ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆನಂದಿಬಾಯಿ ಜೋಶಿ: 18ನೇ ಶತಮಾನದಲ್ಲಿ ಅಮೆರಿಕದಲ್ಲಿ ವೈದ್ಯ ಪದವಿ ಪಡೆದ ಭಾರತ ಮೊದಲ ಮಹಿಳೆ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 18ನೇ ಶತಮಾನದ ಉತ್ತರಾರ್ಧದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಚಾಲನೆ ದೊರೆಯಿತು. ಬ್ರಿಟಿಷ್ ತುಳಿತಕ್ಕೆ ಸಿಲುಕಿದ ಭಾರತೀಯರು ನಲುಗಿ ಹೋಗಿದ್ದರು. ವೈಜ್ಞಾನಿಕವಾಗಿ, ಶೈಕ್ಷಣಿಕವಾಗಿ ಭಾರತೀಯರು ಪ್ರವರ್ಧಮಾನಕ್ಕೆ ಬರುತ್ತಿದ್ದ ಆಗ ಹೆಣ್ಣುಮಕ್ಕಳ ಸ್ಥಿತಿಯಂತೂ ಶೋಚನೀಯವಾಗಿತ್ತು. ಸಾಮಾಜಿಕವಾಗಿ ಬಹಳ ಹಿಂದಿದ್ದರು. ಇಂಥ ಸಮಯದಲ್ಲಿ ಅಮೆರಿಕಾಕ್ಕೆ ಹೋಗಿ ವೈದ್ಯ ಪದವಿ ಪಡೆದ ಮೊದಲ ಭಾರತೀಯ ಮಹಿಳೆ ಆನಂದಿ ಬಾಯಿ ಜೋಶಿ. ತನ್ನ ಸಾಧನೆಯ ಮೂಲಕ ಆಗ ಭಾರತೀಯ ಮಹಿಳೆಗೆ ಹೊಸ ಸ್ಫೂರ್ತಿ ನೀಡಿದ್ದರೂ 22 ರ ಹರೆಯದಲ್ಲೆ ಕೊನೆಯುಸಿರೆಳೆದ ದುರಂತ ಕಥೆ  ಕೂಡ ಆನಂದಿ ಬಾಯಿಯದ್ದು.

ಮುಂಬಯಿಯ ಕಲ್ಯಾಣ್ ನಲ್ಲಿ 31 ಮಾರ್ಚ್ 1865ರಲ್ಲಿ ಜನಿಸಿದ ಆನಂದಿ ಮೂಲ ಹೆಸರು ಯಮುನಾ. ಹೆತ್ತವರು ಮೊದಲು ಜಮೀನ್ದಾರರು ಆದರೆ ಹಣಕಾಸಿನ ಸಂಕಷ್ಟ  ಎಲ್ಲವನ್ನು ಕಳೆದುಕೊಳ್ಳುವಂತೆ ಮಾಡಿತ್ತು. ಯಾತನಾಮಯ ಬಾಲ್ಯ ಯಮುನಾಳದ್ದು. ಸಿಟ್ಟು ಬಂದಾಗ ಒಲೆಯಿಂದ ಸೌದೆ ತೆಗೆದು ಚುಚ್ಚುತ್ತಿದ್ದಳು ತಾಯಿ. ತಪ್ಪಿಸಿದರೆ ಕಲ್ಲೇಟು ಗ್ಯಾರಂಟಿಯಾಗಿತ್ತು. ತಾಯಿಯ ಒತ್ತಾಯಕ್ಕೆ 9 ರ ಹರೆಯದಲ್ಲೆ ಗೋಪಾಲ್ ರಾವ್ ಜೋಶಿ ಜೊತೆ ಯಮುನಾ ಮದುವೆಯಾಗುತ್ತದೆ. ಗೋಪಾಲ್ ರಾವ್ ಯಮುನಾಳ ಹೆಸರನ್ನು ಆನಂದಿ ಎಂದು ಬದಲಿಸುತ್ತಾನೆ.

