ಅಮೆರಿಕದ ವಾಷಿಂಗ್ಟನ್ ಡಿ.ಸಿ ಪ್ರದೇಶದ ನಾದತರಂಗಿಣಿ ಸಂಸ್ಥೆ 2008ರಲ್ಲಿ ಹೊರತಂದ 'ರಾಗಮಾಲಿಕಾ ಸುಂದರಕಾಂಡ' ಸಾಗರೋಲ್ಲಂಘನದ ಸಂಗೀತ ಸಂಪುಟವಿದು.
ಹನುಮ ಜಯಂತಿಯ ಶುಭಸಂದರ್ಭದಲ್ಲಿ ಕೇಳುತ್ತ ಕೇಳುತ್ತ ಮೈಮರೆಯುವಂತೆ ಮೂಡಿಬಂದ ಈ ಅದ್ಭುತ ರಾಗಮಾಲಿಕೆಯನ್ನು ಉಪಯುಕ್ತ ನ್ಯೂಸ್ ತನ್ನ ಪಾಡ್‌ಕಾಸ್ಟ್ ಚಾನೆಲ್ ಮೂಲಕ ಓದುಗರಿಗೆ ನೀಡುತ್ತಿದೆ.
ಖ್ಯಾತ ಅಂಕಣಕಾರ ಶ್ರೀವತ್ಸ ಜೋಷಿ ಅವರು ಈ ರಾಗಮಾಲಿಕೆಯನ್ನು ಯೂಟ್ಯೂಬ್‌ಗೆ ಅಳವಡಿಸಿದ್ದು, ಅವರು ಹಂಚಿಕೊಂಡಿರುವ ಈ ಕೊಂಡಿಯನ್ನು ಉಪಯುಕ್ತ ಪಾಡ್‌ಕಾಸ್ಟ್ ಯಥಾವತ್ ಬಿತ್ತರಿಸುತ್ತಿದೆ.
ಹಿನ್ನೆಲೆ:
ವಾಷಿಂಗ್ಟನ್ ನಿವಾಸಿ ರಾಮಶಾಸ್ತ್ರಿ ಎಂಬವರು ತೆಲುಗಿನಲ್ಲಿ ಸುಂದರಕಾಂಡವನ್ನು ರಚಿಸಿದ್ದರು. ಯಾರಾದರೂ ಅದನ್ನು ಕನ್ನಡಕ್ಕೆ ಅನುವಾದಿಸಬಲ್ಲರೇ ಎಂಬ ಹುಡುಕಾಟದಲ್ಲಿದ್ದಾಗ ಮಿತ್ರರೊಬ್ಬರಿಂದ ಈ ಸಂಗತಿ ಕನ್ನಡಿಗ ಡಾ.ಮೈ.ಶ್ರೀ. ನಟರಾಜರ ಗಮನಕ್ಕೆ ಬಂತು. ಕನ್ನಡ ನಾಟಕ, ಕವನ, ಲೇಖನ ಇತ್ಯಾದಿ ಸಾಹಿತ್ಯಕೃಷಿ ಮಾಡಿರುವ ನಟರಾಜ್ ಅವರಿಗೆ ಈ ಬಗ್ಗೆ ಆಸಕ್ತಿ ಕೆರಳಿತು. ಸರಳಕನ್ನಡದಲ್ಲಿ ಪದ್ಯರೂಪದಲ್ಲಿ ಸುಂದರಕಾಂಡ ಬರೆಯಲು ಆರಂಭಿಸಿಯೇ ಬಿಟ್ಟರು.
ಛಂದೋಬದ್ಧವಿರುವಂತೆ, ಮಾತ್ರೆಗಳ ಲೆಕ್ಕ ತಪ್ಪದಂತೆ, ಪರಿಣತರಾದ ರಾಮಪ್ರಿಯನ್-ಕೃಷ್ಣಪ್ರಿಯನ್ ಸಹೋದರರ ಸಹಾಯ ಪಡೆದು ಕನ್ನಡದಲ್ಲಿ ಸುಂದರಕಾಂಡವನ್ನು ರಚಿಸಿಯೇಬಿಟ್ಟರು ನಟರಾಜ್.
ಈ ವಿಷಯ ಸ್ನೇಹಿತ ವರದರಾಜ್ ಆತೂರ್‌ಗೆ ತಿಳಿದು, ಅದನ್ನು ವಾಷಿಂಗ್ಟನ್‌ನ ಸಂಗೀತ ವಿದುಷಿ ಉಷಾಚಾರ್ ಅವರಿಂದ ಸಂಗೀತಕ್ಕೆ ಅಳವಡಿಸುವ ಏರ್ಪಾಡು ಮಾಡಿದರು. ಉಷಾ ಅವರು ನಡೆಸುವ ನಾದತರಂಗಿಣಿ ಸಂಸ್ಥೆಯ ಸಂಗೀತೋತ್ಸವದಲ್ಲಿ ಭಾಗವಹಿಸಲು ಬಂದಿದ್ದ ವಿದ್ವಾನ್ ಆನೂರ್ ಅನಂತಕೃಷ್ಣ ಶರ್ಮಾ (ಶಿವು) ಹೆಗಲಿಗೆ ಸಂಗೀತ ನಿರ್ದೇಶನದ ಹೊಣೆ ವಹಿಸಲಾಯಿತು.
