚೆಂದದ ಭಕ್ತಿಯಿಂದಾನಂದವ ಪಡುವಂಥ || ೩ ||
~~~~ * ~~~~
[ಈ ಹಾಡು ಹರಿದಾಸ ದೀಕ್ಷೆಯ ಸ್ವಾರಸ್ಯವನ್ನು ವಿವರಿಸುತ್ತದೆ. ಹರಿದಾಸರು ಲೌಕಿಕರಂತೆ ಯಾವ ಉದ್ಯೋಗವನ್ನೂ ಹಿಡಿಯುವುದಿಲ್ಲ; ಅವರು ಹರಿ ಸಂಕೀರ್ತನ ಮಾಡುತ್ತಾ ಊರೂರು, ಕೇರಿ ಕೇರಿ ಅಲೆದಾಡುತ್ತಾರೆ; ಅವರಿವರು ಕೊಡುವ ಆಹಾರ ಸಾಮಗ್ರಿಗಳನ್ನು ಪಡೆದುಕೊಂಡು ಹೋಗುತ್ತಾರೆ. ಇದನ್ನು ಇಲ್ಲಿ ದುಂಬಿಯ ಅಲೆದಾಟಕ್ಕೆ ಹೋಲಿಸಿದ್ದಾರೆ. ದುಂಬಿಯ ನೆಗೆದಾಟ, ಝೇಂಕಾರಗಳು ಹರಿದಾಸರ ನರ್ತನ-ಗೀತಗಳಿಗೆ ಸಮ. 'ಮಧುಕರ ವೃತ್ತಿ' ಎನ್ನುವುದು ಧರ್ಮಶಾಸ್ತ್ರಗಳಲ್ಲಿ ಆಧ್ಯಾತ್ಮ ನಿಷ್ಥೆಯುಳ್ಳವರಿಗೆ ವಿಹಿತವಾಗಿದೆ. ಮಾಡುವ ಕೆಲಸಕ್ಕೂ ಒಂದು ವೃತ್ತಿ ಗೌರವವನ್ನು ಸಂಪಾದಿಸಿಕೊಡುವ ಸುಂದರ ಪದ ಇದು. ಅಕ್ಕಿಯ ಭಿಕ್ಷೆಯನ್ನು ಪಡೆದು ಹಾಡಿನ ಭಿಕ್ಷೆಯನ್ನು ನೀಡುವ ಕಾಯಕ ಇವರದಾಗಿತ್ತು. ಈ ಸಂಚಾರೀ ಗಾಯಕರ ತಂಡದ ಕಾರ್ಯವನ್ನು ಶ್ಲೇಷೆಯಿಂದ ಪುರಂದರದಾಸರು ಸೊಗಸಾಗಿ ವಿವರಿಸಿದ್ದಾರೆ.]
ಮಧುಕರ ವೃತ್ತಿ- ಮಧುಕರವೆಂದರೆ ಜೇನುನೊಣ (ಭ್ರಮರ). ಅದು ಯಾವೊಂದು ಹೂವಿಗೂ ಅಂಟಿಕೊಳ್ಳದೆ ಹಲವಾರು ಹೂಗಳ ಮೇಲೆ ಕುಳಿತು ಬಂಡನುಂಡು ಒಡನೆಯೇ ಹಾರಿಹೋಗುವಂತೆ ಹರಿದಾಸನೂ ಮನೆ ಮನೆಗೆ ಹೋಗಿ ಉಪದಾನವನ್ನು ಪಡೆದುಕೊಂಡು, ಯಾವ ಮನೆಯ ಕೋಟಲೆಯನ್ನೂ ತಲೆಗೆ ಹಚ್ಚಿ ಕೊಳ್ಳದೇ ತನ್ನ ಪಾಡಿಗೆ ತಾನು ನೆಮ್ಮದಿಯಿಂದ ಹರಿಸ್ಮರಣೆ ಮಾಡುತ್ತಾನೆ.
ಇದು ಮಧುಕರ ವೃತ್ತಿ; ಜೇನುನೋಣದಂತೆ ಅಲೆಯುವುದು. ಇದನ್ನು ಸನ್ಯಾಸಿಗಳ, ಪರಿವ್ರಾಜಕರ ಧರ್ಮವೆಂದು ಶಾಸ್ತ್ರ ವಿಧಿಸುತ್ತದೆ. ಭಾಗವತದಲ್ಲಿ ಭಗವದ್ಭಕ್ತರೂ ಹೀಗೆಯೇ ತಮ್ಮೆಲ್ಲ ವ್ಯವಹಾರದಲ್ಲೂ ಭಗವಂತನ ಇರವನ್ನೇ ಕಾಣುತ್ತಾರೆಂದೂ ಅವರ ವೃತ್ತಿ ಮಧುಕರ ವೃತ್ತಿಯೆಂದೂ ಹೇಳಿದೆ ('ಸರ್ವತಃ ಸಾರಮಾದತ್ತೆ ಯಥಾ ಮಧುಕರೋ ಬುಧಃ' ಭಾಗವತ ೪೧, ೧೮, ೨).
ಹೂವಲ್ಲಿರುವ ಸಾರವನ್ನು, ಜೇನನ್ನೂ, ದುಂಬಿ ಹೀರಿಕೊಳ್ಳುವಂತೆ ಹರಿದಾಸನು ಹರಿಯ ಚರಣ ಕಮಲದಲ್ಲಿರುವ ಸಾರವನ್ನು, ಜೇನನ್ನು (ಮಧು) ಹೀರಿಕೊಳ್ಳುವುದರಿಂದ ಅವನು 'ಮಧು-ಪ'ನೆ (ಮಧು ಪಿಬತಿ ಇತಿ); ದುಂಬಿಯಂತೆಯೇ ಅವನ ಬದುಕು. ಅವನನ್ನು ಚಾರಣ-ಗಾಯಕ' ಎಂದು ಬಣ್ಣಿಸಬಹುದು.
ನೀಲವರ್ಣನ- ಮೋಡದಂತೆ ಕಪ್ಪಾದ ಬಣ್ಣವುಳ್ಳ ಕೃಷ್ಣ (ನೀಲ ಮೇಘ ಶ್ಯಾಮ). ಓಲಗ ಮಾಡುವಂಥ- ಅವನ ಗುಣಗಳನ್ನು ಹಾಡುತ್ತಾ, ಅವನೆದುರೇ ನಿಂತು ಸೇವೆ ಮಾಡುವುದು ಓಲಗ. ಓಲಗ ಮಾಡು ಎಂದರೆ ದರ್ಬಾರು ಮಾಡು, ಚಾಕರಿ ಮಾಡು ಎಂಬ ಎರಡು ಅರ್ಥಗಳೂ ಇಲ್ಲಿ ಸಂಗತವಾಗುತ್ತದೆ.
ಹಿಂಗದೆ- ಬೇಸರವಿಲ್ಲದೆ; ಮುಗಿಯಿತು ಎಂದೆನ್ನದೆ. ಶೃಂಗಾರ ನೋಡುತ್ತಾ- ಸುಂದರವಾದ ಅವನ ಅರ್ಚಾಮೂರ್ತಿಗಳನ್ನು ನೋಡುತ್ತಾ, ಇಂದಿರಾಪತಿ- ಲಕ್ಷ್ಮಿಯ ಗಂಡ, ನಾರಾಯಣ. [ಪುರಂದರ ಸಾಹಿತ್ಯ ದರ್ಶನ- ಸಂಪುಟ ೧]
إرسال تعليق