ಕಲ್ಯಾಣ್ ನ ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಗೋಪಾಲ್ ಒಬ್ಬ ಅಭಿವೃದ್ಧಿ ಪರ ಚಿಂತಕ. ಮಹಿಳೆಯರು ವಿದ್ಯಾವಂತರಾಗಬೇಕೆಂಬುದು ಆತನ ಆಶಯವಾಗಿತ್ತು. ಹೆಂಡತಿಗೆ ಮರಾಠಿ, ಇಂಗ್ಲಿಷ್, ಸಂಸ್ಕೃತ ಹೇಳಿಕೊಟ್ಟು  ವಿವಿಧ ಪುಸ್ತಕಗಳನ್ನು ತಂದು ಓದಿಸುತ್ತಿದ್ದ. ಇದೇ ವೇಳೆ 14ರ ಹರೆಯದಲ್ಲಿ ಆನಂದಿ ಮಗುವಿಗೆ ಜನ್ಮ ನೀಡುತ್ತಾಳೆ. ಆದರೆ ಅನಾರೋಗ್ಯ ಪೀಡಿತ ಮಗು 10 ದಿನಕ್ಕೆ ಕಣ್ಮುಚ್ಚುತ್ತದೆ. ಈ ಘಟನೆ ಆನಂದಿ ಬಾಯಿ ಜೀವನಕ್ಕೊಂದು ಮಹತ್ವದ ತಿರುವು ನೀಡುತ್ತದೆ. ತಾನೊಬ್ಬ ವೈದ್ಯಯಾಗಬೇಕೆಂಬ ಹಂಬಲ ಅವಳಲ್ಲಿ ಮೂಡುತ್ತದೆ. ಇದು ಗೋಪಾಲ್ ಗೂ ಖುಷಿ ಕೊಡುತ್ತದೆ. ಅವಳನ್ನು ಮಿಷನರಿ ಶಾಲೆಗೆ ಸೇರಿಸುತ್ತಾನೆ. ಆದರೆ ಆನಂದಿ ಅಲ್ಲಿಗೆ ಹೆಚ್ಚು ದಿನ ಹೋಗುವುದಿಲ್ಲ. ನಂತರ ಗೋಪಾಲ್  ಗೆ ಕೋಲ್ಕೋತ್ತಾಗೆ ವರ್ಗವಾಗುತ್ತದೆ. ಇಂಗ್ಲಿಷ್ ನಲ್ಲಿ ಪರಿಣತಿ ಸಾಧಿಸುತ್ತಾಳೆ ಆನಂದಿ. ಪತಿ ಪ್ರತಿ ಹೆಜ್ಜೆಗೂ ಬೆಂಗಾವಳಾಗಿರುತ್ತಾನೆ. ಓದಲು ನಿರ್ಲಕ್ಷ್ಯ ತೋರಿದರೆ ಕೆಲವೊಂದು ದಿನ ಆನಂದಿ ಗೋಪಾಲ್ ಕೈನಿಂದ ಪೆಟ್ಟು ತಿಂದದ್ದೂ ಇತ್ತು. ಪತ್ನಿಯ ವೈದ್ಯೆಯಾಗಬೇಕೆಂಬ ಕನಸಿಗೆ ಗೋಪಾಲ್ ಮತ್ತಷ್ಟು ಬಲ ತುಂಬುತ್ತಾನೆ.

ಇತ್ತ ಗೋಪಾಲ್ 1880ರಲ್ಲಿ "ರಾಯಲ್ ವೈಲ್ಡರ್" ಎಂಬ ಅಮೆರಿಕಾದ ಮಿಷನರಿಗೆ ತನ್ನ ಪತ್ನಿಯ ವೈದ್ಯಕೀಯ ಕಲಿಕೆಯ ಕುರಿತು ಪತ್ರ ಬರೆಯುತ್ತಾನೆ. "ರಾಯಲ್ ವೈಲ್ಡರ್" ತನ್ನ ಪತ್ರಿಕೆಯಲ್ಲಿ  ಈ ವಿಷಯವನ್ನು ಪ್ರಕಟಿಸುತ್ತದೆ. ಇದನ್ನು ಥಿಯೋಡಿಕಾ ಕಾರ್ಪೆಂಟರ್ ಎಂಬ ನ್ಯೂಜೆರ್ಸಿಯ ಮಹಿಳೆಯೊಬ್ಬಳು ಓದುತ್ತಾಳೆ. ಆನಂದಿಯ ಆಸಕ್ತಿ ಮತ್ತು ಗೋಪಾಲ್ ನ ಶ್ರಮ ಅವಳನ್ನು ಸೆಳೆದು ಅವಳನ್ನು ಕಾರ್ಪೆಂಟರ್ ಸಂಪರ್ಕಿಸುತ್ತಾಳೆ. ಆನಂದಿ ಆರೋಗ್ಯ ಒಮ್ಮೆ ಹದಗೆಟ್ಟಾಗ ಅವಳು ಅಮೆರಿಕಾದಿಂದಲೇ ಔಷದಿ ಕಳುಹಿಸುತ್ತಾಳೆ. 1883ರಲ್ಲಿ ಗೋಪಾಲ್ ರಾವ್ ಗೆ ಸೀರಾಮ್ ಪುರಕ್ಕೆ ವರ್ಗವಾಗುತ್ತದೆ ಮತ್ತು ಇದೇ ವೇಳೆ ಗೋಪಾಲ್ ಆನಂದಿಯನ್ನು ವೈದ್ಯಕೀಯ ಓದಿಸಲು ಅಮೆರಿಕಾಕ್ಕೆ ಕಳುಹಿಸುತ್ತಾನೆ.