ವೃಂದಗಾಯನಕ್ಕೆ ಉಷಾ ಅವರ ನಾದೋಪಾಸನ ಸಂಗೀತಶಾಲೆಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಯಿತು.
ಒಟ್ಟು ಮೂವತ್ಮೂರು ಚರಣಗಳ ಸುಂದರಕಾಂಡದ ಪ್ರಸ್ತುತಿ 'ಮೋಹನ'ದಿಂದ ದೇಶ್‍ವರೆಗೆ ಹನ್ನೊಂದು ವಿವಿಧ ರಾಗಗಳ ರಾಗಮಾಲಿಕೆ ರೂಪದಲ್ಲಿ ಸುಂದರವಾಗಿ ಮೂಡಿಬಂತು.
ವಾಷಿಂಗ್ಟನ್‌ನ ಒಂದು ಸ್ಟುಡಿಯೊದಲ್ಲಿ ವೃಂದಗಾನದ ಭಾಗವನ್ನಷ್ಟೇ ಧ್ವನಿಮುದ್ರಿಸಿಕೊಂಡು ಅದರೊಂದಿಗೆ ಬೆಂಗಳೂರಿಗೆ ಹಾರಿದ ಶಿವು, ಅಲ್ಲಿ ಖ್ಯಾತ ಗಾಯಕಿಯರಾದ ಎಂ.ಎಸ್.ಶೀಲಾ, ಎಂ.ಡಿ.ಪಲ್ಲವಿ ಮತ್ತು ಮಂಗಲಾ ರವಿ ಅವರಿಂದ ಉಳಿದ ಭಾಗಕ್ಕೆ ಧ್ವನಿದಾನ ಪಡೆದು ವಾದ್ಯಮೇಳವನ್ನು ಸೇರ್ಪಡೆ ಮಾಡಿದರು..
ಸುಂದರವಾದ ಸಂಗೀತ ಸಂಪುಟ ಸಿದ್ಧಗೊಂಡು ಮತ್ತೆ ವಾಷಿಂಗ್ಟನ್‍ಗೆ ಸಾಗರೋಲ್ಲಂಘನ ಮಾಡಿತು. ಯೋಜನೆಯ ಖರ್ಚುವೆಚ್ಚಗಳನ್ನು ಭರಿಸುವ ಅಳಿಲುಸೇವೆಗೆ ಕನ್ನಡಭಕ್ತರ, ಸಾಹಿತ್ಯಪ್ರಿಯರ, ಸಂಗೀತಪ್ರಿಯರ ಮತ್ತು ರಾಮಭಕ್ತರ ಸ್ವಪ್ರೇರಣೆಯ ಪ್ರೋತ್ಸಾಹ ದೊರೆಯಿತು.
ಜೀವನದುದ್ದಕ್ಕೂ ಮೂಲ ಸಂಸ್ಕೃತ ಸುಂದರ ಕಾಂಡವನ್ನು ದಿನಾ ಪಾರಾಯಣ ಮಾಡುತ್ತಿದ್ದ ಕನ್ನಡಚೇತನ ದಿ.ಎಚ್.ಸಿ. ಸುಬ್ಬರಾವ್ ಅವರ ಕುಟುಂಬವು ಮುಖ್ಯ ಪ್ರಾಯೋಜಕತ್ವವನ್ನು ವಹಿಸಿಕೊಂಡಿತು.
2008ರ ಆಗಸ್ಟ್ ಮೊದಲ ದಿನ ವಾಷಿಂಗ್ಟನ್‌ನ ಶಿವವಿಷ್ಣು ದೇವಾಲಯದ ಸಭಾಂಗಣದಲ್ಲಿ ವಿಧ್ಯುಕ್ತವಾಗಿ ಸಂಗೀತಸಂಪುಟದ ಬಿಡುಗಡೆಯಾಯಿತು. ದೇವಾಲಯದಲ್ಲಿ ರಾಮಕೋಟಿ ಜಪೋತ್ಸವದ ಮೊದಲ ದಿನದ ಸುಸಂದರ್ಭ ಈ ಅವಕಾಶ ಒದಗಿ ಬಂದುದು ರಾಮಭಕ್ತರ ಪಾಲಿಗೆ ಅವಿಸ್ಮರಣೀಯ.
ಕಾಮೆಂಟ್ ಪೋಸ್ಟ್ ಮಾಡಿ