ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಭಕ್ತಿಗೀತೆ- ಎಷ್ಟು ಸಾಹಸವಂತ ನೀನೇ ಬಲವಂತ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 



ಎಷ್ಟು ಸಾಹಸವಂತ ನೀನೇ ಬಲವಂತಾ ದಿಟ್ಟ ಮೂರುತಿ ಭಳಿ ಭಳಿರೇ ಹನುಮಂತಾ   || ಪ ||

ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆ ಕುಟ್ಟಿ ಚಂಡಾಡಿದ ದಿಟ್ಟ ನೀನಹುದೋ


ರಾಮರಪ್ಪಣೆಯಿಂದ ಶರಧಿಯ ದಾಟಿ ಆ ಮಹಾ ಲಂಕೆಯ ಕಂಡೆ ಕಿರೀಟಿ

ಸ್ವಾಮಿ ಕಾರ್ಯವನು ಪ್ರೇಮದಿ ನಡೆಸಿದಿ ಈ ಮಹಿಯೊಳು ನಿನಗಾರೈ ಸಾಟಿ

ದೂರದಿಂದಸುರನ ಪುರವನ್ನು ನೋಡಿ ಭರದಿ ಶ್ರೀರಾಮರ ಸ್ಮರಣೆಯ ಮಾಡಿ

[ ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೆ ರಘುನಾಥಾಯ ನಾಥಾಯ ಸೀತಾಯಪತಯೇ ನಮಃ ]

ಹಾರಿದೆ ಹರುಷದಿ ಹರಿಸಿ ಲಂಕಿಣಿಯನು ವಾರಿಜಮುಖಿಯನು ಕಂಡು ಮಾತಾಡಿ   || 1 ||


ರಾಮರ ಕ್ಷೇಮವ ರಮಣಿಗೆ ಪೇಳಿ ತಾಮಸ ಮಾಡದೆ ಮುದ್ರೆಯ ನೀಡಿ

ಪ್ರೇಮದಿ ಜಾನಕಿ ಕುರುಹನು ಕೊಡಲಾಗ ಆ ಮಹಾವನದೊಳು ಫಲವನು ಬೇಡಿ

ಕಣ್ಣಿಗೆ ಪ್ರಿಯವಾದ ಹಣ್ಣನು ಕೊಯ್ದು ಹಣ್ಣಿನ ನೆವದಲಿ ಅಸುರರ ಹೊಯ್ದು

ಪಣ್ಣಪಣ್ಣನೆ ಹಾರಿ ನೆಗೆನೆಗೆದಾಡುತ ಬಣ್ಣಿಸಿ ಅಸುರನ ಬಲವನು ಮುರಿದು   || 2 ||


ಶೃಂಗಾರವನದೊಳಗೆ ಇದ್ದ ರಕ್ಕಸರ ಅಂಗವನಳಿಸಿದೆ ಅತಿರಣಶೂರ

ನುಂಗಿ ಅಸ್ತ್ರಗಳ ಅಕ್ಷಯ ಕುವರನ ಭಂಜಿಸಿ ಬಿಸುಟೆಯೋ ಬಂದ ರಕ್ಕಸರ

ದೂರು ಪೇಳಿದರೆಲ್ಲಾ ರಾವಣನೊಡನೆ ಚೀರುತ್ತಾ ಕರೆಸಿದಾ ಇಂದ್ರಜಿತುವನೆ

ಚೋರಕಪಿಯನು ಹಿಡಿತಹುದೆನ್ನುತ ಶೂರರ ಕಳುಹಿದ ನಿಜಸುತನೊಡನೆ   || 3 ||


ಪಿಡಿದನು ಇಂದ್ರಜಿತು ಕಡುಕೋಪದಿಂದಾ ಹೆಡೆಮುರಿ ಕಟ್ಟಿದಾ ಬ್ರಹ್ಮಾಸ್ತ್ರದಿಂದಾ

ಗುಡುಗುಡುಗುಟ್ಟುತ ಕಿಡಿಕಿಡಿಯಾಗುತ ನಡೆದನು ಲಂಕೆಯ ಒಡೆಯನಿದ್ದೆಡೆಗೆ

ಕಂಡನು ರಾವಣನುದ್ದಂಡ ಕಪಿಯನು ಮಂಡೆಯ ತೂಗುತ ಮಾತಾಡಿಸಿದನು

ಭಂಡು ಮಾಡದೆ ಬಿಡೆ ನೋಡು ಕಪಿಯನೆ ಗಂಡುಗಲಿಯು ದುರುದುರಿಸಿ ನೋಡಿದನು   || 4 ||


ಛಲವ್ಯಾಕೋ ನಿನಗಿಷ್ಟು ಎಲವೋ ಕೋಡಗನೇ ನೆಲೆಯಾವುದ್ಹೇಳೋ ನಿನ್ನೊಡೆಯನ್ಹೆಸರನು

ಬಲವಂತ ರಾಮರ ಬಂಟ ಬಂದಿಹೆನು ಹಲವು ಮಾತ್ಯಾಕೊ ಹನುಮನು ನಾನೆ

ಬಡ ರಾವಣನೆ ನಿನ್ನ ಬಡಿದು ಹಾಕುವೆನು ಒಡೆಯನಪ್ಪಣೆಯಿಲ್ಲ ಎಂದು ತಾಳಿಹೆನು

ಹುಡಿಯೇಳಿಸುವೆನು ಖುಲ್ಲ ರಕ್ಕಸನೆ ತೊಡೆವೆನು ನಿನ್ನ ಹಣೆಯ ಅಕ್ಷರವಾ   || 5 ||


ನಿನ್ನಂಥಾ ದೂತರು ರಾಮನ ಬಳಿಯೊಳು ಇನ್ನೆಷ್ಟು ಮಂದಿಯುಂಟು ಹೇಳೋ ನೀ ತ್ವರಿಯಾ

ನನ್ನಂಥ ದೂತರು ನಿನ್ನಂಥ ಪ್ರೇತರು ಇನ್ನೂರು ಮುನ್ನೂರು ಕೋಟಿಗಳರಿಯ

ಕಡುಕೋಪದಿಂದಲಿ ಖೂಳ ರಾವಣನು ಸುಡಿರೆಂದ ಬಾಲವ ಸುತ್ತಿ ವಸನವನು

ಒಡೆಯನ ಮಾತಿಗೆ ತಡೆಬಡೆಯಿಲ್ಲದೆ ಒಡನೆ ಮುತ್ತಿದರು ಗಡಿಮನೆಯವರು   || 6 ||


ತಂದರು ವಸನವ ತಂಡ ತಂಡದಲೀ ಒಂದೊಂದು ಮೂಟೆ ಎಂಭತ್ತು ಕೋಟಿಯಲಿ

ಚಂದದಿ ಹರಳಿನ ತೈಲದೊಳದ್ದಿಸಿ ನಿಂದ ಹನುಮನು ಬಾಲವ ಬೆಳೆಸುತ

ಶಾಲು ಸಕಲಾತಿಯು ಸಾಲದೆ ಇರಲು ಬಾಲೇರ ವಸ್ತ್ರವ ಸೆಳೆದು ತಾರೆನಲು

ಬಾಲವ ನಿಲ್ಲಿಸೆ ಬೆಂಕಿಯನಿಡುತಲಿ ಕಾಲಮೃತ್ಯುವ ಕೆಣಕಿದರಲ್ಲಿ   || 7 ||


ಕುಣಿಕುಣಿದಾಡುತ ಕೂಗಿ ಬೊಬ್ಬಿಡುತ ಇಣುಕಿ ನೋಡುತ ಅಸುರನಣಕಿಸುತ

ಝಣಝಣಝಣರನೆ ಬಾಲದ ಘಂಟೆಯು ಮನದಿ ಶ್ರೀರಾಮರ ಪಾದವ ನೆನೆಯುತಾ

ಮಂಗಳಂ ಶ್ರೀರಾಮಚಂದ್ರ ಮೂರುತಿಗೆ ಮಂಗಳಂ ಸೀತಾದೇವಿ ಚರಣ೦ಗಳಿಗೆ

ಮಂಗಳವೆನುತಾ ಲಂಕೆಯ ಸುಟ್ಟು ಲಂಘಿಸಿ ಅಸುರನ ಗಡ್ಡಕೆ ಹಿಡಿದ   || 8 ||


ಹತ್ತಿತು ಅಸುರನ ಗಡ್ಡ ಮೀಸೆಗಳು ಸುತ್ತಿತು ಹೊಗೆ ಬ್ರಹ್ಮಾಂಡ ಕೋಟಿಯೊಳು

ಚಿತ್ತದಿ ರಾಮರು ಕೋಪಿಸುವರು ಎಂದು ಚಿತ್ರದಿ ನಡೆದನು ಅರಸನಿದ್ದೆಡೆಗೆ

ಸೀತೆಯ ಕ್ಷೇಮವ ರಾಮರಿಗ್ಹೇಳಿ ಪ್ರೀತಿಯಿಂ ಕೊಟ್ಟ ಕುರುಹ ಕರದಲ್ಲಿ

ಸೇತುವೆ ಕಟ್ಟಿ ಚತುರಂಗ ಬಲಸಹ ಮುತ್ತಿತು ಲಂಕೆಯ ಸೂರೆಗೈಯುತಲಿ   || 9 ||


ವೆಗ್ಗಳವಾಯಿತು ರಾಮರ ದಂಡು ಮುತ್ತಿತು ಲಂಕೆಯ ಕೋಟೆಯ ಕಂಡು

ಹೆಗ್ಗದ ಕಾಯ್ವರ ನುಗ್ಗು ಮಾಡುತಿರೆ ಧಗ್ಗನೆ ಪೇಳ್ದರು ರಾವಣಗಂದು

ರಾವಣ ಮೊದಲಾದ ರಾಕ್ಷಸರ ಕೊಂದು ಭಾವಶುದ್ಧದಲಿ ವಿಭೀಷಣ ಬಾಳೆಂದು

ದೇವಿ ಸೀತೆಯನೊಡಗೊಂಡು ಅಯೋಧ್ಯೆಯ ದೇವ ಶ್ರೀರಾಮರು ರಾಜ್ಯವಾಳಿದರು   || 10 ||


ಶಂಖದೈತ್ಯನ ಕೊಂದೆ ಶರಣು ಶರಣಯ್ಯಾ ಶಂಖಗಿರಿಯಲಿ ನಿಂದ ಹನುಮಂತರಾಯ

ಪಂಕಜಾಕ್ಷ ಹಯವದನನ ಕಟಾಕ್ಷದಿ ಬಿಂಕದಿ ಪಡೆದೆಯೋ ಅಜನ ಪದವಿಯ   || 11 ||

*******

ಗಾಯನ: ಶ್ರೀ ವಿದ್ಯಾಭೂಷಣ

Tags: #ಹನುಮಜಯಂತಿ #ವಿದ್ಯಾಭೂಷಣ #ಭಕ್ತಿಗೀತೆ



Post a Comment

ನವೀನ ಹಳೆಯದು