ಉನ್ನತ ಶಿಕ್ಷಣ ಪಡೆದ ತನ್ನ ಪತ್ನಿ ಭಾರತೀಯ ಮಹಿಳೆಯರಿಗೆ ಮಾದರಿಯಾಗಬೇಕೆಂಬುದು ಆತನ ಮಹದಾಸೆಯಾಗಿತ್ತು. ಆನಂದಿಬಾಯಿ ಪೆನ್ಸಿಲೇನ್ವಿಯಾ ವಿಶ್ವ ವಿದ್ಯಾನಿಲಯದಲ್ಲಿ ವೈದ್ಯಕೀಯ ವ್ಯಾಸಂಗಕ್ಕೆ  ಪ್ರವೇಶ ಕೋರುತ್ತಾಳೆ. ಆನಂದಿ ಅಮೆರಿಕಾ ಹೋಗುವ ಮೊದಲು ಅವಳ ನಿರ್ಧಾರವನ್ನು ಅವಳದೇ ಸಮುದಾಯ ತೀವ್ರವಾಗಿ ವಿರೋಧಿಸಿತು. ಆದರೆ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡ ಆಕೆ ಅವರ ಮನವೊಳಿಸುತ್ತಾಳೆ. ಮಹಿಳೆ ಶಿಕ್ಷಣ ಪಡೆಯಬೇಕಾದ ಅಗತ್ಯತೆಯ ಕುರಿತು ಪ್ರತಿಪಾದಿಸುತ್ತಾಳೆ. ಮೆಚ್ಚಿದ ಸಮುದಾಯ ಅವಳನ್ನು ಬೆಂಬಲಿಸಿ ನೆರವು ನೀಡಿತು.

ಮಹಿಳಾ ಶಿಕ್ಷಣಕ್ಕೆ ಪ್ರೋತ್ಸಾಹವೇ ಇಲ್ಲದ ಕಾಲದಲ್ಲಿ ಗೋಪಾಲ್ ರಾವ್ ನಂಥ ಪತಿ ಸಿಕ್ಕಿದ್ದು ಆನಂದಿ ಅದೃಷ್ಟವೆಂದೇ ಹೇಳಬೇಕು. ಆತನ ಅವಿರತ ಶ್ರಮ ಆನಂದಿ ತನ್ನ ಪ್ರಯತ್ನದಿಂದ  ಹಿಂದೆ ಬರಲು ಬಿಡಲಿಲ್ಲ. ಆನಂದಿ ವೈದ್ಯೆಯಾಗಬೇಕೆಂಬ ಹಂಬಲ ಆಕೆಗಿಂತಲೂ ಆತನಿಗೆ ಜಾಸ್ತಿಯಿತ್ತು. ಕಾರ್ಪೆಂಟರ್ ನೆರವು ಇದೇ ಸಮಯ ಸಿಕ್ಕಿದ್ದು ಅದೃಷ್ಟವೆಂದೇ ಹೇಳಬೇಕು. ತನ್ನ ಅವಿರತ ಶ್ರಮದಿಂದ ಕಡೆಗೂ ವೈದ್ಯ ಪದವಿ ಪಡೆಯುತ್ತಾಳೆ ಆನಂದಿ. 21 ರ ಹರೆಯದಲ್ಲಿ ಪೆನ್ಸಿಲೇನ್ವಿಯಾ ವಿಶ್ವವಿದ್ಯಾಲಯದಿಂದ  MD  ಪದವಿ ಪಡೆಯುತ್ತಾಳೆ. ಕ್ವೀನ್ ವಿಕ್ಟೋರಿಯಾ ಆನಂದಿಗೆ ಸಾಧನೆಗೆ ಅಭಿನಂದನಾ ಸಂದೇಶ ಕಳುಹಿಸುತ್ತಾಳೆ. ವೈದ್ಯ ಪದವಿ ಪಡೆಧ ಪ್ರಥಮ ಭಾರತೀಯ ಮಹಿಳೆ ಎನಿಸಿಕೊಂಡ ಆನಂದಿ ಬಾಯಿ ಸಾಧನೆಗೆ ದೇಶವೇ ಹರ್ಷಗೊಳ್ಳುತ್ತದೆ. ಇದೇ ಸಮಯ ಅವಳ ಆರೋಗ್ಯ ಕೂಡ ಹದಗೆಡುತ್ತದೆ. ಕ್ಷಯ ರೋಗದಿಂದ ಅವಳು ಬಳಲುತ್ತಾಳೆ. 1886ರಲ್ಲಿ ಡಾ.ಆನಂದಿ ಬಾಯಿ ಜೋಶಿ ಭಾರತಕ್ಕೆ ಬಂದಿಳಿಯುತ್ತಾಳೆ. ಅದ್ಧೂರಿ ಸ್ವಾಗತ ದೊರೆಯುತ್ತದೆ. ವಿದೇಶದಲ್ಲಿ ಶಿಕ್ಷಣ ಪಡೆದ ಮೊದಲ ಭಾರತೀಯ ವೈದ್ಯೆ ಆನಂದಿಬಾಯಿ ಜೋಶಿ ಆಲ್ಬರ್ಟ್ ಎಡ್ವರ್ಡ್ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಆರಂಭಿಸುತ್ತಾಳೆ.

ಆದರೆ ಅಮೆರಿಕಾದಲ್ಲಿ ಕಾಡಿದ ಆರೋಗ್ಯ ಸಮಸ್ಯೆ ಮತ್ತಷ್ಟು ತೀವ್ರಗೊಳ್ಳುತ್ತದೆ.ಕ್ಷಯ ಅವಳನ್ನು ಹೈರಾಣಾಗಿಸುತ್ತದೆ. ತೀವ್ರ ಜ್ವರ ಮತ್ತು ನಿಶ್ಶಕ್ತಿಯಿಂದ ಬಳಲುತ್ತಾಳೆ ಆನಂದಿ. ಅಮೆರಿಕಾದಿಂದಲೇ ಔಷದಿ ತರಿಸಲಾಯಿತು. ಆದರೆ ಯಾವುದೂ ಫಲ ನೀಡಲಿಲ್ಲ. 26 ಫೆಬ್ರವರಿ, 1887ರಂದು ಆನಂದಿ ಬಾಯಿ ಜೋಶಿ ಕೊನೆಯುಸಿರೆಳೆಯುತ್ತಾಳೆ. ಕೆಲಸಕ್ಕೆ ಸೇರಿದ 2-3 ತಿಂಗಳಲ್ಲೇ ತನ್ನ ಸೇವಾ ಮನೋಭಾವನೆಗೆ ಎಲ್ಲರಿಂದಲೂ ಮೆಚ್ಚುಗೆ ಗಳಿಸಿದ ಆಕೆಯ ಬದುಕು ಅಂತ್ಯ ಕಾಣುತ್ತದೆ.

ಆನಂದಿಬಾಯಿ ಛಲ, ಗೋಪಾಲ್ ರಾವ್ ನ ಶ್ರಮವೆಲ್ಲವೂ ಕೈಗೂಡಿದ ಸಂತಸ ಹೆಚ್ಚು ದಿನ ಉಳಿಯಲಿಲ್ಲ. ಆದರೆ ತನ್ನ ಸಾಧನೆಗಾಗಿ ಆನಂದಿ ಬಾಯಿ ಜೋಶಿ ಶಾಶ್ವತವಾಗಿ ಇತಿಹಾಸದ ಪುಟ ಸೇರುತ್ತಾಳೆ. 22ರ ಹರೆಯದಲ್ಲಿ ಕೊನೆಯುಸಿರೆಳೆದ ಆನಂದಿ ಬಾಯಿ ಸವಾಲಿನ ಬದುಕು, ಪಟ್ಟ ಶ್ರಮ ಎಲ್ಲವೂ ಒಂದು ದೊಡ್ಡ ಯಶೋಗಾಥೆಯೇ ಸರಿ. ಮಹಿಳೆಯರು ಶಾಲೆಯ ಕನಸು ಕಾಣುತ್ತಿದ್ದ ಸಂದರ್ಭದಲ್ಲಿ ವಿದೇಶದಲ್ಲಿ ಹೋಗಿ ವೈದ್ಯ ಪದವಿ ಪಡೆದ ಸಾಧನೆ ಅಂದು ಕೋಟ್ಯಾಂತರ ಭಾರತೀಯ ಮಹಿಳೆಯರಿಗೆ ಹೊಸ ಸ್ಫೂರ್ತಿಯನ್ನು ನೀಡಿತ್ತು.

-ತೇಜಸ್ವಿ.ಕೆ, ಪೈಲಾರು, ಸುಳ್ಯ


Visit: Upayuktha Advertisements- A Dedicated place for Your Ads

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು